ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳಲ್ಲಿ ಕಣ್ಣೀರ ಕೋಡಿ; ಆಕ್ರಂದನ

ಯಮರಾಜನ ಅಟ್ಟಹಾಸ; ಖಂಡಾಲ ಬಳಿ ಭೀಕರ ರಸ್ತೆ ಅಪಘಾತಕ್ಕೆ 18 ಬಲಿ, 17 ಮಂದಿಗೆ ಗಂಭೀರ ಗಾಯ
Last Updated 11 ಏಪ್ರಿಲ್ 2018, 13:34 IST
ಅಕ್ಷರ ಗಾತ್ರ

ವಿಜಯಪುರ: ಹೆತ್ತವರನ್ನು ಕಳೆದುಕೊಂಡ ಹಾಲುಗಲ್ಲದ ಕಂದಮ್ಮಗಳು ಒಂದೆಡೆ... ತನ್ನ ಕಣ್ಣ ಮುಂದೆಯೇ ಕುಟುಂಬದ ಕರುಳ ಕುಡಿಯ ಅಂತ್ಯ ಸಂಸ್ಕಾರ ನೆನೆದು ರೋದಿಸಿದ ಹೆತ್ತಮ್ಮ ಇನ್ನೊಂದೆಡೆ...

ವಿಜಯಪುರ ತಾಲ್ಲೂಕಿನ ಮದಬಾವಿ, ಹಡಗಲಿ, ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ, ಇಂಡಿ ತಾಲ್ಲೂಕಿನ ರಾಜನಾಳ ತಾಂಡಾದಲ್ಲಿ ಮಂಗಳವಾರ ಗೋಚರಿಸಿದ ಚಿತ್ರಣವಿದು.

ನೆರೆಯ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಖಂಡಾಲ ಬಳಿ ಮಂಗಳವಾರ ಮುಂಜಾವಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಈ ಮೇಲಿನ ತಾಂಡಾಗಳ 18 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. 17 ಮಂದಿ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಜಯಪುರ ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ಆಸುಪಾಸಿನಲ್ಲಿರುವ ಮದಬಾವಿಯ ರಾಜಾಜಿನಗರ ತಾಂಡಾ ಮಂಗಳವಾರ ನಸುಕಿನಿಂದಲೇ ಅಕ್ಷರಶಃ ಮಡುಗಟ್ಟಿದ ಶೋಕದಲ್ಲಿ ಮುಳುಗಿತ್ತು. ಮೃತರ ಮನೆಯ ಸುತ್ತಮುತ್ತ ಹೊರತು ಪಡಿಸಿದರೆ; ಉಳಿದೆಡೆ ನೀರವ ಮೌನ ಆವರಿಸಿತ್ತು. ಎಲ್ಲ ಚಟುವಟಿಕೆಗಳು ಸ್ಥಬ್ಧಗೊಂಡಿದ್ದವು. ಇದೇ ಚಿತ್ರಣ ಉಳಿದ ತಾಂಡಾಗಳಲ್ಲೂ ಕಂಡುಬಂತು.

‘ನಾವ್ ಬಡವ ಮಂದಿ. ರಟ್ಟೆ ಮೇಲೆಯೇ ನಮ್ಮ ಸಂಸಾರ ನಿತ್ಯ ಸಾಗ್ತೈತಿ. ತಾಂಡಾ ಸುತ್ತಮುತ್ತ ನೀರಿಲ್ಲ. ಇಲ್ಲಿದ್ದು ಏನ್‌ ಮಾಡೋಣ ಅಂತಹ ನನ್ನಕ್ಕನ ಮಗ ವಿಠ್ಠಲ ಸಂಸಾರ ಸಮೇತ ದುಡಿಯೋಕೆ ತಿಕೋಟಾ ಭಾಗಕ್ಕೆ ಹೋಗಿದ್ದ. ಕೆಲ ದಿನ ಅಲ್ಲೇ ಇದ್ದ.

ಅಲ್ಲೂ ಸರಿಯಾಗಿ ಕೆಲ್ಸಾ ಸಿಗ್ತಿಲ್ಲಾ ಅಂತ ಗುಳೆ ಹೋಗೋ ಮಂದಿ ಜತೆಗೂಡಿ ನೆರೆಯ ಮಹಾರಾಷ್ಟ್ರಕ್ಕೆ ಹೊಟ್ಟೆ ಪಾಡಿಗಾಗಿ ರಾತ್ರಿ ಹೊಂಟಿದ್ದ. ಬೆಳಗಾಗುವುದರೊಳಗಾಗಿ ಅವ್ನ ಸಂಸಾರವೇ ಇಲ್ಲದಂಗಾಗೈತಿ. ನನ್ನಕ್ಕ ಇದೀಗ ಹಿರಿ ಮಗನ್ನಾ ಕಳಕೊಂಡ್ವಾಳೆ. ಅವ್ಳನ ನಮ್ಮಿಂದ ಸಂತೈಸಕ್ಕಾಗ್ತಿಲ್ಲ’ ಎಂದು ಸುಮಲಾಬಾಯಿ ರಾಠೋಡ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಮೂಲತಃ ಹಿಟ್ಟಿನಹಳ್ಳಿ ತಾಂಡಾದ ದೇವಾನಂದ ರಾಠೋಡ ತಮ್ಮ ಇಬ್ಬರು ಮಕ್ಕಳನ್ನು ರಾಜಾಜಿನಗರ ತಾಂಡಾದಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು, ಪತ್ನಿಯೊಂದಿಗೆ ಗುಳೆ ಹೋಗಿದ್ದರು. ಅಪಘಾತದಲ್ಲಿ ಪತಿ–ಪತ್ನಿ ಇಬ್ಬರೂ ಮೃತಪಟ್ಟಿದ್ದು, ಇದೀಗ ಮಕ್ಕಳಿಬ್ಬರೂ ಅನಾಥರಾಗಿದ್ದಾರೆ. ಸಂತೈಸಲು ಬಂದಿದ್ದ ಎಲ್ಲರೂ ಮಕ್ಕಳ ಭವಿಷ್ಯ ನೆನೆದು ಮಮ್ಮಲ ಮರುಗಿದರು. ಎಲ್ಲರ ಕಣ್ಣಾಲಿಗಳು ತೇವ ತೇವ. ಇದೇ ತಾಂಡಾದ ದೇವಾಬಾಯಿ ಮೋಹನ ರಾಠೋಡ ಮಕ್ಕಳು ಇದೀಗ ತಾಯಿಯಿಲ್ಲದ ತಬ್ಬಲಿಗಳಾಗಿದ್ದಾರೆ.

‘ಯವ್ವಾ ಸ್ವಲ್ಪ ದಿನಾ ಬಿಟ್ಟು ಬರ್ತೀನಿ... ನಿನ್ನನ್ನೂ ಕರ್ಕೊಂಡು ಹೋಗ್ತೀನಿ ಅಂದಿದ್ದ. ಆದ್ರ ಅವ ಬರ್ಲೇ ಇಲ್ಲಾ... ದಿನಾ ಫೋನ್ ಮಾಡ್ತಿದ್ದ... ಇನ್ನ ನನಗ ಯಾರ ಗತಿ...’ ಎಂದು ಅಪಘಾತದಲ್ಲಿ ಮೃತಪಟ್ಟಿರುವ ವಿಠ್ಠಲ ರಾಠೋಡ ತಾಯಿ ಸಕ್ರುಬಾಯಿ ಗೋಳಾಡುತ್ತಿದ್ದ ದೃಶ್ಯ ಮನ ಕಲುಕಿತು.

ಅಪಘಾತದಲ್ಲಿ ಮೃತಪಟ್ಟವರು

ವಿಜಯಪುರ ತಾಲ್ಲೂಕಿನ ಮದಬಾವಿ ತಾಂಡಾದ ಕಿರಣ ವಿಠ್ಠಲ ರಾಠೋಡ (15), ದೇವಾಬಾಯಿ ಮೋಹನ ರಾಠೋಡ (28), ಸಂಗೀತಾ ಕಿರಣ ರಾಠೋಡ (26), ದೇವಾನಂದ ನಾರಾಯಣ ರಾಠೋಡ (35), ಪ್ರಿಯಾಂಕ ಕಲ್ಲು ರಾಠೋಡ (18), ಕಲ್ಲುಬಾಯಿ ವಿಠ್ಠಲ ರಾಠೋಡ (35), ಸನವೀರ ಕಿರಣ ರಾಠೋಡ (ಒಂದೂವರೆ ವರ್ಷ), ವಿಠ್ಠಲ ಕಿರು ರಾಠೋಡ (40). ಟೆಂಪೋ ಚಾಲಕ ಹಾಗೂ ಮಾಲೀಕ ವಿಜಯಪುರ ನಗರದ ಖಾದಿ ಗ್ರಾಮೋದ್ಯೋಗ ಕಚೇರಿ ಹಿಂಭಾಗದ ಅಲಿಕಾರೋಜಾ ಬಡಾವಣೆ ನಿವಾಸಿಗಳಾದ ಮೈಬೂಬ ರಾಜೇಸಾಬ್‌ ಅತ್ತಾರ (55), ಮಾಜೀದ್ ಮೈಬೂಬ ಅತ್ತಾರ (25).ವಿಜಯಪುರ ತಾಲ್ಲೂಕು ಹಡಗಲಿ ತಾಂಡಾದ ಶಂಕರ ರೂಪು ಚವ್ಹಾಣ (55), ಸಂತೋಷ ಕಾಶೀನಾಥ ನಾಯ್ಕ್‌ (35), ಮಂಗಲಬಾಯಿ ಚಂದು ನಾಯ್ಕ್‌ (43), ನಾಗಠಾಣದ ಮಾಧವಿ ಅನಿಲ ರಾಠೋಡ (45). ಬಸವನ ಬಾಗೇವಾಡಿ ತಾಲ್ಲೂಕಿನ ಅರ್ಜುನ ರಮೇಶ ಚವ್ಹಾಣ (30), ಶ್ರೀಕಾಂತ ಬಾಸು ರಾಠೋಡ (38), ಶೀನು ಬಾಸು ರಾಠೋಡ (38), ಇಂಡಿ ತಾಲ್ಲೂಕಿನ ರಾಜನಾಳ ತಾಂಡಾದ ಕೃಷ್ಣ ಸೋಮು ಪವಾರ (60) ಅಪಘಾತದಲ್ಲಿ ಅಸುನೀಗಿದದ್ದಾರೆ.

ಟೆಂಪೋದಲ್ಲಿ ಪಯಣಿಸುತ್ತಿದ್ದ ಎಲ್ಲರೂ ಗಂಭೀರ ಗಾಯಗೊಂಡಿದ್ದು, ಈ ಮೇಲಿನ ತಾಂಡಾಗಳಿಗೆ ಸಂಬಂಧಿಸಿದ 17 ಮಂದಿ ಸಾತಾರ, ಖಂಡಾಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಆಘಾತಕರ ಸುದ್ದಿ. ಮೃತರ ಕುಟುಂಬಕ್ಕೆ ತಲಾ ₹ 20000 ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಮೊತ್ತ ಕೊಡಿಸಲಾಗುವುದು – ಡಾ.ಎಸ್‌.ಬಿ.ಶೆಟ್ಟೆಣ್ಣವರ, ವಿಜಯಪುರ ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT