ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದೋಣಿ ಪಯಣಿಗರು?

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಕ್ಷೇತ್ರಗಳಿಂದ ಒಮ್ಮೆಗೇ ಅದೃಷ್ಟ ಪರೀಕ್ಷೆಗೆ ಇಳಿದ ರಾಜಕಾರಣಿಗಳ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸೇರುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ, ಹಾಲಿ ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದ ಜೊತೆಗೆ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಒಂದಾದ ಚನ್ನಪಟ್ಟಣದಿಂದಲೂ ಕಣಕ್ಕಿಳಿಯುವುದಾಗಿ ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ಪ್ರಕಟಿಸಿರುವ ಮುಖ್ಯಮಂತ್ರಿ, ತಮ್ಮದೇ ಸಮುದಾಯದ (ಕುರುಬ) ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಜೆಡಿಎಸ್‌ ಭದ್ರಕೋಟೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಎರಡು ಮನಸ್ಸು ಮಾಡಿದ್ದಾರೆ ಎಂದೂ ಹೇಳಲಾಗಿದೆ.

ಅದೇ ರೀತಿ, 2013ರ ಚುನಾವಣೆಯಲ್ಲಿ ಸೋಲು ಕಂಡ ಕೊರಟಗೆರೆ ಕ್ಷೇತ್ರದ ಜೊತೆಗೆ ‘ಅತ್ಯಂತ ಸುರಕ್ಷಿತ’ ಕ್ಷೇತ್ರವೊಂದರಿಂದಲೂ ಅಖಾಡಕ್ಕಿಳಿಯಲು ಪರಮೇಶ್ವರ ಚಿಂತನೆ ನಡೆಸಿದ್ದಾರೆ. ಬೆಂಗಳೂರಿನ ಪುಲಿಕೇಶಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಸುಲಭ ಗೆಲುವು ದಕ್ಕಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಪರಮೇಶ್ವರ ಇದ್ದಾರೆ ಎಂದೂ ಅವರ ಆಪ್ತ ಮೂಲಗಳು ತಿಳಿಸಿವೆ.

ಒಮ್ಮೆಗೇ ಎರಡು ಕ್ಷೇತ್ರಗಳಿಂದ ಈ ಹಿಂದೆ ಸ್ಪರ್ಧಿಸಿದ್ದ ರಾಜ್ಯದ ಮೊದಲ ರಾಜಕಾರಣಿ ಜೆಡಿಎಸ್‌ ವರಿಷ್ಠ ದೇವೇಗೌಡ. 1985ರಲ್ಲಿ ಹೊಳೇ
ನರಸೀಪುರ ಮತ್ತು ಕನಕಪುರ ಕ್ಷೇತ್ರದಿಂದ ಅವರು ಕಣಕ್ಕಿಳಿದಿದ್ದರು. ವಿಶೇಷವೆಂದರೆ, ಹೊಳೇನರಸೀಪುರದಲ್ಲಿ ದೇವೇಗೌಡ ವಿರುದ್ಧ ಅವರ ಸ್ನೇಹಿತ, ಬಂಡುಕೋರ ಅಭ್ಯರ್ಥಿ ಜಿ. ಪುಟ್ಟಸ್ವಾಮಿಗೌಡ ಸ್ಪರ್ಧಿಯಾಗಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ದೇವೇಗೌಡ ಗೆಲುವು ಕಂಡಿದ್ದರು.

1989ರ ಚುನಾವಣೆಯಲ್ಲೂ ಈ ಎರಡೂ ಕ್ಷೇತ್ರಗಳಿಂದ ದೇವೇಗೌಡ ಕಣಕ್ಕಿಳಿದಿದ್ದರು. ಆದರೆ, ಎರಡೂ ಕ್ಷೇತ್ರಗಳು ಅವರಿಗೆ ಕೈ ಕೊಟ್ಟಿದ್ದವು. ಹೊಳೇನರಸೀಪುರದಲ್ಲಿ ಜಿ. ಪುಟ್ಟಸ್ವಾಮಿಗೌಡ ಆಯ್ಕೆಯಾದರೆ, ಕನಕಪುರ ಕ್ಷೇತ್ರದಿಂದ ಪಿ.ಜಿ.ಆರ್‌. ಸಿಂಧ್ಯ ಚುನಾಯಿತರಾಗಿದ್ದರು.

2004ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಹಾಸನ ಮತ್ತು ಕನಕಪುರ ಕ್ಷೇತ್ರಗಳಿಂದ ದೇವೇಗೌಡ ಸ್ಪರ್ಧಿಸಿದ್ದರು. ಹಾಸನ ಮತದಾರರು ಗೌಡರಿಗೆ ಜೈ ಅಂದಿದ್ದರು. ಆದರೆ, ಕನಕಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತೇಜಸ್ವಿನಿ ಗೌಡ ಪರ ನಿಂತ ಮತದಾರರು, ಗೌಡರಿಗೆ ಕೈ ಕೊಟ್ಟಿದ್ದರು.

2004ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಮತ್ತು ಸೊರಬ ಕ್ಷೇತ್ರಗಳಲ್ಲಿ ಎಸ್‌. ಬಂಗಾರಪ್ಪ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಶಿಕಾರಿಪುರ
ದಲ್ಲಿ ಯಡಿಯೂರಪ್ಪ ವಿರುದ್ಧ ಸೋಲು ಕಂಡಿದ್ದ ಅವರು, ಸೊರಬದಿಂದ ಆಯ್ಕೆಯಾಗಿದ್ದರು.

1999ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಬರೇಲಿ ಕ್ಷೇತ್ರಗಳಿಂದ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದರೂ ರಾಯಬರೇಲಿ ಉಳಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT