ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರೀಕ್ಷಿತವಾಗಿ ಬಿದ್ದ ವಿಜಯಮಾಲೆ!

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

1956ರ ನವೆಂಬರ್‌ 1ರಂದು ನವ ಮೈಸೂರು ರಾಜ್ಯ ಉದಯವಾದ ನಂತರ, ಹೊಸ ರಾಜ್ಯಕ್ಕೆ ಯಾರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಮುಂಬೈಯ ದೊಡ್ಡ ಹೋಟೆಲ್‌ ಒಂದರಲ್ಲಿ ಸಭೆ ಸೇರಿ ಜಿಜ್ಞಾಸೆ ನಡೆದು, ಎಸ್. ನಿಜಲಿಂಗಪ್ಪನವರ ಹೆಸರನ್ನು ಸಭೆಯಲ್ಲಿ ಸರ್ವಾನುಮತದಿಂದ ಸೂಚಿಸಲಾಯಿತು. ಆನಂತರ ಬೆಂಗಳೂರಿಗೆ ಬಂದು ಹೈದರಾಬಾದ್‌- ಕರ್ನಾಟಕದ ಪ್ರಮುಖ ವಿಧಾನಸಭಾ ಸದಸ್ಯರನ್ನು ಕಂಡು ಮಾತನಾಡಲಾಯಿತು. ಅಣ್ಣಾರಾವ್‌ ಗಣಮುಖಿಯವರು ಆಗ ಹೈದರಾಬಾದ್‌ ಸಂಸ್ಥಾನದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ದೀರ್ಘ ಚರ್ಚೆಯ ನಂತರ ನಿಜಲಿಂಗಪ್ಪನವರನ್ನು ತಮ್ಮ ನಾಯಕರಾಗಿ ಸ್ವೀಕರಿಸಲು ಎಲ್ಲರೂ ಒಪ್ಪಿದರು. ಬಿ.ಡಿ. ಜತ್ತಿಯವರು ಶ್ರೀ ಅಣ್ಣಾರಾವ್‌ ಗಣಮುಖಿಯವರೊಂದಿಗೆ ಕೂಡಿ ನಿಜಲಿಂಗಪ್ಪನವರನ್ನು ಕಂಡು ಮಾತನಾಡಿದರು. ನಿಜಲಿಂಗಪ್ಪನವರು ಹರ್ಷಿತರಾಗಿ, ಮುಂದೆ ರಚಿಸಲಿರುವ ಮಂತ್ರಿ ಮಂಡಲದಲ್ಲಿ ಅಣ್ಣಾರಾವ್‌ ಗಣಮುಖಿಯವರನ್ನು ಸೇರಿಸಿಕೊಳ್ಳುವುದಾಗಿ ಮಾತು ಕೊಟ್ಟರು. ದಿಲ್ಲಿಗೆ ಹೋದ ನಿಜಲಿಂಗಪ್ಪನವರು ಹೈಕಮಾಂಡಿನ ಒಪ್ಪಿಗೆ ಪಡೆದು ಮಂತ್ರಿಗಳ ಹೆಸರನ್ನು ಬಹಿರಂಗಪಡಿಸುವಾಗ ಜತ್ತಿಯವರ ಹಾಗೂ ಅಣ್ಣಾರಾವ್‌ ಗಣಮುಖಿಯವರ ಹೆಸರನ್ನು ಕೈಬಿಟ್ಟಿದ್ದರು.

ನಿಜಲಿಂಗಪ್ಪನವರನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್‌ ಪಕ್ಷದಲ್ಲಿ ಒಡಕು ತಲೆದೋರಿತು. ಕೆಂಗಲ್‌ ಹನುಮಂತಯ್ಯನವರ ಗುಂಪು ಬೇರೆ ಬೇರೆ ಸ್ಥಳಗಳಲ್ಲಿ ಸಭೆ ಸೇರಿ ಭಿನ್ನಮತೀಯರ ಗುಂಪನ್ನು ಬೆಳೆಸಲು ಪ್ರಯತ್ನಿಸಿತು. ಹನುಮಂತಯ್ಯ ಹಾಗೂ ಸಾಹುಕಾರ್‌ ಟಿ. ಚೆನ್ನಯ್ಯನವರಿಗೆ ಪಕ್ಷದ ನಾಯಕರಾಗಬೇಕೆಂಬ ಅಂತರಂಗದ ಆಸೆಯಿದ್ದಿತು. ದೆಹಲಿಯಿಂದ ಬಂದ ಹೈಕಮಾಂಡಿನ ಪ್ರತಿನಿಧಿಗಳಿಗೆ ಈ ಇಬ್ಬರಲ್ಲಿ ಯಾರಾದರೊಬ್ಬರ ಹೆಸರನ್ನು ತಿಳಿಸಬೇಕೆಂದು ಒತ್ತಡ ತಂದರು. ಇದರಿಂದ ಪಕ್ಷದ ಒಗ್ಗಟ್ಟಿಗೆ ಬಾಧೆ ಬರುತ್ತದೆಂದು ಜತ್ತಿಯವರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು. ಹೈಕಮಾಂಡಿನ ಪರವಾಗಿ ಬಂದಿದ್ದ ಎಐಸಿಸಿ ಕಾರ್ಯದರ್ಶಿ ಶ್ರೀಮನ್ನಾರಾಯಣ ಅವರು ಕಾಂಗ್ರೆಸ್‌ ಪಕ್ಷದ ಸದಸ್ಯರನ್ನು ಪ್ರತ್ಯೇಕವಾಗಿ ಕರೆಯಿಸಿ ಅವರ ಅಭಿಮತ ತಿಳಿದುಕೊಂಡರು. ನಿಜಲಿಂಗಪ್ಪನವರಿಗೆ ಬಹುಮತವಿಲ್ಲವೆಂಬುದನ್ನು ಕಂಡುಕೊಂಡ ಅವರು ನಿಜಲಿಂಗಪ್ಪನವರ ರಾಜೀನಾಮೆಯನ್ನು ಗತ್ಯಂತರವಿಲ್ಲದೆ ಸ್ವೀಕರಿಸಿದರು. ನಾಯಕನನ್ನು ಚುನಾಯಿಸಲು ಹೊರಟಾಗ ಅನಿರೀಕ್ಷಿತವಾಗಿ ಜಯಮಾಲೆ ಜತ್ತಿಯವರ ಕೊರಳಿಗೆ ಬಿದ್ದಿತು.

ಜತ್ತಿಯವರು ಮುಖ್ಯಮಂತ್ರಿಯಾಗಿದ್ದಾಗ ಮಹಾರಾಷ್ಟ್ರ ಗಡಿವಿವಾದ ಚರ್ಚೆಗೆ ಬಂದಿತು. ಮೈಸೂರಿನ ಕೆಲ ಭಾಗವನ್ನು ಮಹಾರಾಷ್ಟ್ರಕ್ಕೆ ಕೊಟ್ಟು ಮೈಸೂರು ತನ್ನ ಸಹಕಾರವನ್ನು ತೋರಬೇಕು ಎಂದು ಕೇಂದ್ರ ಸರ್ಕಾರದ ಉನ್ನತ ವಲಯದಿಂದ ಒತ್ತಡ ಬಂದಿತು. ಕೇಂದ್ರದ ನಾಯಕರ ಸೂಚನೆಗೆ ಜತ್ತಿಯವರು ಉತ್ತರಿಸುತ್ತಾ, ತಮ್ಮ ಮಂತ್ರಿಮಂಡಲದ ಅಭಿಪ್ರಾಯ ಪ್ರತಿಕೂಲಕರವಾಗಿರುವುದೆಂದೂ, ಅವರ ಮನವೊಲಿಸಲು ತಮ್ಮಂಥ ಕಿರಿಯರಿಂದ ಸಾಧ್ಯವಾಗದೆಂದೂ, ತಾವು ಈ ಸಂದರ್ಭದಲ್ಲಿ ಅಸಹಾಯಕರಾಗಿರುವರೆಂದೂ, ಮೇಲಿನವರ ಒತ್ತಾಯ ಬಂದದ್ದೇ ಆದರೆ ತಾವು ಮುಖ್ಯಮಂತ್ರಿ ಪದವಿಯಿಂದ ಕೆಳಕ್ಕೆ ಇಳಿದು, ನಾಯಕರಿಗೆ ಮಾರ್ಗ ಸುಲಭ ಮಾಡಿಕೊಡಲು ಸಿದ್ಧವಿರುವುದಾಗಿಯೂ ಉತ್ತರ ಬರೆದರು. ಸೌಮ್ಯವಾದ, ಆದರೆ ಗಟ್ಟಿ ನಿರ್ಧಾರದಿಂದಾಗಿ ಕೇಂದ್ರದ ನಾಯಕರೇ ಮೆತ್ತಗಾದರು.

ಜತ್ತಿಯವರು ಮುಖ್ಯಮಂತ್ರಿಯಾಗಿ ನಿರಾಳರಾಗಿದ್ದರೆಂದರೆ ತಪ್ಪಾಗುತ್ತದೆ. ಅವರಂತಹ ಅ‍ಪ್ಪಟ ಪ್ರಾಮಾಣಿಕರೂ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಯಿತು. ಒಮ್ಮೆ ವಿರುದ್ಧ ಬಣದವರು ಕೆಪಿಸಿಸಿ ಕಾರ್ಯಕಾರಿ ಮಂಡಲದಲ್ಲಿ 29 ಆಪಾದನೆಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಧಾನಿಯವರಿಗೆ ಕಳುಹಿಸಿದರು. ಅದು ಪತ್ರಿಕೆಗಳಿಗೂ ಬಿಡುಗಡೆಯಾಯಿತು. ಈ ಅಗ್ನಿಪರೀಕ್ಷೆಯಲ್ಲಿ ಕಳಂಕರಹಿತರಾಗಿ ಹೊರ ಬರಲು ಪ್ರಜಾಸತ್ತಾತ್ಮಕ ಕ್ರಮವೊಂದೇ ಮಾರ್ಗವೆಂದು ತೋರಿತು. ಜತ್ತಿಯವರು ಕಾಂಗ್ರೆಸ್‌ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರಿಗೆ ತುರ್ತುಸಭೆಗೆ ಹಾಜರಾಗಬೇಕೆಂದು ತಂತಿ ಕಳುಹಿಸಿದರು. ನಿಗದಿತ ದಿನಾಂಕದಂದು ಸಭೆಯಲ್ಲಿ ಒಂದೊಂದಾಗಿ ಆಪಾದನೆಗಳನ್ನು ಚರ್ಚಿಸಲಾಯಿತು. ಜತ್ತಿಯವರೇ ಸ್ವತಃ ಫೈಲ್‌ಗಳನ್ನು ಓದಿಕೊಂಡು ಸಂಬಂಧಿಸಿದ ಮಂತ್ರಿ/ಉಪಮಂತ್ರಿಗಳ ಜೊತೆ ಚರ್ಚೆ ಮಾಡಿ ಉತ್ತರ ಕೊಟ್ಟರು. ಚರ್ಚೆ ಎರಡನೇ ದಿವಸದ ಬೆಳಗಿನ ಜಾವ ಎರಡು ಗಂಟೆಯವರೆಗೂ ನಡೆಯಿತು. ಎಲ್ಲ ಆಪಾದನೆಗಳಿಗೆ ಸಮರ್ಪಕವಾದ ಉತ್ತರ ನೀಡಲಾಯಿತು. ಇಲ್ಲಿ ನಡೆದ ಚರ್ಚೆಯ ಪ್ರೊಸೀಡಿಂಗ್ಸ್‌ ಅನ್ನು ಪ್ರಧಾನಿಯವರಿಗೂ, ಭಾರತದ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರಿಗೂ, ಕೇಂದ್ರದ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ಅವರಿಗೂ ಕಳುಹಿಸಲಾಯಿತು. ಇದಾದ ಹದಿನೈದು ದಿನಗಳ ನಂತರ ಪ್ರಧಾನಿ ನೆಹರೂ ಅವರು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದರು. ಜತ್ತಿಯವರು ಪಕ್ಷದ ಶಾಸಕರ ಸಭೆಗೆ ನೆಹರೂರವರನ್ನು ಕರೆಯಲು ಬೆಂಗಳೂರು ಅರಮನೆಯ ರಾಯಲ್‌ ಕಾಟೇಜಿಗೆ ಬಂದರು. ಆಗ ನೆಹರೂರವರು, ಜತ್ತಿಯವರ ಮೇಲೆ ಹೊರಿಸಿದ್ದ 29 ಆಪಾದನೆಗಳಲ್ಲಿ ಯಾವುದರಲ್ಲಿಯೂ ಹುರುಳಿಲ್ಲವೆಂದರು. ಇದೇ ಮಾತನ್ನು ಶಾಸಕರ ಸಭೆಯಲ್ಲೂ ಹೇಳಿದರು.

-ಡಾ. ಎಸ್‌. ವಿದ್ಯಾಶಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT