ಮನೆ ಮಾರಾಟ ಹೆಚ್ಚಳ

7

ಮನೆ ಮಾರಾಟ ಹೆಚ್ಚಳ

Published:
Updated:

ನವದೆಹಲಿ: 2017–18ನೇ ಆರ್ಥಿಕ ವರ್ಷದ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ  ದೇಶದ ‍ಪ್ರಮುಖ ನಗರಗಳಲ್ಲಿ ಒಟ್ಟು 49,200 ಮನೆಗಳು ಮಾರಾಟವಾಗಿವೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 43,800 ಮನೆಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇ 12 ರಷ್ಟು ಏರಿಕೆ ಕಂಡು ಬಂದಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಆ್ಯನರೋಕ್‌ ತಿಳಿಸಿದೆ.

ದೆಹಲಿ–ಎನ್‌ಸಿಆರ್‌, ಮುಂಬೈ ಮಹಾನಗರ ಪ್ರದೇಶ (ಎಂಎಂಆರ್‌), ಕೋಲ್ಕತ್ತ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಪ್ರದೇಶಗಳಲ್ಲಿನ ಮನೆ ಮಾರಾಟದ ಮಾಹಿತಿಯನ್ನು ನೀಡಿದೆ.

ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ಜಾರಿಗೆ ಬಂದ ಬಳಿಕ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಿದೆ.

ಮಾರಾಟವಾಗದೇ ಇರುವ ಮನೆಗಳ ಸಂಖ್ಯೆ ಶೇ 2 ರಷ್ಟು ಇಳಿಕೆಯಾಗಿದ್ದು, 7.27 ಲಕ್ಷದಿಂದ 7.11ಕ್ಕೆ ತಗ್ಗಿದೆ.

‘ನೀತಿಯಲ್ಲಿ ನಿರಂತರವಾಗಿ ಸುಧಾರಣೆ ಮತ್ತು ಸಾಂಸ್ಥಿಕ ಬದಲಾವಣೆಗಳನ್ನು ತರುತ್ತಿರುವುದರಿಂದ ದೇಶದ ರಿಯಲ್ ಎಸ್ಟೇಟ್ ಉದ್ಯಮದ ಚಿತ್ರಣವೇ ಬದಲಾಗಿದೆ. ಈ ಎಲ್ಲಾ ಕ್ರಮಗಳು ಉದ್ಯಮಕ್ಕೆ ವರವಾಗಲಿವೆ ಎನ್ನುವುದು ನಿಶ್ಚಿತ. ಹಾಗೆಂದ ಮಾತ್ರಕ್ಕೆ ಸಂಕಷ್ಟದಿಂದ ಹೊರಬಂದಿದೆ ಎಂದಲ್ಲ. ಆದರೆ ಚೇತರಿಕೆಯ ಸುಳಿವು ಕಾಣುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

‘ಮಾರುಕಟ್ಟೆಯು ಬಳಕೆದಾರರ ಸ್ನೇಹಿಯಾಗಿ ಪರಿವರ್ತನೆಯಾಗುತ್ತಿದೆ. ಬೇಡಿಕೆ ಮತ್ತು ಪೂರೈಕೆ ಮಧ್ಯೆ ಯಾವುದೇ ಅಸಮತೋಲನ’ ಇಲ್ಲ ಎಂದು ತಿಳಿಸಿದ್ದಾರೆ.

ಒಟ್ಟು ಮಾರಾಟದಲ್ಲಿ ದೆಹಲಿ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಮುಂಬೈ ಮಹಾನಗರ ಪ್ರದೇಶ (ಎಂಎಂಆರ್‌), ಬೆಂಗಳೂರು ಮತ್ತು ಪುಣೆ ಶೇ 80 ರಷ್ಟು ಪಾಲು ಹೊಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry