ಶುಕ್ರವಾರ, ಡಿಸೆಂಬರ್ 6, 2019
24 °C
ಆಘಾತ ವ್ಯಕ್ತಪಡಿಸಿದ ಅಲಹಾಬಾದ್ ಹೈಕೋರ್ಟ್

ಉನ್ನಾವ್ ಪ್ರಕರಣ ತೀರಾ ಅನುಮಾನಾಸ್ಪದ

ಪಿಟಿಐ Updated:

ಅಕ್ಷರ ಗಾತ್ರ : | |

ಉನ್ನಾವ್ ಪ್ರಕರಣ ತೀರಾ ಅನುಮಾನಾಸ್ಪದ

ಅಲಹಾಬಾದ್ (ಉತ್ತರ ಪ್ರದೇಶ): ‘ಉನ್ನಾವ್ ಅತ್ಯಾಚಾರ ಪ್ರಕರಣ ತೀರಾ ಅನುಮಾನಾಸ್ಪದವಾಗಿದೆ. ಇದರಲ್ಲಿ ಸಂತ್ರಸ್ತೆಯ ತಂದೆಯ ಶವ ಪ್ರಮುಖ ಸಾಕ್ಷ್ಯವಾಗಿರುವ ಸಾಧ್ಯತೆ ಇದೆ. ಹೀಗಾಗಿ ಅದರ ಅಂತಿಮ ಸಂಸ್ಕಾರ ಮಾಡಿರದೇ ಇದ್ದರೆ, ಈಗ ಮಾಡಬೇಡಿ’ ಎಂದು ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.

ಸಂತ್ರಸ್ತೆಯ ತಂದೆಯ ಶವಸಂಸ್ಕಾರವನ್ನು ಅವರ ಕುಟುಂಬದವರು ಮಂಗಳವಾರವೇ ನಡೆಸಿದ್ದಾರೆ. ಆದರೆ ಶವವನ್ನು ಹೂಳಲಾಗಿದೆಯೇ ಅಥವಾ ಸುಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 

‘ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್, ನನ್ನನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಈ ಬಗ್ಗೆ ಆರೋಪಿಗಳ ವಿರುದ್ಧ ದೂರು ನೀಡಿದ ಕಾರಣಕ್ಕೆ ನನ್ನ ತಂದೆಯನ್ನು ಪೊಲೀಸರು ಬಂಧಿಸಿ, ಚಿತ್ರಹಿಂಸೆ ನೀಡಿ ಕೊಂದಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಗೋಪಾಲ್ ಸ್ವರೂಪ್ ಚತುರ್ವೇದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಬಿ.ಬೋಸ್ಲೆ ಮತ್ತು ನ್ಯಾಯಮೂರ್ತಿ ಸುನೀತ್ ಕುಮಾರ್ ಅವರಿದ್ದ ಪೀಠವು ಈ ಸೂಚನೆ ನೀಡಿದೆ.

ಪೀಠವು ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರ ನಡೆಸಲಿದೆ. ‘ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಪೀಠ ಸೂಚಸಿದೆ.

‘ಸುಪ್ರೀಂ’ನಲ್ಲಿ ಮುಂದಿನ ವಾರ ವಿಚಾರಣೆ (ನವದೆಹಲಿ ವರದಿ): ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.

ಮಂಪರು ‍ಪರೀಕ್ಷೆಗೆ ಆಗ್ರಹ: ‘ನನ್ನ ಪತಿ ಅತ್ಯಾಚಾರಿ ಅಲ್ಲ. ಆತ್ಯಾಚಾರ ಆರೋಪ ಮಾಡುತ್ತಿರುವ ಬಾಲಕಿಯ ಬಗ್ಗೆ ನನಗೆ ಕನಿಕರವಿದೆ. ಆದರೆ ಆಕೆಯ ಆರೋಪದ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ನನ್ನ ಪತಿ ಮತ್ತು ಬಾಲಕಿ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಗೊತ್ತಾಗುತ್ತದೆ’ ಎಂದು ಆರೋಪಿ ಶಾಸಕನ ಪತ್ನಿ ಸಂಗೀತಾ ಸೆಂಗರ್ ಆರೋಪಿಸಿದ್ದಾರೆ.

ಲಖನೌನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ನನ್ನ ಪತಿ ನಿರ್ದೋಷಿ. ಅವರನ್ನು ಅತ್ಯಾಚಾರಿ ಎಂದು ಕರೆಯಬೇಡಿ. ಆರೋಪ ಸಾಬೀತಾಗದಿದ್ದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಏಕೆ ನೀಡಬೇಕು’ ಎಂದು ಸಂಗೀತಾ ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಅವರು ಗೋಳಾಡಿದ್ದಾರೆ. ಆ ವೇಳೆ ಅಸ್ವಸ್ಥರಾದ ಅವರನ್ನು ಸಂಗಡಿಗರು ಸಂತೈಸಿದ್ದಾರೆ.

ನೀರನ್ನೂ ಕೊಡಲಿಲ್ಲ: ‘ವಿಚಾರಣೆಗೆಂದು ಪೊಲೀಸರು ನಮ್ಮನ್ನು ಹೋಟೆಲ್‌ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಆ ವೇಳೆ ನಮಗೆ ನೀರು ಮತ್ತು ಊಟವನ್ನೂ ಕೊಡಲಿಲ್ಲ’ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

ವಿಡಿಯೊ ವೈರಲ್: ಸಂತ್ರಸ್ತೆಯ ತಂದೆ ಮೃತಪಡುವ ಮುನ್ನ ನೀಡಿದ ಹೇಳಿಕೆ ಇರುವ ವಿಡಿಯೊ ವೈರಲ್ ಆಗಿದೆ. ಶಾಸಕನ ಸಹೋದರ ಮತ್ತು ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದ್ದಾರೆ. ಅವರ ಮುಖ, ಬೆನ್ನು, ಕುತ್ತಿಗೆ, ಹೊಟ್ಟೆ, ತೊಡೆ, ಮಂಡಿ ಮತ್ತು ಮೊಣಕಾಲಿನ ಮೇಲೆ ಆಗಿರುವ ಗಾಯಗಳನ್ನೂ ವಿಡಿಯೊದಲ್ಲಿ ತೋರಿಸಲಾಗಿದೆ.

ಸಂತ್ರಸ್ತೆಯ ಸುತ್ತುವರಿದ ಬೆಂಬಲಿಗರು

ಸಂತ್ರಸ್ತೆಯ ಕುಟುಂಬ, ಕುಟುಂಬಕ್ಕೆ ರಕ್ಷಣೆ ನೀಡುತ್ತಿದ್ದ ಪೊಲೀಸರು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯರನ್ನು ಆರೋಪಿ ಶಾಸಕನ ಬೆಂಬಲಿಗರು ಸುತ್ತುವರಿದು ಘೋಷಣೆ ಕೂಗಿದ್ದಾರೆ.

ಲಖನೌನಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಆಕೆಯ ಕುಟುಂಬದವರನ್ನು ಅವರ ಗ್ರಾಮಕ್ಕೆ ಬಿಡಲು ಬಂದಿದ್ದಾಗ ಘಟನೆ ನಡೆದಿದೆ. ‘ಶಾಸಕರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಲುವಾಗಿ ಅತ್ಯಾಚಾರ ಆರೋಪ ಮಾಡಲಾಗುತ್ತಿದೆ’ ಎಂದು ಶಾಸಕನ ಬೆಂಬಲಿಗರು ಆರೋಪಿಸಿದ್ದಾರೆ.

* ಬೇಟಿ ಬಚಾವೋ–ಬೇಟಿ ಪಢಾವೊ ಎಂಬ ಅಭಿಯಾನದ ಹೆಸರನ್ನು ‘ಬಿಜೆಪಿಯಿಂದ ಬೇಟಿ ಬಚಾವೊ’ ಎಂದು ಬದಲಿಸಬೇಕಿದೆ

–ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

===

ಉನ್ನತ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ

ಸಂತ್ರಸ್ತೆಯ ತಂದೆಯ ಶವಸಂಸ್ಕಾರ ನಡೆಸದಂತೆ ಸೂಚನೆ

ಆದರೆ ಕುಟುಂಬದವರು ಮಂಗಳವಾರವೇ ಶವಸಂಸ್ಕಾರ ನಡೆಸಿದ್ದಾರೆ

ಪ್ರತಿಕ್ರಿಯಿಸಿ (+)