ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ

ಕುಮಾರ ಪರ್ವ ಸಮಾವೇಶದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಭರವಸೆ
Last Updated 11 ಏಪ್ರಿಲ್ 2018, 10:34 IST
ಅಕ್ಷರ ಗಾತ್ರ

ನವಲಗುಂದ: ‘ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಮತ್ತು ಬಿಜೆಪಿ ರೈತರ ಮೇಲೆಯೇ ದೌರ್ಜನ್ಯ ಎಸಗಿವೆ. ರೈತರ ಪರ ಕಾಳಜಿ ಹೊಂದಿರುವ ನಿಜವಾದ ಪಕ್ಷವೆಂದರೆ ಜೆಡಿಎಸ್‌. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, 24 ಗಂಟೆಯೊಳಗೆ  ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಶಂಕರ ಕಲಾ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಬೇರೆ ಪಕ್ಷದವರು ಈಗ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದರೆ, ನಾವು ಇನ್ನೊಬ್ಬರತ್ತ ಬೊಟ್ಟು ಮಾಡುವ ಬದಲು ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆ ರೂಪಿಸುವಲ್ಲಿ ತಲ್ಲೀನರಾಗಿದ್ದೇವೆ’ ಎಂದರು.

‘ಎಲ್ಲ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದು. ರೈತರ ನೆಮ್ಮದಿಯ ಜೀವನಕ್ಕೆ ಯೋಜನೆಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನೀವೆಲ್ಲರೂ ಕೋನರಡ್ಡಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿ. ನಾನು, ಸಚಿವರನ್ನಾಗಿ ಮಾಡುತ್ತೇನೆ. ಪಕ್ಷದ ಬೆಳವಣಿಗೆಗೆ ನವಲಗುಂದದ ಜನ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಿಮ್ಮೆಲ್ಲರ ಋಣ ತೀರಿಸಲು ಕೋನರಡ್ಡಿ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಅವರ ಭಾಷಣ ಆರಂಭವಾಗುತ್ತಿದ್ದಂತೆ ಜಿಟಿ ಜಿಟಿ ಮಳೆ ಶುರುವಾಯಿತು. ಸಮಾವೇಶ ಆರಂಭಕ್ಕೂ ಮೊದಲು ನಡೆದ ಮೆರವಣಿಗೆಯ ವೇಳೆಯೂ ಮಳೆ ಬಂದಿತ್ತು. ಇದರ ಬಗ್ಗೆ ಪ್ರಸ್ತಾಪಿಸಿದ ಅವರು ‘ನಾವಳ್ಳಿ ಗ್ರಾಮದಲ್ಲಿ ವಾಸ್ತ್ಯವ್ಯ ಮಾಡಿದ್ದಾಗಲೂ ಮಳೆ ಸುರಿದಿತ್ತು. ಆಗ ಮಳೆಯಲ್ಲಿಯೇ ಎಲ್ಲ ಕಡೆಯೂ ಓಡಾಡಿದ್ದೆ’ ಎಂದು ನೆನಪಿಸಿಕೊಂಡರು.

ಶಾಸಕ ಕೋನರಡ್ಡಿ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷವೆಂದರೆ ಎಲ್ಲರಿಗೂ ಮೊದಲು ನೆನಪಾಗುವುದು ನವಲಗುಂದ ಕ್ಷೇತ್ರ. ಈ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸವೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನನ್ನ ಬದುಕು ತೆರೆದ ಪುಸ್ತಕವಿದ್ದಂತೆ, ಟೀಕಿಸುವವರು ಕ್ಷೇತ್ರಕ್ಕೆ ಬಂದರೆ, ಜನರೇ ನನ್ನ ಸಾಧನೆ ಬಗ್ಗೆ ಹೇಳುತ್ತಾರೆ’ ಎಂದರು.

‘198 ಚಕ್ಕಡಿ ರಸ್ತೆ, 3,000 ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ. ರಾಜ್ಯದ ಎಲ್ಲ ಜನ ಸ್ವಂತ ಸೂರು ಹೊಂದಬೇಕು ಎಂಬುದು ಕುಮಾರಸ್ವಾಮಿ ಅವರ ಆಶಯ. ಆದ್ದರಿಂದ, ಎಲ್ಲರೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡರು.

ಪ್ರಮುಖರಾದ ರಾಜಣ್ಣ ಕೊರವಿ, ಅಲ್ತಾಫ್‌ ಕಿತ್ತೂರ, ಗಂಗಾಧರ ಪಾಟೀಲ ಕುಲಕರ್ಣಿ, ಶಿವಣ್ಣ ಹುಬ್ಬಳ್ಳಿ, ಪ್ರೇಮನಾಥ ಚಿಕ್ಕತುಂಬಳ, ರಾಜಣ್ಣ ಕೊರವಿ, ಗುರುರಾಜ ಹಣಸಿಮರದ, ಫಕ್ಕೀರಪ್ಪ ನಾಯಕ, ಫರೀದಾ ರೋಣದ ಇದ್ದರು.

‘204 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ’

‘ಚುನಾವಣೆಯಲ್ಲಿ 204 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದ್ದು, ಉಳಿದ 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದೇವೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಅಭ್ಯರ್ಥಿಗಳ ಪರ ಮತಯಾಚಿಸಲು ಮಾಯಾವತಿ ಬರುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದರು. 

ಸಮಾವೇಶಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಸರ್ಕಾರ ರಚಿಸಲು ಅಗತ್ಯವಿರುವ 113 ಸ್ಥಾನಗಳನ್ನು ಗೆಲ್ಲುವ ಗುರಿ ನನ್ನದು. ಅದಕ್ಕಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಆದ್ದರಿಂದ ಹಲವರು ಪಕ್ಷ ಬಿಟ್ಟು ಹೋದರು. ಪ್ರಜ್ವಲ್‌ ರೇವಣ್ಣ ಕಾಂಗ್ರೆಸ್‌ಗೆ ಹೋಗ್ತಾರೆ ಎನ್ನುವುದು ಸುಳ್ಳು, ಅವರನ್ನು ಸೆಳೆದು ಕುಟುಂಬ ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ’ ಎಂದು ದೂರಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸೋಲುತ್ತೇನೆ ಎನ್ನುವ ಭಯವಿದೆ. ಆದ್ದರಿಂದ ಕೋಲಾರ, ಎನ್‌.ಆರ್‌.ಪುರ, ಹೆಬ್ಬಾಳ, ಶಾಂತಿನಗರ, ಗಂಗಾವತಿ, ಬಸವಕಲ್ಯಾಣದಲ್ಲಿನ ಸ್ಥಿತಿಗತಿ ಬಗ್ಗೆ ಗುಪ್ತಚರ ವರದಿ ತರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಜಾತಿ ಹೆಸರಿನಲ್ಲಿ ಸಭೆಗಳನ್ನು ನಡೆಸಿ ಒಕ್ಕಲಿಗರನ್ನು ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಹದಾಯಿ ವಿವಾದ ಕುರಿತು ಮೂರೂ ರಾಜ್ಯಗಳ ವಕೀಲರು ನ್ಯಾಯಮಂಡನೆ ಮಾಡಿದ್ದಾರೆ. ಕೋರ್ಟ್‌ ತೀರ್ಪು ಬಂದ ಬಳಿಕ ಮುಂದಿನ ಹೋರಾಟ ರೂಪಿಸಬೇಕಿದೆ’ ಎಂದರು.

ಮಳೆಯ ನಡುವೆ ಹೂವಿನ ಮಳೆ

ಸಮಾವೇಶಕ್ಕೆ ಮತಕ್ಷೇತ್ರದ ಮೂಲೆ ಮೂಲೆಯಿಂದ ಸಹಸ್ರಾರು ಕಾರ್ಯಕರ್ತರು ಬಂದಿದ್ದರು.ಸಂಜೆ 5 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಪಟ್ಟಣಕ್ಕೆ ಬಂದ ಕುಮಾರಸ್ವಾಮಿ ನೇರವಾಗಿ ಕೋನರಡ್ಡಿ ಅವರ ಅಳಿಯ ರಾಘು ಮೇಟಿಯವರ ಮನೆಗೆ ಭೇಟಿ ನೀಡಿದರು. ಇಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಬಳಿಕ ಪಟ್ಟಣದ ಗಾಂಧಿ ಮಾರುಕಟ್ಟೆಯಿಂದ ಪ್ರಾರಂಭವಾದ ಮೆರವಣಿಗೆ ಲಿಂಗರಾಜ ವೃತ್ತಕ್ಕೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಕ್ರೇನ್ ಮೂಲಕ ಬೃಹದಾಕಾರದ ಹೂ ಮಾಲೆ ಹಾಕುವ ಮೂಲಕ ಗಮನ ಸೆಳೆದರು. ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಜನರನ್ನು ಕಂಡು ಭಾವುಕರಾದ ಕುಮಾರಸ್ವಾಮಿ, ಎಲ್ಲರಿಗೂ ನಮಸ್ಕರಿಸುತ್ತಾ ಸಾಗಿದರು. ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಹೂಮಳೆಗೆರೆದರು. ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಸಮಾವೇಶದ ವೇಳೆ ಜಿಟಿ ಜಿಟಿ ಮಳೆ ಆರಂಭವಾಯಿತು. ಕೆಲವು ಕಾರ್ಯಕರ್ತರು ಪಕ್ಕದಲ್ಲಿಯೇ ಇದ್ದ ಮರ, ಗಿಡಗಳು ಬುಡದಲ್ಲಿ ಆಶ್ರಯ ಪಡೆದರು.

**

ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವೆ ಎಂದು ಆಲ್ಕೋಡ ಹನುಮಂತಪ್ಪ ಅವರಿಗೆ ಹೇಳಿದ್ದೆ. ಮಾತು ಕೇಳದೆ ಪಕ್ಷ ಬಿಟ್ಟು ಹೋದರು. ಇದು ಮುಗಿದ ಅಧ್ಯಾಯ – ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT