ಸ್ವಾವಲಂಬನೆಗೆ ನೈಸರ್ಗಿಕ ಕೃಷಿ ಪರಿಹಾರ

7
ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ತರಬೇತಿ ಶಿಬಿರದಲ್ಲಿ ಕೃಷಿ ವಿಜ್ಞಾನಿ ಪ್ರೊ. ಚಂದ್ರಶೇಖರ ಕಡಾದಿ ಅನಿಸಿಕೆ

ಸ್ವಾವಲಂಬನೆಗೆ ನೈಸರ್ಗಿಕ ಕೃಷಿ ಪರಿಹಾರ

Published:
Updated:

ಚಿಂತಾಮಣಿ: ನೈಸರ್ಗಿಕ ಕೃಷಿ ರೈತನನ್ನು ಸ್ವಾವಲಂಬಿಯಾಗಿ ಮಾಡುತ್ತದೆ ಹಾಗೂ ಜಾಗತೀಕರಣದ ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಎಂದು ಕೃಷಿ ವಿಜ್ಞಾನಿ ಪ್ರೊ. ಚಂದ್ರಶೇಖರ ಕಡಾದಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಕೃಷಿತಜ್ಞ ಸುಭಾಷ್‌ ಪಾಳೇಕರ್‌ ಪದ್ಧತಿಯ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ಸಮಿತಿ ಸಹಯೋಗದಲ್ಲಿ ರೈತರಿಗಾಗಿ ಆಯೋಜಿಸಲಾಗಿದ್ದ  ನೈಸರ್ಗಿಕ ಕೃಷಿ ತರಬೇತಿ ಶಿಬಿರದಲ್ಲಿ ಉಪನ್ಯಾಸ ನೀಡಿದರು.

ಒಂದು ನಾಟಿ ಹಸುವಿನ ಸಗಣಿ, ಗಂಜಲದ ಸಹಾಯದಿಂದ 3 ಎಕರೆಯಷ್ಟು ಭೂಮಿಯಲ್ಲಿ ಸಮೃದ್ಧ ಕೃಷಿ ಮಾಡಬಹುದು. ಬೀಜ, ಗೊಬ್ಬರವನ್ನು ಸ್ವತಃ ತಯಾರಿಸಿಕೊಂಡು ಅಂತರ ಬೆಳೆ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವುದರಿಂದ ಕೃಷಿಯ ಖರ್ಚು ಶೂನ್ಯವಾಗುತ್ತದೆ. ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಸಲಹೆ ನೀಡಿದರು.

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಾಡುತ್ತಿರುವ ಕೃಷಿ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳು ವಿಷಮಯವಾಗುತ್ತಿವೆ. ಜನರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಆಸ್ಪತ್ರೆಗಳು ನಾಯಿಕೊಡೆಗಳಂತೆ ಏಳುತ್ತಿವೆ. ಆದರೆ ನೈಸರ್ಗಿಕ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳಿಂದ ಬದುಕಿಗೆ ಅಗತ್ಯವಾದ ಪೋಷಕಾಂಶಗಳು, ಖನಿಜಗಳು ದೊರೆಯುತ್ತವೆ. ವಿಷಯುಕ್ತ ಆಹಾರದಿಂದ ದೂರವಾಗಿ ಮನುಷ್ಯನ ಆರೋಗ್ಯ ಹಾಗೂ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕೃಷಿ ತಜ್ಞ ಪ್ರಕಾಶ್‌ ಕೊರೆ ಮಾತನಾಡಿ, 600 ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಎರೆಹುಳು ಬದುಕುಳಿದು ತನ್ನ ಆಸ್ತಿತ್ವವನ್ನು ಕಾಯ್ದುಕೊಂಡಿದೆ. ಭೂಮಂಡಲದ 100 ಜೀವಜಂತುಗಳ ಪೈಕಿ ಅತ್ಯಂತ ಯಶಸ್ವಿ ಜೀವಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ದೇಶಿ ಎರೆಹುಳು ಮಣ್ಣನ್ನು ತಿನ್ನುತ್ತಾ 15ರಿಂದ 25 ಅಡಿ ಆಳಕ್ಕೆ ಹೋಗಿ ಬಂದು ದಿನದ 24 ಗಂಟೆಯೂ ಅವಿಶ್ರಾಂತವಾಗಿ ದುಡಿಯುತ್ತದೆ. ಎರೆಹುಳು ಭೂಮಿಯ ಹೃದಯ ಎಂದು ಅಭಿಪ್ರಾಯಪಟ್ಟರು.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನಾ ಸಮಿತಿಯ ರಾಜ್ಯ ಘಟಕದ ಸಂಚಾಲಕ ಟಿ.ಆರ್‌. ಪ್ರಸನ್ನಮೂರ್ತಿ ಮಾತನಾಡಿ, ನೈಸರ್ಗಿಕ ಕೃಷಿಯು ರೈತರಿಗೆ ಅತಿಹೆಚ್ಚು ಲಾಭದಾಯಕವಾಗಿದೆ. ಇದರಿಂದ ಉತ್ತೇಜಿತರಾಗಿ ಯುವಕರು ಸಹ ಕೃಷಿ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದರು.

ಆಂದೋಲನಾ ಸಮಿತಿಯ ಮುಖಂಡರಾದ ರಾಜಶೇಖರ ನಿಂಬಳಗಿ, ಪದ್ಮನಾಭ ಕೋಲ್ಛಾರ್‌, ಕುಮಾರಸ್ವಾಮಿ, ನಾಗಭೂಷಣ್‌, ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರು, ಕೃಷಿ ಚಿಂತಕರು, ತಜ್ಞರು ಭಾಗವಹಿಸಿದ್ದರು.

**

ಉತ್ತಮ ಆರೋಗ್ಯ, ಸುಂದರ ಬದುಕಿಗೆ ನೈಸರ್ಗಿಕ ಕೃಷಿಯೊಂದೇ ಪರಿಹಾರ. ಮಣ್ಣಿನ ಸತ್ವ, ಆರೋಗ್ಯ ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ –  ಪ್ರೊ. ಚಂದ್ರಶೇಖರ ಕಾಡಾದಿ,ಕೃಷಿ ವಿಜ್ಞಾನಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry