ಮಂಗಳವಾರ, ಆಗಸ್ಟ್ 4, 2020
26 °C

ಸಾವಯವ ಆಹಾರಕ್ಕೆ ಮಾರ್ಕೆಟ್‌ ಟೇಬಲ್‌

ಅನಿತಾ ಎಚ್. Updated:

ಅಕ್ಷರ ಗಾತ್ರ : | |

ಸಾವಯವ ಆಹಾರಕ್ಕೆ ಮಾರ್ಕೆಟ್‌ ಟೇಬಲ್‌

ಸಾವಯವ ಆಹಾರಪ್ರಿಯರಿಗಾಗಿ ನಗರದ ಕೋರಮಂಗಲದಲ್ಲಿ ವಿಶಿಷ್ಟ ಸಾವಯವ ಹೋಟೆಲ್‌ ‘ಮಾರ್ಕೆಟ್‌ ಟೇಬಲ್‌’ ಹೊಸದಾಗಿ ಆರಂಭಗೊಂಡಿದೆ. ಹೋಟೆಲ್‌ನ ಪ್ರವೇಶದ್ವಾರ, ಪೀಠೋಪಕರಣಗಳು, ಊಟದ ತಟ್ಟೆ ಅಷ್ಟೇ ಅಲ್ಲದೆ ಒಳಾಂಗಣ ವಿನ್ಯಾಸಕ್ಕೂ ಮರದ ಬಳಕೆ ಮಾಡಲಾಗಿದೆ. ಕಾಂಕ್ರೀಟ್‌ ಕಾಡಿನ ಮಧ್ಯೆ ಇಂಥದ್ದೊಂದು ಪ್ರದೇಶದಲ್ಲಿ ಕುಳಿತು ಊಟ ಮಾಡುವುದು ಪ್ರಕೃತಿಯ ಮಡಿಲಲ್ಲಿ ಕುಳಿತ ಭಾವ ತರುತ್ತದೆ.

ಈಚೆಗೆ ಹೋಟೆಲ್‌ಗೆ ಭೇಟಿ ನೀಡಿದಾಗ ಮುಖ್ಯ ಚೆಫ್‌ ನಿರ್ಮಲ್‌ಕುಮಾರ್‌ ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ಹಣ್ಣಿನ ರಸ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ಒಂದೊಂದಾಗಿ ತರಿಸಿ ಪರಿಚಯಿಸಿದರು.

ಅರಿಶಿನ, ಶುಂಠಿ, ಕ್ಯಾರೆಟ್‌, ತೆಂಗಿನ ಹಾಲು ಸೇರಿಸಿ ತಯಾರಿಸಲಾದ ‘ಗೋಲ್ಡನ್‌ ವೈಟಾಲಿಟಿ’ ಕಿತ್ತಲೆಹಣ್ಣಿನ ರಸವನ್ನು ನೀಡಿ ಕುಡಿಯಲು ಹೇಳಿದರು. ಸಾದಾ ಹಣ್ಣಿನ ರಸ ಮತ್ತು ಸಾವಯವ ಹಣ್ಣಿನ ರಸದ ನಡುವಿನ ವ್ಯತ್ಯಾಸ ಅನುಭವಕ್ಕೆ ಬಂದಿತು. ಜತೆಗೆ ಕಲ್ಲಂಗಡಿ, ಸೌತೆ ಮತ್ತು ಸೇಬಿನ ‘ಪೊಪೆಯೇಸ್‌ ವರ್ಚ್ಯು ಎಟ್‌ ಎಮ್‌ಟಿ’ ಮತ್ತು ಬಾದಾಮಿ ಹಾಲು, ಮೊಸರು, ಬಾಳೆಹಣ್ಣು ಮತ್ತು ತೆಂಗಿನಕಾಯಿ ಬಳಸಿ ತಯಾರಿಸಲಾದ ‘ಬನಾನ ಕ್ರೀಮ್‌ ಪೈ’ ಹಣ್ಣಿನರಸಗಳ ಬಗ್ಗೆಯೂ ವಿವರಣೆ ನೀಡಿದರು.

‘ಅಡುಗೆಗೆ ಆಲಿವ್‌ ಎಣ್ಣೆಯನ್ನು ಮಾತ್ರವೇ ಬಳಸುತ್ತೇವೆ. ವೈಟ್‌ ಸುಗರ್‌, ಮೈದಾ, ಹಾಲು ಬಳಸುವುದಿಲ್ಲ. ಸಸ್ಯಾಹಾರ ಅಥವಾ ಮಾಂಸಾಹಾರದ ಖಾದ್ಯಗಳನ್ನು ಹೆಚ್ಚು ಕರಿಯುವುದಿಲ್ಲ. ಹೆಚ್ಚು ಕರಿದ ಆಹಾರ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಅದು ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಉದ್ದೇಶ’ ಎಂದರು ನಿರ್ಮಲ್‌ಕುಮಾರ್‌.

‘ಹಾಗಂತ ಅಡುಗೆಗೆ ಉಪ್ಪು, ಖಾರ, ಹುಳಿ ಬಳಸುವುದಿಲ್ಲ ಅಂತಿಲ್ಲ. ಎಲ್ಲವೂ ಹಿತ–ಮಿತವಾಗಿರುತ್ತದೆ. ಎಲ್ಲರಿಗೂ ಗುಣ ಮಟ್ಟದ, ತಾಜಾ ಆಹಾರ ಉಣಬಡಿಸುವುದು ನಮ್ಮ ಗುರಿ. ಅದಕ್ಕಾಗಿ ತರಕಾರಿ, ಕಾಳುಕಡಿ ಅಗತ್ಯ ಪದಾರ್ಥಗಳನ್ನು ರೈತರಿಂದಲೇ ನೇರವಾಗಿ ಖರೀದಿಸಿ ತರುತ್ತೇವೆ. ರಾಸಾಯನಿಕ ಮುಕ್ತ ಚಿಕನ್‌ ಮತ್ತು ಮಟನ್‌ ಅನ್ನೇ ನೀಡುತ್ತೇವೆ. ಗ್ರಾಹಕರಿಂದ ಆರ್ಡರ್‌ ಪಡೆದು ಆ ಕ್ಷಣದಲ್ಲಿಯೇ ತಯಾರಿಸಿ ಬಡಿಸುತ್ತೇವೆ.

ಸಮಾಧಾನವಾಗಿ ಕುಳಿತು ಊಟ ಮಾಡಬಹುದು’ ಎನ್ನುತ್ತಾರೆ ಅವರು. ‘ವ್ಹೀಟ್‌ ಚಿಯಾ ರೋಲ್‌’, ‘ಬಟಾಟಹರ’, ‘ಸ್ವೀಟ್‌ ಅಂಡ್‌ ಸ್ಪೈಸಿ ಮಾರ್ಕೆಟ್‌ನಟ್‌’ ರುಚಿ ನಿರ್ಮಲ್‌ ಅವರ ಮಾತಿಗೆ ಪೂರಕವಾಗಿತ್ತು. ಇದಕ್ಕೆ ಬಳಸಿದ್ದ ತರಕಾರಿ–ಧಾನ್ಯಗಳೂ ತಾಜಾವಾಗಿದ್ದವು. ನಂತರ ನೀಡಿದ ‘ಬೆರ್ರಿ ಪಂಚ್‌’, ‘ಗ್ರಿಲ್ಡ್‌ ಏಷಿಯನ್‌ ಸ್ಪೈಸ್ಡ್‌’, ಮತ್ತು ‘ಎಮ್‌ಟಿ ಸಿಗ್ನೇಚರ್‌ ಲ್ಯಾಂಬ್‌ ಓಪನ್‌ ಟೋಸ್ಟ್‌’ ಸಾವಯವ ಆಹಾರದ ಮಹತ್ವವನ್ನು ಸಾರುವಂತಿದ್ದವು.

ಉತ್ತಮ ಆಹಾರ ಅಭ್ಯಾಸದ ಸಲುವಾಗಿ

ಹೋಟೆಲ್‌ ಮಾಲೀಕರಾದ ಕೀರ್ತನಾ ಗೋಪಾಲಕೃಷ್ಣನ್‌ ಬೆಂಗಳೂರಿನವರು. ಎಂಬಿಎ ಪದವೀಧರೆ. ಕೀರ್ತನಾ ತಂದೆ–ತಾಯಿ ಪಿಜ್ಜಾ, ಬರ್ಗರ್‌ ಇಂತಹ ಯಾವುದೇ ಆಹಾರವನ್ನು ಬಾಲ್ಯದಲ್ಲಿ ಕೊಡಿಸುತ್ತಿರಲಿಲ್ಲವಂತೆ. ಚಿಕ್ಕಂದಿನಿಂದಲೇ ಉತ್ತಮ ಆಹಾರ ಅಭ್ಯಾಸ ರೂಢಿಸಿಕೊಂಡಿದ್ದ ಅವರು, ಜನರಿಗೂ ಇಂತಹ ಸೇವೆ ಒದಗಿಸುವ ಚಿಂತನೆಯ ಭಾಗವಾಗಿ ಇದೀಗ ಸಾವಯವ ಹೋಟೆಲ್‌ ಆರಂಭಿಸಿದ್ದಾರೆ. ಕಂಪೆನಿಯೊಂದರ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಅನುಭವವೂ ಅವರಿಗಿದೆ.

ಕೀರ್ತನಾ ಅವರ ಉದ್ದೇಶಕ್ಕೆ ಬೆಂಬಲವಾಗಿ ನಿಂತಿರುವವರು ಹೋಟೆಲ್‌ನ ಮುಖ್ಯ ಚೆಫ್‌ ನಿರ್ಮಲ್‌ಕುಮಾರ್‌. ಬೆಂಗಳೂರಿನವರೇ ಆದ ಅವರು ಕಳೆದ 19 ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊರದೇಶಗಳಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ನೆರವು ನೀಡುವ ಸಲುವಾಗಿ ತರಬೇತಿ ಸಂಸ್ಥೆ ನಡೆಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಚೆನ್ನೈ ಮಹಾನಗರಗಳಲ್ಲಿನ ಹೋಟೆಲ್‌ಗಳ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಿದ್ದಾರೆ.

ರೆಸ್ಟೋರೆಂಟ್‌: ಮಾರ್ಕೆಟ್‌ ಟೇಬಲ್‌

ವಿಶೇಷತೆ: ಆಮ್ಲೆಟ್‌ ವ್ರ್ಯಾಪ್‌ ಮತ್ತು ವಿಶೇಷ ಹಣ್ಣಿನ ರಸಗಳು

ಸಮಯ: ಬೆಳಿಗ್ಗೆ 8.30ರಿಂದ ರಾತ್ರಿ 10.30

ಸ್ಥಳ: ಮೊದಲನೇ ‘ಎ’ ಅಡ್ಡರಸ್ತೆ, 5ನೇ ಬ್ಲಾಕ್‌, ಕೋರಮಂಗಲ, ಬೆಂಗಳೂರು–560034

ಕಾಯ್ದಿರಿಸುವಿಕೆ ಅಗತ್ಯವಿಲ್ಲ, ಸಂಪರ್ಕಕ್ಕೆ: 080–2552 3213/98867 03482

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.