ಶುಕ್ರವಾರ, ಡಿಸೆಂಬರ್ 13, 2019
19 °C

ಕಾಂಗ್ರೆಸ್‌ ಮುಖಂಡರಿಂದ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ: ಸಂಸದ ಸುರೇಶ ಅಂಗಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಮುಖಂಡರಿಂದ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ: ಸಂಸದ ಸುರೇಶ ಅಂಗಡಿ ಆರೋಪ

ಬೆಳಗಾವಿ: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇದೇ 13ರಂದು ಗೋಕಾಕ ಪಟ್ಟಣದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಇದರಿಂದ ಕಂಗಾಲಾಗಿರುವ ಕಾಂಗ್ರೆಸ್‌ ಮುಖಂಡರು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ಸುರೇಶ ಅಂಗಡಿ ಆರೋಪಿಸಿದರು.

ಬುಧವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗೋಕಾಕದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಹೆದರಿಸಲಾಗಿದೆ. ಇದನ್ನು ಎಸ್ಪಿ ಗಮನಕ್ಕೂ ತಂದಿದ್ದೇವೆ. ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಗೋಕಾಕದಲ್ಲಿ ಬೆದರಿಕೆ ಹಾಕುವ ಕಾಂಗ್ರೆಸ್‌ನವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ, ನಿಮಗೆ ಗೊತ್ತಿಲ್ಲವೇ’ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.

‘ಅಲ್ಲೇನು ನಡೆಯುತ್ತಿದೆ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ, ಗುಪ್ತಚರ ಇಲಾಖೆಯವರು ಏನು ಮಾಡುತ್ತಿದ್ದಾರೆ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಏಕೆ, ತಾರತಮ್ಯ ಮಾಡುತ್ತಿರುವುದೇಕೆ?’ ಎಂದು ಕೇಳಿದರು.

‘ಅಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ನೀತಿಸಂಹಿತೆ ಜಾರಿಯಲ್ಲಿ ತಾರತಮ್ಯ ತೋರಬಾರದು. ಅಲ್ಲಿ ಹಿಂದಿನಿಂದಲೂ ಬೇರೂರಿರುವ ಪಿಡಿಒ, ತಹಶೀಲ್ದಾರ್‌ ಹಾಗೂ ಇತರ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಅಧಿಕಾರಿಗಳು ಕಾನೂನು ಪ್ರಕಾರ ಕಾರ್ಯನಿರ್ವಹಿಸಬೇಕು. ಯಾರದೋ ಚಾಕರಿ ಮಾಡುವುದಕ್ಕೆ ನೇಮಕಗೊಂಡಿಲ್ಲ ಎನ್ನುವುದನ್ನು ಮರೆಯಬಾರದು’ ಎಂದರು.

‘ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ವಕೀಲ ಎಂ.ಬಿ. ಜಿರಲಿ ಅವರಿಗೆ ಈಚೆಗೆ ಡಿಸಿಪಿ ಕಚೇರಿಯಿಂದ ನೋಟಿಸ್‌ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಶಾಂತಿ ಭಂಗ ಮಾಡುವವರಿದ್ದೀರಿ, ನಿಮ್ಮ ಮೇಲೆ ಕ್ರಮ ಕೈಗೊಳ್ಳಬಾರದೇಕೆ ಎಂದು ಕೇಳಲಾಗಿದೆ. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ‌ಕಚೇರಿ ಎದುರು ಉಪವಾಸ ಸತ್ಯಾಗ್ರಹ

ಬೆಳಗಾವಿ:
‘ಸಂಸತ್‌ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ವಿರುದ್ಧ ಇದೇ 12ರಂದು ಬೆಳಿಗ್ಗೆ 11ರಿಂದ ಸಂಜೆವರೆಗೆ ಇಲ್ಲಿನ ಜಿಲ್ಲಾಧಿಕಾರಿ ‌ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಬಿಜೆಪಿ ಸಂಸದ ಸುರೇಶ ಅಂಗಡಿ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದಾದ್ಯಂತ ಬಿಜೆಪಿಯ ಎಲ್ಲ ಸಂಸದರೂ ಧರಣಿ ನಡೆಸಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಧಿವೇಶನ ಸುಗಮವಾಗಿ ನಡೆಯಲು ಕಾಂಗ್ರೆಸ್‌ನವರು ಬಿಡಲಿಲ್ಲ. ದ್ವಂದ್ವನೀತಿಯನ್ನು ಪ್ರದರ್ಶಿಸಿದರು. ವಿರೋಧಪಕ್ಷದವರು ಕೇಳುವ ಎಲ್ಲ ಪ್ರಶ್ನೆಗೂ ಉತ್ತರಿಸಲು ಪ್ರಧಾನಿ, ಗೃಹ ಸಚಿವ ರಾಜನಾಥಸಿಂಗ್‌ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಸಿದ್ಧವಿದ್ದರು. ಆದರೆ, ಕಾಂಗ್ರೆಸ್‌ನವರು ಸಣ್ಣಪುಟ್ಟ ಪಕ್ಷದವರನ್ನು ಎತ್ತಿಕಟ್ಟಿ ಕಲಾಪ ಹಾಳು ಮಾಡಿದರು’ ಎಂದು ಟೀಕಿಸಿದರು.

‘ದೇಶದಲ್ಲಿನ ಅನೇಕ ಸಮಸ್ಯೆಗಳು, ಬಡವರು, ರೈತರು, ನೀರಾವರಿ, ಆರ್ಥಿಕ ವಿಷಯಗಳ ಬಗ್ಗೆ ಚರ್ಚೆಗೆ ಉದ್ದೇಶಿಸಲಾಗಿತ್ತು. ಆದರೆ, ಅದಕ್ಕೆ ಬಿಡಲಿಲ್ಲ. ಚರ್ಚಿಸಿದರೆ ನಮ್ಮ ಹುಳುಕು ಹೊರಬರುತ್ತದೆ ಎಂದು ಅಡ್ಡಪಡಿಸಿದರು. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದರು. ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದ ಅವರು, ಈಗ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ’ ಎಂದು ದೂರಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಮುಖಂಡರಾದ ಅನಿಲ ಬೆನಕೆ, ಡಾ.ರವಿ ಪಾಟೀಲ, ಶ್ರೀನಿವಾಸ ಬೀಸನಕೊಪ್ಪ, ಆರ್.ಎಸ್. ಮುತಾಲಿಕ್‌ ದೇಸಾಯಿ ಇದ್ದರು.

‘ಪೊಲೀಸರ ನೋಟಿಸ್‌: ನ್ಯಾಯಾಲಯದಲ್ಲಿ ಪ್ರಶ್ನಿಸುವೆ’

‘ನನಗೆ ಡಿಸಿಪಿ ಕಚೇರಿಯಿಂದ ನೋಟಿಸ್‌ ಬಂದಿದ್ದು, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಎಂ.ಜಿ. ಜಿರಲಿ ತಿಳಿಸಿದರು.

‘ಇಲ್ಲಿ ಶೈತ್ಯಾಗಾರಗಳ ಹೆಸರಿನಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಹಿಂದಿನಿಂದಲೂ ಹೋರಾಟ ಮಾಡುತ್ತಿದ್ದೇವೆ. ಸಂಬಂಧಿಸಿದ ಇಲಾಖೆಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಆದರೆ, ಈಚೆಗೆ ಹೋರಾಟ ತೀವ್ರಗೊಂಡಿರುವುದರಿಂದ ನೋಟಿಸ್‌ ನೀಡುವ ಮೂಲಕ ಬೆದರಿಸಲಾಗುತ್ತಿದೆ. ನನ್ನಂತೆಯೇ ಹಲವರಿಗೆ ನೋಟಿಸ್‌ ಬಂದಿರಬಹುದು’ ಎಂದು ಹೇಳಿದರು.

‘ಮುಂಬರುವ ಚುನಾವಣೆ ವೇಳೆಯಲ್ಲಿ ಕಾನೂನು ಭಂಗ ಮಾಡುವವರಿದ್ದೀರಿ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ. ಜಾಮೀನಿಗೆ ಇಬ್ಬರನ್ನು ಕರೆದುಕೊಂಡು ಬರಬೇಕು. ಮುಚ್ಚಳಿಕೆ ಬರೆದುಕೊಡಬೇಕು ಎಂದು ತಿಳಿಸಲಾಗಿದೆ. ನಾನು ಹಿಂದೆ ಗಲಾಟೆ ಮಾಡಿದ ಇತಿಹಾಸವಿದೆಯೇ? ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ನೀಡುವ ನೋಟಿಸನ್ನು ನನಗೆ ಕೊಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಮಹದಾಯಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಜ್ಯದ ಪರ ವಕೀಲ ನಾನು. ಸರ್ಕಾರವೇ ನನ್ನನ್ನು ನಿಯೋಜಿಸಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದೇನೆ ಎಂದು ಈಗ ಬೆದರಿಕೆ ಹಾಕಲಾಗಿದೆ. ಇದರ ಹಿಂದೆ ರಾಜಕೀಯದ ಕೈವಾಡವಿದೆ’ ಎಂದು ಆರೋಪಿಸಿದರು.‌

ಪ್ರತಿಕ್ರಿಯಿಸಿ (+)