ಭಾನುವಾರ, ಡಿಸೆಂಬರ್ 15, 2019
25 °C

ಪಕ್ಷಾಂತರಿಗಳ ವಿರುದ್ಧ ಗೌಡರ ರಣತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷಾಂತರಿಗಳ ವಿರುದ್ಧ ಗೌಡರ ರಣತಂತ್ರ

ಬೆಂಗಳೂರು: ಹಿಂದಿನ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಗೆದ್ದು, ಇತ್ತೀಚೆಗೆ ಕೈಕೊಟ್ಟು ಹೋದ ಮಾಜಿ ಶಾಸಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ರಣತಂತ್ರ ಹೆಣೆದಿದ್ದಾರೆ.

ಮಾಜಿ ಶಾಸಕರು ಯಾವ ಪಕ್ಷಗಳನ್ನು ಸೇರಿದರೋ ಆ ಪಕ್ಷಗಳಲ್ಲಿದ್ದ ಪ್ರಬಲ ನಾಯಕರನ್ನು ಸೆಳೆದು ತಿರುಗೇಟು ನೀಡುವುದರ ಜೊತೆಗೆ, ಗೆಲುವಿಗೆ ಅಗತ್ಯವಿರುವ ಕಾರ್ಯತಂತ್ರಗಳನ್ನೂ ಅವರು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್‌ ಅಹಮದ್ ಖಾನ್ ವಿರುದ್ಧ ಅಲ್ತಾಫ್‌ ಖಾನ್‌, ಮಾಗಡಿಯಲ್ಲಿ ಎಚ್.ಸಿ. ಬಾಲಕೃಷ್ಣ ವಿರುದ್ಧ ಮಂಜು, ನಾಗಮಂಗಲದಲ್ಲಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್‌ ಗೌಡ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ.

ಪುಲಿಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ, ಮಾಜಿ ಶಾಸಕ ಬಿ. ಪ್ರಸನ್ನ ಕುಮಾರ್‌ ಅವರನ್ನು ಸೆಳೆದು ಕಣಕ್ಕೆ ಇಳಿಸುವ ಚಿಂತನೆ ಇದೆ. ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ ವಿರುದ್ಧ ಶ್ರೀನಾಥ್‌, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ವಿರುದ್ಧ ಮಾರಣ್ಣ ಅವರನ್ನು ಪಕ್ಷ ಕಣಕ್ಕೆ ಇಳಿಸಲಿದೆ.

ಈ ಎಲ್ಲ ಅಭ್ಯರ್ಥಿಗಳೂ ಕಾಂಗ್ರೆಸ್‌ನವರೇ ಆಗಿದ್ದಾರೆ. ಬಿಜೆಪಿಗೆ ಜಿಗಿದ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್‌ ವಿರುದ್ಧ ಬಿಜೆಪಿಯ

ಸಿದ್ಧು ಬಂಡಿಯನ್ನು ಕರೆತಂದು ಚುನಾವಣೆಗೆ ಇಳಿಸಲಾಗುವುದು ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಚಾಮರಾಜಪೇಟೆಯಲ್ಲಿ ಜಮೀರ್‌ ಸೋಲಿಸುವುದು ಕಷ್ಟ ಎಂಬ ಮಾತನ್ನು ತಲೆ ಕೆಳಗೆ ಮಾಡಲು ದೇವೇಗೌಡರು ರಹಸ್ಯ ತಂತ್ರವನ್ನು ಅನುಸರಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆಯುವುದರ ಜತೆಗೆ ದಲಿತರ ಮತಗಳನ್ನು ಸೆಳೆಯಲು ಬಿಎಸ್‌ಪಿ ನೆರವು ಪಡೆಯಲಾಗುವುದು. ನಾಗಮಂಗಲ ಮತ್ತು ಮಾಗಡಿಯಲ್ಲಿ ಒಕ್ಕಲಿಗರು ಮತ್ತು ಕಾಂಗ್ರೆಸ್ ವಿರೋಧಿ ಮತಗಳ ಕ್ರೋಡೀಕರಣ ‍ಪಕ್ಷಕ್ಕೆ ಅನುಕೂಲಕರವಾಗಲಿದೆ. ಪುಲಿಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಪ್ರಸನ್ನಕುಮಾರ್‌ ಪ್ರಬಲ ಅಸ್ತ್ರವಾಗಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಈ ಕ್ಷೇತ್ರದಲ್ಲಿ ಪಕ್ಷದ ವರಿಷ್ಠರು ಪ್ರಚಾರದ ಸಂದರ್ಭದಲ್ಲೂ ಹೆಚ್ಚಿನ ಒತ್ತು ನೀಡಲಿದ್ದಾರೆ. ಮಾಗಡಿಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ದೇವೇಗೌಡರ ಕುರಿತು ಟೀಕೆ ಮಾಡಿದಾಗ ಸಾರ್ವಜನಿಕರು ಸಭೆಯಿಂದ ಅರ್ಧದಲ್ಲೇ ಎದ್ದು ಹೋದರು, ಇದು ಜನರ ಆಕ್ರೋಶಕ್ಕೆ ನಿದರ್ಶನ ಮತ್ತು ಫಲಿತಾಂಶಕ್ಕೆ ದಿಕ್ಸೂಚಿ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ನಿರಾಶಾದಾಯಕ ಸ್ಥಿತಿ ಎದುರಾಗಿದೆ. ಅವರು ಹೋದ ಕಡೆಗಳಲ್ಲಿ ಜನ ಸೇರುತ್ತಿಲ್ಲ.

ಜಾತಿ–ಧರ್ಮಗಳನ್ನು ಒಡೆದಾಳುವ ನೀತಿ ಮತ್ತು ಜೆಡಿಎಸ್‌ ಪಕ್ಷ ನಾಶ ಮಾಡಲು ಹೊರಟ ಅವರ ವಿಚಾರ ಜನರಿಗೆ ಮನವರಿಕೆ ಆಗಿದೆ.

ಮತ್ತೆ ಮತ್ತೆ ಇದೇ ಸಂಗತಿಯನ್ನು ವಿವರಿಸಿ, ಗೆಲುವಿನ ಹಾದಿಯನ್ನು ಸುಗಮಗೊಳಿಸುವ ಚಿಂತನೆ ಇದೆ ಎಂದೂ ಅವರು ಹೇಳಿದರು.

ಪ್ರತಿಕ್ರಿಯಿಸಿ (+)