ಶುಕ್ರವಾರ, ಡಿಸೆಂಬರ್ 13, 2019
17 °C

‘ಸುಪ್ರೀಂ’ ಮೆಟ್ಟಿಲೇರಿದ ಯುವತಿ

ಪಿಟಿಐ Updated:

ಅಕ್ಷರ ಗಾತ್ರ : | |

‘ಸುಪ್ರೀಂ’ ಮೆಟ್ಟಿಲೇರಿದ ಯುವತಿ

ನವದೆಹಲಿ: ತನ್ನ ಇಷ್ಟದ ವಿರುದ್ಧವಾಗಿ ನಡೆದ ಬಲವಂತದ ಮದುವೆ ರದ್ದುಪಡಿಸುವಂತೆ ಕೋರಿ ಕರ್ನಾಟಕದ 26 ವರ್ಷದ ಯುವತಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಕುಟುಂಬದ ಸದಸ್ಯರ ಬಲವಂತಕ್ಕೆ ಮಣಿದು ಮದುವೆಯಾಗಿದ್ದು, ಗಂಡನ ಜತೆ ಹೋಗಲು ಇಷ್ಟ ಇಲ್ಲ. ಒಲ್ಲದ ಮದುವೆಯಿಂದ ಮುಕ್ತಿ ನೀಡಬೇಕು ಮತ್ತು ತನ್ನ ಜೀವಕ್ಕೆ ರಕ್ಷಣೆ ಒದಗಿಸಬೇಕು ಎಂದು ಆಕೆ ಮನವಿ ಮಾಡಿದ್ದಾರೆ.

ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಸಂತ್ರಸ್ತೆಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಬುಧವಾರ ಸೂಚನೆ ನೀಡಿದೆ.

ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರ ಗುರುತು ಬಹಿರಂಗಗೊಳಿಸದಂತೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಸದ್ಯ ದೆಹಲಿಯಲ್ಲಿರುವ ಮಹಿಳೆಗೆ ದೆಹಲಿಯ ಮಹಿಳಾ ಆಯೋಗವು ನೆರವು ಒದಗಿಸುತ್ತಿದೆ.

ವಿವಾಹಕ್ಕೂ ಮುನ್ನ ವಧು ಅಥವಾ ವರನ ಒಪ್ಪಿಗೆ ಪಡೆಯಲು ಅವಕಾಶ ಇಲ್ಲದ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 5 ಮತ್ತು 7 ರದ್ದುಪಡಿಸು

ವಂತೆ ಕೋರಿ ಈ ಮಹಿಳೆಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ‘ಹೆಬಿಯಸ್‌ ಕಾರ್ಪಸ್‌’ ಎಂದು ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕುಗಳ ಕುರಿತು ಚರ್ಚಿಸಲು ಪೀಠ ಸ್ಪಷ್ಟವಾಗಿ ನಿರಾಕರಿಸಿದೆ.

ಮಹಿಳೆಯ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ವೃತ್ತಿಯಿಂದ ಎಂಜಿನಿಯರ್‌ ಆಗಿರುವ ತಮ್ಮ ಕಕ್ಷಿದಾರಳ ಒಪ್ಪಿಗೆ ಪಡೆಯದೆ ಇದೇ ಮಾರ್ಚ್ 14ರಂದು ಮದುವೆ ಮಾಡಲಾಗಿದೆ ಎಂದರು. ಬಲವಂತದ ಮದುವೆಯನ್ನು ರದ್ದು ಮಾಡುವಂತೆ ಮನವಿ ಮಾಡಿದರು.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 12ಸಿ ಅಡಿ ಬಲವಂತದ ಮದುವೆಯನ್ನು ಅನೂರ್ಜಿತಗೊಳಿಸಲು ಅವಕಾಶ ಇದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಇಂತಹ ಪ್ರಕರಣ ಇತ್ಯರ್ಥವಾಗಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಹಿಳೆಯ ಕುಟುಂಬ ಸದಸ್ಯರಿಗೆ ತಕ್ಷಣ ನೋಟಿಸ್‌ ಜಾರಿ ಮಾಡುವಂತೆ ನ್ಯಾಯಾಲಯ ಸಂಬಂಧಿಸಿದ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ. ಮೇ 5ರಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಇಂದಿರಾ ಜೈಸಿಂಗ್‌ ಕೋರ್ಟ್‌ನಲ್ಲಿ ಹೇಳಿದ್ದೇನು?

*  ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮಹಿಳೆಯ ಸಂವಿಧಾನಾತ್ಮಕ ಹಕ್ಕನ್ನು ಆಕೆಯ ಕುಟುಂಬದವರು ಉಲ್ಲಂಘಿಸಿದ್ದಾರೆ

* ಮದುವೆಗೆ ಒಪ್ಪಿಕೊಳ್ಳುವಂತೆ ತನ್ನ ಕಕ್ಷಿದಾರಳಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಬೆದರಿಕೆ ಮತ್ತು ಒತ್ತಡ ಹೇರಲಾಗಿದೆ.

* ಕುಟುಂಬ ಸದಸ್ಯರ ಹಿಡಿತದಿಂದ ತಪ್ಪಿಸಿಕೊಂಡು ಕರ್ನಾಟಕದಿಂದ ದೆಹಲಿಗೆ ಬಂದಿರುವ ಆಕೆಗೆ ಕುಟುಂಬ ಸದಸ್ಯರಿಂದಲೇ ಜೀವಭಯ ಇದ್ದು, ರಕ್ಷಣೆ ಮತ್ತು ಆಶ್ರಯದ ಅಗತ್ಯವಿದೆ

* ತನ್ನ ಜಾತಿಯ ಯುವಕನಲ್ಲದೇ ಬೇರೆ ಜಾತಿಯ ಯುವಕನನ್ನು ಮದುವೆಯಾದರೆ ಮರ್ಯಾದೆಗೇಡು ಹತ್ಯೆ ನಡೆಸಲು ಆಕೆಯ ಕುಟುಂಬ ಹಿಂಜರಿಯುವುದಿಲ್ಲ

* ಜನವರಿಯಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಅಧ್ಯಯನ ಅರ್ಧಕ್ಕೆ ನಿಲ್ಲಿಸುವಂತೆ ಕುಟುಂಬ ಸದಸ್ಯರಿಂದ ಬೆದರಿಕೆ

ಪ್ರತಿಕ್ರಿಯಿಸಿ (+)