ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಚುನಾವಣೆಯಲ್ಲಿ ಸೊನ್ನೆ ಸುತ್ತಿದ್ದ ಬಿಜೆಪಿ!

2008ರಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದ್ದ ಪಕ್ಷ 2013ರಲ್ಲಿ ಖಾತೆಯನ್ನೇ ತೆರೆಯಲಿಲ್ಲ
Last Updated 11 ಏಪ್ರಿಲ್ 2018, 13:01 IST
ಅಕ್ಷರ ಗಾತ್ರ

ಶಿವಮೊಗ್ಗ: ಕ್ಷೇತ್ರ ಪುನರ್‌ ವಿಂಗಡಣೆಯ ನಂತರ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಬಿಜೆಪಿ, 2013ರಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸೋಲು ಅನುಭವಿಸುವ ಮೂಲಕ ಕರಾಳ ಇತಿಹಾಸ ದಾಖಲಿಸಿತ್ತು.

2008ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನೂ ಕೊಡುಗೆಯಾಗಿ ನೀಡಿತ್ತು. ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ, ಸೊರಬದಲ್ಲಿ ಹರತಾಳು ಹಾಲಪ್ಪ, ಶಿವಮೊಗ್ಗ ನಗರದಲ್ಲಿ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರದಲ್ಲಿ ಕೆ.ಜಿ. ಕುಮಾರಸ್ವಾಮಿ ವಿಜಯಪತಾಕೆ ಹಾರಿಸಿದ್ದರು. ನಿರೀಕ್ಷೆಯಂತೆ ಯಡಿಯೂರಪ್ಪ ಅವರು ಮುಖ್ಯ
ಮಂತ್ರಿ ಗಾದಿಗೆ ಏರಿದ್ದರು.

2013ರಲ್ಲಿ ಬಿಜೆಪಿ, ಕೆಜೆಬಿ ಪರಸ್ಪರ ಸ್ಪರ್ಧೆಗೆ ಇಳಿದಿದ್ದ ಪರಿಣಾಮ ಬಿಜೆಪಿ ಸಂಪೂರ್ಣ ನೆಲಕಚ್ಚಿತ್ತು. ಬಿಜೆಪಿ ಮಣಿಸಲು ಹೊರಟಿದ್ದ ಕೆಜೆಪಿ ಗೆಲುವು ಕಂಡಿದ್ದು ಶಿಕಾರಿಪುರ ಕ್ಷೇತ್ರದಲ್ಲಿ ಮಾತ್ರ. ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ವಿಜಯ ಮಾಲೆ ಧರಿಸಿದ್ದರು.

ಸ್ವಾತಂತ್ರ್ಯ ನಂತರ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಚಳವಳಿಗೆ ಭದ್ರ ನೆಲೆ ಒದಗಿಸಿತ್ತು. 1983ರವರೆಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳದೇ ಕಾರುಬಾರು.

1983ರಲ್ಲಿ ಮೊದಲ ಖಾತೆ ತೆರೆದಿದ್ದ ಬಿಜೆಪಿ: ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 1983ರಲ್ಲಿ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರು ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್‌ನ ಯಂಕಟಪ್ಪ ಅವರನ್ನು 22 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿದ್ದರು. ಶಿವಮೊಗ್ಗದಲ್ಲಿ ಎಂ. ಆನಂದರಾವ್ ಜನತಾ ಪಕ್ಷದ ಮಹೇಶ್ವರಪ್ಪ ಅವರನ್ನು ಮಣಿಸಿದ್ದರು. ಈ ಇಬ್ಬರೂ ಬಿಜೆಪಿಗೆ ಜಿಲ್ಲೆಯಲ್ಲಿ ಬುನಾದಿ ಹಾಕಿದ್ದರು. 1985ರಲ್ಲಿ ಯಡಿಯೂರಪ್ಪ ಮಾತ್ರ ಆಯ್ಕೆಯಾಗಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್‌ನ ಕೆ.ಎಚ್. ಶ್ರೀನಿವಾಸ್‌ ಅವರನ್ನು ಮಣಿಸಿ, ಬಿಜೆಪಿ ಶಾಸಕರ ಸಂಖ್ಯೆ 2ಕ್ಕೆ ಏರಿಸಿದ್ದರು. 1994ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರ, ಹೊಸನಗರದಿಂದ ಆಯನೂರು ಮಂಜುನಾಥ್ ಆಯ್ಕೆಯಾಗುವ ಮೂಲಕ ಬಿಜೆಪಿ ಶಾಸಕರ ಸಂಖ್ಯೆ 4ಕ್ಕೆ ಏರಿತ್ತು. ಆದರೆ, 1999ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ ಇಬ್ಬರೂ ಸೋಲು ಕಂಡಿದ್ದರು. ಆ ವರ್ಷ ಗೆಲುವು ಕಂಡ ಬಿಜೆಪಿಯ ಏಕೈಕ ಅಭ್ಯರ್ಥಿ ತೀರ್ಥಹಳ್ಳಿ ಆರಗ ಜ್ಞಾನೇಂದ್ರ.1999ರಲ್ಲಿ ಮತ್ತೆ ನೆಲಕಚ್ಚಿದ್ದ ಬಿಜೆಪಿ 2004ರಲ್ಲಿ ಚೇತರಿಸಿ ಕೊಂಡು ಫೀನಿಕ್ಸ್‌ನಂತೆ ಮೇಲೆದ್ದು ಬಂದಿತ್ತು. ಶಿಕಾರಿಪುರ, ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ (ಹರತಾಳು ಹಾಲಪ್ಪ) ಜತೆಗೆ ಮೊದಲ ಬಾರಿ ಹೊಳೆಹೊನ್ನೂರು (ಜಿ. ಬಸವಣ್ಣಪ್ಪ) ಸಾಗರದಲ್ಲೂ (ಬೇಳೂರು ಗೋಪಾಲಕೃಷ್ಣ) ಖಾತೆ ತೆರೆದಿತ್ತು. ಹಾಗಾಗಿ ಬಿಜೆಪಿ ಶಾಸಕರ ಸಂಖ್ಯೆ 6ಕ್ಕೆ ಏರಿತ್ತು. 2008ರಲ್ಲಿ ತೀರ್ಥಹಳ್ಳಿ ಕಳೆದುಕೊಂಡು ಸೊರಬದಲ್ಲಿ ಅರಳಿತ್ತು.

ಖಾತೆ ತೆರೆಯದ ಕ್ಷೇತ್ರ ಭದ್ರಾವತಿ:

ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಖಾತೆ ತೆರೆದಿದೆ. ಶಿಕಾರಿಪುರದಲ್ಲಿ 7 ಬಾರಿ (2014ರ ಉಪ ಚುನಾವಣೆ ಸೇರಿ), ಶಿವಮೊಗ್ಗದಲ್ಲಿ 5 ಬಾರಿ, ತೀರ್ಥಹಳ್ಳಿಯಲ್ಲಿ 3, ಹೊಸನಗರ, ಸಾಗರ, ಶಿವಮೊಗ್ಗ ಗ್ರಾಮಾಂತರ (ಹೊಳೆಹೊನ್ನೂರು ಸೇರಿ) ತಲಾ
2 ಬಾರಿ, ಸೊರಬ 1 ಬಾರಿ ಗೆಲುವು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT