ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ಹಂಚಿಕೆ ಸಿಜೆಐ ಅಧಿಕಾರ

Last Updated 11 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯು (ಸಿಜೆಐ) ‘ಸಮಾನರಲ್ಲಿ ಮೊದಲಿಗ’. ಹಾಗಾಗಿ ವಿಚಾರಣೆಗೆ ಪ್ರಕರಣಗಳ ಹಂಚಿಕೆ ಮತ್ತು ಪೀಠಗಳ ರಚನೆಯ ಸಾಂವಿಧಾನಿಕ ಅಧಿಕಾರವನ್ನು ಅವರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ವಿವೇಚನೆಯಿಂದ ಮತ್ತು ಪಾರದರ್ಶಕವಾಗಿ ಪ್ರಕರಣಗಳ ಹಂಚಿಕೆಯಾಗಬೇಕು ಮತ್ತು ನ್ಯಾಯಪೀಠಗಳ ರಚನೆಯಾಗಬೇಕು. ಅದಕ್ಕಾಗಿ ಮಾರ್ಗದರ್ಶಿಸೂತ್ರಗಳನ್ನು ರೂಪಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ವಜಾ ಮಾಡಿತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂಬುದು ಉನ್ನತ ಸಾಂವಿಧಾನಿಕ ಹುದ್ದೆ. ಮುಖ್ಯ ನ್ಯಾಯಮೂರ್ತಿಯು ಸಂವಿಧಾನದ ಪ್ರಕಾರ ನಿರ್ವಹಿಸುವ ಜವಾಬ್ದಾರಿಗಳ ಬಗ್ಗೆ ಅಪನಂಬಿಕೆ ಇರಬಾರದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಈ ತೀರ್ಪು ಬರೆದಿದ್ದಾರೆ.

‘ಪ್ರಕರಣಗಳ ಹಂಚಿಕೆಯಲ್ಲಿ ನೇಮಕಾತಿಯ ಆಧಾರದ ಹಿರಿತನಕ್ಕೆ ಮಾನ್ಯತೆ ಇಲ್ಲ. ಪ್ರಕರಣಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳಿಗೂ ಸಮಾನ ಅವಕಾಶ ಇದೆ. ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಸ್ವತಂತ್ರ ಸಂಸ್ಥೆಯಾಗಿ ಸುಪ್ರೀಂ ಕೋರ್ಟ್‌ನ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮುಖ್ಯ ನ್ಯಾಯಮೂರ್ತಿಗೆ ಹಲವು ಹೊಣೆಗಾರಿಕೆಗಳನ್ನುವಹಿಸಲಾಗಿದೆ’ ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್‌, ರಂಜನ್‌ ಗೊಗೊಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ಜನವರಿ 12ರಂದು ಮಾಧ್ಯಮಗೋಷ್ಠಿ ನಡೆಸಿ ಪ್ರಕರಣಗಳ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್‌ ಪಾಂಡೆ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮುಖ್ಯ ನ್ಯಾಯಮೂರ್ತಿಗೆ ಪ್ರಕರಣ ಹಂಚಿಕೆಯ ಹೊಣೆ ಇದೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಇತರರೂ ಭಾಗಿಯಾಗಬೇಕು’ ಎಂದು ನ್ಯಾಯಮೂರ್ತಿ ಚೆಲಮೇಶ್ವರ್‌ ಅವರು ಕಳೆದ ವಾರ ಹೇಳಿದ್ದರು.

‘ಪ್ರಕರಣಗಳ ಹಂಚಿಕೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಕೋರಿ ವಕೀಲ ಶಾಂತಿಭೂಷಣ್‌ ಅವರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಗಳನ್ನು ಹಂಚಿಕೆ ಮಾಡುವವರಿಗೆ ಕಡಿವಾಣ ಇಲ್ಲದ ವಿವೇಚನಾಧಿಕಾರ ಇರಬಾರದು. ಮುಖ್ಯ ನ್ಯಾಯಮೂರ್ತಿಯು ಸ್ವೇಚ್ಛೆಯಿಂದ ಪೀಠಗಳನ್ನು ರಚಿಸಬಾರದು’ ಎಂದು ಅವರು ಪ್ರತಿಪಾದಿಸಿದ್ದರು.

ಬೇಡಿಕೆ ಏನಿತ್ತು

ನ್ಯಾಯಪೀಠ ರಚನೆ ಮತ್ತು ಪ್ರಕರಣಗಳ ಹಂಚಿಕೆಗೆ ಮಾರ್ಗದರ್ಶಿಸೂತ್ರ ಬೇಕು. ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ಮತ್ತು ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳಿರಬೇಕು. ಹಾಗೆಯೇ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ಅತ್ಯಂತ ಹಿರಿಯ ನಾಲ್ವರು ನ್ಯಾಯಮೂರ್ತಿಗಳು ಇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಪೀಠದ ತೀರ್ಪು

ಪ್ರಕರಣಗಳ ಹಂಚಿಕೆ ಮತ್ತು ನ್ಯಾಯಪೀಠಗಳ ರಚನೆಯು ಮುಖ್ಯ ನ್ಯಾಯಮೂರ್ತಿಯ ವಿಶೇಷ ಕರ್ತವ್ಯ ಮತ್ತು ಅಧಿಕಾರ. ಈ ಅರ್ಜಿಯು ಈ ಅಧಿಕಾರದಲ್ಲಿ ಮಾಡಿದ ಹಸ್ತಕ್ಷೇಪ. ಅರ್ಜಿಯು ತಪ್ಪುಗ್ರಹಿಕೆಯಿಂದ ಕೂಡಿದೆ. 2013ರಲ್ಲಿ ರೂಪಿಸಲಾದ ಸುಪ್ರೀಂ ಕೋರ್ಟ್‌ ನಿಯಮಗಳು ರಾಷ್ಟ್ರಪತಿಯ ಅನುಮೋದನೆಯೊಂದಿಗೆ ಜಾರಿಗೆ ಬಂದಿದೆ. ಪ್ರಕರಣ ಹಂಚಿಕೆ ಮತ್ತು ಪೀಠ ರಚನೆ ಮುಖ್ಯ ನ್ಯಾಯಮೂರ್ತಿಯ ವಿಶೇಷ ಅಧಿಕಾರ ಎಂದು ಈ ನಿಯಮದಲ್ಲಿ ಸ್ಪಷ್ಟವಾಗಿ ಇದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT