ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠಯ್ಯ ಕುಟುಂಬಕ್ಕೆ ಒಲಿದೀತೆ ಅದೃಷ್ಟ

ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿ ಮಗ, ಸೊಸೆ, ಮೊಮ್ಮಗ
Last Updated 11 ಏಪ್ರಿಲ್ 2018, 10:59 IST
ಅಕ್ಷರ ಗಾತ್ರ

ಹಾಸನ: ರಾಜ್ಯ ರಾಜಕಾರಣದಲ್ಲಿ ಹಿರೀಸಾವೆ ಅಣ್ಣಯ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ಎಚ್‌.ಸಿ.ಶ್ರೀಕಂಠಯ್ಯ ಅವರ ಕುಟುಂಬ ಈ ಬಾರಿ ವಿಧಾನಸಭಾ ಚುನಾವಣೆ ಮೂಲಕ ರಾಜಕೀಯ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪ್ರಬಲ ಎದುರಾಳಿಯಾಗಿದ್ದ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಪುತ್ರಿ, ಎಚ್‌.ಸಿ.ಶ್ರೀಕಂಠಯ್ಯ ಅವರ ಸೊಸೆ ರಾಜೇಶ್ವರಿ ವಿಜಯಕುಮಾರ್‌, ಮಗ ಎಚ್‌.ಎಸ್‌.ವಿಜಯಕುಮಾರ್, ಎಚ್‌.ಸಿ.ಶ್ರೀಕಂಠಯ್ಯ ಅವರ ಪುತ್ರ ಚಂದ್ರು ಅವರ ಮಗ, ಉದ್ಯಮಿ ಎಚ್‌.ಸಿ.ಲಲಿತ್‌ ರಾಘವ್‌ ಅವರ ಹೆಸರು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿದೆ. ಇವರಲ್ಲಿ ಒಬ್ಬರಿಗೆ ಟಿಕೆಟ್‌ ಒಲಿಯಬಹುದು ಎನ್ನುವ ವಿಶ್ವಾಸ ಅವರ ಬೆಂಬಲಿಗರಲ್ಲಿದೆ. ಜಿಲ್ಲೆಯ ಪ್ರಮುಖ ರಾಜಕೀಯ ಕುಟುಂಬವಾಗಿ ಗುರುತಿಸಿಕೊಂಡರೂ ಅವರ ಮನೆಯ ಯಾವೊಬ್ಬ ಸದಸ್ಯರಿಗೂ ಈವರೆಗೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ.

ಇವರೊಂದಿಗೆ ಎಪಿಎಂಸಿ ನಿರ್ದೇಶಕ ಎಂ.ಶಂಕರ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜೆ.ಎಂ.ರಾಮಚಂದ್ರ, ವಿಧಾನ ಪರಿಷತ್‌ ಸದಸ್ಯ ಎಂ.ಗೋಪಾಲಸ್ವಾಮಿ ಅವರ ಸಹೋದರ ಎಂ.ಎ.ರಂಗಸ್ವಾಮಿ ಹಾಗೂ ಕಳೆದ ಬಾರಿ ಪರಾಜಿತ ಅಭ್ಯರ್ಥಿ ಸಿ.ಎಸ್‌.ಪುಟ್ಟೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಎಸ್‌.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಶ್ರೀಕಂಠಯ್ಯ ಅವರು ನಂತರ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಕಡೆಯ ದಿನಗಳಲ್ಲಿ ಕಾಂಗ್ರೆಸ್‌ಗೆ ಹಿಂದಿರುಗಿದರೂ ಮತ್ತೆ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ.

ಶ್ರೀಕಂಠಯ್ಯ ಅವರ ಪುತ್ರ ಎಚ್‌.ಎಸ್‌.ವಿಜಯಕುಮಾರ್‌ ಅವರು ಒಂದು ಅವಧಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದನ್ನು ಹೊರತು ಪಡಿಸಿದರೆ ಇತರೆ ರಾಜಕೀಯ ಅವಕಾಶಗಳಿಂದ ಅವರ ಕುಟುಂಬ ವಂಚಿತವಾಗಿಯೇ ಉಳಿದಿದೆ. ಈ ಬಾರಿ ಟಿಕೆಟ್‌ ದೊರೆತರೆ ತಮ್ಮ ಕುಟುಂಬ ಜಿಲ್ಲೆಯ ರಾಜಕೀಯ ಮುಖ್ಯವಾಹಿನಿಗೆ ಸೇರಬಹುದು ಎನ್ನುವ ಲೆಕ್ಕಾಚಾರ ರಾಜೇಶ್ವರಿ ಅವರಲ್ಲಿದೆ.

ಶ್ರೀಕಂಠಯ್ಯ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ದೊರಕುವುದು ಸುಲಭವಲ್ಲ ಎನ್ನುವಷ್ಟರ ಮಟ್ಟಿಗೆ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಪುಟ್ಟೇಗೌಡ, ಕಳೆದ ಬಾರಿಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ತಮಗೆ ‘ಬಿ’ ಫಾರಂ ನೀಡುತ್ತಾರೆ ಎನ್ನುವ ವಿಶ್ವಾಸದೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಉದ್ಯಮಿ ಎಂ.ಶಂಕರ್‌ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಎ.ಮಂಜು ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ತಮ್ಮ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಹೈಕಮಾಂಡ್‌ ಆಯಾ ಉಸ್ತುವಾರಿ ಸಚಿವರಿಗೆ ನೀಡಿದರೆ ತಮಗೆ ಟಿಕೆಟ್‌ ದೊರೆಯಬಹುದು ಎಂಬ ಲೆಕ್ಕಚಾರದಲ್ಲಿ ಶಂಕರ್‌
ಇದ್ದಾರೆ.

ಜೆಡಿಎಸ್‌ನಿಂದ ಹಾಲಿ ಶಾಸಕ ಸಿ.ಎನ್‌.ಬಾಲಕೃಷ್ಣ, ಈ ಬಾರಿಯೂ ಅವರೇ ಅಭ್ಯರ್ಥಿ. ಈಗಾಗಲೇ ಕ್ಷೇತ್ರದಲ್ಲಿ ಎರಡು ಸುತ್ತಿನ ಬಿರುಸಿನ ಪ್ರಚಾರ ಮುಗಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು, ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ. ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷರಾಗಿರುವ ಶಿವನಂಜೇಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಅಣ್ಣಯ್ಯ ಶ್ರಮ ಪರಿಗಣಿಸಿ

ಹಿರೀಸಾವೆ ಅಣ್ಣಯ್ಯ ಕುಟುಂಬಕ್ಕೆ ಟಿಕೆಟ್‌ ಸಿಗುವುದು ಕಷ್ಟ ಎಂಬುದು ಸತ್ಯ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟನೆಗೆ ಹಗಲಿರುಳು ದುಡಿದಿದ್ದ ಶ್ರೀಕಂಠಯ್ಯ ಅವರ ಶ್ರಮವನ್ನು ಗಣನೆಗೆ ತೆಗೆದುಕೊಂಡು ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್‌ ನೀಡಬೇಕು ಎಂಬುದು ಬೆಂಬಲಿಗರ ಆಗ್ರಹವಾಗಿದೆ.

2013ರ ಫಲಿತಾಂಶ

4ಜೆಡಿಎಸ್‌: ಸಿ.ಎನ್‌.ಬಾಲಕೃಷ್ಣ–87185

4ಕಾಂಗ್ರೆಸ್‌: ಸಿ.ಎಸ್‌.ಪುಟ್ಟೇಗೌಡ–63043 (ಸಮೀಪದ ಸ್ಪರ್ಧಿ)

4ಬಿಜೆಪಿ: ಮಂಜುನಾಥ ಪಟೇಲ್‌–1976

**

ಕ್ಷೇತ್ರದಲ್ಲಿ ನಿರಂತರವಾಗಿ ಜನಸಂರ್ಪಕ ಇಟ್ಟುಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಬಡ್ಡಿರಹಿತವಾಗಿ ರೈತರಿಗೆ ಸಾಲ ಕೊಡಿಸಿದ್ದೇನೆ – ಸಿ.ಎನ್‌.ಬಾಲಕೃಷ್ಣ, ಜೆಡಿಎಸ್‌ ಶಾಸಕ.

**

ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೋರಾಟದ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗಿದೆ – ಸಿ.ಎಸ್‌.ಪುಟ್ಟೇಗೌಡ,ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ.

**

ಕಾಂಗ್ರೆಸ್‌, ಜೆಡಿಎಸ್ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ – ಶಿವನಂಜೇಗೌಡ,ಬಿಜೆಪಿ ಟಿಕೆಟ್‌ ಆಕಾಂಕ್ಷಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT