ಬಿಜೆಪಿ, ಕಾಂಗ್ರೆಸ್‌, ಜೆಡಿಸ್‌ ಹಣಾಹಣಿ

6
ಕಾಫಿನಾಡಿನ ಶೃಂಗೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ, ಕಾಂಗ್ರೆಸ್‌, ಜೆಡಿಸ್‌ ಹಣಾಹಣಿ

Published:
Updated:

ನರಸಿಂಹರಾಜಪುರ: ಕಾಫಿನಾಡಿನ ಮಲೆನಾಡು ಭಾಗದ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ ಎಂಬ ಪ್ರತೀತಿ ಇತ್ತು, ಇದು ಒಂದೆರೆಡು ಭಾರಿ ಹುಸಿಯಾಗಿದೆ. ಚುನಾವಣೆಯಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ಇದೆ.

ಶೃಂಗೇರಿ ಮಠ, ಶಾರದಾಂಬೆ ದೇಗುಲಕ್ಕೆ ಬಹುತೇಕ ರಾಜಕಾರಣಿಗಳು ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಸಮಾಜವಾದಿ ಚಳವಳಿಗಳು ನಡೆದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೊಂದಿಕೊಂಡಿದ್ದರೂ ಆ ಚಳವಳಿಯ ಸೋಗು ಇಲ್ಲಿಗೆ ತಾಕಿಲ್ಲ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳು, ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿ ಈ ಕ್ಷೇತ್ರಕ್ಕೆ ಒಳಪಟ್ಟಿದೆ.

ಕ್ಷೇತ್ರದಲ್ಲಿ ಫೆಬ್ರುವರಿ 2018 ಅಂತ್ಯದ ಅಂಕಿಅಂಶ ಪ್ರಕಾರ 1,62,108 ಮತದಾರರು ಇದ್ದಾರೆ. ಈ ಪೈಕಿ 80,378 ಪುರುಷ, 81,726 ಮಹಿಳೆ, ನಾಲ್ವರು ಇತರ ಮತದಾರರು ಇದ್ದಾರೆ. ಒಕ್ಕಲಿಗರು ಹೆಚ್ಚು ಇದ್ದಾರೆ. ಈ ಸಮುದಾಯದವರೇ ಈವರೆಗೆ ಆಯ್ಕೆಯಾಗಿದ್ದಾರೆ. ಬ್ರಾಹ್ಮಣರು, ದಲಿತರು, ಈಡಿಗರು, ಮುಸ್ಲಿಮರು, ಕ್ರಿಶ್ಚಿಯನ್‌ ಸಮುದಾಯದವರು ಇದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಗೆಲುವಿನ ಅಲೆಯಲ್ಲಿ ಅವರನ್ನೇ ಈ ಬಾರಿಯೂ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.

ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡರ ಕಾಲದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಉತ್ತುಂಗದಲ್ಲಿತ್ತು. ಅವರ ನಂತರ ಎಚ್.ಟಿ.ರಾಜೇಂದ್ರ ಪಕ್ಷವನ್ನು ಮುನ್ನಡೆಸಿದರು. ಪ್ರಸ್ತುತ ರಾಜೇಂದ್ರ ಅವರನ್ನು ಅನಾರೋಗ್ಯ ಕಾಡುತ್ತಿದೆ. ಹೀಗಾಗಿ, ಗೋವಿಂದೇಗೌಡ ಪುತ್ರ ಎಚ್.ಜಿ.ವೆಂಕಟೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಜೆಡಿಎಸ್‌ ಘೋಷಿ

ಸಿದೆ. ತಂದೆಯ ವರ್ಚಸ್ಸು, ಜನಾನುರಾಗ, ಪ್ರಣಾಳಿಕೆಗಳನ್ನು ಮುಂದಿಟ್ಟು ಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಮಾಜಿ ಸಚಿವ ಡಿ.ಬಿ.ಚಂದ್ರೇ ಗೌಡ ಗೆಲುವಿನ ನಂತರ ಕಾಂಗ್ರೆಸ್ ಮತ್ತೆ ಗೆದ್ದಿಲ್ಲ. ಕಳೆದ ಬಾರಿ ಸೋತಿದ್ದ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಬೇಗಾನೆರಾಮಯ್ಯ ಪುತ್ರಿ ಡಾ.ಆರತಿಕೃಷ್ಣ, ಎನ್.ಆರ್.ಪುರ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ಮಾಜಿ ಸಚಿವೆ ಡಿ.ಕೆ.ತಾರಾದೇವಿ ಆಕಾಂಕ್ಷಿಗಳಾಗಿದ್ದಾರೆ.

