ಭಾನುವಾರ, ಡಿಸೆಂಬರ್ 15, 2019
25 °C
ಮುಂದುವರಿದ ಭಾರತದ ಶೂಟರ್‌ಗಳ ಪ್ರಾಬಲ್ಯ: ಮಹಿಳೆಯರ ಡಬಲ್‌ ಟ್ರ್ಯಾಪ್‌ನಲ್ಲಿ ಒಲಿದ ಚಿನ್ನ

ಚಿನ್ನಕ್ಕೆ ಕೊರಳೊಡ್ಡಿದ ಶ್ರೇಯಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನಕ್ಕೆ ಕೊರಳೊಡ್ಡಿದ ಶ್ರೇಯಸಿ

ಗೋಲ್ಡ್‌ ಕೋಸ್ಟ್‌ (ಪಿಟಿಐ): ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದೆ. ಏಳನೆ ದಿನವಾದ ಬುಧವಾರ, ಶೂಟರ್‌ಗಳು ಭಾರತದ ಖಾತೆಗೆ ಮೂರು ಪದಕ ಸೇರ್ಪಡೆ ಮಾಡಿದ್ದಾರೆ.

ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರದಲ್ಲಿ ನಡೆದ ಮಹಿಳೆಯರ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಶ್ರೇಯಸಿ ಸಿಂಗ್‌ ಚಿನ್ನಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್‌ ಅವರನ್ನು ಮಣಿಸಿ ಈ ಸಾಧನೆ ಮಾಡಿದರು.

ಶ್ರೇಯಸಿ ಮತ್ತು ಎಮ್ಮಾ ಅವರು ನಾಲ್ಕು ಸುತ್ತುಗಳಿಂದ ತಲಾ 96 ಪಾಯಿಂಟ್ಸ್‌ ಕಲೆಹಾಕಿದ್ದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ‘ಶೂಟ್‌ ಆಫ್‌’ ಮೊರೆ ಹೋಗಲಾಗಿತ್ತು.

‘ಶೂಟ್‌ ಆಫ್‌’ನ ಮೊದಲ ಅವಕಾಶದಲ್ಲಿ ಇಬ್ಬರೂ ಕೃತಕ ಹಕ್ಕಿಗಳನ್ನು ಹೊಡೆದುರುಳಿಸಿದರು. ಎರಡನೆ ಅವಕಾಶದಲ್ಲಿ ಶ್ರೇಯಸಿ ನಿಖರ ಗುರಿ ಹಿಡಿದರು. ಆದರೆ ಎಮ್ಮಾ ವಿಫಲರಾದರು. ಹೀಗಾಗಿ ಭಾರತದ ಶೂಟರ್‌ಗೆ ಚಿನ್ನ ಒಲಿಯಿತು. ಎಮ್ಮಾ, ಬೆಳ್ಳಿಗೆ ತೃಪ್ತಿಪಟ್ಟರು.

ಸ್ಕಾಟ್ಲೆಂಡ್‌ನ ಲಿಂಡಾ ಪಿಯರ್ಸನ್‌ (87 ಪಾಯಿಂಟ್ಸ್‌) ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು. ಭಾರತದ ವರ್ಷಾ ವರ್ಮನ್‌ ನಾಲ್ಕನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಾ, ನಾಲ್ಕು ಸುತ್ತುಗಳಿಂದ 86 ಪಾಯಿಂಟ್ಸ್‌ ಸಂಗ್ರಹಿಸಿದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ 26 ವರ್ಷದ ಶ್ರೇಯಸಿ, ಫೈನಲ್‌ನಲ್ಲಿ ಎಮ್ಮಾ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರು.

ಮೊದಲ ಸುತ್ತಿನಲ್ಲಿ ಶ್ರೇಯಸಿ 24 ಪಾಯಿಂಟ್ಸ್‌ ಗಳಿಸಿದರೆ, ಎಮ್ಮಾ 23 ಪಾಯಿಂಟ್ಸ್‌ ಕಲೆಹಾಕಿದರು. ಎರಡು ಮತ್ತು ಮೂರನೆ ಸುತ್ತಿನಲ್ಲಿ ಕಾಕ್ಸ್‌ ಪಾರಮ್ಯ ಸಾಧಿಸಿದರು. ಹೀಗಾಗಿ ಶ್ರೇಯಸಿ 71–78ರಿಂದ ಹಿನ್ನಡೆ ಕಂಡರು. ಇದರಿಂದ ವಿಚಲಿತರಾಗದ ಭಾರತದ ಶೂಟರ್‌, ನಿರ್ಣಾಯಕ ಎನಿಸಿದ್ದ ನಾಲ್ಕನೆ ಸುತ್ತಿನಲ್ಲಿ ಮೋಡಿ ಮಾಡಿದರು.

ಅಂತಿಮ ಸುತ್ತಿನಲ್ಲಿ ಶ್ರೇಯಸಿ 25 ಪಾಯಿಂಟ್ಸ್‌ ಹೆಕ್ಕಿದರೆ, ಕಾಕ್ಸ್ 18 ಪಾಯಿಂಟ್ಸ್‌ ಸಂಗ್ರಹಿಸಲಷ್ಟೇ ಶಕ್ತರಾದರು. ಫೈನಲ್‌ನಲ್ಲಿ ಒಟ್ಟು 10 ಮಂದಿ ಪೈಪೋಟಿ ನಡೆಸಿದ್ದರು.

ಕಾಮನ್‌ವೆಲ್ತ್‌ ಕೂಟದಲ್ಲಿ ಶ್ರೇಯಸಿ ಗೆದ್ದ ಎರಡನೆ ಪದಕ ಇದಾಗಿದೆ. 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕೂಟದಲ್ಲಿ ಅವರು ಬೆಳ್ಳಿಯ ಸಾಧನೆ ಮಾಡಿದ್ದರು.

ಓಂ ಪ್ರಕಾಶ್‌ಗೆ ಕಂಚು: ಪುರುಷರ 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಓಂ ಪ್ರಕಾಶ್‌ ಮಿಥಾರ್ವಲ್‌ ಕಂಚಿನ ಸಾಧನೆ ಮಾಡಿದರು. ಓಂ ಪ್ರಕಾಶ್‌ ಈ ಬಾರಿಯ ಕೂಟದಲ್ಲಿ ಗೆದ್ದ ಎರಡನೆ ಪದಕ ಇದಾಗಿದೆ. 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲೂ ಅವರು ಕಂಚಿನ ಪದಕ ಗೆದ್ದಿದ್ದರು.

ಫೈನಲ್‌ನಲ್ಲಿ ಮಿಥಾರ್ವಲ್‌ 201.1 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು. ಅರ್ಹತಾ ಸುತ್ತಿನಲ್ಲಿ 549 ಪಾಯಿಂಟ್ಸ್‌ ಸಂಗ್ರಹಿಸಿದ್ದ ಓಂ ಪ್ರಕಾಶ್‌ ಅಗ್ರಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದರು.

ಆಸ್ಟ್ರೇಲಿಯಾದ ಡೇನಿಯಲ್‌ ರೆಪಾಚೊಲಿ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಫೈನಲ್‌ನಲ್ಲಿ ಡೇನಿಯಲ್‌ 227.2 ಪಾಯಿಂಟ್ಸ್‌ ಗಳಿಸಿದರು. ಮೊದಲ ಹಂತದಲ್ಲಿ 91.2 ಪಾಯಿಂಟ್ಸ್‌ ಗಳಿಸಿದ್ದ ಅವರು ಎರಡನೆ ಹಂತದ ಎಲಿಮಿನೇಷನ್‌ನಲ್ಲೂ ಅಪೂರ್ವ ಸಾಮರ್ಥ್ಯ ತೋರಿದರು.

ಬಾಂಗ್ಲಾದೇಶದ ಶಕೀಲ್‌ ಅಹಮದ್‌ (220.5 ಪಾಯಿಂಟ್ಸ್‌) ಬೆಳ್ಳಿ ತಮ್ಮದಾಗಿಸಿಕೊಂಡರು. ಫೈನಲ್‌ಗೆ ಅರ್ಹತೆ ಗಳಿಸಿದ್ದ ಜಿತು ರಾಯ್‌ (105.0 ಪಾಯಿಂಟ್ಸ್‌) ಎಂಟನೆ ಸ್ಥಾನಕ್ಕೆ ತೃಪ್ತಿಪಟ್ಟರು. ಜಿತು ಅವರು 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಮಿತ್ತಲ್‌ಗೆ ಕಂಚು: ಪುರುಷರ ಡಬಲ್‌ ಟ್ರ್ಯಾಪ್‌ನಲ್ಲಿ ಭಾರತದ ಅಂಕುರ್‌ ಮಿತ್ತಲ್‌ ಕಂಚು ಗೆದ್ದರು. ಫೈನಲ್‌ನಲ್ಲಿ ಅವರು 53 ಪಾಯಿಂಟ್ಸ್‌ ಸಂಗ್ರಹಿಸಿದರು.

ಸ್ಕಾಟ್ಲೆಂಡ್‌ನ ಡೇವಿಡ್‌ ಮೆಕ್‌ಮ್ಯಾತ್‌ (74 ಪಾಯಿಂಟ್ಸ್‌) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಐಲ್ ಆಫ್‌ ಮ್ಯಾನ್‌ ದೇಶದ ಟಿಮ್‌ ನಿಯಲೆ (70 ಪಾ.) ಬೆಳ್ಳಿಯ ಸಾಧನೆ ಮಾಡಿದರು.

ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಅಶಾಬ್‌ ಮಹಮ್ಮದ್‌ (43 ಪಾ.) ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು.

* 2014ರಲ್ಲಿ ಚಿನ್ನ ಗೆಲ್ಲಲು ಆಗಿರಲಿಲ್ಲ. ಹೀಗಾಗಿ ನಿರಾಸೆಯಾಗಿತ್ತು. ಈ ಬಾರಿ ಕಠಿಣ ಅಭ್ಯಾಸ ನಡೆಸಿದ್ದೆ. ಆದ್ದರಿಂದ ಚಿನ್ನದ ಕನಸು ಕೈಗೂಡಿದೆ.

–ಶ್ರೇಯಸಿ ಸಿಂಗ್‌, ಭಾರತದ ಶೂಟರ್‌

ಕಾಮನ್‌ವೆಲ್ತ್‌ನಲ್ಲಿ ಮೊದಲ ಚಿನ್ನ ಗೆದ್ದ ಶ್ರೇಯಸಿ ಸಿಂಗ್‌

‘ಶೂಟ್‌ ಆಫ್‌’ನಲ್ಲಿ ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್‌ ಸವಾಲು ಮೀರಿದ ಶ್ರೇಯಸಿ

50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಎಂಟನೆ ಸ್ಥಾನ ಗಳಿಸಿದ ಜಿತು ರಾಯ್‌

ಪ್ರತಿಕ್ರಿಯಿಸಿ (+)