ತುಂಗಭದ್ರೆ ರಾಜ್ಯಮಟ್ಟದಲ್ಲೇಕೆ ಚರ್ಚೆಯಾಗುತ್ತಿಲ್ಲ?

7
ಸಂವಾದದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪಗೆ ಪ್ರಶ್ನೆ

ತುಂಗಭದ್ರೆ ರಾಜ್ಯಮಟ್ಟದಲ್ಲೇಕೆ ಚರ್ಚೆಯಾಗುತ್ತಿಲ್ಲ?

Published:
Updated:

ಗಂಗಾವತಿ: ಕಾವೇರಿ ನದಿ ವಿಚಾರ ಬಂದಾಗ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತದೆ. ತುಂಗಭದ್ರಾ ಕುರಿತು ಏಕೆ ಚರ್ಚೆ ಆಗುವುದಿಲ್ಲ? ಇಲ್ಲಿನ ಅಣೆಕಟ್ಟೆಯಲ್ಲಿ 34 ಟಿಎಂಸಿಯಷ್ಟು ಹೂಳು ತುಂಬಿದೆ. ಅದನ್ನು ತೆಗೆಯುವ ಬಗ್ಗೆ ಏನೆನ್ನುತ್ತೀರಿ? ನೀರು ನಿರ್ವಹಣೆಯಲ್ಲಿ ವಿಫಲವಾದ ಕಾರಣ ಬೆಳೆ ನಷ್ಟವಾಗಿದೆ. ಅದನ್ನು ಸರಿದೂಗಿಸುವಲ್ಲಿ ನಿಮ್ಮ ನಿಲುವು ಏನು? ಒಂದು ಲೀಟರ್‌ ನೀರಿಗೆ ₹ 15 ಇದೆ. ಹಾಲಿಗೆ ₹ 25 ಇದ್ಯಾವ ನ್ಯಾಯ?... ಇವು ಇಲ್ಲಿನ ಸಿಬಿಎಸ್‌ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಂದ ಸಾಲು ಸಾಲು ಪ್ರಶ್ನೆಗಳು. ಬಹುತೇಕ ಪ್ರಶ್ನೆಗಳು ಪೂರ್ವನಿರ್ಧರಿತ ವ್ಯಕ್ತಿಗಳಿಂದಲೇ ಕೇಳಿಬಂದವು.

'ಫಸಲ್‌ ಭಿಮಾ ಯೋಜನೆ ಅಡಿ ನೀರಾವರಿ ಪ್ರದೇಶದಲ್ಲಿ ಹಾನಿಗೊಳಗಾದ ಬೆಳೆಗಳಿಗೂ ಪರಿಹಾರ ಕೊಡಬೇಕು. ತುಂಗಭದ್ರಾ ನದಿಯಿಂದ ಚಿತ್ರದುರ್ಗದಂಥ ಪ್ರದೇಶಗಳಿಗೆ ನೀರು ಕೊಡುತ್ತಿದ್ದಾರೆ. ಮೊದಲು ನಮಗೆ ನೀರು ಕೊಡಿ' ಎಂದು ರೈತರು ಒತ್ತಾಯಿಸಿದರು.

ಎಲ್ಲ ಪ್ರಶ್ನೆಗಳನ್ನೂ ಶಾಂತವಾಗಿ ಕೇಳಿಸಿಕೊಂಡ ಬಿಎಸ್‌ವೈ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗಾಗಿ ₹ 1 ಲಕ್ಷ ಕೋಟಿ ಮೀಸಲಿಡಲಾಗುವುದು. ಪಂಪ್‌ಸೆಟ್‌ಗಳಿಗೆ ನಿರಂತರ 12 ಗಂಟೆ ವಿದ್ಯುತ್‌ ಪೂರೈಸಲಾಗುವುದು. ನವಲಿ ಭಾಗದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು. ಹಾಲಿ ಸರ್ಕಾರ ರೈತರನ್ನು ಕಡೆಗಣಿಸಿದ ಪರಿಣಾಮ 3,750 ರೈತರು ಆತ್ಮಹತ್ಯೆ ಮಾಡಿಕೊಂಡರು. ರೈತ ಹೋರಾಟಗಾರರ ಮೇಲೆ ಹಾಕಲಾದ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು. ರೈತರ ಸಾಲ ಮನ್ನಾ ಮಾಡುವ ನಾಟಕ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕವಾದ ಕೃಷಿ ಬಜೆಟ್‌ ಮಾಡಿದ್ದೆವು. ಭೂಚೇತನ ಯೋಜನೆ ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಹಾಯ ಮಾಡುತ್ತೇವೆ'  ಎಂದು ಭರವಸೆ ನೀಡಿದರು.

ಇದೇ ವೇಳೆ ಮುಷ್ಟಿ ಧಾನ್ಯ ಸಂಗ್ರಹದಿಂದ ಸಿದ್ಧಪಡಿಸಲಾದ ಅನ್ನವನ್ನು ಬಿಎಸ್‌ವೈ ಸೇವಿಸಿದರು. ಬಿಜೆಪಿ ಗೆಲ್ಲಿಸುವಂತೆ ಕೋರಿ ಪ್ರಮಾಣವಚನ ಬೋಧಿಸಲಾಯಿತು.

ಸಂಹಿತೆ ಉಲ್ಲಂಘನೆ: ಕಾರು ವಶಕ್ಕೆ

ಗಂಗಾವತಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಅವರ ಕಾರನ್ನು ಮಂಗಳವಾರ ಇಲ್ಲಿನ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ವಾಹನದ ಮುಂದೆ ಬಿಜೆಪಿ ಚಿಹ್ನೆ ಬಳಸಿದ್ದಲ್ಲದೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂಬ ನಾಮಫಲಕ ಹಾಕಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಸಂಚಾರ ದಳದ ಅಧಿಕಾರಿ ಎನ್.ಎಂ.ಗೋಟೂರು ತಿಳಿಸಿದ್ದಾರೆ.ಆನೆಗೊಂದಿಯ ಬಿಜೆಪಿ ಮುಖಂಡ ಭರತ್ ಅವರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.ಸಂವಾದ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲಾಗಿತ್ತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಸಮಯ ನಿಗದಿ ಪಡಿಸಲಾಗಿತ್ತು. ಎಷ್ಟು ವಾಹನಕ್ಕೆ ಅನುಮತಿ ಪಡೆದಿದ್ದರು. ಎಷ್ಟು ವಾಹನ ಬಳಸಿದ್ದಾರೆ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಜಂಬಣ್ಣ ಐಲಿ ತಿಳಿಸಿದ್ದಾರೆ.ಇಡೀ ಕಾರ್ಯಕ್ರಮದ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಐಲಿ ಹೇಳಿದ್ದಾರೆ.

**

ನೀರಿನ ಕೊರತೆಯಿಂದ ಫಸಲು ನಷ್ಟಕ್ಕೊಳಗಾದ ಭತ್ತ ಬೆಳೆಗಾರರ ಜತೆ ನಾವು ಸದಾ ಇರುತ್ತೇವೆ – ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ .

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry