ಶುಕ್ರವಾರ, ಡಿಸೆಂಬರ್ 13, 2019
19 °C
ರಾಜಕೀಯ ಪಕ್ಷದ ವಕ್ತಾರರಿಗೆ ವಿದ್ಯುನ್ಮಾನ ಮತ ಯಂತ್ರ ಹಾಗೂ ವಿವಿ ಪ್ಯಾಟ್ ಕುರಿತ ಪ್ರಾತ್ಯಕ್ಷಿಕೆ

ಇವಿಎಂ ಲೋಪವಾಗದಂತೆ ಕ್ರಮ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಿಎಂ ಲೋಪವಾಗದಂತೆ ಕ್ರಮ: ಡಿ.ಸಿ

ಹಾಸನ: ರಾಜಕೀಯ ಪಕ್ಷದ ವಕ್ತಾರರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಹಾಗೂ ವಿ.ವಿ. ಪ್ಯಾಟ್ ಯಂತ್ರಗಳ ಕಾರ್ಯ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿ, ಮಾಹಿತಿ ನೀಡಲಾಯಿತು.

ವಿದ್ಯುನ್ಮಾನ ಮತ ಯಂತ್ರಗಳ ಹಾಗೂ ವಿ.ವಿ. ಪ್ಯಾಟ್‌ಗಳ ಬಳಕೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮತಯಂತ್ರ

ಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ಮುಂಜಾಗ್ರತೆ ವಹಿಸಿದ್ದು, ಬಿ.ಇ.ಎಲ್ ಸಂಸ್ಥೆಯ ಎಂಜಿನಿಯರ್‌ಗಳು ಮೋದಲ ಹಂತದ ಪರಿಶೀಲನೆ ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 1970 ಮತಗಟ್ಟೆಗಳಿದ್ದು, ಅದಕ್ಕೆ ಅಗತ್ಯ ಪ್ರಮಾಣದ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿ.ವಿ. ಪ್ಯಾಟ್‌ಗಳು ಸಿದ್ದವಿದೆ. ಈ ಬಾರಿ ರಾಜ್ಯಾದ್ಯಂತ ವಿವಿ ಪ್ಯಾಟ್‌ಗಳ ಬಳಕೆಯಾಗುತ್ತಿದೆ. ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಮತದಾನ

ಮಾಡಿದ ನಂತರ ಯಾವ ಪಕ್ಷಕ್ಕೆ ಮತ ಚಲಾವಣೆ ಆಗಿದೆ ಎಂಬುದನ್ನು 7 ಸೆಕೆಂಡ್ ಗಳ ಒಳಗೆ ಪರಿಶೀಲನೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ತಾಂತ್ರಿಕ ಪರಿಶೀಲನೆ ನಂತರ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ ಯಾವುದೇ ದೋಷ ಉಂಟಾಗಲಾರದು. ಅಣುಕು ಮತದಾನ ಮುಕ್ತಾಯದ ನಂತರ ಅದರ ವಿವರಗಳು ಅಳಿಸದೆ ನೈಜ ಮತದಾನ ಪ್ರಕಿಯೆ ನಡೆಸಿದಾಗ ಮಾತ್ರ ಅಂಕಿ ಅಂಶಗಳಲ್ಲಿ ವ್ಯತ್ಯಾಸವಾಗುತ್ತದೆ. ಈ ಬಗ್ಗೆ ಎಚ್ಚರವಹಿಸುವಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ವಿ.ವಿ.ಪ್ಯಾಟ್‌ಗಳಲ್ಲಿ 1500 ಸ್ಲಿಪ್‌ಗಳ ವರೆಗೆ ಪ್ರಿಂಟ್ ಬರಲಿದೆ. ಪ್ರಿಂಟಿಂಗ್ ಸಾಧನದಲ್ಲಿ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆ ಲೋಡ್ ಮಾಡಲಾಗಿರುತ್ತದೆ. ಈ ಬಾರಿ ಅಭ್ಯರ್ಥಿಗಳ ಹೆಸರಿನ ಜತೆಗೆ ಭಾವಚಿತ್ರ ಅಳವಡಿಸಲಾಗಿರುತ್ತದೆ. ಜಿಲ್ಲೆಯಲ್ಲಿ 12 ಹೆಚ್ಚುವರಿ ಸೇರಿದಂತೆ 1978 ಮತಗಟ್ಟೆಗಳಿಗೆ ಏ. 8ರಂದು ನಡೆದ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ 14670 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಂದು ಮತಗಟ್ಟೆಯಲ್ಲಿ ಕೆಲಸ ನಿರ್ವಹಿಸದೇ ಇರುವವರಿಗೆ ನೋಟಿಸ್ ನೀಡಲಾಗಿದೆ. ಏ. 14ರ ವರೆಗೆ ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಜರಿರಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಇನ್ನೂ ಸೇರ್ಪಡೆಗೊಳ್ಳದ ಅರ್ಹರು ಈ ಅವಕಾಶ ಬಳಸಿಕೊಳ್ಳಬಹುದು ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ಬಿ.ಇ.ಎಲ್ ಎಂಜಿನಿಯರ್ ಸತ್ಯಂ, ವಿದ್ಯುನ್ಮಾನ ಮತಯಂತ್ರಗಳ ಮಾಸಿಕ ಮಾಸ್ಟರ್ ಟ್ರೈನರ್ ಶಬ್ಬಿರ್ ಖಾನ್ , ಬಿಜೆಪಿ ಮುಖಂಡ ವೇಣು, ಸಿಪಿಎಂ ಎಂ.ಸಿ.ಡೋಂಗ್ರೆ, ಸಿಪಿಐ ಪ್ರತಿನಿಧಿ ಹಾಜರಿದ್ದರು.

10 ಎಫ್ಐಆರ್ ದಾಖಲು

ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 10 ಪ್ರಕರಣ ದಾಖಲಾಗಿದ್ದು, 3 ಮದ್ಯದಂಗಡಿಗಳ ಪರವಾನಗಿ ರದ್ದು ಪಡಿಸಲು ಆದೇಶಿಸಲಾಗಿದೆ. 4 ವೆಚ್ಚ ಸೂಕ್ಷ್ಮ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಅವುಗಳೆಂದರೇ ಹಾಸನ, ಅರಕಲಗೂಡು, ಆಲೂರು, ಸಕಲೇಶಪುರ ಹಾಗೂ ಹೊಳೆನರಸೀಪುರ. ಇಲ್ಲಿ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ. ಈ ಪ್ರದೇಶಗಳಿಗೆ ಹೆಚ್ಚುವರಿ ವಿಚಕ್ಷಣಾ ದಳ ನಿಯೋಜಿಸಲಾಗುತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿಂತೆ ವಿಡಿಯೊ ಮಾಡಿ ವಾಟ್ಸ್‌ ಆ್ಯಪ್‌ ಮೂಲಕ ದೂರು ಸಲ್ಲಿಸಬಹುದು ಎಂದು ರೋಹಿಣಿ ಹೇಳಿದರು.

ಮಿಂಚಿನ ಅಭಿಯಾನಕ್ಕೆ 14,670 ಅರ್ಜಿ

ಏಪ್ರಿಲ್‌ 8 ರಂದು ನಡೆದ ಮಿಂಚಿನ ಮತದಾರರ ನೋಂದಣಿ ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 14670 ಅರ್ಜಿ ಸ್ವೀಕರಿಸಲಾಗಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 3272, ಶ್ರವಣಬೆಳಗೊಳ

3047, ಅರಸೀಕೆರೆ 1900, ಬೇಲೂರು 2035, ಹೊಳೆನರಸೀಪುರ

1478, ಅರಕಲಗೂಡು 1750, ಆಲೂರು –ಸಕಲೇಶಪುರ

ಕ್ಷೇತ್ರದಲ್ಲಿ 1199 ಹೊಸ ಮತದಾರರು ಹೆಸರು ನೋಂದಾಯಿಸಿದ್ದಾರೆ.

5 ಮಾದರಿ ಮತಗಟ್ಟೆ ಸ್ಥಾಪನೆ

ಪ್ರತಿ ಕ್ಷೇತ್ರಕ್ಕೆ ಐದು ಮಾದರಿ ಮತಗಟ್ಟೆ ಸ್ಥಾಪಿಸಲಾಗುವುದು. ಕುಡಿಯುವ ನೀರು, ಅಂಗವಿಕಲರಿಗೆ ರ್‍್ಯಾಂಪ್‌, ಫ್ಯಾನ್‌ ಹಾಗೂ ಇತರೆ ಮೂಲ ಸೌಲಭ್ಯ ಕಲ್ಪಿಸಲಾಗುವುದು. 5 ಮಹಿಳಾ ಸಿಬ್ಬಂದಿ ಒಳಗೊಂಡ ಮತಗಟ್ಟೆಗಳನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆದಿದೆ.

 

ಪ್ರತಿಕ್ರಿಯಿಸಿ (+)