ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೈಂ ಸಿಟಿ’ ಕಳಂಕ ತೊಳೆಯುವವರಾರು?

ಹದಗೆಟ್ಟಿದೆ ರಾಜಧಾನಿಯ ಕಾನೂನು ಸುವ್ಯವಸ್ಥೆ
Last Updated 11 ಏಪ್ರಿಲ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು:‌ ಗಾರ್ಡನ್ ಸಿಟಿಯಿಂದ ‘ಗಾರ್ಬೇಜ್’ ಸಿಟಿಯಾಗಿ, ಐ.ಟಿ ನಗರಿಯಿಂದ ರಸ್ತೆಗುಂಡಿಗಳ ನಗರಿಯಾಗಿ, ನಿವೃತ್ತರ ಸ್ವರ್ಗ ಖ್ಯಾತಿಯಿಂದ ‘ಅಪರಾಧ ನಗರಿ’ಯಾಗಿ... ಹೀಗೆ, ವರ್ಷದಿಂದ ವರ್ಷಕ್ಕೆ ತನ್ನ ಸ್ವರೂಪ ಬದಲಿಸಿಕೊಳ್ಳುತ್ತಿರುವ ರಾಜಧಾನಿಯ ವರ್ಚಸ್ಸಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಹೊಡೆತ ಬೀಳುತ್ತಿದೆ.

ದೇಶದ 19 ಮೆಟ್ರೊಪಾಲಿಟನ್ ನಗರಗಳ ಪೈಕಿ, ಹೆಚ್ಚು ಅಪರಾಧಗಳು ವರದಿಯಾಗುತ್ತಿರುವ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ‌ಭೂಗತ ಪಾತಕಿಗಳು ಮತ್ತು ಅಪರಾಧಿಗಳು ಹೆಚ್ಚು ಕ್ರಿಯಾಶೀಲರಾಗಿರುವ ಮುಂಬೈ ಮಹಾನಗರವೇ ನಮ್ಮ ನಂತರದ ಸ್ಥಾನದಲ್ಲಿದೆ.

ರಾಜಧಾನಿಯನ್ನು ‘ಸ್ಮಾರ್ಟ್‌ ಸಿಟಿ’ ಮಾಡುವ ಘೋಷವಾಕ್ಯದಲ್ಲೇ ಆಡಳಿತದ ಚುಕ್ಕಾಣಿ ಹಿಡಿದ ಹಿಂದಿನ ಸರ್ಕಾರಗಳಿಗೆ, ನಗರಕ್ಕೆ ಮೆತ್ತಿಕೊಂಡಿರುವ ‘ಕ್ರೈಂ ಸಿಟಿ’ ಕಳಂಕವನ್ನು ತೊಳೆಯಲು ಸಾಧ್ಯವಾಗುತ್ತಿಲ್ಲ. ಆ ವಿಚಾರಕ್ಕೆ ಹೆಚ್ಚು ಒತ್ತು ನೀಡದಿರುವುದೂ ಅದಕ್ಕೆ ಕಾರಣವಿರಬಹುದು.

ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆ ಇದೆ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ರೀತಿಯಲ್ಲೂ ರಾಜಧಾನಿ ಅನುಕೂಲಕರವಾಗಿದೆ. ಹೀಗಾಗಿಯೇ ದೇಶ–ವಿದೇಶಗಳ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ದೇಶಿ, ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ, ಸೇವಾ ವಲಯಗಳು ಬೆಳೆಯುತ್ತಿವೆ. ಆರ್ಥಿಕತೆಗೂ ಲಾಭ ಇದೆ. ಆದರೆ, ಏರುಗತಿಯಲ್ಲಿರುವ ಅಪರಾಧ ಪ್ರಕರಣಗಳು, ಈ ಎಲ್ಲ ಲಾಭ–ಅನುಕೂಲಗಳನ್ನೂ ತಿರುವು ಮುರುವು ಮಾಡುತ್ತಿವೆ. ಅಂಟಿಕೊಂಡಿರುವ ‘ಅಪಖ್ಯಾತಿ’ಯನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ.

2017ನೇ ಸಾಲಿನಲ್ಲಿ ಕೊಲೆ, ಸುಲಿಗೆ, ಕಳ್ಳತನ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಅಪಹರಣ... ಹೀಗೆ, ರಾಜಧಾನಿಯಲ್ಲಿ ಐಪಿಸಿ ಅಡಿ 53 ಸಾವಿರ ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ಈ ಸಂಖ್ಯೆ 35,576 ಇದ್ದರೆ, 2016ರಲ್ಲಿ 45,797ಕ್ಕೆ ಏರಿಕೆಯಾಗಿತ್ತು. ಪ್ರತಿವರ್ಷ ಸರಾಸರಿ ಹತ್ತು ಸಾವಿರದಷ್ಟು ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರ ಆತಂಕ ಹೆಚ್ಚಿಸಿದೆ.

ಮಹಿಳೆಯರಿಗಿಲ್ಲ ಸುರಕ್ಷತೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವ ಮಹಾನಗರಗಳ ಪಟ್ಟಿಯಲ್ಲೂ ಬೆಂಗಳೂರು 2ನೇ ಸ್ಥಾನದಲ್ಲಿದೆ. ಎನ್‌ಸಿಆರ್‌ಬಿ ಅಂಕಿ ಅಂಶವೇ ಇದನ್ನು ಹೇಳುತ್ತದೆ. ಮಹಿಳೆಯರ ಸುರಕ್ಷತೆಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡರೂ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೇನೂ ಕಡಿಮೆಯಾಗಿಲ್ಲ.

ಮಹಿಳೆಯರ ಸುರಕ್ಷತೆಗೆ ಬೆಂಗಳೂರಿನಲ್ಲಿ ‘SURAKSHA’ ಹಾಗೂ‘S-GUARD’ ಎಂಬ ಆ್ಯಪ್‌ಗಳನ್ನು ಪರಿಚಯಿಸಲಾಗಿದೆ. ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದಾಗ, ಆ್ಯಪ್‌ಗಳಲ್ಲಿರುವ ಅಲರ್ಟ್ ಬಟನ್ ಒತ್ತಿದರೆ ಪೊಲೀಸರು 15 ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಸಮಸ್ಯೆಗೆ ಸ್ಪಂದಿಸುತ್ತಾರೆ. ಆದರೆ, ಈ ಆ್ಯಪ್‌ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ.

ಸಾಮಾನ್ಯ ಹೊಯ್ಸಳ ವಾಹನಗಳ ಮಾದರಿಯಲ್ಲೇ ಮಹಿಳೆಯರಿಗಾಗಿಯೇ 51 ‘ಪಿಂಕ್ ಹೊಯ್ಸಳ’ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಮಹಿಳಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಆದರೆ, ದೂರಿಗೆ ತುರ್ತಾಗಿ ಸ್ಪಂದನೆ ಸಿಗದೆ ಇರುವುದರಿಂದ ಈ ಹೊಯ್ಸಳಗಳು ಪರಿಣಾಮಕಾರಿ ಎನಿಸುತ್ತಿಲ್ಲ ಎಂಬ ದೂರುಗಳೂ ಇವೆ. 

‘ನಗರದ ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಅರ್ಧದಷ್ಟಿದ್ದರೂ, ಅವರಿಗಾಗಿಯೇ ಇರುವುದು ಎರಡೇ ಠಾಣೆಗಳು (ಬಸವನಗುಡಿ, ಹಲಸೂರು ಗೇಟ್). ಅವೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಕಚೇರಿಗೇ ನುಗ್ಗಿ ಲೋಕಾಯುಕ್ತರಿಗೆ ಚೂರಿ ಇರಿದಿದ್ದು, ಯುಬಿ ಸಿಟಿಯಲ್ಲಿ ಮೊಹಮದ್ ನಲಪಾಡ್‌ ನಡೆಸಿದ ದಾಂದಲೆ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದ ಶೂಟೌಟ್‌... ಇವೆಲ್ಲ, ನಗರದ ಕಾನೂನು ಸುವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿಯನ್ನು ತೋರಿಸುತ್ತವೆ.

‘ಕಮ್ಯುನಿಟಿ ಪೊಲೀಸಿಂಗ್’ ಪರಿಕಲ್ಪನೆ ಮೂಲೆ ಸೇರಿದ್ದರಿಂದ ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಸಂಪರ್ಕ ಕೊಂಡಿ ಕಡಿತ
ವಾಗಿದೆ. ಸಹಕಾರ ಮನೋಭಾವವೂ ಹೊರಟು ಹೋಗಿದೆ. ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು 2017ರಲ್ಲಿ 23 ಮಂದಿ ಠಾಣೆಗಳಿಗೆ ದೂರು ಕೊಟ್ಟಿದ್ದರೆ, ಸಾರ್ವಜನಿಕರಿಂದ 68 ಪೊಲೀಸರು ಹಲ್ಲೆಗೆ ಒಳಗಾಗಿದ್ದಾರೆ.

‘ಪಿಂಕ್ ಹೊಯ್ಸಳ, ಆ್ಯಪ್‌ಗಳು ಗಿಮಿಕ್ ಅಷ್ಟೆ’

‘ಅಪರಾಧಗಳ ಸ್ವರೂಪಗಳು ಬದಲಾಗಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ಯೋಜನೆಗಳನ್ನು ಹಾಕಿಕೊ‌ಳ್ಳಬೇಕು. ಪೊಲೀಸ್ ನೇಮಕಾತಿಗೆ ಆದ್ಯತೆ, ಶೇ 50ರಷ್ಟು ಮಹಿಳಾ ಸಿಬ್ಬಂದಿಯ ನೇಮಕ, ಮಹಿಳಾ ಠಾಣೆಗಳ ಸಂಖ್ಯೆ ಹೆಚ್ಚಳ, ಪರಿಣಾಮಕಾರಿ ಗಸ್ತು ವ್ಯವಸ್ಥೆ, ಶಸ್ತ್ರಾಸ್ತ್ರ ಸೇರಿದಂತೆ ಪೊಲೀಸರಿಗೆ ಆಧುನಿಕ ಸಲಕರಣೆ ನೀಡುವುದು... ಇಂಥ ಹಲವಾರು ಅಂಶಗಳನ್ನು ಅನುಷ್ಠಾನಗೊಳಿಸಿದರೆ ಅಪರಾಧಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬಹುದು’ ಎಂದು ನಿವೃತ್ತ ಡಿಜಿಪಿ ಎಸ್‌.ಟಿ.ರಮೇಶ್ ಅಭಿಪ್ರಾಯಪಟ್ಟರು.

‘ಮಹಿಳೆಯರ ಸುರಕ್ಷತೆಗೆ ಪಿಂಕ್ ವಾಹನಗಳು, ಹೊಸ ಹೊಸ ಆ್ಯಪ್‌ಗಳನ್ನು ತಂದಿದ್ದೇವೆ ಎಂಬುದು ಸರ್ಕಾರದ ಗಿಮಿಕ್ ಅಷ್ಟೆ. ಅವರ ಭಯ ಹೋಗಲಾಡಿಸಲಷ್ಟೇ ಇವು ಅನುಕೂಲ. ಮುಂದೆ ಮುಖ್ಯಮಂತ್ರಿ ಆಗುವವರ ಆಲೋಚನೆ ಸುರಕ್ಷತೆ ವಿಚಾರದಲ್ಲಿ ವಿಶಾಲವಾಗಿರಬೇಕು. ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡಬೇಕು. ಮಹಿಳೆ ಶಿಕ್ಷಿತಳಾದರೆ, ಆಕೆ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗುತ್ತವೆ. ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ ಪದ್ಧತಿಗಳ ಬಗ್ಗೆ ಆಕೆಯಲ್ಲಿ ಅರಿವು ಮೂಡಿಸಬೇಕು.’

‘ಹೆಚ್ಚು ದೂರುಗಳು ದಾಖಲಾಗುತ್ತಿವೆ ಎಂದರೆ, ಜನ ಪ್ರಜ್ಞಾವಂತರಾಗುತ್ತಿದ್ದಾರೆ ಎಂದೇ ಅರ್ಥ. ಹೀಗಾಗಿ, ಪೊಲೀಸರು ಮುಕ್ತವಾಗಿ ದೂರುಗಳನ್ನು ದಾಖಲಿಸುವಂತಹ ವ್ಯವಸ್ಥೆ ಆಗಬೇಕು. ಅಷ್ಟೇ ತ್ವರಿತವಾಗಿ ಆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಮುಂಬರುವ ಸರ್ಕಾರ ನಾಗರಿಕರ ಸುರಕ್ಷತಾ ಕ್ರಮಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಆಧುನಿಕತೆಯ ಸ್ಪರ್ಶ ನೀಡಿದರೆ ಸಾಕು’ ಎಂದು ಸಲಹೆ ನೀಡಿದರು.

‘ದಕ್ಷ ಅಧಿಕಾರಿಗಳ ನೇಮಕ’

ಸಾರ್ವಜನಿಕವಾಗಿ ನನ್ನಷ್ಟು ಶೋಷಣೆಗೆ ಒಳಗಾದ ಮಹಿಳೆ ಬಹುಶಃ ನಗರದಲ್ಲಿ ಇನ್ಯಾರೂ ಇಲ್ಲ. ನನ್ನ ಅನುಭವದ ಪ್ರಕಾರ, ಮಹಿಳೆಯರು ಠಾಣೆಗೆ ತೆರಳಿ ಮುಕ್ತವಾಗಿ ದೂರು ಕೊಡುವಂಥ ಪರಿಸ್ಥಿತಿ ಇಲ್ಲಿಲ್ಲ. ಹೀಗಾಗಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಉನ್ನತ ಹುದ್ದೆಗಳಿಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸದೆ, ತಮಗೆ ಅನುಕೂಲವಾಗುವ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಎಲ್ಲ ಸರ್ಕಾರಗಳೂ ಇದೇ ಕೆಲಸ ಮಾಡುತ್ತಾ ಬಂದಿವೆ. ಈ ವ್ಯವಸ್ಥೆ ಬದಲಾಯಿಸಿ, ರಾಜಧಾನಿಯ ಕಾವಲಿಗೆ ಖಡಕ್ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ.

-ಮಂಜುಳಾ ನಾರಾಯಣಸ್ವಾಮಿ, ಕಾರ್ಪೊರೇಟರ್ (ಜೆಡಿಎಸ್), ಲಗ್ಗೆರೆ ವಾರ್ಡ್

‘ಹಗಲಲ್ಲೂ ಪೊಲೀಸ್ ಗಸ್ತು’

ನಗರದ ಜನಸಂಖ್ಯೆ ಕೋಟಿ ದಾಟಿರುವಾಗ, ಸಾವಿರದ ಲೆಕ್ಕದಲ್ಲಿ ಪೊಲೀಸರನ್ನು ಇಟ್ಟುಕೊಂಡು ಎಂಥ ರಕ್ಷಣೆಯನ್ನು ನಿರೀಕ್ಷಿಸಬಹುದು? ಹೀಗಾಗಿ, ಮೊದಲು ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುತ್ತೇವೆ. ಪ್ರತಿ ಠಾಣೆಗೆ 70ರಿಂದ 80 ಪೊಲೀಸರನ್ನು ನಿಯೋಜಿಸುತ್ತೇವೆ. ನಗರದಲ್ಲಿ ಈಗ ನೆಪಮಾತ್ರಕ್ಕಷ್ಟೇ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಎಲ್ಲ ರಸ್ತೆಗಳಿಗೂ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವುದಕ್ಕೆ ಸಂಚಾರ ಪೊಲೀಸರಷ್ಟೇ ಈಗ ರಸ್ತೆ ಮೇಲೆ ಕಾಣುತ್ತಾರೆ. ಸಿವಿಲ್ ಪೊಲೀಸರ ಗಸ್ತು ಕಡಿಮೆಯಾಗಿರುವ ಕಾರಣ ಸರಗಳ್ಳತನ, ದರೋಡೆಯಂಥ ಕೃತ್ಯಗಳು ಹೆಚ್ಚುತ್ತಿವೆ. ಪೊಲೀಸರು ರಸ್ತೆಯಲ್ಲಿದ್ದರೆ ಆರೋಪಿಗಳಿಗೂ ಭಯವಿರುತ್ತದೆ. ಹೀಗಾಗಿ, ಹಗಲಿನಲ್ಲೂ ಪೊಲೀಸರು ಗಸ್ತು ತಿರುಗುವಂಥ ವ್ಯವಸ್ಥೆ ಮಾಡುತ್ತೇವೆ.

-ಶಾಂತಕುಮಾರಿ, ಕಾರ್ಪೊರೇಟರ್ (ಬಿಜೆಪಿ), ಮೂಡಲಪಾಳ್ಯ ವಾರ್ಡ್

‘15 ಮಹಿಳಾ ಠಾಣೆಗಳ ನಿರ್ಮಾಣ’

‘ನಮ್ಮ ಸರ್ಕಾರ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ‘ಮಹಿಳಾ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯತಡೆ ಸಮಿತಿ’ಯನ್ನು ರಚನೆ ಮಾಡಿದೆ. ಅದರಲ್ಲಿ ನಾನೂ ಸದಸ್ಯೆಯಾಗಿದ್ದೇನೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎಷ್ಟೋ ಸಂತ್ರಸ್ತೆಯರಿಗೆ ಸಮಿತಿ ನ್ಯಾಯ ಕೊಡಿಸಿದೆ.
ಮಹಿಳಾ ಆಯೋಗವನ್ನೂ ಬಲವರ್ಧನೆ ಮಾಡಿದ್ದೇವೆ. ಅವೇ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ.’

‘ಬಿಬಿಎಂಪಿಯಲ್ಲಿ ಹೇಗೆ ಮೂರ್ನಾ‌ಲ್ಕು ವಾರ್ಡ್‌ಗಳಿಗೆ ಒಂದೊಂದು ಉಪವಿಭಾಗವಿದೆಯೋ, ಅದೇ ಮಾದರಿಯಲ್ಲಿ ಕನಿಷ್ಠ 15 ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಐದು ಉಪ ವಿಭಾಗಗಳನ್ನು ಮಾಡುತ್ತೇವೆ. ಅಲ್ಲಿ ಸಮಾಲೋಚನಾ ತಜ್ಞರನ್ನೂ ನೇಮಕ ಮಾಡುತ್ತೇವೆ.
ಸಂತ್ರಸ್ತೆಯರು ಮುಕ್ತವಾಗಿ ದೂರು ಕೊಡುವ ವಾತಾವರಣ ನಿರ್ಮಿಸುತ್ತೇವೆ.’

-ಜಿ.ಪದ್ಮಾವತಿ, ಮಾಜಿ ಮೇಯರ್ (ಬಿಜೆಪಿ)

2017ರ ಅಂಕಿ ಅಂಶ

134

ಮಹಿಳೆಯರ ಮೇಲೆ ಅತ್ಯಾಚಾರ

971

ಲೈಂಗಿಕ ದೌರ್ಜನ್ಯ (ಐಪಿಸಿ 354)

348

ಮಕ್ಕಳ ಮೇಲೆ ದೌರ್ಜನ್ಯ

354

ಸರಗಳವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT