ಶನಿವಾರ, ಡಿಸೆಂಬರ್ 14, 2019
20 °C

ಐಪಿಎಲ್‌ ಮೇಳಕ್ಕೆ ಡ್ರಮ್ಸ್ ಹಿಮ್ಮೇಳ

ರಾಧಿಕಾ ಎನ್.ಆರ್ Updated:

ಅಕ್ಷರ ಗಾತ್ರ : | |

ಐಪಿಎಲ್‌ ಮೇಳಕ್ಕೆ ಡ್ರಮ್ಸ್ ಹಿಮ್ಮೇಳ

ಈ ಕ್ಷೇತ್ರ ಪ್ರವೇಶಿಸಿದ್ದು ಹೇಗೆ?

ಶಾಲಾ ದಿನಗಳಲ್ಲಿ ಚಾಮರಾಜಪೇಟೆಯಲ್ಲಿ ಡ್ರಮ್ಸ್ ಬಾರಿಸುತ್ತಿದ್ದ ಶಿಕ್ಷಕ ಹ್ಯಾರಿ ಅವರನ್ನು ಗಮನಿಸುತ್ತಿದ್ದೆ. ಅದೇ ಸ್ಫೂರ್ತಿಯಲ್ಲಿ ಶಾಲೆಯ ಕಾರ್ಯಕ್ರಮಗಳಲ್ಲಿ ನಾನು ಸಹ ಡ್ರಮ್ಸ್ ಬಾರಿಸಲು ಆರಂಭಿಸಿದೆ. ‌ಈ ಆಸಕ್ತಿ ಹೆಚ್ಚಾಗಿ ಕಾಲೇಜಿಗೆ ಹೋಗುವ ವೇಳೆ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸುತ್ತಿದ್ದೆ. ನಂತರ ಮಂಜುಳಾ ಹಾಗೂ ಗುರುರಾಜ್ ಅವರ ಸೌಂಡ್ ಆಫ್ ಮ್ಯೂಸಿಕ್ ಸಂಸ್ಥೆಯ ಆರ್ಕೆಸ್ಟ್ರಾಗಳಲ್ಲಿ ಡ್ರಮ್ಸ್ ಬಾರಿಸುವ ಅವಕಾಶ ದೊರಕಿತು. ನಂತರ ‌ಶಿವು ಅವರ ಬಳಿ ಮೃದಂಗ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜೋಸೆಫ್ ಅವರ ಬಳಿ ಪಾಶ್ಚಿಮಾತ್ಯ ಸಂಗೀತ ಕಲಿತೆ. ಚೆನ್ನೈಗೆ ತೆರಳಿ ಮಾಂತ್ರಿಕ ಡ್ರಮ್ಮರ್ ಶಿವಮಣಿ ಅವರ ಬಳಿ ಅಭ್ಯಾಸ ಮಾಡಿದೆ. ಅವರೇ ನನ್ನ ಗುರುಗಳು.

ವೇದಿಕೆ ಕಾರ್ಯಕ್ರಮಗಳಿಗೂ, ಐಪಿಎಲ್‌ಗೂ ಏನು ವ್ಯತ್ಯಾಸ?

ವೇದಿಕೆಯ ಕಾರ್ಯಕ್ರಮಗಳು ಹಾಗೂ ಕ್ರಿಕೆಟ್‌ ಮ್ಯಾಚ್‌ಗಳಲ್ಲಿನ ಪ್ರೇಕ್ಷಕರ ಮನೋಧರ್ಮ ಭಿನ್ನ. ಸಂದರ್ಭವೂ ಬೇರೆ. ಕಛೇರಿ ಅಥವಾ ಕಾರ್ಯಕ್ರಮಗಳಲ್ಲಿ ಮೊದಲೇ ಆಯ್ಕೆ ಮಾಡಿರುವ ಗೀತೆಗಳನ್ನು ಬಾರಿಸುತ್ತೇನೆ. ಐಪಿಎಲ್‌ನಲ್ಲಿ ಆ ಕ್ಷಣಕ್ಕೆ ಮನಸ್ಸಿಗೆ ಬರುವ ತಾಳಗಳನ್ನು ಬಾರಿಸುತ್ತೇನೆ.

ಐಪಿಎಲ್ ಅನುಭವ ಹೇಳಿ

ಆಟಗಾರರು ಮತ್ತು ಪ್ರೇಕ್ಷಕರನ್ನು ಏಕಕಾಲಕ್ಕೆ ಕೇಂದ್ರೀಕರಿಸಿಕೊಳ್ಳಬೇಕಾಗುತ್ತದೆ. ಆಟಗಾರರಲ್ಲಿ ಮತ್ತಷ್ಟು ಚೈತನ್ಯ ಮೂಡಿಸುವಂತಹ, ಪ್ರೇಕ್ಷಕರನ್ನು ಅತ್ಯುತ್ಸಾಹದಲ್ಲಿ ಕುಣಿಸುವಂತಹ ವೇಗದ ಟೆಂಪೊ ಇರುವ ತಾಳಗಳನ್ನು ಬಾರಿಸುತ್ತೇನೆ. ಆಟಗಾರರು ಪ್ರತಿಸಾರಿ ಫೋರ್, ಸಿಕ್ಸ್ ಬಾರಿಸಿದಾಗಲೂ ಬೀಟ್ಸ್ ಬದಲಿಸುತ್ತೇನೆ. ಪ್ರತಿ ಐದು ಓವರ್‌ಗಳಿಗೊಮ್ಮೆ ಜಾಗ ಬದಲಿಸುತ್ತಾ ಮೈದಾನದಲ್ಲಿ ಎಲ್ಲೆಡೆ ಓಡಾಡುತ್ತಾ ಡ್ರಮ್ಸ್ ಬಾರಿಸುತ್ತೇನೆ. ಕ್ರಿಕೆಟ್ ಮೈದಾನ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರಿಂದ ಬರುವ ಚಪ್ಪಾಳೆ, ಸಿಳ್ಳೆಯ ಸದ್ದು ನನ್ನಲ್ಲಿ ತುಂಬುವ ಚೈತನ್ಯ ಇದೆಯಲ್ಲ ಅದನ್ನು ಮಾತಲ್ಲಿ ವಿವರಿಸಲಾಗದು.

ವಿದೇಶದಲ್ಲಿ ನೀಡಿದ ಕಾರ್ಯಕ್ರಮಗಳ ಬಗ್ಗೆ ಹೇಳಿ.

ಲಂಡನ್‌ನಲ್ಲಿ ಭಾರತೀಯ ಸಂಗೀತಗಾರರಿಗೆ ಅವಕಾಶ ನೀಡುವುದೇ ಇಲ್ಲ. ಆದರೆ ನಾನು ಅಲ್ಲಿ ಸಿಂಫನಿಕ್ ಆರ್ಕೆಸ್ಟ್ರಾದಲ್ಲಿ ಡ್ರಮ್ಸ್ ಬಾರಿಸಿ ಕನ್ನಡದ ಬಾವುಟ ಹಾರಿಸಿ ಬಂದೆ. ಮೊದಲ ವಿದೇಶ ಕಾರ್ಯಕ್ರಮ ದುಬೈ. ಅಮೆರಿಕ, ಮಾರಿಷಸ್, ಆಸ್ಟ್ರೇಲಿಯಾದಲ್ಲಿಯೂ ಕಾರ್ಯಕ್ರಮ ನೀಡಿದ್ದೇನೆ.

ಚಲನಚಿತ್ರ ಸಂಗೀತದಲ್ಲಿನ ಅನುಭವ?

ಚಲನಚಿತ್ರ ಕ್ಷೇತ್ರದಲ್ಲಿ ಶಂಕರ್‌ನಾಗ್ ನನ್ನ ಗುರುಗಳು. ಹಂಸಲೇಖ ಅವರ ಜತೆ 14 ವರ್ಷ ಕೆಲಸ ಮಾಡಿದ್ದೇನೆ. ಕನ್ನಡ, ತಮಿಳು ಸೇರಿದಂತೆ ಈವರೆಗೂ 780 ಚಿತ್ರಗಳಿಗೆ ಸ್ವರ ಸಂಯೋಜಿಸಿದ್ದೇನೆ.

ಅವುಗಳ ಪೈಕಿ ನಿಮಗೇ ಮೆಚ್ಚುಗೆಯಾದ ಚಿತ್ರ ಯಾವುದು?

‘ಗೀತಾ’ದ ಜತೆಯಲಿ ಜತೆ ಜತೆಯಲಿ, ‘ಪರ್ವ’ದ ಡೋಲು ಡೋಲು ಡಂಗುರದ ಚಿತ್ರದ ಸ್ವರ ಸಂಯೋಜನೆ ನನಗೆ ವೈಯಕ್ತಿಕವಾಗಿ ಬಹಳ ಮೆಚ್ಚುಗೆಯಾಗಿದೆ. ಇಂದಿಗೂ ಅವು ನನ್ನ ಫೇವರಿಟ್‌.

ಇಷ್ಟದ ಸಂಗೀತ ಕಲಾವಿದರು?

ಗುರುಗಳಾದ ಡ್ರಮ್ಮರ್ ಶಿವಮಣಿ, ಅಮೆರಿಕದ ಡ್ರಮ್ಮರ್ ಬಿಲ್ಲಿ ಕಾಬಂ, ಎ.ಆರ್. ರೆಹಮಾನ್.

ಕುಟುಂಬದ ಕುರಿತು ಹೇಳಿ

ಕುಟುಂಬದವರ ಸಹಕಾರದಿಂದಲೇ ಹೆಚ್ಚು ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯ. ಬಿಡುವಿದ್ದಾಗಲೆಲ್ಲ ಮನೆಯವರೊಂದಿಗೆ ಸಮಯ ಕಳೆಯುತ್ತೇನೆ. ಮಗ, ಮಗಳು ಇಬ್ಬರೂ ಸಂಗೀತ ಕಲಿತಿದ್ದಾರೆ. 

ಉದ್ದ ಕೂದಲಿನ ಸಿಗ್ನೇಚರ್ ಶೈಲಿ

ದೇವ್‌, ಚೈತನ್ಯದ ಚಿಲುಮೆಯಂತೆ ಡ್ರಮ್ಸ್‌ ಮೇಲೆ ಸ್ಟಿಕ್‌ನ್ನು ಮಿಂಚಿನಂತೆ ಹರಿದಾಡಿಸುತ್ತಿದ್ದರೆ ಪ್ರೇಕ್ಷಕರೂ ಕುಳಿತಲ್ಲೇ ಕುಪ್ಪಳಿಸಿ ಕುಣಿಯುವಂತಾಗುತ್ತದೆ. ಕೂದಲು ಹಾರಿಸುತ್ತಾ ಡ್ರಮ್ಸ್‌ ಬಾರಿಸುವುದು ದೇವ್ ಅವರ ಸಿಗ್ನೇಚರ್‌ ಶೈಲಿ. ಉದ್ದ ಕೂದಲಿಗೂ ಒಂದು ಹಿನ್ನೆಲೆ ಇದೆ ಎನ್ನುತ್ತಾರೆ ಅವರು.‘ರಾಜ್ ಕುಮಾರ್ ನೈಟ್ಸ್ ನಲ್ಲಿ ಡಾ.ರಾಜ್ ಕುಮಾರ್ ಅವರ ಹಾಡುಗಳಿಗೆ ಡ್ರಮ್ಸ್ ಬಾರಿಸುತ್ತಿದ್ದೆ. ದೇವು, ನಿನ್ನ ಉದ್ದ ಕೂದಲೇ ನಿನಗೆ ಕಳೆ. ಅದು ಹಾಗೆಯೇ ಇರಲಿ’ ಎಂದು ಡಾ.ರಾಜ್‌ ಹೇಳುತ್ತಿದ್ದರು. ಹಾಗಾಗಿ ಉದ್ದ ಕೂದಲು ಉಳಿಸಿಕೊಳ್ಳಲು ಅವರೇ ಕಾರಣ.

ಹುಟ್ಟು–ಸಾವಿನ ಲಯ

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಪ್ರತಿಕ್ಷಣದಲ್ಲೂ ತಾಳ ಇರುತ್ತದೆ. ಆದರೆ ಈ ಬಗ್ಗೆ ನಾವು ವಿಶೇಷವಾಗಿ ಗಮನ ನೀಡುವುದಿಲ್ಲ. ಈ ವಿಷಯ ಕೇಂದ್ರೀಕರಿಸಿಕೊಂಡು ಆಲ್ಬಂ ಸಿದ್ಧಪಡಿಸಲಾಗುತ್ತಿದೆ. ದೂರ ಪ್ರಯಾಣದ ವೇಳೆ ದಾರಿ ಸಾಗಿದ್ದೇ ತಿಳಿಯದಷ್ಟು ತಲ್ಲೀನತೆ ಮೂಡಿಸುವ ರೀತಿಯಲ್ಲಿ ಈ ಆಲ್ಬಂ ರೂಪಿಸಲಾಗುತ್ತಿದೆ. ಇದು ಪೂರ್ಣಗೊಳ್ಳಲು ಇನ್ನಷ್ಟು ಸಮಯವಾಗುತ್ತದೆ ಎಂದು ಸದ್ಯ ತಾವು ತೊಡಗಿಸಿಕೊಂಡಿರುವ ಯೋಜನೆ ಕುರಿತು ಹಂಚಿಕೊಳ್ಳುತ್ತಾರೆ ಡ್ರಮ್ಮರ್ ದೇವ.

 

 

ಪ್ರತಿಕ್ರಿಯಿಸಿ (+)