ಭಾನುವಾರ, ಡಿಸೆಂಬರ್ 15, 2019
25 °C

‘ಹೊಸತನಕ್ಕೆ ತೆರೆದುಕೊಂಡಿರುವೆ’

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

‘ಹೊಸತನಕ್ಕೆ ತೆರೆದುಕೊಂಡಿರುವೆ’

ಲವ್ಲೀ ಸ್ಟಾರ್ ಪ್ರೇಮ್‌, ಆ್ಯಕ್ಷನ್‌ ಸ್ಟಾರ್‌ ಆಗುವ ಹವಣಿಕೆಯಲ್ಲಿದ್ದಂತಿದೆ... ಹಾಗೇನಿಲ್ಲ. ನನಗೆ ಕೇವಲ ಲವರ್‌ ಬಾಯ್ ಇಮೇಜ್‌ಗೆ ಬ್ರ್ಯಾಂಡ್ ಆಗುವುದು ಇಷ್ಟವಿಲ್ಲ. ನಾನು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬಲ್ಲೆ. ಕಮರ್ಷಿಯಲ್, ಆ್ಯಕ್ಷನ್‌ ಸಿನಿಮಾವನ್ನೂ ಮಾಡಬಲ್ಲೆ. ಅವಕಾಶ ಸಿಕ್ಕಾಗ ಎಲ್ಲ ರೀತಿಯ ಪಾತ್ರಗಳನ್ನೂ ಮಾಡುತ್ತ ಹೋಗಬೇಕು. ಹೀಗಾಗಿಯೇ ‘ದಳಪತಿ’ ಸಿನಿಮಾ ಒಪ್ಪಿಕೊಂಡಿದ್ದು.

‘ದಳಪತಿ’ ಸಿನಿಮಾ ಒಪ್ಪಿಕೊಳ್ಳಲು ವಿಶೇಷ ಕಾರಣವೇನು?

ನಾನು ನನ್ನ ಎಲ್ಲ ಸಿನಿಮಾಗಳನ್ನೂ ವೀಕ್ಷಕರ ಜತೆ ಕೂತು ನೋಡುತ್ತೇನೆ. ನೋಡಿದ ಮೇಲೆ ಅವರಿಂದ ಒಂದಿಷ್ಟು ಫೀಡ್‌ಬ್ಯಾಕ್ ತೆಗೆದುಕೊಳ್ಳುತ್ತೀನಿ. ನನ್ನಿಂದ ಮುಂದಿನ ಸಿನಿಮಾಗಳಲ್ಲಿ ಯಾವ ರೀತಿಯ ಪಾತ್ರಗಳನ್ನು ನಿರೀಕ್ಷಿಸುತ್ತೀರಾ ಎಂದು ಕೇಳುತ್ತೇನೆ. ಹೀಗೆ ಕೇಳಿದಾಗ ಸಾಕಷ್ಟು ಜನ ವೀಕ್ಷಕರು ‘ನಿಮ್ಮನ್ನು ಪೂರ್ತಿ ಚಾಕೊಲೆಟ್‌ ಹೀರೊ ಥರ ನೋಡಲು ಇಷ್ಟಪಡುವುದಿಲ್ಲ. ನಿಮ್ಮ ಸಿನಿಮಾಗಳಲ್ಲಿ ಒಂದಿಷ್ಟು ಫೈಟ್‌ಗಳು ಇರಬೇಕು’ ಎಂದೇ ಹೇಳಿದರು. ನನಗೂ ಅದು ಸರಿ ಅನಿಸಿತು. ಆ್ಯಕ್ಷನ್‌ ಇರಬೇಕು ಅನಿಸಿತು. ಆ ಸಮಯಕ್ಕೆ ಸರಿಯಾಗಿ ‘ದಳಪತಿ’ ಕಥೆ ಬಂತು. ಇಷ್ಟವಾಯ್ತು ಒಪ್ಪಿಕೊಂಡೆ.

ಈ ಚಿತ್ರದಲ್ಲಿ ಅಂಥ ವಿಶೇಷ ಏನಿದೆ?

ಇದೇನೋ ತುಂಬ ಭಿನ್ನವಾದ, ವಿಶೇಷವಾದ ಕಥೆ ಎಂದು ನಾನು ಹೇಳುವುದಿಲ್ಲ. ತುಂಬ ಅದ್ಭುತವಾಗಿ, ಯಾರೂ ಮಾಡದೇ ಇರುವಂಥದ್ದು ಮಾಡಿದ್ದೀವಿ ಎಂದೂ ಹೇಳುವುದಿಲ್ಲ. ಇದೊಂದು ಒಳ್ಳೆಯ ಪ್ರೇಮಕಥೆ. ಅದನ್ನು ಹೊಸ ರೀತಿಯಲ್ಲಿ ಪ್ರೆಸೆಂಟ್ ಮಾಡಿದ್ದೀವಷ್ಟೆ. ಕೆಲವೊಂದು ಹೊಸ ತಿರುವುಗಳಿರುತ್ತವೆ.

ಈ ಪಾತ್ರಕ್ಕೆ ನೀವು ಯಾವ ರೀತಿ ಸಿದ್ಧತೆ ನಡೆಸಿದ್ದೀರಿ?

ತುಂಬ ಸಿದ್ಧತೆ ನಡೆಸುವಂಥದ್ದು ಕಥೆಯಲ್ಲಿ ಏನೂ ಇರಲಿಲ್ಲ. ಯಾಕೆಂದರೆ ನಿರ್ದೇಶಕರು ಮಾಡಿದ ಕಥೆಯೇ ಸರಳವಾಗಿ ಚೆನ್ನಾಗಿತ್ತು. ನಾನು ಇರುವುದಕ್ಕಿಂತ ಭಿನ್ನವಾಗಿ ದಪ್ಪ ಆಗುವುದಾಗಲಿ, ಸಣ್ಣ ಆಗುವುದಾಗಲಿ ಅಗತ್ಯ ಇರಲಿಲ್ಲ. ದ್ವಿತೀಯಾರ್ಧದಲ್ಲಿ ಆಂಗಿಕ ಭಾಷೆಯಲ್ಲಿ ಬದಲಾವಣೆ ಇದೆ. ಮಾಸ್ ಅಪೀಲ್‌ ಇರುತ್ತೆ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್‌ ಸಿನಿಮಾ. ಎರಡೂವರೆ ಗಂಟೆ ಆರಾಮವಾಗಿ ನೋಡಿಕೊಂಡು ನಗುನಗುತ್ತಾ ಕೂಲ್‌ ಆಗಿ ಹೋಗಬಹುದು.

ನಿರ್ದೇಶಕ ಪ್ರಶಾಂತ್‌ರಾಜ್‌ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ತಾಂತ್ರಿಕವಾಗಿ ತುಂಬ ತಿಳಿವಳಿಕೆ ಇರುವ ನಿರ್ದೇಶಕರು ಅವರು. ಹಾಗಾಗಿ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತುಂಬ ಸಮರ್ಥವಾದ ಪ್ರತಿಭಾವಂತ ವ್ಯಕ್ತಿ.

ಸಿನಿಮಾ ಬಿಡುಗಡೆ ಸ್ವಲ್ಪ ತಡವಾಯ್ತಲ್ವಾ?

ಹಾಗೇನೂ ಇಲ್ಲ. ಈ ಸಿನಿಮಾ ಒಪ್ಪಿಕೊಂಡ ಮೇಲೆ ಎಲ್ಲರೂ ಅವರವರ ವೈಯಕ್ತಿಕ ಕಾರಣಗಳಿಗೆ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಆದ್ದರಿಂದ ಸ್ವಲ್ಪ ತಡ ಆಯ್ತು. ಆದರೆ ಇದರಿಂದ ಸಿನಿಮಾದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಯಾಕೆಂದರೆ ಇದು ಯಾವುದೋ ಒಂದು ಕಾಲಮಾನಕ್ಕೆ ನಡೆಯುವಂಥ ಕಥೆ ಅಲ್ಲ. ಪ್ರೇಮ ಮತ್ತು ಆ್ಯಕ್ಷನ್ ಕಥೆ ಇರುವ ಸಿನಿಮಾ. ಯಾವಾಗ ಬಿಡುಗಡೆ ಮಾಡಿದರೂ ಪ್ರಸ್ತುತತೆ ಕಳೆದುಕೊಳ್ಳುವುದಿಲ್ಲ.

ಮುಂದಿನ ಸಿನಿಮಾಗಳು?

‘ಲೈಫ್‌ ಜತೆ ಒಂದ್ ಸೆಲ್ಫೀ’ ಸಿನಿಮಾ ತುಂಬ ಭಿನ್ನವಾದ ಕಥೆ ಹೊಂದಿದೆ. ಅದು ಡಬ್ಬಿಂಗ್ ಎಲ್ಲ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಚುನಾವಣೆ ಮುಗಿದ ಮೇಲೆ ಅದು ಬಿಡುಗಡೆಯಾಗುತ್ತದೆ. ಇದುವರೆಗೂ 76 ಕಥೆಗಳನ್ನು ಕೇಳಿದ್ದೇನೆ. ಆದರೆ ಇದುವರೆಗೆ ಯಾವುದೂ ಒಪ್ಪಿಗೆಯಾಗಿಲ್ಲ.

ಅಂದ್ರೆ ನೀವು ಅಷ್ಟೊಂದು ಚೂಸಿಯಾ?

ಹಾಗೇನೂ ಇಲ್ಲ. ನನ್ನ ಪ್ರಕಾರ ಕಥೆ ಸರಳವಾಗಿ, ಚೆನ್ನಾಗಿದ್ರೆ ಸಾಕು. ಅಂಥವು ಸಿಗುವುದೇ ತುಂಬ ಕಷ್ಟ. ಏನೋ ಸಂಕೀರ್ಣವಾದ ಕಥೆಗಳು ಬೇಕಾದಷ್ಟು ಸಿಗುತ್ತವೆ. ಇಲ್ಲದಿದ್ದರೆ ನಾಲ್ಕು ಹಾಡುಗಳು, ಮೂರು ಫೈಟ್‌ಗಳು ಇದ್ರೆ ಸಾಕು ಎನ್ನುವಂಥ ಕಥೆಗಳೂ ಸಿಗುತ್ತವೆ. ಆದರೆ ಸರಳ ಆದರೆ ಸುಂದರವಾದ ಕಥೆಗಳು ಸಿಗುವುದಿಲ್ಲ.

ಹಾಗಾದರೆ ಇನ್ನು ಮುಂದೆ ಎಂಥ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೀರಿ?

ಹೊಸ ವಿಷಯ ಇಟ್ಟುಕೊಂಡು, ಪ್ರೇಮ್‌ ಕೈಲಿ ಹೊಸಥರದ್ದೇನಾದರೂ ಮಾಡಬೇಕು ಎಂದುಕೊಂಡಿದ್ದರೆ ಅಂಥವರು ಯಾರೇ ಇದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ಪ್ರಯೋಗಾತ್ಮಕ ಸಿನಿಮಾಗಳು, ಹೊಸ ಗೆಟಪ್ ಈ ಥರದ ಏನೇ ಇದ್ದರೂ ನಾನು ಮಾಡಲು ಉತ್ಸುಕನಾಗಿದ್ದೇನೆ. ಹೊಸಬರಿಗಂತೂ ನಾನು ಸದಾ ತೆರೆದುಕೊಂಡಿರುತ್ತೇನೆ.

ಪ್ರತಿಕ್ರಿಯಿಸಿ (+)