ಕ್ಷೇತ್ರದ ಪ್ರಮುಖ ಪಟ್ಟಣಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಎರಡು ಕಡೆ ಮಿನಿ ವಿಧಾನಸೌಧ ನಿರ್ಮಾಣ, ಶಾಲಾ, ಕಾಲೇಜು, ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಆಗಿವೆ.

ಬಾಳೆಹೊನ್ನೂರಿಗೆ ಭದ್ರಾ ನದಿ ಯಿಂದ ಕುಡಿಯುವ ನೀರು ಪೂರೈಸುವ ಯೋಜನೆ, ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಶೃಂಗೇರಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಆರಂಭಿಸುವ ಕನಸು ಕನಸಾಗಿಯೇ ಉಳಿದಿದೆ.

‘ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಭಾಗದವರು ಆಸ್ಪತ್ರೆಗೆ ಮಣಿಪಾಲ, ಮಂಗಳೂರು ಅವಲಂಬಿಸುವ ಸ್ಥಿತಿ ಇದೆ. ಕೆರೆಕಟ್ಟೆ ರಸ್ತೆ ಅಭಿವೃದ್ಧಿಗೆ ಎನ್‌ಜಿಒಗಳು ಅಡ್ಡಿಪಡಿಸಿದ್ದಾರೆ. ಪ್ರವಾಸಿಗರನ್ನು ಸಂತೋಷಪಡಿಸಲು ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮರೀಚಿಕೆ ಆಗಿದೆ. ಹಳದಿ ಎಲೆರೋಗ ನಿಯಂತ್ರಣ ಪತ್ತೆಗೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ವಿಜ್ಞಾನಿಗಳನ್ನೇ ನೇಮಿಸಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಂದಾಯ ಜಾಗದಲ್ಲಿ ವಾಸಿಸುವವರು ಪುನರ್ವಸತಿ ಬಯಸಿದರೆ ಜಾಗದ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂಬ ಕಾನೂನು ಇದ್ದರೂ ಕಡಿಮೆ ಪರಿಹಾರ ನೀಡಲಾಗುತ್ತಿದೆ’ ಎನ್ನುತ್ತಾರೆ ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ.

‘ಭದ್ರಾ ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾದ ಬಹಳಷ್ಟು ರೈತರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ವಾಣಿಜ್ಯ ಬೆಳೆಗಳಾದ ರಬ್ಬರ್, ಶುಂಠಿ, ಕಾಳು ಮೆಣಸು, ಕಾಫಿ ಬೆಲೆ ನೆಲಕಚ್ಚಿದೆ. ಕೃಷಿ ಆಧಾರಿತ ಉದ್ಯೋಗ ಸೃಷ್ಟಿಗೆ ಅವಕಾಶ ಇದ್ದರೂ ಆದ್ಯತೆ ನೀಡಿಲ್ಲ. ಗೇಣಿದಾರರ ಹಿತರಕ್ಷಣೆಗಿದ್ದ ಭೂಸುಧಾರಣಾ ಸಮಿತಿ ಯನ್ನು 10 ವರ್ಷಗಳಿಂದ ರಚಿಸದೆ ಗೇಣಿದಾರರ ಸಮಸ್ಯೆ ಹಾಗೆಯೇ ಉಳಿದಿದೆ’ ಎಂದು ಕೃಷಿಕ ಎಸ್.ಸುನಿಲ್ ಹೇಳುತ್ತಾರೆ.

-ಕೆ.ವಿ.ನಾಗರಾಜ್‌

**

ಕಡಹಿನ ಬೈಲು ಏತ ನೀರಾವರಿ ಮಾದರಿಯಲ್ಲಿ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ನೀರಾವರಿ ಒದಗಿಸಲು ಅವಕಾಶ ಇದ್ದರೂ ಗಮನಹರಿಸಿಲ್ಲ – ಸುನಿಲ್, ಕೃಷಿಕ.

**

ಅಡಿಕೆ ಬೆಲೆ ಕುಸಿದಿದೆ, ಭತ್ತದ ಬೆಲೆ ಕಡಿಮೆಯಾಗಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಗಮನಹರಿಸಿಲ್ಲ – ಕಲ್ಕುಳಿ ವಿಠಲ್ ಹೆಗ್ಡೆ, ಪರಿಸರವಾದಿ.

**

ಹೊನ್ನೇಕೂಡಿಗೆ ಏತನೀರಾವರಿ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ. ಕೈಗಾರಿಕಾ ವಸಾಹತುಪ್ರದೇಶ ನಿರ್ಮಿಸಲಾಗಿದೆ. ಆದರೆ, ಕೈಗಾರಿಕೆಗಳನ್ನೆ ಆರಂಭಿಸಿಲ್ಲ –ವಿನಾಯಕ ಮಾಳೂರುದಿಣ್ಣೆ, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry