ಸೋಮವಾರ, ಜುಲೈ 13, 2020
25 °C
ಚುನಾವಣೆ: ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗೆ ಮಾಸ್ಟರ್‌ ಟ್ರೇನರ್‌ ಪ್ರಭುರಾಜ್‌ ನಾಯಕ್‌ ತರಬೇತಿ

‘ನಿಯಮಾನುಸಾರ ಕರ್ತವ್ಯ ನಿರ್ವಹಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿಯಮಾನುಸಾರ ಕರ್ತವ್ಯ ನಿರ್ವಹಿಸಿ’

ಕೊಪ್ಪಳ: ‘ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಕೇಂದ್ರಗಳಿಗೆ ನೇಮಿಸಲಾಗುವ ಅಧಿಕಾರಿ, ಸಿಬ್ಬಂದಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿಭಾಯಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೊಪ್ಪಳ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮತದಾನ ಕೇಂದ್ರಗಳಿಗೆ ನಿಯೋಜಿಸಲಾಗುವ ಅಧಿಕಾರಿ, ಸಿಬ್ಬಂದಿ ಕಾರ್ಯ ಮಸ್ಟರಿಂಗ್‌ನಿಂದ ಆರಂಭವಾಗಲಿದ್ದು, ಮತಗಟ್ಟೆ ಸಿಬ್ಬಂದಿಗೆ ಒದಗಿಸಲಾಗುವ ಚುನಾವಣಾ ಸಾಮಗ್ರಿಗಳನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮತದಾನ ಕೇಂದ್ರದಲ್ಲಿ ಮತದಾನದ ಗೋಪ್ಯತೆ ಕಾಪಾಡಬೇಕು. ಅಣಕು ಮತದಾನ, ಚುನಾವಣಾ ಪೋಲಿಂಗ್ ಏಜೆಂಟರ ಕರ್ತವ್ಯಗಳು, ಮತಯಂತ್ರಗಳ ಕಾರ್ಯಕ್ಷಮತೆ ಖಚಿತಪಡಿಸಿಕೊಳ್ಳುವುದು ಸೇರಿದಂತೆ  ಹಲವು ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ’ ಎಂದು ಅವರು ಹೇಳಿದರು.

‘ರಾಜಕೀಯ ಪಕ್ಷಗಳು ಅಥವಾ ಚುನಾವಣೆಗೆ ಸಂಬಂಧಿಸಿರುವ ಛಾಯಾಚಿತ್ರಗಳನ್ನು ಮರೆಮಾಚುವುದು. ಪೋಲಿಂಗ್ ಏಜೆಂಟರಲ್ಲಿ ಅಧಿಕೃತ ಮತದಾರರ ಪಟ್ಟಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮತದಾನ ಕೇಂದ್ರದ ಒಳಗೆ ಯಾವುದೇ ಮತದಾರರು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಅಥವಾ ಸಿಬ್ಬಂದಿ ಮೊಬೈಲ್ ಫೋನ್‍ನೊಂದಿಗೆ ಪ್ರವೇಶಿಸುವಂತಿಲ್ಲ. ಮತಗಟ್ಟೆ ಅಧಿಕಾರಿಗಳು ಮಾತ್ರ ಮೊಬೈಲ್ ಫೋನ್ ಹೊಂದಲು ಅವಕಾಶವಿದೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ನಡೆಸಲು ಸಮಯ ನಿಗದಿಪಡಿಸಲಾಗಿದೆ’ ಎಂದರು.

ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಪ್ರಭುರಾಜ್ ನಾಯಕ್ ಮಾತನಾಡಿ, ‘ಯಾವುದೇ ಅಧಿಕಾರಿ, ಸಿಬ್ಬಂದಿ ಈ ನಿಯಮಗಳ ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಮತದಾರ ಮತದಾನ ಕೇಂದ್ರದ ಒಳಗೆ ಮತ ಚಲಾಯಿಸಿ ನಿರ್ಗಮಿಸಲು ಸುಮಾರು 15ರಿಂದ 20 ಸೆಕೆಂಡ್‍ಗಳ ಸಮಯ ಬೇಕಾಗುತ್ತದೆ. ಈ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಮತದಾನ ಕಾರ್ಯದಲ್ಲಿ ಅನಗತ್ಯ ಸಮಯ ವ್ಯರ್ಥಗೊಳಿಸಲು ಅವಕಾಶ ಕಲ್ಪಿಸದೆ, ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ.ಗೀತಾ, ಯಲಬುರ್ಗಾ ಕ್ಷೇತ್ರ ಚುನಾವಣಾಧಿಕಾರಿ ವಿಜಯ ಮೆಕ್ಕಳಕಿ ಇದ್ದರು.

ಕಾಂಗ್ರೆಸ್ ರೈತ ವಿರೋಧಿ: ಸಂಸದ

ಗಂಗಾವತಿ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ತುಂಗಭದ್ರಾ ಎಡದಂಡೆ ಕಾಲುವೆ ಅಭಿವೃದ್ಧಿಗೆ ₹200 ಕೋಟಿ ಬಿಡುಗಡೆ ಮಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.

ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ರೈತಪರವಾದ ಹಾಗೂ ನೀರಾವರಿಗೆ ಪ್ರೋತ್ಸಾಹ ನೀಡುವ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು. ಆದರೆ, ನೀರು ನೀಡುವಂತೆ ಹೋರಾಟ ಮಾಡಿದ ಮುಖಂಡರನ್ನು ಸಿದ್ದರಾಮಯ್ಯ ಜೈಲಿಗೆ ಕಳಿಸಿದರು. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಐದು ವರ್ಷದಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ನಯಾಪೈಸೆಯನ್ನು ಬಿಡುಗಡೆ ಮಾಡದ ರಾಜ್ಯ ಸರ್ಕಾರ ಕೊನೆಯ ವರ್ಷದಲ್ಲಿ ₹537 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹೂಳು ತೆಗೆಯುವ ಕಾಮಗಾರಿ ನೆಪದಲ್ಲಿ ಸಂತೋಷ್ ಲಾಡ್, ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ ಸೇರಿ ಕಾಡಾ ಮಂಡಳಿಯ ಸದಸ್ಯರು ಹಣ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಸಂಸದರಾದ ಶಿವರಾಮಗೌಡ, ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಕಾಡಾದ ಮಾಜಿ ಅಧ್ಯಕ್ಷರಾದ ಬಸವನಗೌಡ ಬ್ಯಾಗವಾಟ, ಎಚ್. ಗಿರೇಗೌಡ, ದಢೇಸ್ಗೂರು ಬಸವರಾಜ ಇದ್ದರು.

**

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗವು ನಿಯಮಗಳನ್ನು ರೂಪಿಸಿದೆ. ಅಧಿಕಾರಿ, ಸಿಬ್ಬಂದಿ ಈ ನಿಯಮ ಮೀರಬಾರದು –ಪ್ರಭುರಾಜ್‌ ನಾಯಕ್‌, ರಾಜ್ಯಮಟ್ಟದ ಮಾಸ್ಟರ್‌ ಟ್ರೇನರ್‌.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.