ಕೆಸರಿನ ಸ್ನಾನ ಮಾಡೋಣ ಕಮಾಂಡೊ ನೆಟ್‌ ಏರೋಣ

7

ಕೆಸರಿನ ಸ್ನಾನ ಮಾಡೋಣ ಕಮಾಂಡೊ ನೆಟ್‌ ಏರೋಣ

Published:
Updated:
ಕೆಸರಿನ ಸ್ನಾನ ಮಾಡೋಣ ಕಮಾಂಡೊ ನೆಟ್‌ ಏರೋಣ

ಸತೀಶ ಎಸ್.ಹುಲಸೋಗಿ

ಸರೋವರದಲ್ಲಿ ದೋಣಿಯೊಳಗೆ ವಿಹರಿಸಿ ಸೃಷ್ಟಿಯ ಸೌಂದರ್ಯ ಸವಿಯಬೇಕು, ಸಾಹಸಮಯ ಕ್ರೀಡೆಗಳನ್ನು ಒಮ್ಮೆಯಾದರೂ ಆಡಬೇಕೆಂಬ ಮನಸ್ಸು ಎಲ್ಲರಿಗೂ ಇರುತ್ತದೆ. ಕೆಲವರು ತಮ್ಮ ಮನದಾಸೆಯನ್ನು ಪಟ್ಟು ಹಿಡಿದು ಈಡೇರಿಸಿಕೊಳ್ಳುತ್ತಾರೆ. ಉಳಿದವರು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ.

ಹುಬ್ಬಳ್ಳಿಯ ದಾಸನೂರ ಸಮೂಹ ಸಂಸ್ಥೆಯು ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿ ನಿರ್ಮಿಸಿದ ‘ಇಂಡಿಯನ್ ಗಾರ್ಡನ್’ ಅಂತಹ ಅವಕಾಶವನ್ನು ಮೊಗೆದು ಕೊಡುತ್ತದೆ. ಅಂಥ ವಿಶೇಷ ಈ ‘ಇಂಡಿಯನ್ ಗಾರ್ಡನ್’ನಲ್ಲಿ ಏನಿದೆ ಅಂತೀರಾ?

ಪ್ರವೇಶ ದ್ವಾರದಲ್ಲಿ ‘ಕೆಟ್ಟದನ್ನು ನೋಡಬೇಡ, ಕೆಟ್ಟದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಬಾಪೂಜಿ ಸಂದೇಶವನ್ನು ಒಟ್ಟಿಗೆ ಒಂದೆಡೆ ಆಸೀನವಾಗಿರುವ ಶಿಲ್ಪಗಳು ಹೃತ್ಪೂರ್ವಕವಾಗಿ ಸ್ವಾಗತಿಸುತ್ತವೆ.

ಒಳ ಪ್ರವೇಶಿಸುತ್ತಿದಂತೆ ವಿಶಾಲವಾದ ಪ್ರದೇಶದಲ್ಲಿರುವ ಕೆರೆ ಕಾಣುತ್ತದೆ. ಅಲ್ಲಿ ಪ್ರವಾಸಿಗರನ್ನು ವಿಹಾರಕ್ಕೆ ಕೊಂಡೊಯ್ಯಲು ದೋಣಿಗಳು ಸಾಲಾಗಿ ನಿಂತಿರುವ ರಮಣೀಯ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತವೆ.

ಕೆರೆಯ ಎದುರುಗಡೆ ವಿಶ್ರಾಂತಿ ಧಾಮವಿದೆ. ಇಲ್ಲಿ ದೇಸಿ ಪೀಠೋಪಕರಣಗಳಿವೆ. ಇಲ್ಲಿ ಕುಳಿತು ಹಚ್ಚ ಹಸಿರಿನ ಪರಿಸರದಲ್ಲಿ ದೋಣಿ ವಿಹಾರ, ಮಳೆ ಸ್ನಾನದ ದೃಶ್ಯಗಳನ್ನು ವೀಕ್ಷಿಸಬಹುದು.

ಜೀವನದಲ್ಲಿ ಒಮ್ಮೆಯಾದರೂ ಕೆಸರು ಸ್ನಾನ ಮಾಡಬೇಕಂತೆ. ಇದರಿಂದ ದೇಹದ ರಕ್ತ ಚಲನವಲನ ಸ್ಥಿಮಿತದಲ್ಲಿರುತ್ತದೆ ಎಂಬ ಮಾತಿದೆ. ಕೆಸರಾಟಕ್ಕೆ ಪ್ರತ್ಯೇಕ ಸ್ಥಳವಿದೆ.

ಕೆಸರಿನಿಂದ ಆವರಿಸಿಕೊಂಡ ನಿಮ್ಮ ದೇಹವನ್ನು ಸ್ವಚ್ಛಗೊಳಿಸಲು ತುಂತುರು ಮಳೆ ಸ್ನಾನದ ವ್ಯವಸ್ಥೆ ಇದೆ. ಇದು ಸಂಗೀತದೊಂದಿಗೆ ಕೂಡಿದೆ. ನಿಮ್ಮ ಮನೆ ಮಂದಿಯೊಂದಿಗೆ ಹಿನ್ನೆಲೆಯ ಹಾಡುಗಳಿಗೆ ಹೆಜ್ಜೆ ಹಾಕಬಹುದು.

ಸ್ನಾನದ ಬಳಿಕ ಮೈ ಹಗುರಾಗಿಸಿಕೊಳ್ಳಲು ಸಾಹಸಮಯ ಆಟೋಟಗಳ ವಿಭಾಗವಿದೆ. ಇಲ್ಲಿ ಝಿಪ್ ಲೈನ್, ಕಮಾಂಡೋ ನೆಟ್, ಕ್ವೇ ವಾಕ್, ಟಯರ್ ವಾಕ್, ಲ್ಯಾಡರ್ಸ್ ವಾಕ್, ಬ್ಯಾಲನ್ಸಿಂಗ್ ಬಂಬು, ಪಿರಾಮಿಡ್ ವಾಕ್, ಸಿಂಗಲ್ ರೋಪ್ ವಾಕ್ ಹಾಗೂ ಟ್ರೀ ಸರ್ಚಿಂಗ್ ಆಟಗಳನ್ನು ಆಡಬಹುದು.

ಇದರಿಂದ ಉತ್ತಮ ವ್ಯಾಯಾಮ ಆಗುತ್ತದೆ.ಪ್ರವಾಸಿಗರ ಅನುಕೂಲಕ್ಕಾಗಿ ಕ್ಯಾಂಟೀನ್ ಇದೆ. ಇಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನ, ತಿಂಡಿ, ತಿನಿಸುಗಳ ದೊರೆಯುತ್ತವೆ. ತಂಪಾದ ಪಾನೀಯಗಳು, ಎಲ್ಲ ಬಗೆಯ ಐಸ್ ಕ್ರೀಂಗಳು ದೊರೆಯುತ್ತವೆ. ಬರೀ ಆಟೊ, ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಓಡಾಡಿದವರಿಗೆ ಟಾಂಗ ಸವಾರಿ. ಕುದುರೆ ಸವಾರಿ ಮನಸ್ಸಿಗೆ ಮುದ ನೀಡುತ್ತವೆ.

ಪ್ರವಾಸಿಗರಿಗೆ ಎತ್ತಿನ ಗಾಡಿ ಸವಾರಿ ಮಾಡಿಸಲಾಗುತ್ತದೆ. ‘ಪೇಟೆಗೆ ಹೋಗೋಣ ಬಾ’ ಎಂಬ ಹಾಡು ಮೆಲಕು ಹಾಕುತ್ತಾ ಇಂಡಿಯನ್ ‘ಗಾರ್ಡನ್’ನ ರಮಣೀಯ ದೃಶ್ಯಗಳನ್ನು ವೀಕ್ಷಿಸಬಹುದು.

ಈ ಉದ್ಯಾನದ ಸವಿ ಅನುಭವಿಸಲು ನೀವು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿಗ್ಗಾಂವಿ ಹತ್ತಿರದ ಗೋಟಗೊಡಿ ಗ್ರಾಮಕ್ಕೆ ಬರಬೇಕು. ಗ್ರಾಮದಲ್ಲಿ ಈ ಹಿಂದೆಯೇ ನಿರ್ಮಿಸಲಾದ ಗ್ರಾಮೀಣ ಜೀವನವನ್ನು ಪ್ರತಿಬಿಂಬಿಸುವ ಉತ್ಸವ ರಾಕ್‌ ಗಾರ್ಡನ್‌ ಹಿಂಭಾಗದಲ್ಲೇ ಈ ತಾಣವಿದೆ.

ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಹಾಗೂ ಪುಣೆ ಭಾಗಗಳಿಂದ ಟೆಕಿಗಳು ದೊಡ್ಡ ಸಂಖ್ಯೆಯಲ್ಲಿ ಈ ಉದ್ಯಾನಕ್ಕೆ ದಾಂಗುಡಿ ಇಡುತ್ತಾರೆ. ಇಡೀ ಕುಟುಂಬ ಪ್ರವಾಸದ ಮಜಾ ಅನುಭವಿಸುವ ಸೌಲಭ್ಯಗಳು ಇಲ್ಲಿರುವುದು ಬಹುಬೇಗ ಈ ಉದ್ಯಾನದ ಖ್ಯಾತಿ ಪಸರಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry