ಭಾನುವಾರ, ಡಿಸೆಂಬರ್ 15, 2019
19 °C

ಚೀನಾದ ಧೋರಣೆಗೆ ಅಮೆರಿಕ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

ಚೀನಾದ ಧೋರಣೆಗೆ ಅಮೆರಿಕ ಸ್ವಾಗತ

ವಾಷಿಂಗ್ಟನ್‌: ತನ್ನ ಆರ್ಥಿಕತೆಯನ್ನು ಇನ್ನಷ್ಟು ಮುಕ್ತಗೊಳಿಸುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ವಾಗ್ದಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ವಾಗತಿಸಿದ್ದಾರೆ.

ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಭಾರಿ ಮೊತ್ತದ ಸುಂಕ ವಿಧಿಸುವುದನ್ನು ರದ್ದುಪಡಿಸುವ ಸಾಧ್ಯತೆಯನ್ನು ಅಮೆರಿಕವು ತಳ್ಳಿ ಹಾಕಿದೆ. ವಾಣಿಜ್ಯ ಸಮರ ತಗ್ಗಿಸುವ ನಿಟ್ಟಿನಲ್ಲಿ ಚೀನಾ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದೆ.

ವಾಹನ ಆಮದು ಸುಂಕ ತಗ್ಗಿಸುವ, ವಿದೇಶಿ ಸಂಸ್ಥೆಗಳ  ಬೌದ್ಧಿಕ ಆಸ್ತಿ ರಕ್ಷಿಸುವ ಮತ್ತು ಆರ್ಥಿಕತೆಯನ್ನು ಇನ್ನಷ್ಟು ಮುಕ್ತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಹೇಳಿದ್ದರು.

‘ಅಮೆರಿಕ ಜತೆಗಿನ ವಿದೇಶ ವ್ಯಾಪಾರದಲ್ಲಿ ಮೇಲುಗೈ ಸಾಧಿಸುವುದು ಚೀನಾದ ಉದ್ದೇಶವಾಗಿಲ್ಲ. ಆಮದು ಪ್ರಮಾಣ ಹೆಚ್ಚಿಸಲು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತವಾಗಲಿದೆ. ಚಾಲ್ತಿ ಖಾತೆಯಲ್ಲಿ ಪಾವತಿ ಸಮತೋಲನ ಕಾಯ್ದುಕೊಳ್ಳಲಿದೆ’ ಎಂದು ಹೇಳಿದ್ದರು.

‘ಆಮದು ಸುಂಕ ಮತ್ತು ವಾಹನ ಆಮದು ನಿರ್ಬಂಧಗಳ ಕುರಿತು ಸ್ಪಷ್ಟನೆ ನೀಡಿರುವ ಜಿನ್‌ಪಿಂಗ್‌ ತಳೆದಿರುವ ನಿಲುವಿಗೆ ನಾವು ಕೃತಜ್ಞರಾಗಿದ್ದೇವೆ. ಬೌದ್ಧಿಕ ಆಸ್ತಿ ಹಕ್ಕು ಮತ್ತು ತಂತ್ರಜ್ಞಾನ ವರ್ಗಾವಣೆ ಸಂಬಂಧ ಅವರ ಬದಲಾದ ಧೋರಣೆಯನ್ನು ಸ್ವಾಗತಿಸಲಾಗುವುದು. ಎರಡೂ ದೇಶಗಳು ಜತೆಯಾದರೆ ಗಮನಾರ್ಹ ಪ್ರಗತಿ ಸಾಧಿಸಲಿದ್ದೇವೆ’ ಎಂದು ಟ್ರಂಪ್‌ ಟ್ವೀಟ್‌

ಮಾಡಿದ್ದಾರೆ.

‘ಜಿನ್‌ಪಿಂಗ್‌ ಅವರ ಹೇಳಿಕೆ ಉತ್ತೇಜನಕಾರಿಯಾಗಿದೆ. ಚೀನಾದಿಂದ ನಾವು ರಚನಾತ್ಮಕ ಕ್ರಮ ನಿರೀಕ್ಷಿಸುತ್ತೇವೆ’ ಎಂದು ಹೇಳಿರುವ ಟ್ರಂಪ್‌, ಅಮೆರಿಕದ ಜತೆಗಿನ ವ್ಯಾಪಾರ ಕೊರತೆ ತಗ್ಗಿಸಲು ಚೀನಾ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದ್ದಾರೆ.

ಎರಡೂ ದೇಶಗಳು ಪರಸ್ಪರ ಆಮದು ನಿರ್ಬಂಧಿಸಲು ಭಾರಿ ಮೊತ್ತದ ಸುಂಕ ವಿಧಿಸಲು ಮುಂದಾಗಿದ್ದವು. ಇದರಿಂದ ಆರ್ಥಿಕವಾಗಿ ಬಲಿಷ್ಠವಾಗಿರುವ ವಿಶ್ವದ ಎರಡು ಮುಂಚೂಣಿ ದೇಶಗಳ ಮಧ್ಯೆ ವಾಣಿಜ್ಯ ಸಮರ ನಡೆಯುವ ಸಾಧ್ಯತೆ ಎದುರಾಗಿತ್ತು. ಇದು ಜಾಗತಿಕ ಹಣಕಾಸು ‍ಪೇಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.  ಜಿನ್‌ಪಿಂಗ್‌ ಅವರ ಹೇಳಿಕೆಯಿಂದ ಈಗ ಪರಿಸ್ಥಿತಿ ತಿಳಿಯಾಗುತ್ತಿದೆ.

ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಹೆಚ್ಚುವರಿಯಾಗಿ ₹ 6.50 ಲಕ್ಷ ಕೋಟಿ ಮೊತ್ತದ ಸುಂಕ ವಿಧಿಸುವುದಾಗಿ ಟ್ರಂಪ್‌ ಬೆದರಿಕೆ ಒಡ್ಡಿದ್ದರು. ಅಮೆರಿಕದ ಈ ಹೊಸ ವ್ಯಾಪಾರ ನಿರ್ಬಂಧ ಪ್ರಸ್ತಾವದ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಹೋರಾಟ ನಡೆಸುವುದಾಗಿ ಚೀನಾ ಎಚ್ಚರಿಸಿತ್ತು.

* ಆರ್ಥಿಕತೆಯನ್ನು ಮುಕ್ತಗೊಳಿಸುವ ಬಾಗಿಲನ್ನು ಮುಚ್ಚುವುದಿಲ್ಲ. ವಿದೇಶಿ ಸರಕುಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುವುದು. 

–ಕ್ಸಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ

ಪ್ರತಿಕ್ರಿಯಿಸಿ (+)