ಮಂಗಳವಾರ, ಡಿಸೆಂಬರ್ 10, 2019
23 °C

ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ ಲೈಕ್ ಗಿಟ್ಟಿಸುವುದು ಹೇಗೆ?

Published:
Updated:
ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ ಲೈಕ್ ಗಿಟ್ಟಿಸುವುದು ಹೇಗೆ?

ಸಾಮಾಜಿಕ ತಾಣಗಳಲ್ಲೊಂದಾದ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡುವುದು ತುಂಬಾ ಸುಲಭ ಆಗಿದ್ದರೂ ಲೈಕ್ ಗಿಟ್ಟಿಸಿಕೊಳ್ಳಲು ಕೆಲವೊಂದು ತಂತ್ರಗಳನ್ನು ಬಳಸಿಕೊಳ್ಳಬೇಕು, ಅವುಗಳು ಹೀಗಿವೆ...

ಹ್ಯಾಶ್‌ಟ್ಯಾಗ್: ಇನ್‌ಸ್ಟಾಗ್ರಾಂನಲ್ಲಿ ಹ್ಯಾಶ್‌ಟ್ಯಾಗ್ ತುಂಬಾ ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿಯೊಂದು ಫೋಟೊ ಜತೆ ಅದಕ್ಕೆ ತಕ್ಕ ಹ್ಯಾಶ್‌ಟ್ಯಾಗ್ ಮತ್ತು ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ ನಿಮ್ಮ ಪೋಸ್ಟ್ ಹೆಚ್ಚು ಮಂದಿಯನ್ನು ತಲುಪುತ್ತದೆ.

ಫೋಟೊಗೆ ಫಿಲ್ಟರ್ ಬಳಸಿ: ನಿಮ್ಮಿಷ್ಟದ ಫೋಟೊಗಳನ್ನು ಶೇರ್ ಮಾಡುವಾಗ ಅವುಗಳಿಗೆ ಫಿಲ್ಟರ್ ಬಳಸಿ. ಇನ್‌ಸ್ಟಾಗ್ರಾಂ appನಲ್ಲಿ ಹಲವಾರು ವಿಧಧ ಫಿಲ್ಟರ್‌ಗಳಿವೆ. ಇವುಗಳು ಫೋಟೊವನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತವೆ.

ಒಂದೇ ರೀತಿಯ ಫೋಟೊ ಬೇಡವೇ ಬೇಡ: ದಿನಾ ಒಂದೇ ರೀತಿಯ ಫೋಟೊಗಳನ್ನು ಶೇರ್ ಮಾಡುವುದು ಬೇಡ. ಫೋಟೊಗಳು ವಿಭಿನ್ನ ಹಾಗೂ ಗಮನ ಸೆಳೆಯು ವಂತಿರಲಿ. ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ನಿಮ್ಮ ಖುಷಿಯ ಕ್ಷಣಗಳ ಕ್ರೇಜಿ ಫೋಟೊಗಳು, ಸಾಕು ಪ್ರಾಣಿಗಳ ಫೋಟೊ ಶೇರ್ ಮಾಡಿ. ಊಟ, ತಿಂಡಿ, ಸೆಲ್ಫೀಗಳನ್ನು ಅತಿಯಾಗಿ ಪೋಸ್ಟ್ ಮಾಡುವುದು ಬೇಡ.

ಗೆಳೆಯರ ಫೋಟೊಗಳಿಗೂ ಲೈಕ್, ಕಾಮೆಂಟ್ ಮಾಡಿ: ನಮಗೆ ಮಾತ್ರ ಲೈಕ್, ಕಾಮೆಂಟ್ ಬರಲ್ಲ ಎಂದು ಗೊಣಗುವ ಬದಲು ನಿಮ್ಮ ಗೆಳೆಯರ ಫೋಟೊಗಳಿಗೂ ಲೈಕ್ ಕಾಮೆಂಟ್ ಮಾಡಿ. ನೀವು ಇನ್ನೊಬ್ಬರಿಗೆ ಪ್ರತಿಕ್ರಿಯಿಸಿದರೆ ಅವರೂ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ, ಕಾಮೆಂಟ್ ಮಾಡುತ್ತಾರೆ. ಸೆಲೆಬ್ರಿಟಿಗಳನ್ನು ಫಾಲೋ ಮಾಡಿ ಅವರ ಪೋಸ್ಟ್‌ಗಳಿಗೆ ಮಾತ್ರ ಪ್ರತಿಕ್ರಿಯಿಸುವ ಬದಲು ನಿಮ್ಮ ಗೆಳೆಯರ ಬಳಗದಲ್ಲಿರುವವರಿಗೆ ಪ್ರತಿಕ್ರಿಯಿಸುತ್ತಿರಿ. ನಿಮಗೆ ಲೈಕ್ ಬರುವುದು ನಿಮ್ಮನ್ನು ಫಾಲೋ ಮಾಡುವವರಿಂದ ಎಂಬುದು ನೆನಪಿರಲಿ.

ಸಮಯವೂ ಮುಖ್ಯ: ನೀವು ಯಾವ ಸಮಯದಲ್ಲಿ ಪೋಸ್ಟ್ ಮಾಡುತ್ತೀರಿ ಎಂಬುದೂ ಇಲ್ಲಿ ಮುಖ್ಯವಾಗಿರುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಜನರು ಸಕ್ರಿಯವಾಗಿರುವ ಸಮಯದಲ್ಲಿ ಮಾತ್ರ ಪೋಸ್ಟ್ ಮಾಡಿ. ಅಂದರೆ ಮುಂಜಾನೆ ಅಥವಾ ಮಧ್ಯರಾತ್ರಿ ಫೋಟೊಗಳನ್ನು ಶೇರ್ ಮಾಡುವುದು ಬೇಡ. ಜನರು ಬಿಡುವಿನ ವೇಳೆ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಹಾಗಾಗಿ ಮಧ್ಯಾಹ್ನ ಭೋಜನ ವಿರಾಮದ ವೇಳೆ ಅಥವಾ ಸಂಜೆ ಹೊತ್ತಿಗೆ ಪೋಸ್ಟ್ ಮಾಡಿ.

ಫೇಸ್‌ಬುಕ್ ಜತೆ ಲಿಂಕ್ ಮಾಡಿ: ಫೇಸ್‌ಬುಕ್‌ನಲ್ಲಿ ನಿಮಗೆ ಸಿಕ್ಕಾಪಟ್ಟೆ ಲೈಕ್ ಸಿಗುತ್ತಿದ್ದರೂ ಇನ್‌ಸ್ಟಾಗ್ರಾಂನಲ್ಲಿ ಲೈಕ್ ಸಿಗುವುದಿಲ್ಲ. ಹೀಗಿರುವಾಗ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಫೇಸ್‌ಬುಕ್ ಜತೆ ಲಿಂಕ್ ಮಾಡಿ. ನೀವು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೊಗಳು ಫೇಸ್‌ಬುಕ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ, ಇದರಿಂದ ನಿಮ್ಮ ಇನ್‌ಸ್ಟಾಗ್ರಾಂ ಖಾತೆ ಬಗ್ಗೆ ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೂ ಗೊತ್ತಾಗುತ್ತದೆ.

ಪ್ರತಿಕ್ರಿಯಿಸಿ (+)