ಮದುವೆಗೂ ಜೈ , ಮಣ್ಣಿಗೂ ಸೈ

7
ಮುಖಂಡರ ಭಾವನಾತ್ಮಕ ಒಡನಾಟ, ನೀತಿ ಸಂಹಿತೆ ಕಾರಣ ಇತರ ಕಾರ್ಯಕ್ರಮಗಳಿಗೆ ಕಡಿವಾಣ

ಮದುವೆಗೂ ಜೈ , ಮಣ್ಣಿಗೂ ಸೈ

Published:
Updated:

ಹಾವೇರಿ: ಜಿಲ್ಲೆಯಲ್ಲಿ ಚುನಾವಣಾ ಕಾವು ಏರುತ್ತಿದ್ದು, ವಿವಿಧ ಪಕ್ಷಗಳ ಮುಖಂಡರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಮುಂಜಿ, ಮದುವೆ, ಪೂಜೆ, ಗೃಹ ಪ್ರವೇಶ, ಜಾತ್ರೆ ಸೇರಿದಂತೆ ಎಲ್ಲದಕ್ಕೂ ಹಾಜರಾಗುತ್ತಿದ್ದು, ಮೃತರ ಕುಟುಂಬಗಳ ಮನೆಗೆ ತಪ್ಪದೇ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ರಾಜಕಾರಣಿಗಳ ದಿನಚರಿ ಈಗ, ‘ಮದುವೆಗೂ ಜೈ , ಮಣ್ಣಿಗೂ ಸೈ’ ಎನ್ನುವಂತಾಗಿದೆ.

ಕಳೆದ ಆರು ತಿಂಗಳಿನಿಂದ ಸಕ್ರಿಯರಾಗಿರುವ ಟಿಕೆಟ್ ಆಕಾಂಕ್ಷಿಗಳು ಹಳ್ಳಿ ಹಳ್ಳಿ ಭೇಟಿ ಮಾತ್ರವಲ್ಲ, ಎಲ್ಲ ಸಮಾರಂಭಕ್ಕೂ ಹಾಜರಾಗುತ್ತಿದ್ದಾರೆ. ಹಲವೆಡೆ ಕೊಡುಗೆಗಳನ್ನು ನೀಡುತ್ತಿದ್ದರು. ಹೀಗಾಗಿ ಜಾತ್ರೆ, ದೇವಸ್ಥಾನ ಜೀರ್ಣೊದ್ಧಾರ, ಹರಕೆ ಕಾರ್ಯಕ್ರಮಗಳಿಗೆ ದೇಣಿಗೆಗಳು ಸಾಮಾನ್ಯವಾಗಿವೆ. ಈ ನಾಯಕರ ಪರವಾಗಿ ಹರಕೆ ಹೊತ್ತವರೂ ಹಲವರಿದ್ದಾರೆ.

ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬಳಿಕ ಮುಖಂಡರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಹಿರಂಗವಾಗಿ ಕೊಡುಗೆಗಳನ್ನು ನೀಡಲು ಆಗುತ್ತಿಲ್ಲ. ಮುಖಂಡರ ಹಿಂಬಾಲಕರು, ಪಕ್ಷಗಳು ಕಾರ್ಯಕ್ರಮಗಳನ್ನು ಆಯೋಜಿಸುವುದೂ ಕಡಿಮೆಯಾಗಿವೆ. ಹೀಗಾಗಿ ಖಾಸಗಿ ಕಾರ್ಯಕ್ರಮಗಳು ಮಾತ್ರ ಅವಕಾಶ ಕಲ್ಪಿಸಿದ್ದು, ಮದುವೆ, ಮಣ್ಣಿನ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದಾರೆ.

ವಿವಿಧ ಪಕ್ಷಗಳ ನಾಯಕರು ಹಾಗೂ ಒಂದೇ ಪಕ್ಷದ ಎರಡ್ಮೂರು ಆಕಾಂಕ್ಷಿಗಳು ಪರಸ್ಪರ ವಿರೋಧ ರಾಜಕಾರಣ ಮಾಡುತ್ತಿದ್ದರೂ, ಮದುವೆ ಮತ್ತು ಮಣ್ಣಿನ ಕಾರ್ಯಕ್ರಮಗಳಲ್ಲಿ ನೇರ ಮುಖಾಮುಖಿ ಆಗುತ್ತಿದ್ದಾರೆ.ಪ್ರಮುಖ ರಾಜಕಾರಣಿಗಳು ತಮ್ಮ ಕುಟುಂಬದ ಕಾರ್ಯಕ್ರಮಗಳಿಗೆ, ಕ್ಷೇತ್ರದ ಎಲ್ಲ ಮನೆಗಳಿಗೂ ಆಹ್ವಾನ ನೀಡಿದ್ದಾರೆ.

‘ನಮ್ಮ ಹಾಲಿ ಶಾಸಕರು ಮತ್ತು ಮಾಜಿ ಸಚಿವರು ಕ್ಷೇತ್ರದಲ್ಲಿ ಯಾವುದೇ ಮದುವೆ ಮತ್ತು ಮಣ್ಣಿನ ಕಾರ್ಯಕ್ರಮಗಳಿದ್ದರೆ ತಪ್ಪದೇ ಹಾಜರಾಗುತ್ತಾರೆ. ಕ್ಷೇತ್ರದಾದ್ಯಂತ ನಿರಂತರ ಸಂಚರಿಸುತ್ತಿದ್ದಾರೆ’ ಎನ್ನುತ್ತಾರೆ ಹಾನಗಲ್ ತಾಲ್ಲೂಕಿನ ವಕೀಲರಾದ ಕೆ.ಬಿ. ದೊಡ್ಡಮನಿ.

‘ಸಚಿವರು ಕ್ಷೇತ್ರ ಪ್ರವಾಸದಲ್ಲಿರುವ ದಿನಗಳಲ್ಲಿ ನಡೆಯುವ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಈ ಹಿಂದಿನಿಂದಲೂ ತಪ್ಪದೇ ಹಾಜರಾಗುತ್ತಿದ್ದರು. ಸಾವು–ನೋವುಗಳು ಉಂಟಾದ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುತ್ತಿದ್ದರು. ಕಡುಬಡವರಿಗೆ ನೆರವು ನೀಡುತ್ತಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಕ್ಷೇತ್ರದ ಬಡವರಿಗೆ ಕೊಡಿಸಿದ ಪರಿಹಾರ ಕೊಡಿಸಿದ್ದಾರೆ. ಆದರೆ, ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮಗಳು ಇಲ್ಲದ ಕಾರಣ, ಖಾಸಗಿ ಕಾರ್ಯಕ್ರಮಗಳ ಭೇಟಿಯೇ ಹೆಚ್ಚಾಗಿದೆ. ಕೆಲವು ದಿನ 10ಕ್ಕೂ ಹೆಚ್ಚು ಮದುವೆಗಳು ಇರುತ್ತವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಪ್ರವೀಣ ಸಾಲಿಮಠ ತಿಳಿಸಿದರು.

ಈ ಹಿಂದೆ: ನೀತಿ ಸಂಹಿತೆ ಘೋಷಣೆಗೂ ಮೊದಲು ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಗಾಢಾ ಓಟ, ಕಬಡ್ಡಿ ಹಾಗೂ ಕ್ರಿಕೆಟ್‌ ಅಬ್ಬರ ಜೋರಾಗಿತ್ತು. ವಿಜೇತರಿಗೆ ಬೈಕ್, ಚಿನ್ನದ ಪದಕ, ಬೆಳ್ಳಿ ಪದಕ ಮತ್ತಿತರ ಉಡುಗೊರೆಗಳನ್ನು ಟಿಕೆಟ್ ಆಕಾಂಕ್ಷಿಗಳು ನೀಡಿದ್ದರು. ಹೀಗಾಗಿ ಕೆಲವು ಗ್ರಾಮಗಳಲ್ಲಿ ಪದೇ ಪದೇ ‘ಹೋರಿ ಹಬ್ಬ’ ನಡೆದ ನಿದರ್ಶನಗಳಿವೆ. ಆದರೆ, ನೀತಿ ಸಂಹಿತೆಯ ಕಡಿವಾಣ ಬಿದ್ದ ಬಳಿಕ, ರಾಜಕೀಯ ಮುಖಂಡರ ಭಾವನಾತ್ಮಕ ನಂಟಿಗೆ ‘ಮದುವೆ ಮತ್ತು ಮಣ್ಣೇ ಗತಿ’ ಎನ್ನುವಂತಾಗಿದೆ.

ಈಗ ಆಯೇರಿಯೂ ಭರ್ಜರಿ!

‘ವರ್ಷದ ಹಿಂದೆ ಮದುವೆಗಳಿಗೆ ರಾಜಕಾರಣಿಗಳನ್ನು ಕರೆಯಿಸಿಕೊಳ್ಳುವುದೇ ಒಂದು ಪ್ರತಿಷ್ಠೆಯಾಗಿತ್ತು. ಅದು ಪ್ರತಿಷ್ಠಿತ ಮದುವೆ ಆಗಿರುತ್ತಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಆಹ್ವಾನ ನೀಡಿದ ಕಾರ್ಯಕ್ರಮಗಳಿಗೆಲ್ಲ ಆಕಾಂಕ್ಷಿಗಳು ಬರುತ್ತಿದ್ದಾರೆ. ಅಲ್ಲದೇ, ‘ಆಯೇರಿ (ಮುಯ್ಯಿ)’ಯೂ ಚೆನ್ನಾಗಿ ಮಾಡುತ್ತಿದ್ದಾರೆ’ ಎಂದು ವರದಾ ಹಳ್ಳಿಯ ಹೊಳಿಯಪ್ಪ ಸೂರದ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದೊಂದು ವರ್ಷದ ರಾಜಕೀಯ ಪ್ರಮುಖರ ಅದ್ಧೂರಿ ಕಾರ್ಯಕ್ರಮಗಳು

ಬಸವರಾಜ ಬೊಮ್ಮಾಯಿ (ಬಿಜೆಪಿ) – ಮಗನ ಮದುವೆಯ ಆರತಕ್ಷತೆ

ಆರ್. ಶಂಕರ್ (ಪಕ್ಷೇತರ)– ಗೃಹ ಪ್ರವೇಶ, ನಮ್ಮ ಮನೆ ನಮ್ಮ ಕಚೇರಿ ಉದ್ಘಾಟನೆ, ಸಾಮೂಹಿಕ ವಿವಾಹ

ಬಸವರಾಜ ಶಿವಣ್ಣನವರ (ಕಾಂಗ್ರೆಸ್)– ಸಹೋದರರ ಮಕ್ಕಳ ಮದುವೆ

ಕೆ.ಬಿ. ಕೋಳಿವಾಡ (ಕಾಂಗ್ರೆಸ್)– ಹುಟ್ಟುಹಬ್ಬ ಮತ್ತು ಸಾಮೂಹಿಕ ವಿವಾಹ

ವಿರೂಪಾಕ್ಷಪ್ಪ ಬಳ್ಳಾರಿ (ಬಿಜೆಪಿ)– ಗೃಹ ಪ್ರವೇಶ

ಬಿ.ಸಿ. ಪಾಟೀಲ್ (ಕಾಂಗ್ರೆಸ್)– ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

ಮಂಜುನಾಥ ಕುನ್ನೂರ (ಕಾಂಗ್ರೆಸ್)– ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ

ಕೊಟ್ರೇಶಪ್ಪ ಬಸೇಗಣ್ಣಿ (ಕಾಂಗ್ರೆಸ್‌)– ಮಗನ ಮದುವೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry