ಮುಖ್ಯ ಶಿಕ್ಷಕನನ್ನು ಕೂಡಿ ಹಾಕಿ ಪ್ರತಿಭಟನೆ

7
ಸರಿಯಾಗಿ ಶಾಲೆಗೆ ಬಾರದ ಶಿಕ್ಷಕ: ಆಕ್ರೋಶ

ಮುಖ್ಯ ಶಿಕ್ಷಕನನ್ನು ಕೂಡಿ ಹಾಕಿ ಪ್ರತಿಭಟನೆ

Published:
Updated:

ಶಿರಾ: ತಾಲ್ಲೂಕಿನ ಸುಬಾಬಲು ರಂಗನಹಳ್ಳಿ (ಎಸ್.ರಂಗನಹಳ್ಳಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದೊಡ್ಡಸಿದ್ದಪ್ಪ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ಗ್ರಾಮಸ್ಥರು ಮುಖ್ಯ ಶಿಕ್ಷಕನನ್ನು ಶಾಲೆಯ ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿಭಟಿಸಿದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 4ನೇ ತರಗತಿಯವರೆಗೆ 41 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕರ ಜತೆಗೆ ಮತ್ತೊಬ್ಬ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಮುಖ್ಯ ಶಿಕ್ಷಕ ಅನಧಿಕೃತವಾಗಿ ಶಾಲೆಗೆ ಗೈರು ಹಾಜರಾಗುತ್ತಿದ್ದು, ನಿಯೋಜಿತ ಶಿಕ್ಷಕ ಮಾತ್ರ ಶಾಲೆಗೆ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುವಂತಾಗಿದೆ ಎಂದು ಆರೋಪಿಸಿದರು.

ಮುಖ್ಯಶಿಕ್ಷಕ ದೊಡ್ಡಸಿದ್ದಪ್ಪ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಾರಂಭದಿಂದಲೂ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಅಧಿಕಾರಿಗಳ ಕಡೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದರಿಂದ ಮುಖ್ಯ ಶಿಕ್ಷಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಮುಖ್ಯ ಶಿಕ್ಷಕ ಖಾಸಗಿ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಮಂಗಳವಾರ ಶಾಲೆಯ ಶೈಕ್ಷಣಿಕ ವರ್ಷದ ಕಡೆಯ ದಿನವಾದ ಕಾರಣ ಸಹಿ ಮಾಡಲು ಶಿಕ್ಷಕ ಶಾಲೆಗೆ ಬಂದೇ ಬರುತ್ತಾರೆ ಎಂದು ಕಾಯ್ದು ಕುಳಿತಿದ್ದ ಸಾರ್ವಜನಿಕರು ಶಿಕ್ಷಕನನ್ನು ಶಾಲೆಯಲ್ಲಿ ಕೂಡಿ ಹಾಕಿದ್ದಾರೆ.

ಮುಖ್ಯಶಿಕ್ಷಕ ದೊಡ್ಡಸಿದ್ದಪ್ಪ ‘ನನಗೆ ಆರೋಗ್ಯ ಸರಿಯಿಲ್ಲ. ಶಾಲೆಗೆ ಬರಲು ಕಷ್ಟವಾಗುತ್ತಿದೆ. ನಾನು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರೂ ಸಹ ಗ್ರಾಮಸ್ಥರು ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಮುಖ್ಯ ಶಿಕ್ಷಕನನ್ನು ಬಿಡಿಸಿ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry