ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನಾ, ನೀನಾ ಫೈನಲ್‌ ಹಂತಕ್ಕೆ

ಮಹಿಳೆಯರ 400 ಮೀಟರ್ಸ್ ಓಟ: ಆರನೇ ಸ್ಥಾನ ಪಡೆದ ಹಿಮಾ ದಾಸ್‌
Last Updated 11 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌: ಭಾರತದ ನಯನಾ ಜೇಮ್ಸ್ ಮತ್ತು ನೀನಾ ವರ್ಕಿಲ್‌ ಮಹಿಳೆಯರ ಲಾಂಗ್ ಜಂಪ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದು ‍ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ.

ಬುಧವಾರ ನಡೆದ ಸೆಮಿಫೈನಲ್ ಸ್ಪರ್ಧೆಯಲ್ಲಿ ಇವರಿಬ್ಬರು ಕ್ರಮವಾಗಿ ಒಂಬತ್ತು ಮತ್ತು 12ನೇ ಸ್ಥಾನ ಗಳಿಸಿದರು.

‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದ ನಯನಾ 6.34 ಮೀಟರ್ಸ್ ದೂರ ಜಿಗಿದರು. ‘ಎ’ ಗುಂಪಿನಲ್ಲಿದ್ದ ನೀನಾ 6.24 ಮೀಟರ್ಸ್ ದೂರ ಜಿಗಿದರು. ಆಯಾ ಗುಂಪಿನಲ್ಲಿ ಇಬ್ಬರೂ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಗಳಿಸಿದ್ದರು.

ಕಳೆದ ತಿಂಗಳು ಭಾರತದಲ್ಲಿ ನಡೆ ದಿದ್ದ ಫೆಡರೇಷನ್ ಕಪ್‌ನಲ್ಲಿ 6.51 ಮೀಟರ್ಸ್ ದೂರ ಜಿಗಿದ ನಯನಾ ಚಿನ್ನ ಗೆದ್ದಿದ್ದರು. ಇದು ಈ ವರ್ಷದ ಶ್ರೇಷ್ಠ ಜಿಗಿತ ಆಗಿತ್ತು.

ಫೆಬ್ರುವರಿಯಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನೀನಾ 6.42 ಮೀಟರ್ಸ್ ಸಾಧನೆ ಮಾಡಿದ್ದರು.

ಸಾರಾಗೆ ಅಗ್ರಸ್ಥಾನ: ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಸಾರಾ ಪ್ರಾಕ್ಟರ್‌ 6.89 ಮೀಟರ್ ಜಿಗಿದು ಅಗ್ರ ಸ್ಥಾನ ಗಳಿಸಿದರು. ಕೆನಡಾದ ಕ್ರಿಸ್ತಬೆಲ್ ನೆಟ್ಟಿ (6.79 ಮೀ) ಎರಡನೇ ಸ್ಥಾನ ಗಳಿಸಿದರು.

ಹಿಮಾಗೆ ನಿರಾಸೆ: ಸಂಜೆ ನಡೆದ ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಭಾರತದ ಹಿಮಾ ದಾಸ್ ನಿರಾಸೆ ಮೂಡಿಸಿದರು.

ಸೆಮಿಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಅವರು ಫೈನಲ್‌ನಲ್ಲಿ ಆರನೇ ಸ್ಥಾನ ಗಳಿಸಿದರು.

(ಹಿಮಾ ದಾಸ್‌)

ಬೋಟ್ಸ್ವಾನಾದ ಅಮಂಟಲ್‌ ಮಾಂಟೊ 50.15 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಬೆಳ್ಳಿ ಮತ್ತು ಕಂಚು ಜಮೈಕಾ ಪಾಲಾಯಿತು.

ಅನಸ್ತೇಷಿಯಾ ಲಿ ರೇ ಮತ್ತು ಸ್ಟಿಫಾನಿ ಮೆಕ್‌ಪರ್ಸನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಹಿಮಾ ಅವರು 51.32 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು.

ಐವರು ಕ್ರೀಡಾಪಟುಗಳು ನಾಪತ್ತೆ

ಗೋಲ್ಡ್ ಕೋಸ್ಟ್‌ (ಎಎಫ್‌ಪಿ): ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ಯಾಮರೂನ್‌ನ ಐವರು ಕ್ರೀಡಾಪಟುಗಳು ನಾಪತ್ತೆಯಾಗಿರುವ ಬಗ್ಗೆ ಬುಧವಾರ ವರದಿಯಾಗಿದೆ.

ಮೂವರು ವೇಟ್‌ಲಿಫ್ಟರ್‌ಗಳು ಮತ್ತು ಇಬ್ಬರು ಬಾಕ್ಸರ್‌ಗಳು ಮಂಗಳವಾರದಿಂದ ಕಾಣೆಯಾಗಿದ್ದಾರೆ. ಅವರು ತವರಿಗೂ ಮರಳದೇ ಇರುವ ಕಾರಣ ಆತಂಕ ಮೂಡಿದೆ. ಈ ಕುರಿತು ಆಸ್ಟ್ರೇಲಿಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವೇಟ್‌ಲಿಫ್ಟರ್‌ಗಳಾದ ಒಲಿವಿಯರ್ ಮಟಾಮ್ ಮಟಾಮ್‌, ಅರ್ಕಾಂಜೆಲಿನ್‌ ಫೊಡೊಜಿ, ಪೆಟಿಟ್ ಮಿಂಕೊಂಬಾ, ಬಾಕ್ಸರ್‌ಗಳಾದ ಕ್ರಿಶ್ಚಿಯನ್‌ ಜೀ, ಮತ್ತು ಸಿಂಪ್ಲಿಸ್‌ ಫೊಟ್ಸಲಾ ನಾಪತ್ತೆಯಾಗಿರುವುದಾಗಿ ಕ್ಯಾಮರೂನ್‌ ಮಾಧ್ಯಮ ಪ್ರತಿನಿಧಿ ಸೈಮನ್‌ ಮೊಲೊಂಬೆ ಸುದ್ದಿಸಂಸ್ಥೆಗೆ ತಿಳಿಸಿದರು.

6.34 ಮೀಟರ್ಸ್ ದೂರ ಜಿಗಿದ ನಯನಾ

ನೀನಾ 6.24 ಮೀಟರ್ಸ್ ಸಾಧನೆ ಮಾಡಿದರು

(ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಬೋಟ್ಸ್ವಾನಾದ ಅಮಂಟಲ್‌ ಮಾಂಟೊ (ಮಧ್ಯ) ಅವರು ಮುನ್ನುಗ್ಗಿದ ಪರಿ –ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT