ಮಂಗಳವಾರ, ಆಗಸ್ಟ್ 11, 2020
27 °C

ಗಡಿಯಲ್ಲಿ ‘ಚತುರ ಬೇಲಿ’

ಪಿಟಿಐ Updated:

ಅಕ್ಷರ ಗಾತ್ರ : | |

ಗಡಿಯಲ್ಲಿ ‘ಚತುರ ಬೇಲಿ’

ನವದೆಹಲಿ: ಅಸ್ಸಾಂನಲ್ಲಿ ಬಾಂಗ್ಲಾದೇಶದೊಂದಿಗೆ ಭಾರತ ಹಂಚಿಕೊಂಡ ಗಡಿಯ ಕೆಲವು ಭಾಗದಲ್ಲಿ ‘ಚತುರ ಬೇಲಿ’ ಅಳವಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮಾ ಹೇಳಿದ್ದಾರೆ.

‘ಭಾರತ–ಪಾಕಿಸ್ತಾನ ಮತ್ತು ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಸಂಪೂರ್ಣ ಭದ್ರತೆ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ಸಮಗ್ರ ಗಡಿ ನಿರ್ವಹಣಾ ವ್ಯವಸ್ಥೆ’ಯ (ಸಿಐಬಿಎಂಎಸ್) ಭಾಗವಾಗಿ ಚತುರ ಬೇಲಿ ರೂಪುಗೊಂಡಿದೆ’ ಎಂದು ಅವರು ಹೇಳಿದರು.

‘ಚತುರ ಬೇಲಿಯು ತಾಂತ್ರಿಕ ಕಣ್ಗಾವಲು ಮತ್ತು ಕರೆಗಂಟೆ ಸಾಧನಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು. ಆದರೆ, ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವಿವರ ನೀಡಲು ಅವರು ಬಯಸಲಿಲ್ಲ. ಇನ್‌ಫ್ರಾರೆಡ್ ಕ್ಯಾಮೆರಾ ಹಾಗೂ ರೇಡಾರ್‌ಗಳನ್ನು ಇದರಲ್ಲಿ ಬಳಸಲಾಗಿದೆ.

ಬ್ರಹ್ಮಪುತ್ರಾ ನದಿಯಂಚಿನ ಧುಬ್ರಿ ಎಂಬಲ್ಲಿ 55 ಕಿ.ಮೀ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಹೊಸ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನದಿಯು ಇಲ್ಲಿ ತನ್ನ ಪಾತ್ರ ಬದಲಿಸುವುದರಿಂದಾಗಿ ವಾಸ್ತವ ಬೇಲಿ ರೂಪಿಸುವುದು ಕಷ್ಟ. ಹೀಗಾಗಿ ಚತುರ ವ್ಯವಸ್ಥೆ ರೂಪಿಸಲಾಗಿದೆ.

ಧುಬ್ರಿ ವಲಯವು ಅಕ್ರಮವಲಸೆ ಮತ್ತು ಜಾನುವಾರು ಕಳ್ಳ ಸಾಗಣೆಗೆ ದೊಡ್ಡ ಮಟ್ಟದಲ್ಲಿ ಕುಖ್ಯಾತವಾಗಿದೆ.

ಪಾಕ್ ಗಡಿಯಲ್ಲೂ ಆರಂಭ: ಜಮ್ಮುವಿನಲ್ಲಿ ಭಾರತ–ಪಾಕಿಸ್ತಾನ ಗಡಿಯಲ್ಲೂ ಕಳೆದ ತಿಂಗಳು ಚತುರ ಬೇಲಿ ಅಳವಡಿಸಲಾಗಿದೆ. ತಲಾ 5 ಕಿ.ಮೀ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ಯೋಜನೆ ಕೈಗೊಳ್ಳಲಾಗಿದೆ.

‘ಮುಂದಿನ ನಾಲ್ಕೈದು ವರ್ಷಗಳಲ್ಲಿ ಒಟ್ಟು 2,000 ಕಿ.ಮೀ ಗಡಿಯನ್ನು ಈ ವ್ಯವಸ್ಥೆ ಅಡಿ ತರಲಾಗುವುದು’ ಎಂದು ಅಧಿಕಾರಿ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.