ಶುಕ್ರವಾರ, ಡಿಸೆಂಬರ್ 6, 2019
25 °C

ತೆರಿಗೆ ಅಧಿಕಾರಿಗಳಿಂದ ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಬಟ್ಟೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ಅಧಿಕಾರಿಗಳಿಂದ ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಬಟ್ಟೆ ವಶ

ಬೆಳಗಾವಿ: ಇಲ್ಲಿನ ಪೀರನವಾಡಿಯ ಗೋದಾಮಿನ ಮೇಲೆ ಸರಕು ಮತ್ತು ಸೇವಾ ತೆರಿಗೆ ಉತ್ತರ ವಲಯ ವಿಭಾಗದ ಅಧಿಕಾರಿಗಳ ತಂಡ ಬುಧವಾರ ದಿಢೀರ್‌ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದೆ.

‘ಈಚೆಗೆ ನಗರದಲ್ಲಿ ನಿರ್ಮಾಣದ ಹಂತದ ಕಟ್ಟಡವೊಂದರಲ್ಲಿ ಕುಕ್ಕರ್‌ಗಳು ಹಾಗೂ ಇಸ್ತ್ರಿಪೆಟ್ಟಿಗೆಗಳನ್ನು ಸಂಗ್ರಹಿಸಿದ್ದು ಪತ್ತೆಯಾಗಿತ್ತು. ಹೀಗಾಗಿ, ನಗರದ ವಿವಿಧೆಡೆ 26 ಗೋದಾಮುಗಳನ್ನು ಪರಿಶೀಲಿಸಲಾಯಿತು. ಜೈ ಅಂಬೆ ಕ್ಲಾಥ್ ಸ್ಟೋರ್ಸ್‌ ಎನ್ನುವ ಗೋದಾಮಿನಲ್ಲಿ ಬೃಹತ್ ಪ್ರಮಾಣದಲ್ಲಿ ಸೀರೆ, ಬಟ್ಟೆ ಹಾಗೂ ಸಿದ್ಧ ಉಡುಪುಗಳನ್ನು ಎರಡು ಮಹಡಿಗಳಲ್ಲಿ ಸಂಗ್ರಹಿಸಿರುವುದು ಪತ್ತೆಯಾಯಿತು’ ಎಂದು ಸರಕು ಹಾಗೂ ಸೇವಾ ತೆರಿಗೆ (ಜಾರಿ) ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ರವಿ ಜೆ. ಸ್ಯಾಂಕ್ಟಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಶಪಡಿಸಿಕೊಂಡ ಎರಡು ಲೋಡ್‌ಗಳಷ್ಟು ಸರಕಿನ ಮೌಲ್ಯವನ್ನು ಲೆಕ್ಕಹಾಕಲಾಗುತ್ತಿದೆ. ಮಾಲೀಕರ ಮಾಹಿತಿ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ. ಮತದಾರರ ಓಲೈಕೆಗಾಗಿ ವಿತರಿಸಲು ಈ ರೀತಿ ಅನಧಿಕೃತವಾಗಿ ದಾಸ್ತಾನು ಮಾಡಿರುವ ಸಾಧ್ಯತೆಗಳಿರುವುದು ಕಂಡುಬಂದಿದೆ. ಸ್ಪಷ್ಟ ಲೆಕ್ಕ ದೊರೆತ ನಂತರ, ನಿಯಮಾನುಸಾರ ದಂಡ ವಿಧಿಸಿ ಪ್ರಕರಣವನ್ನು ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳಿಗೆ ವರ್ಗಾಯಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘‌ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ವಿಭಾಗದ ಅಧಿಕಾರಿಗಳು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಾದ್ಯಂತ 24 ಗಂಟೆಯೂ ಸರದಿ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ರಮಗಳು ನಡೆಯದಂತೆ ನಿಗಾ ವಹಿಸಿದ್ದಾರೆ’ ಎಂದು ಅವರು ಹೇಳಿದರು.

ವಿಭಾಗದ ಉಪ ಆಯುಕ್ತ ಬಿ. ನಾಗರಾಜರಾವ್, ನಾಲ್ವರು ಸಹಾಯಕ ಆಯುಕ್ತರು ಸೇರಿ 24 ವಾಣಿಜ್ಯ ತೆರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ದೂರು ಸ್ವೀಕರಿಸಲು ಅಧಿಕಾರಿಗಳ ನೇಮಕ

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸುವುದಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಐವರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ರವಿ ಜೆ. ಸ್ಯಾಂಕ್ಟಸ್ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಗೆ ಉಪ ಆಯುಕ್ತ ಬಿ.ನಾಗರಾಜ ರಾವ್ (ಮೊ: 99860 17979), ಸಹಾಯಕ ಆಯುಕ್ತರಾದ ಎಸ್.ಪಿ. ಕೆಲವಡಿ (98861 04147), ಶಿವಾನಂದ ಮಗದುಮ್ (99013 12122), ವಿಜಯಪುರ ಜಿಲ್ಲೆಗೆ ಉಪ ಆಯುಕ್ತ ಆರ್.ಎನ್. ರಾಮಯ್ಯ (94499 63233) ಹಾಗೂ ಬಾಗಲಕೋಟೆಗೆ ವಾಣಿಜ್ಯ ತೆರಿಗೆ ಅಧಿಕಾರಿ ಪ್ರಭಾತ ರಂಜನ ಪಾಟೀಲ್ (70222 66015) ಅವರನ್ನು ನೇಮಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆಗೆ ಒಳಪಡುವ ಸರಕಿನ ಅಕ್ರಮ ಸಾಗಣೆ ಮತ್ತು ದಾಸ್ತಾನು ಕಂಡುಬಂದಲ್ಲಿ ಸಾರ್ವಜನಿಕರು, ವ್ಯಾಪಾರಿಗಳು, ವ್ಯಾಪಾರಿ ಸಂಸ್ಥೆಗಳವರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸುವಂತೆ ಅವರು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)