ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಾಡಿಗೆ ಟಿಕೆಟ್‌–ನಿಲ್ಲದ ಅಸಮಾಧಾನ

ಕಿಶೋರ್‌ ಕುಮಾರ್‌ ಸಹಿತ 7 ಮಂದಿಯಿಂದ ಪಕ್ಷದ ಹುದ್ದೆಗಳಿಗೆ ರಾಜೀನಾಮೆ
Last Updated 11 ಏಪ್ರಿಲ್ 2018, 13:30 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸೇರಿದಂತೆ ಏಳು ಮಂದಿ ಮುಖಂಡರು ಪಕ್ಷದ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದರು.

ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ಮನೆಗೆ ತೆರಳಿದ ಮುಖಂಡರು ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ, ಆ ನಂತರ ರಾಜೀನಾಮೆ ನೀಡಿದರು.

‘ಕಳೆದ ಬಾರಿ ಹಾಲಾಡಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷದ ಸೂಚನೆಯಂತೆ ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಪಕ್ಷದ ಕಚೇರಿ ಬಾಗಿಲನ್ನು ತೆರೆಯಲು ಸಹ ಸಾಧ್ಯವಾಗದಂತಹ ಸ್ಥಿತಿಯಲ್ಲಿ ಕೆಲಸ ಮಾಡಿದೆವು. ಆದರೆ ಈಗ ಅವರಿಗೇ ಪಕ್ಷದಿಂದ ಟಿಕೆಟ್ ನೀಡಿರುವುದು ಸರಿಯಲ್ಲ. ನಾವು ಪಕ್ಷದ ಹುದ್ದೆಯಲ್ಲಿ ಇದ್ದಾಗ ಕೆಲಸ ಮಾಡದೆ ಸುಮ್ಮನೆ ಕೂರುವುದು ಸರಿಯಲ್ಲ. ಅದೇರೀತಿ ಒಲ್ಲದ ಮನಸ್ಸಿನಿಂದ ಕೆಲಸ ಮಾಡಲು ಸಹ ಸಾಧ್ಯವಾಗದು. ಆದ್ದರಿಂದ ರಾಜೀನಾಮೆ ನೀಡಿದ್ದೇವೆ’ ಎಂದು ಕಿಶೋರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಕುಂದಾಪುರ ಅಥವಾ ಬೈಂದೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಹಾಲಾಡಿ ಅವರು ನಾಲ್ಕು ಬಾರಿ ಶಾಸಕರಾದರೂ ಅವರು ಜಿಲ್ಲಾ ಮಟ್ಟದ ನಾಯಕರಾಗಿ ಬೆಳೆಯಲಿಲ್ಲ. ಅದೇ ಹೆಗ್ಡೆ ಅವರು ಇಡೀ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಹೆಗ್ಡೆ ಅವರಿಂದ ಪಕ್ಷಕ್ಕೆ ಹೆಚ್ಚಿನ ಲಾಭ ಆಗಬೇಕು ಎಂದರೆ ಅವರಿಗೆ ಟಿಕೆಟ್ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಸ್ಥಳೀಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯದಂತೆ ಪಕ್ಷದ ಹೈಕಮಾಂಡ್ ಹಾಲಾಡಿ ಅವರಿಗೆ ಟಿಕೆಟ್ ನೀಡಿದೆ. ಈಗ ಅದನ್ನು ಬದಲಾಯಿಸಲು ಸಾಧ್ಯವಾಗದು. ಇದರಿಂದ ಅಸಮಾಧಾನಗೊಂಡಿರುವವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಪಕ್ಷಕ್ಕೆ ಅಲ್ಲ. ಆದ್ದರಿಂದ ಚುನಾವಣೆಯಲ್ಲಿ ಅವರೂ ಸಹ ಕೆಲಸ ಮಾಡಬೇಕಾಗುತ್ತದೆ ಎಂದರು.

‘ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಒಳ್ಳೆಯ ವ್ಯಕ್ತಿ ನಿಜ, ಆದರೆ ಅವರು ಕೆಲಸ ಮಾಡುವುದಿಲ್ಲ. ಕೇವಲ ಮದುವೆ, 14ನೇ ದಿನದ ಕಾರ್ಯಕ್ಕೆ ಹೋಗುತ್ತಾರೆ. ಆದ್ದರಿಂದ ಕುಂದಾಪುರ ಕ್ಷೇತ್ರಕ್ಕೆ ಇಬ್ಬರು ಶಾಸಕರು ಬೇಕು. ಒಬ್ಬರು ಮದುವೆ ಸಮಾರಂಭಗಳಿಗೆ ಹೋಗಲು, ಇನ್ನೊಬ್ಬರು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಲು’ ಎಂದು ಬಿಜೆಪಿ ಕೈಗಾರಿಕಾ ಪ್ರಕೋಷ್ಟದ ಸಂಚಾಲಕ ಸತೀಶ್ ಹೆಗ್ಡೆ ವ್ಯಂಗ್ಯವಾಡಿದರು.

ರಾಜೇಶ್ ಕಾವೇರಿ, ರವೀಂದ್ರ ದೊಡ್ಡಮನಿ, ಶ್ರೀನಿವಾಸ ಮರಕಾಲ, ಚಂದ್ರಮೋಹನ್ ಪೂಜಾರಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

**

ಪಕ್ಷದ ಮುಖಂಡರು ಕಾರ್ಯಕರ್ತರಿಗೆ ತತ್ವ ಸಿದ್ಧಾಂತದ ಬಗ್ಗೆ ಪಾಠ ಮಾಡುತ್ತಾರೆ. ಆದರೆ ಟಿಕೆಟ್ ನೀಡುವಾಗ ಮಾತ್ರ ಗೆಲ್ಲುವ ಅಭ್ಯರ್ಥಿಯೇ ಬೇಕು ಎನ್ನುತ್ತಾರೆ – ಕಿಶೋರ್ ಕುಮಾರ್, ಬಿಜೆಪಿ ಮುಖಂಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT