ಗುರುವಾರ , ಡಿಸೆಂಬರ್ 12, 2019
20 °C

ಬೀದಿದೀಪಗಳ ಕತ್ತಲು ನೀಗಲು ಅನಿಂದಿತಾ ಅವಿರತ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿದೀಪಗಳ ಕತ್ತಲು ನೀಗಲು ಅನಿಂದಿತಾ ಅವಿರತ ಯತ್ನ

ಬೀದಿಬದಿಯಲ್ಲೊಂದು ಕಂಬವಿದೆ, ಅದರಲ್ಲಿ ದೀಪವೂ ಇದೆ, ಆ ದೀಪ ಬೆಳಕು ಚೆಲ್ಲುತ್ತಿಲ್ಲ. ಬೆಳಕು ಚೆಲ್ಲದ ಬೀದಿದೀಪ ನೋಡಿದಾಗ ನಿಮಗೆ ಏನನ್ನಿಸುತ್ತದೆ?ರಸ್ತೆಯಲ್ಲಿ ರಾತ್ರಿ ಹೊತ್ತು ಸಂಚರಿಸುವಾಗ ಸಮರ್ಪಕ ನಿರ್ಹವಣೆ ಇಲ್ಲದ ಕಾರಣ ಬೆಳಕು ಚೆಲ್ಲದ ಬೀದಿದೀಪಗಳು ಕಣ್ಣಿಗೆ ಬೀಳುವುದು ನಗರದಲ್ಲಿ ಸಾಮಾನ್ಯ ಎನಿಸಿದೆ. ಇದೇ ಕಾರಣಕ್ಕೆ ಹೆಣ್ಣುಮಕ್ಕಳು ಹಲವು ರೀತಿಯ ಸಂಕಷ್ಟಗಳನ್ನು ಅನುಭವಿಸುವುದೂ ಉಂಟು. ಕೆಲ ಸಮಯ ಇಂಥದ್ದೇ ಸಮಸ್ಯೆಗಳನ್ನು ಎದುರಿಸಿದ ಕೈಕೊಂಡ್ರನಹಳ್ಳಿ ನಿವಾಸಿ ಅನಿಂದಿತಾ ನಾಯಕ್‌ ಈ ಕಿರಿಕಿರಿಯಿಂದ ನಗರಕ್ಕೆ ಮುಕ್ತಿ ದೊರಕಿಸಬೇಕು ಎಂದು ಗಟ್ಟಿಯಾಗಿ ಸಂಕಲ್ಪ ಮಾಡಿದ್ದಾರೆ.

ಅವರ ಸಂಕಲ್ಪ ಶಕ್ತಿಗೆ ತಂತ್ರಜ್ಞಾನದ ಇಂಧನವೂ ದೊರೆತು ಇದೀಗ ಬೀದಿದೀಪಗಳ ಸ್ಥಿತಿಗತಿ ನಕ್ಷೆಯ ರೂಪದಲ್ಲಿ ದಾಖಲಾಗುತ್ತಿದೆ. ಇನ್‌ಮೊಬಿ ಕಂಪನಿಯಲ್ಲಿ ಹಿರಿಯ ಉತ್ಪನ್ನ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅನಿಂದಿತಾ ಕೈಕೊಂಡ್ರಹಳ್ಳಿಯ ತಮ್ಮ ಮನೆಯಿಂದ ಕಬುದೀಸನಹಳ್ಳಿಯಲ್ಲಿರುವ ಕಚೇರಿಗೆ ತೆರಳಲು ದ್ವಿಚಕ್ರ ವಾಹನ ಬಳಸುತ್ತಾರೆ. ಬೀದಿದೀಪಗಳು ಸರಿಯಾಗಿ ಬೆಳಗದ ರಸ್ತೆಗಳಲ್ಲಿ ಸಂಚರಿಸುವುದು ದುಸ್ತರ ಹಾಗೂ ಅಸುರಕ್ಷಿತ ಎನಿಸಿದಾಗ ಬೀದಿದೀಪಗಳ ನಕ್ಷೆಯೊಂದನ್ನು ರೂಪಿಸುವ ಆಲೋಚನೆ ಅವರಿಗೆ ಹೊಳೆಯಿತು.

ಬೀದಿದೀಪಗಳ ಮ್ಯಾಪಿಂಗ್‌ಗಾಗಿ ‘ಗೋಮ್ಯಾಪ್‌’ ಆ್ಯಪ್ ಬಳಸುತ್ತಿದ್ದಾರೆ. ಸ್ಥಳವನ್ನು ಗುರುತಿಸಲು ‘ಒಪನ್‌ ಸ್ಟ್ರೀಟ್‌ ಮ್ಯಾಪ್‌’ ಉಪಯೋಗಿಸುತ್ತಿದ್ದಾರೆ. ಈ ಎರಡೂ ಆ್ಯಪ್‌ಗಳು ಐಫೋನ್‌ನ ಆ್ಯಪ್‌ಸ್ಟೋರ್‌ನಲ್ಲಿ ಸಿಗುತ್ತದೆ. ಹೊರವರ್ತುಲ ರಸ್ತೆಯ ಇಬ್ಳೂರು ಜಂಕ್ಷನ್‌ನಿಂದ ಕುಬುದೀಸನಹಳ್ಳಿ ಮತ್ತು ಸರ್ಜಾಪುರ ರಸ್ತೆಯಲ್ಲಿ ಈ ತಂತ್ರಾಂಶ ಬಳಸಿ ಬೀದಿದೀಪಗಳ ನಕ್ಷೆ ಸಿದ್ಧಪಡಿಸುತ್ತಿದ್ದಾರೆ. ಕೇವಲ ಮೂರು ದಿನಗಳ ಅವಧಿಯಲ್ಲಿ ಸುಮಾರು 660 ಬೀದಿದೀಪಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ ಕೇವಲ ಶೇ 38ರಷ್ಟು ದೀಪಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂಬುದು ಗಮನಾರ್ಹ ಸಂಗತಿ.

‘ಬೀದಿದೀಪಗಳ ನಕ್ಷೆ ಸಿದ್ಧಪಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಸೂರ್ಯ ಮುಳುಗಿದ ನಂತರವೇ ಈ ಕೆಲಸ ಶುರುವಾಗುತ್ತದೆ. ಕಂಪನಿಯಲ್ಲಿ ದಿನದ ಕೆಲಸ ಮುಗಿದ ನಂತರ ನಾನು ಬೀದಿದೀಪ ಹುಡುಕಿಕೊಂಡು ಸುತ್ತಾಡುತ್ತೇನೆ’ ಎನ್ನುತ್ತಾರೆ ಅನಿಂದಿತಾ ನಾಯಕ್‌.

ಈ ಕೆಲಸ ಶುರುಮಾಡಿದಾಗ ಅನಿಂದಿತಾ ಏಕಾಂಗಿಯಾಗಿದ್ದರು. ಒಬ್ಬಂಟಿಯಾಗಿ ಕತ್ತಲಿನಲ್ಲಿ ಓಡಾಡುವುದು ಬೇಡ ಎಂದು ಗೆಳತಿಯರು ಸಲಹೆ ನೀಡಿದರು. ಒಂಟಿಯಾಗಿ ಕತ್ತಲಿರುವ ಸ್ಥಳಗಳಿಗೆ ತೆರಳುವುದು ಸುರಕ್ಷಿತವಲ್ಲ ಎಂಬ ಭಾವ ಬಲವಾದ ನಂತರ ಅವರು ತಮ್ಮ ಸ್ನೇಹಿತೆಯರನ್ನೂ ಜೊತೆಗೆ ಕರೆದೊಯ್ಯಲು ಆರಂಭಿಸಿದರು.

‘ಬೀದಿದೀಪಗಳ ಸ್ಥಿತಿಯನ್ನು ಅಪ್‌ಡೇಟ್ ಮಾಡುವುದು ಕೇವಲ 6ರಿಂದ 10 ಸೆಕೆಂಡ್‌ಗಳ ಕೆಲಸ. ಆದರೆ ಯಾರೊಬ್ಬರೂ ಇತ್ತ ಗಮನ ನೀಡುವುದಿಲ್ಲ. ಕೆಲ ರಸ್ತೆಗಳಲ್ಲಿ ಹೆಸರಿಗೆ ಮಾತ್ರ ಬೀದಿದೀಪಗಳಿವೆ. ನಿರ್ವಹಣೆ ಕೊರತೆಯಿಂದಾಗಿ ಅವುಗಳಿಂದ ಹೆಚ್ಚೇನೂ ಪ್ರಯೋಜನವಾಗುತ್ತಿಲ್ಲ. ನಾನು ಈಗಾಗಲೇ ಕಲೆ ಹಾಕಿರುವ ಮಾಹಿತಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನೀಡಿದ್ದೇನೆ. ನನ್ನ ಯಾವ ದೂರಿಗೂ ಪಾಲಿಕೆ ಪ್ರತಿಕ್ರಿಯೆ ನೀಡಿಲ್ಲ. ಪಾಲಿಕೆಯು ಬೀದಿದೀಪಗಳ ನಿರ್ವಹಣೆಯತ್ತ ಗಮನ ನೀಡಲೇಬೇಕು’ ಎನ್ನುವುದು ಅವರ ಆಗ್ರಹ.

ಹೊರವರ್ತುಲ ರಸ್ತೆಯಲ್ಲಿ ಬೀದಿದೀಪಗಳ ನಕ್ಷೆ ಸಿದ್ಧಪಡಿಸಿರುವ ಅನಿಂದಿತಾ ನಗರದ ವಿವಿಧ ಬಡಾವಣೆಗಳಲ್ಲಿರುವ ಬೀದಿದೀಪಗಳನ್ನು ಪರಿಶೀಲಿಸುವ ಆಲೋಚನೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಎಚ್ಎಸ್‌ಆರ್ ಲೇಔಟ್‌ನಿಂದ ಈ ಕಾರ್ಯ ಆರಂಭವಾಗಲಿದೆ.

‘ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲೂ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿಂದು ಇದ್ದೇವೆ. ಸುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸಲಾರದಷ್ಟು ಒತ್ತಡದ ಬದುಕು ನಮ್ಮದಾಗಿದೆ. ಆದರೆ ಕೆಲವೊಮ್ಮೆ ಈ ಸಮಸ್ಯೆಗಳಿಂದಲೇ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎನ್ನುವುದನ್ನು ಮರೆಯುತ್ತೇವೆ. ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಅಧಿಕಾರಿಗಳ ಗಮನ ಸೆಳೆಯುವುದನ್ನು ನಿಲ್ಲಿಸಬಾರದು’ ಎನ್ನುವುದು ಅವರ ಸಲಹೆ.

ಅನಿಂದಿತಾ ಅವರನ್ನು ಸಂಪರ್ಕಿಸಲು twitter.com/anindita_nayak

ಪ್ರತಿಕ್ರಿಯಿಸಿ (+)