ಶುಕ್ರವಾರ, ಡಿಸೆಂಬರ್ 6, 2019
25 °C

ಮೊಟ್ಟೆಯಿಂದ ಸಖತ್‌ ಖಾದ್ಯ

Published:
Updated:
ಮೊಟ್ಟೆಯಿಂದ ಸಖತ್‌ ಖಾದ್ಯ

ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಇಳಿಕೆಯಾಗಿದೆ. ಒಂದು ಮೊಟ್ಟೆಗೆ ₹6ರ ವರೆಗೆ ಏರಿಕೆಯಾಗಿತ್ತು. ಈಗ ₹4.30ರಿಂದ ₹5ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ಮೊಟ್ಟೆಯಿಂದ ಮನೆಯಲ್ಲೇ ಮಾಡುವಂತಹ ಸುಲಭ ಅಡುಗೆಗಳ ಬಗ್ಗೆ ಜೊಹಾನ್ನ ಜೋಶ್ವಾ ಮಾಹಿತಿ ನೀಡಿದ್ದಾರೆ.

ಪುದೀನ ಮೊಟ್ಟೆ ಸಾರು

ಪದಾರ್ಥಗಳು:
ಬೇಯಿಸಿದ ಮೊಟ್ಟೆ- 4, ಈರುಳ್ಳಿ- 3 ಮಧ್ಯಮ ಗಾತ್ರದ್ದು, ಬೆಳ್ಳುಳ್ಳಿ- 7-8 ಎಳಸು, ಟೊಮೆಟೊ-2 ಮಧ್ಯಮ ಗಾತ್ರದ್ದು, ಹಸಿ ಮೆಣಸಿನಕಾಯಿ- 3,  ಅರಿಶಿನ ಪುಡಿ- 1/2 ಟೀ ಚಮಚ, ಕೆಂಪು ಮೆಣಸಿನ ಪುಡಿ- ಒಂದೂವರೆ ಟೀ ಚಮಚ, ಪುದೀನ- 1 ಸಣ್ಣ ಕಟ್ಟು, ಕೊತ್ತಂಬರಿ ಸೊಪ್ಪು- 1 ಸಣ್ಣ ಕಟ್ಟು,  ಜೀರಿಗೆ- 1 ಟೀ ಚಮಚ, ನೀರು, ರುಚಿಗೆ ತಕ್ಕ ಉಪ್ಪು, ಗರಂ ಮಸಾಲ- ಕಾಲು ಟೀ ಚಮಚ, ಎಣ್ಣೆ- 2 ಟೇಬಲ್‌ ಚಮಚ, ಕರಿಬೇವಿನ ಎಲೆ- 1 ಕೈ ಹಿಡಿ.

ವಿಧಾನ: ಮೊದಲು ಈರುಳ್ಳಿ, ಟೊಮೆಟೊ, ಪುದೀನ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಇವುಗಳನ್ನು ಚೆನ್ನಾಗಿ ರುಬ್ಬಿ ಬದಿಯಲ್ಲಿಡಿ. ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಸ್ವಲ್ಪ ಕಾಯಲು ಬಿಡಿ. ಅದಕ್ಕೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಹಾಕಿ. ಸ್ವಲ್ಪ ಕಂದು ಬಣ್ಣ ತಿರುಗುವವರೆಗೆ ಫ್ರೈ ಮಾಡಿ. ನಂತರ ಮತ್ತೊಂದು ಪಾತ್ರೆಯಲ್ಲಿ ತೆಗೆದಿಡಿ. ಈಗ ಅದೇ ಎಣ್ಣೆಗೆ ಜೀರಿಗೆ ಹಾಕಿ, ಚಟಪಟ ಅನ್ನುವಾಗ ಕರಿಬೇವಿನ ಎಲೆ ಹಾಕಿ. ಅದರ ಜೊತೆ ರುಬ್ಬಿದ ಪೇಸ್ಟನ್ನು ಹಾಕಿ. ಈಗ ಸಾಧಾರಣ ಉರಿಯಲ್ಲಿ 7-8 ನಿಮಿಷ ಕುದಿಸಿರಿ. ನಂತರ ರುಚಿಗೆ ತಕ್ಕ ಹಾಗೆ ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಹಾಕಿ. ಮಸಾಲೆಯ ಹಸಿ ವಾಸನೆ ಹೋಗಬೇಕು. ನಂತರ ಗರಂ ಮಸಾಲೆ ಹಾಕಿ ನಿಮ್ಮ ಅಳತೆಗೆ ತಕ್ಕ ಹಾಗೆ ನೀರು ಬೆರೆಸಿ ಗ್ರೇವಿ ಮಾಡಿಕೊಳ್ಳಿರಿ. ನಂತರ ಮೊಟ್ಟೆಯನ್ನು ಕತ್ತರಿಸಿ ಹಾಕಿದರೆ ಪುದೀನ ಸ್ವಾದದ ಮೊಟ್ಟೆ ಸಾರು ರೆಡಿ.

*ಆಲೂ-ಮೊಟ್ಟೆ ಆಮ್ಲೆಟ್‌

ಪದಾರ್ಥಗಳು:
ಎಣ್ಣೆ- 2 ಟೇಬಲ್‌ ಚಮಚ,  ಆಲೂಗಡ್ಡೆ- 4 ಮಧ್ಯಮ ಗಾತ್ರದ್ದು, ಈರುಳ್ಳಿ-1 ಮಧ್ಯಮ ಗಾತ್ರದ್ದು, ಮೊಟ್ಟೆ-4; ಹಸಿ ಮೆಣಸಿನ ಕಾಯಿ- 2, ನಿಂಬೆ ರಸ- 1 ಟೀ ಚಮಚ.

ವಿಧಾನ: ಮೊದಲು ಆಲೂಗಡ್ಡೆಯ ಸಿಪ್ಪೆಸುಲಿದು ವೃತ್ತಾಕಾರವಾಗಿ ಕತ್ತರಿಸಿ, ಉಪ್ಪು ಹಾಕಿ ಇಟ್ಟುಕೊಳ್ಳಬೇಕು. ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು. ಆಮೇಲೆ ಅಗಲವಾದ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಅದರಲ್ಲಿ ಆಲೂಗಡ್ಡೆ ಹಾಕಿ 7-8 ನಿಮಿಷ ಫ್ರೈ ಮಾಡಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹರಡಿ ತಣ್ಣಗಾಗಲು ಬಿಡಿ. ಮೊಟ್ಟೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಅದಕ್ಕೆ ಸ್ವಲ್ಪ ಉಪ್ಪು, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಸ್ವಲ್ಪ ಉರಿಯಲು ಬಿಡಿ. ಈಗ ಫ್ರೈ ಮಾಡಿದ ಆಲೂಗಡ್ಡೆಯನ್ನು ಮೊಟ್ಟೆಯಲ್ಲಿ ಅದ್ದಿ ಪ್ಯಾನ್‌ನಲ್ಲಿ ಹಾಕಿ, ಆಲೂಗಡ್ಡೆಯ ಎರಡೂ ಬದಿ ಫ್ರೈ ಮಾಡಿ. ನಂತರ ನಿಂಬೆ ರಸವನ್ನು ಅದರ ಮೇಲೆ ಹಿಂಡಬೇಕು. ಈಗ ರುಚಿರುಚಿಯಾದ ಆಲೂ-ಮೊಟ್ಟೆ ಆಮ್ಲೆಟ್ ರೆಡಿ.

*ಮೊಟ್ಟೆ ಬುರ್ಜಿ ಸ್ಪೆಷಲ್‌

ಪದಾರ್ಥಗಳು:
ಮೊಟ್ಟೆ - 4,  ಈರುಳ್ಳಿ-3 ಮಧ್ಯಮ ಗಾತ್ರದ್ದು,  ಕರಿಬೇವಿನ ಎಲೆ-1 ಹಿಡಿ, ಟೊಮೆಟೊ- 2, ಹಸಿಮೆಣಸಿನ ಕಾಯಿ-2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಚಮಚ, ಅರಿಶಿಣ ಪುಡಿ- 1 ಟೀ ಚಮಚ, ಕೆಂಪು ಮೆಣಸಿನ ಪುಡಿ- 1 ಟೀ ಚಮಚ, ನಿಂಬೆ ರಸ -1 ಟೀ ಚಮಚ, ಕರಿಮೆಣಸಿನ ಪುಡಿ- 1 ಟೀ ಚಮಚ,  ಕೊತ್ತಂಬರಿ ಸೊಪ್ಪು-1 ಹಿಡಿ, ಎಣ್ಣೆ- 2 ಟೇಬಲ್‌ ಚಮಚ, ರುಚಿಗೆ ತಕ್ಕ ಉಪ್ಪು

ವಿಧಾನ: ಮೊದಲು ಈರುಳ್ಳಿ, ಟೊಮೆಟೊ ಮತ್ತು ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಿ ಬದಿಯಲ್ಲಿ ಇಟ್ಟು ಕೊಳ್ಳಬೇಕು. ಈಗ ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಬೇಕು. ನಂತರ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಉರಿಯಲ್ಲಿಟ್ಟು ಇಟ್ಟು ಸ್ವಲ್ಪ ಬಿಸಿಯಾದಾಗ ಕರಿಬೇವಿನ ಎಲೆ, ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣ ತಿರುಗುವವರೆಗೆ ಹುರಿಯಬೇಕು. ಈಗ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಸೌಟಿನಲ್ಲಿ ಕಲಸಿ. ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಚೆನ್ನಾಗಿ ಹೊಡೆದ ಮೊಟ್ಟೆಯನ್ನು ಹಾಕಿ ಮಿಕ್ಸ್‌ ಮಾಡಬೇಕು. ಮೊಟ್ಟೆ ಬೆಂದು ಉದುರುದುರಾಗಿ ಕಾಣುತ್ತದೆ. ಒಲೆಯಿಂದ ಇಳಿಸಿದ ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹರಡಬಹುದು. ಸ್ವಲ್ಪ ನಿಂಬೆ ರಸವನ್ನು ಹಿಂಡಿದರೆ ರುಚಿಕರವಾದ ಮೊಟ್ಟೆ ಬುರ್ಜಿ ಸ್ಪೆಷಲ್‌ ರೆಡಿ.

*ಮೊಟ್ಟೆ ರೋಲ್‌

ಪದಾರ್ಥಗಳು:
ಮೊಟ್ಟೆ-4, ಈರುಳ್ಳಿ- 3,  ಬೆಳ್ಳುಳ್ಳಿ- ಶುಂಠಿ ಪೇಸ್ಟ್-2 ಟೀ ಚಮಚ, ಟೊಮೆಟೊ-2, ಜೀರಿಗೆ ಪುಡಿ- 1 ಟೀ ಚಮಚ, ಕರಿಮೆಣಸಿನ ಪುಡಿ- 1 ಟೀ ಚಮಚ, ಹಸಿ ಮೆಣಸಿನಕಾಯಿ- 2, ಲವಂಗ-2,  ಚಕ್ಕೆ-1/2 ಇಂಚು ಉದ್ದ, ಏಲಕ್ಕಿ ಪುಡಿ- ಅರ್ಧ ಟೀ ಚಮಚ, ಕೊತ್ತಂಬರಿ ಸೊಪ್ಪು- 1 ಹಿಡಿ, ಎಣ್ಣೆ- 2 ಟೇಬಲ್‌ ಚಮಚ, ತುಪ್ಪ- 1 ಟೀ ಚಮಚ, ಮೈದಾ ಹಿಟ್ಟು- 2 ಕಪ್ ನೀರು

ವಿಧಾನ: ಮೈದಾ ಹಿಟ್ಟಿಗೆ ರೊಟ್ಟಿ ಮಾಡಲು ಬೇಕಾಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಕಲಸಿ ಅರ್ಧಗಂಟೆ ಬದಿಯಲ್ಲಿ ಇಡಿ. ನಂತರ ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ರೊಟ್ಟಿಯನ್ನು ತುಪ್ಪದೊಂದಿಗೆ ಬೇಯಿಸಿ. ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ. ಅದಕ್ಕೆ ಸಣ್ಣಗೆ ಕತ್ತರಿಸಿದ ಒಂದು ಹಸಿ ಮೆಣಸಿನಕಾಯಿ, ಸ್ವಲ್ಪ ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕಲಸಬೇಕು.

ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಲವಂಗ, ಚಕ್ಕೆ, ಏಲಕ್ಕಿ ಮತ್ತು ಜೀರಿಗೆ ಹಾಕಿ ಒಂದು ನಿಮಿಷ ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ, ಶುಂಠಿ ಪೇಸ್ಟನ್ನು ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು. ಅದರ ಹಸಿ ವಾಸನೆ ಹೋಗುವ ತನಕ ಸ್ವಲ್ಪ ಹೊತ್ತು ಸೌಟಿನಲ್ಲಿ ಮಗುಚುತ್ತಿರಬೇಕು. ನಂತರ ಸಣ್ಣದಾಗಿ ಕತ್ತರಿಸಿದ ಟೊಮೆಟೊವನ್ನು ಸ್ವಲ್ಪ ಮೆತ್ತಗಾಗುವ ತನಕ ಬೇಯಿಸಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲ್ಲಾಡಿಸಿ. ಈಗ ಬಟ್ಟಲಿನಲ್ಲಿ ಬೆರೆಸಿದ ಮೊಟ್ಟೆಯನ್ನು ಹಾಕಿ 2-3 ನಿಮಿಷ ಬೇಯಿಸಿರಿ. ಕೂಡಲೆ ಒಲೆಯಿಂದ ತೆಗೆದು ರೊಟ್ಟಿಯ ಮೇಲೆ ಹರಡಿ ರೋಲ್‌ ಮಾಡಿದರೆ ರುಚಿರುಚಿಯಾದ ಮೊಟ್ಟೆ ರೋಲ್‌ ರೆಡಿ.

*ಮೊಟ್ಟೆ ಸ್ಯಾಂಡ್‌ವಿಚ್‌

ಪದಾರ್ಥಗಳು:
ಮೊಟ್ಟೆ- 4, ಬ್ರೆಡ್ ತುಂಡು- 4, ಟೊಮೆಟೊ- 1, ಈರುಳ್ಳಿ- 2, ಹಸಿ ಮೆಣಸಿನಕಾಯಿ- 2, ಕೊತ್ತಂಬರಿ ಸೊಪ್ಪು- 1 ಹಿಡಿ, ಹಾಲು- 2 ಟೇಬಲ್‌ ಚಮಚ, ಎಣ್ಣೆ- 1 ಟೇಬಲ್‌ ಚಮಚ, ಬೆಣ್ಣೆ- 1 ಟೇಬಲ್‌ ಚಮಚ, ರುಚಿಗೆ ತಕ್ಕ ಉಪ್ಪು.

ವಿಧಾನ: ಮೊಟ್ಟೆಯನ್ನು ಒಡೆದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಅದಕ್ಕೆ ಹಾಲು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ನಂತರ ಸಣ್ಣದಾಗಿ ಕತ್ತರಿಸಿದ ಹಸಿ ಮಣಸಿನಕಾಯಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲಸಬೇಕು. ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಮೊಟ್ಟೆಯ ಮಿಶ್ರಣವನ್ನು ಹಾಕಿ ಕಮ್ಮಿ ಉರಿಯಲ್ಲಿ ಫ್ರೈ ಮಾಡಬೇಕು. ಮೊಟ್ಟೆ ಫ್ರೈ ಆದ ನಂತರ ಉರಿಯಿಂದ ತೆಗೆದು ಬದಿಯಲ್ಲಿಡಿ. ಎರಡು ಬ್ರೆಡ್‌ ತುಂಡುಗಳ ಒಂದೊಂದು ಬದಿಯಲ್ಲಿ ಬೆಣ್ಣೆ ಸವರಿ ಅದರ ಮಧ್ಯದಲ್ಲಿ ಮೊಟ್ಟೆ ಫ್ರೈಯನ್ನು ಇಟ್ಟು ಸ್ವಲ್ಪ ಬಿಸಿಯಾದ ತವಾ ಮೇಲೆ ಇಟ್ಟು ಕಂದು ಬಣ್ಣಕ್ಕೆ ತಿರುಗಿದಾಗ ತೆಗೆದರೆ ರುಚಿಯಾದ ಮೊಟ್ಟೆ ಸ್ಯಾಂಡ್‌ವಿಚ್‌ ರೆಡಿ.

*ಜೊಹನ್ನ

ಪ್ರತಿಕ್ರಿಯಿಸಿ (+)