ಬುಧವಾರ, ಜುಲೈ 15, 2020
22 °C

ಕಾವೇರಿ ಸಮಸ್ಯೆ ಕೇಂದ್ರ ಬಗೆಹರಿಸಲಿ; ಪ್ರಕಾಶ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಸಮಸ್ಯೆ ಕೇಂದ್ರ ಬಗೆಹರಿಸಲಿ; ಪ್ರಕಾಶ ರೈ

ಬೆಳಗಾವಿ: ‘ಕರ್ನಾಟಕ ಹಾಗೂ ತಮಿಳುನಾಡಿನ ಜನಪ್ರತಿನಿಧಿಗಳು ಹಾಗೂ ತಜ್ಞರ ಜೊತೆ ಸಮಾಲೋಚಿಸಿ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಬೇಕು’ ಎಂದು ಚಿತ್ರನಟ ಪ್ರಕಾಶ ರೈ ಬುಧವಾರ ಇಲ್ಲಿ ಒತ್ತಾಯಿಸಿದರು.

‘ನೈಲ್‌ ನದಿಯ ನೀರನ್ನು ಎರಡ್ಮೂರು ದೇಶಗಳು ಹಂಚಿಕೊಳ್ಳುತ್ತಿರುವಾಗ, ಕಾವೇರಿ ನೀರನ್ನು ಅಕ್ಕಪಕ್ಕದ ಎರಡು ರಾಜ್ಯಗಳು ಹಂಚಿಕೊಳ್ಳಲು ಸಾಧ್ಯವಿಲ್ಲವೇ? ಕಾವೇರಿ ಎನ್ನುವುದು ಎರಡೂ ರಾಜ್ಯಗಳ ಜನಪ್ರತಿನಿಧಿಗಳಿಗೆ ರಾಜಕೀಯ ವಿಷಯವಾಗಿದೆ’ ಎಂದು ಅವರು ಆರೋಪಿಸಿದರು.

ಚಿತ್ರನಟರು, ರಾಜಕೀಯ ಜನಪ್ರತಿನಿಧಿಗಳು ಕೇವಲ ಹೇಳಿಕೆ ನೀಡುವುದರಿಂದ ಈ ಸಮಸ್ಯೆ ಪರಿಹಾರ ಆಗಲಾರದು. ನೀರು ಹಂಚಿಕೆಯಲ್ಲಿ ಏನು ತೊಂದರೆಯಾಗುತ್ತಿದೆ? ನದಿ ನೀರಿನ ಪ್ರಮಾಣ ಕಡಿಮೆಯಾಗಲು ಏನು ಕಾರಣ? ಇಂದಿನ ಕಾವೇರಿ ಸ್ಥಿತಿ ಹೇಗಿದೆ ಎನ್ನುವುದನ್ನು ಯಾವ ರಾಜಕಾರಣಿಗಳೂ ಹೇಳುವುದಿಲ್ಲ ಎಂದ ಅವರು, ಇದರ ಬಗ್ಗೆ ಜನರಿಗೆ ವಾಸ್ತವಾಂಶ ತಿಳಿಸಲು ಪರಿಸರವಾದಿ ಕೃಪಾಕರ ಸೇನಾನಿ ಅವರ ಜೊತೆಗೂಡಿ ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವುದಾಗಿ ತಿಳಿಸಿದರು.

‘ರೈತ ಚಳವಳಿ ಹಾಗೂ ದಲಿತ ಚಳವಳಿಯ ಮುಖಂಡರು ಅಧಿಕಾರದಲ್ಲಿರುವ ರಾಜಕಾರಣಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ’ ಎಂದು ಅವರು ವಿಷಾದಿಸಿದರು.

ಪ್ರಾದೇಶಿಕ ಪಕ್ಷ ಉತ್ತಮ: ಭಾರತವು ವೈವಿಧ್ಯದಿಂದ ಕೂಡಿದ್ದು, ಪ್ರತಿಯೊಂದು ರಾಜ್ಯವೂ ವಿಭಿನ್ನವಾಗಿದೆ. ಅವುಗಳ ಸಮಸ್ಯೆಗಳು, ಆದ್ಯತೆಗಳು ಬೇರೆ ಬೇರೆಯಾಗಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.

ಬಿಜೆಪಿ ಕ್ಯಾನ್ಸರ್‌ ಇದ್ದಂತೆ: ‘ಕೋಮುವಾದಿ ಬಿಜೆಪಿ ಕ್ಯಾನ್ಸರ್‌ ಇದ್ದಂತೆ. ಕಾಂಗ್ರೆಸ್‌, ಜೆಡಿಎಸ್‌ ಕೆಮ್ಮು, ನೆಗಡಿ ಇದ್ದಂತೆ. ಮೊದಲು ಮಾರಕವಾಗಿರುವ ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡಬೇಕಾಗಿದೆ’

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.