4
ಮತದಾರರ ಪಟ್ಟಿಗೆ ಒಂದೇ ದಿನ 13,963 ಮಂದಿ ಸೇರ್ಪಡೆ

ಮಿಂಚಿನ ನೋಂದಣಿಗೆ ಭರ್ಜರಿ ಸ್ಪಂದನೆ

Published:
Updated:

ಬಾಗಲಕೋಟೆ: ಮತದಾರರ ಪಟ್ಟಿಗೆ ಅರ್ಹರನ್ನು ಸೇರಿಸಲು ಚುನಾವಣಾ ಆಯೋಗ ಆರಂಭಿಸಿರುವ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್ 8ರಂದು ಒಂದೇ ದಿನ 13,963 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಿಂಚಿನ ನೋಂದಣಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಅವರು, ಏಪ್ರಿಲ್ 9 ಹಾಗೂ 10ರಂದು ಒಟ್ಟು 1431 ಅರ್ಜಿಗಳು ಹೊಸದಾಗಿ ಸ್ವೀಕೃತಗೊಂಡಿವೆ. ಏಪ್ರಿಲ್ 14ರವರೆಗೂ ಅಭಿಯಾನ ಮುಂದುವರೆಯಲಿದೆ. 18 ವರ್ಷ ತುಂಬಿದ ಅರ್ಹರು, ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬಹುದಾಗಿದೆ ಎಂದರು.

ಮದುವೆ, ಹುಟ್ಟುಹಬ್ಬಕ್ಕೆ ಪರವಾನಗಿ ಬೇಡ: ‘ಮದುವೆ, ಹುಟ್ಟುಹಬ್ಬ, ಮನೆಯಲ್ಲಿನ ವೈಯಕ್ತಿಕ ಕಾರ್ಯಕ್ರಮಗಳಿಗೆ ಚುನಾವಣೆ ನೀತಿಸಂಹಿತೆ ಅನ್ವಯವಾಗುವುದಿಲ್ಲ. ಅದಕ್ಕೆ ಪರವಾನಗಿಯೂ ಅಗತ್ಯವಿಲ್ಲ. ಹಾಗಿದ್ದರೂ ಅನುಮತಿ ಕೋರಿ ಅರ್ಜಿಗಳು ಸ್ವೀಕೃತವಾಗುತ್ತಿವೆ. ಸದರಿ ಸಭೆ–ಸಮಾರಂಭಗಳ ಮೇಲೆ ನೀತಿ ಸಂಹಿತೆ ಪಾಲನಾ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ’ ಎಂದರು.

ಸಭೆ, ಸಮಾರಂಭ, ಮದುವೆ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ, ಊಟದ ವ್ಯವಸ್ಥೆ ಮಾಡಿರುವುದು ಕಂಡು ಬಂದಲ್ಲಿ ನೀತಿ ಸಂಹಿತೆ ಪಾಲನಾ ತಂಡದವರು ವಿಚಾರಣೆ ನಡೆಸಿ ಕ್ರಮ ಜರುಗಿಸಲಿದ್ದಾರೆ ಎಂದರು.

ಮನೆಯಲ್ಲಿ ಜರುಗುವ ಸಭೆ, ಸಮಾರಂಭಗಳ ಸಲುವಾಗಿ ಜನಸಾಮಾನ್ಯರು ₹50 ಸಾವಿರಕ್ಕಿಂತ ಹೆಚ್ಚು ಮೊತ್ತ ಒಯ್ಯುವಂತಿಲ್ಲ. ₹10 ಸಾವಿರಕ್ಕಿಂತ ಹೆಚ್ಚು ಮೊತ್ತದ ಉಡುಗೊರೆ ತೆಗೆದುಕೊಂಡು ಹೋಗುವಂತಿಲ್ಲ ಎಂದರು.

ಕಿರುಕುಳ ಕೊಟ್ಟರೆ ದೂರು ಕೊಡಿ: ‘ಹಣ, ವಸ್ತುಗಳ ಸಾಗಣೆ ವೇಳೆ ಅಗತ್ಯ ದಾಖಲೆಗಳು ಇದ್ದರೂ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಟ್ಟರೆ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಧ್ಯಕ್ಷತೆಯ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು 1694 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಹಾಗೂ ನಾಲ್ವರು ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಐವರು ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಚುನಾವಣಾ ಕರ್ತವ್ಯಕ್ಕೆ ಒಟ್ಟು 10,164 ಸಿಬ್ಬಂದಿ ಅಗತ್ಯವಿದೆ. ಅವರೊಟ್ಟಿಗೆ ಮೀಸಲು ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 12,688 ಮಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನೇಮಕಾತಿ ಆದೇಶಗಳನ್ನು ಕಳುಹಿಸಲಾಗುವುದು’ ಎಂದರು.

ದೂರುಗಳಿದ್ದರೆ ಕರೆ ಮಾಡಿ...

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಇದ್ದಲ್ಲಿ ಅವುಗಳನ್ನು ಸ್ವೀಕರಿಸಿ ಪರಿಹರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ.ಸಾರ್ವಜನಿಕರು ದೂರವಾಣಿ ಸಂಖ್ಯೆ: 08354–235121, 235125, 235126, 235109 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಸಾರ್ವಜನಿಕರಿಂದ ಬಂದ ದೂರುಗಳನ್ನು ‘ಸಮಾಧಾನ’ ಹೆಸರಿನಲ್ಲಿ 24 ಗಂಟೆ ಹಾಗೂ ರಾಜಕೀಯ ಪಕ್ಷಗಳಿಂದ ಸ್ವೀಕೃತಗೊಂಡ ದೂರುಗಳನ್ನು 48 ಗಂಟೆಗಳಲ್ಲಿ ವಿಲೇವಾರಿ ಮಾಡಲು ಸಮಯ ನಿಗದಿ ಮಾಡಲಾಗಿದೆ.

ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಭೆ, ರ್‍ಯಾಲಿ, ವಾಹನಗಳಿಗೆ ಪರವಾನಗಿ, ಪಕ್ಷದ ತಾತ್ಕಾಲಿಕ ಕಚೇರಿ ತೆರೆಯಲು, ಧ್ವನಿವರ್ಧಕ ಬಳಕೆ ಹಾಗೂ ಹೆಲಿಕಾಪ್ಟರ್/ಹೆಲಿಪ್ಯಾಡ್ ಪರವಾನಗಿಗೆ ಸುವಿಧಾ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಐವರು ಅಮಾನತು, ಮೂವರಿಗೆ ನೋಟಿಸ್...

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಿರಿ ಜೋಕೆ.. ಸ್ವತಃ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹಾಗೂ ಸಿಇಒ ವಿಕಾಸ್ ಸುರಳಕರ್ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ಚುನಾವಣೆ ಸಿಬ್ಬಂದಿ ಕಾರ್ಯವೈಖರಿ ಗಮನಿಸುತ್ತಿದ್ದಾರೆ. ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಬೇಜವಾಬ್ದಾರಿ ತೋರಿದ ಹಳ್ಳೂರ ಸರ್ಕಾರಿ ಮಾದರಿ ಶಾಲೆ ಶಿಕ್ಷಕರಾದ ಬಿ.ಎಸ್.ಸಂಗಮದ, ಎಂ.ಬಿ.ನದಾಫ, ಕಡ್ಲಿಮಟ್ಟಿ ಶಾಲೆಯ ಎಂ.ಜಿ.ಸುನಗದ, ಬುದ್ನಿ ಪಿ.ಡಿಯ ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಜಿ.ಮಾರಿಹಾಳ, ವೈ.ಸಿ.ಪೋತದಾರ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ಕರ್ತವ್ಯ ಲೋಪ ತೋರಿದ ಸೆಕ್ಟರ್ ಅಧಿಕಾರಿಗಳಾದ ಬಿಟಿಡಿಎ ಎಂಜಿನಿಯರ್‌ ಸಿ.ಆರ್.ನೀಲನ್ನವರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕಲ್ಲೋಳೇಶ ಹಾದಿಮನಿ ಹಾಗೂ ಮುಧೋಳದ ಗ್ರಾಮೀಣ ನೀರು ಪೂರೈಕೆ ವಿಭಾಗದ ಎಂಜಿನಿಯರ್ ಕಿರಣ್ ಘೋರ್ಪಡೆ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದರು.ಕೇಂದ್ರ ಸ್ಥಾನ ಬಿಡುವಂತಿಲ್ಲ: ಚುನಾವಣೆ ಕರ್ತವ್ಯದ ತುರ್ತು ನಿಮಿತ್ತ ಸರ್ಕಾರಿ ನೌಕರರು ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry