ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಚುನಾವಣೆ ಬಂದರೂ 24X7 ನೀರಿಲ್ಲ!

ನಗರದಲ್ಲಿ ಇಂದಿಗೂ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ: ಜನರಿಗೆ ತಪ್ಪದ ಪರದಾಟ
Last Updated 12 ಏಪ್ರಿಲ್ 2018, 6:03 IST
ಅಕ್ಷರ ಗಾತ್ರ

ಬಳ್ಳಾರಿ: ಮತ್ತೊಂದು ಚುನಾವಣೆ ಹೊಸ್ತಿಲಿಗೆ ಬಂದಿದ್ದರೂ 24*7 ಕುಡಿಯುವ ನೀರು ಪೂರೈಕೆ ಯೋಜನೆ ನಗರದಲ್ಲಿ ಪೂರ್ಣಗೊಂಡಿಲ್ಲ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಸಂಘಟನೆಗಳು ಮತ್ತು ಹೋರಾಟ ಬಲಗೊಳ್ಳದೇ ಇರುವುದು ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ.

ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಕೂಸು. ಆದರೆ ನಂತರ ಚುನಾವಣೆ ನಡೆದು ಕಾಂಗ್ರೆಸ್‌ ಸರ್ಕಾರ ಅಧಿಕಾರ ಪೂರೈಸುತ್ತಿರುವ ಈ ಹೊತ್ತಿನಲ್ಲೂ ಯೋಜನೆ ತೆವಳುತ್ತಾ ಸಾಗಿದೆ. ಯೋಜನೆಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿದೆ.

ಪೈಪ್‌ಲೈನ್‌ ಸಮಸ್ಯೆ: ಯೋಜನೆಗಾಗಿ ಹೊಸ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಎರಡು ವರ್ಷದಿಂದ ನಡೆಯುತ್ತಿದೆ. ಅಳವಡಿಕೆ ಸಲುವಾಗಿ ರಸ್ತೆಗಳನ್ನು ಅಗೆದ ಬಳಿಕ ಅವುಗಳನ್ನು ಸರಿಪಡಿಸದೆ ಯಥಾಸ್ಥಿತಿಯಲ್ಲೇ ಇಡಲಾಗಿದೆ. ಕೆಲವೆಡೆ ಪೈಪ್‌ಲೈನ್‌ಗಳು ಹಾಳಾಗಿವೆ. ಇಂಥ ಪರಿಸ್ಥಿತಿಯಲ್ಲೇ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಪಾಲಿಕೆಯ ಸಭೆಗಳಲ್ಲಿ ಬಿಸಿ ಚರ್ಚೆಗಳೂ ನಡೆದಿದ್ದವು.

ನೀರಿಲ್ಲದ ನಲ್ಲಿಗಳು: ಮನೆಗಳಿಗೆ ಯೋಜನೆ ಅಡಿ ನಲ್ಲಿ ಸಂಪರ್ಕ ನೀಡಿ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಆ ನಲ್ಲಿಗಳಲ್ಲಿ ನೀರು ಬರದೇ ಇರುವುದರಿಂದ ಅವುಗಳೆಡೆಗೆ ನಿವಾಸಿಗಳ ಆಕರ್ಷಣೆಯೂ ಕುಸಿದಿದೆ. ನಲ್ಲಿ ಮತ್ತು ಮೀಟರ್‌ಗಳು ಮನೆಗಳ ಮುಂಭಾಗ, ಒಳ ಆವರಣದಲ್ಲಿ ಅನಾಥವಾದಂತೆ ಕಾಣುತ್ತಿದೆ. ಹಳೇ ಪೈಪ್‌ಲೈನ್‌ನಲ್ಲಿ 8–10 ದಿನಕ್ಕೊಮ್ಮೆ ಬರುವ ನೀರನ್ನೇ ನಿವಾಸಿಗಳು ನೆಚ್ಚಿಕೊಂಡಿದ್ದಾರೆ.

ಎರಡು ಬಾರಿ ಗಡುವು ವಿಸ್ತರಣೆ:

ನೀರು ಪೂರೈಕೆ ಯೋಜನೆಯ ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದೆ. 2017ರ ಜೂನ್‌ವರೆಗೆ ಇದ್ದ ಗಡುವನ್ನು 2018ರ ಏಪ್ರಿಲ್‌ವರೆಗೂ ವಿಸ್ತರಿಸಲಾಗಿತ್ತು. ಡಿಸೆಂಬರ್‌ವರೆಗೂ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಈಗ ಸಿದ್ಧತೆ ನಡೆಸಿದೆ.

ಶುದ್ಧ ಕುಡಿಯುವ ನೀರೂ ಇಲ್ಲ: ನಗರದಲ್ಲಿ ನಿತ್ಯ ಬಳಕೆಯ ನೀರು ಪೂರೈಕೆ ಸಮಸ್ಯೆಯ ಜೊತೆಗೆ ಜನ ಶುದ್ಧ ಕುಡಿಯುವ ನೀರಿನ ಕೊರತೆಯ ಸಮಸ್ಯೆಯಲ್ಲೂ ಬಳಲುತ್ತಿದ್ದಾರೆ. ವಾರ್ಡ್‌ಗೊಂದರಂತೆ ಶಾಸಕರ ನಿಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು ಎಂಬ ಜನಾಗ್ರಹಕ್ಕೆ ಕಿಮ್ಮತ್ತು ದೊರಕಿಲ್ಲ. ಹೀಗಾಗಿ, ಜನರು ಖಾಸಗಿ ಘಟಕಗಳಿಂದ ಪ್ರತಿ ಕ್ಯಾನ್‌ ನೀರಿಗೆ ₹ 30 ಕೊಟ್ಟು ಖರೀದಿಸುತ್ತಿದ್ದಾರೆ. ಕೆಲವು ಸಮುದಾಯ ಘಟಕಗಳಲ್ಲಿ 20 ಲೀಟರ್‌ ಕ್ಯಾನ್‌ ನೀರಿಗೆ ₹ 5, ಕೆಲವೆಡೆ ₹ 10 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಕಾರ್ಯಾಚರಣೆಯಿಂದ ಸಮುದಾಯ ನೀರಿನ ಘಟಕಗಳು ಕೆಲ ಕಾಲ ಮುಚ್ಚಿದ್ದರಿಂದ ಜನ ತೀವ್ರ ಸಮಸ್ಯೆ ಎದುರಿಸಿದ್ದರು.

ಚರಂಡಿ ನೀರು ಮಿಶ್ರಣ!: ಹಳೇ ಪೈಪ್‌ಲೈನ್‌ಗಳ ಸೋರಿಕೆಯಿಂದಾಗಿ ನಗರದ ಹಲವೆಡೆ ಚರಂಡಿ ನೀರು ಮಿಶ್ರಣಗೊಂಡು ಪೂರೈಕೆಯಾಗುವ ನಿದರ್ಶನಗಳನ್ನು ಇಂದಿಗೂ ಕಾಣಬಹುದು. ಹೀಗಾಗಿಯೇ ನಗರದ ನಿವಾಸಿಗಳು, ನಲ್ಲಿಯಲ್ಲಿ ನೀರು ಬಂದ ಕೂಡಲೇ ಕೆಲ ಕಾಲ ಹೊರಕ್ಕೆ ಹರಿಸುತ್ತಾರೆ, ಮತ್ತೆ ಬೊಗಸೆಯಲ್ಲಿ ಹಿಡಿದು ವಾಸನೆ ನೋಡಿ, ನೀರು ಉತ್ತಮವಾಗಿದೆ ಎನ್ನಿಸಿದರೆ ಮಾತ್ರ ಸಂಪ್‌ಗಳಿಗೆ ಹರಿಸುತ್ತಾರೆ, ಈ ಪರಿಸ್ಥಿತಿ ಎಂದಿಗೆ ಸುಧಾರಿಸುತ್ತದೋ ಎಂಬ ನಿಟ್ಟುಸಿರುವ ಮಾತ್ರ ನಗರದಲ್ಲಿ ನಿರಂತರವಾಗಿದೆ.

ನೀರೆಲ್ಲಿ ಬರ್ತಿದೆ ಸ್ವಾಮಿ?

ಬಳ್ಳಾರಿ: ಯೋಜನೆ ಅನುಷ್ಠಾನ ಪೂರ್ಣಗೊಂಡಿರುವ ನಗರದ ಹತ್ತು ವಲಯಗಳ ಪೈಕಿ ಐದು ವಲಯಗಳಲ್ಲಿ 24*7 ನೀರನ್ನು ಪೂರೈಸಲಾಗುತ್ತಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಖಾಜಾ ಮೊಯಿನುದ್ದೀನ್‌ ಹೇಳುತ್ತಾರೆ. ಆದರೆ ಅವರ ಮಾತನ್ನು ಜನ ಸಮರ್ಥಿಸುವುದಿಲ್ಲ.

ನಿಗಮದ ಪ್ರಕಾರ ಗೋನಾಳ್‌, ರಾಘವೇಂದ್ರ ಕಾಲೊನಿ ವಾಜಪೇಯಿ ಬಡಾವಣೆ ಹಾಗೂ ಬಿಸಿಲಹಳ್ಳಿಯ ಎರಡು ವಲಯಗಳಲ್ಲಿ ಏಳು ತಿಂಗಳಿಂದ ನೀರು ಪೂರೈಸಲಾಗುತ್ತಿದೆ. ಉಳಿದ ಐದು ವಲಯಗಳಾದ ತಾರಾನಾಥ ಆಸ್ಪತ್ರೆ ಪ್ರದೇಶ, ಮಿಲ್ಲರ್‌ಪೇಟೆ, ವಿ.ಆರ್‌.ಕಾಲೊನಿ, ರಾಮಯ್ಯ ಕಾಲೊನಿ ಮತ್ತು ಬಸವೇಶ್ವರ ನಗರ ವಲಯ ನೀರು ಪೂರೈಕೆಗೆ ಸಿದ್ಧತೆ ಪೂರ್ಣಗೊಂಡಿದೆ. ನೀರು ಪೂರೈಸಲಾಗುತ್ತಿದೆ ಎಂದು ನಿಗಮ ಹೇಳುವ ವಲಯಗಳ ಜನ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ನಮ್ಮ ಕಾಲೊನಿಯಲ್ಲಿ ಪೈಪ್‌ಲೈನ್‌ ಅಳವಡಿಸಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲವಾಯಿತು. ಒಮ್ಮೆ ತಪಾಸಣೆ ಸಲುವಾಗಿ ನೀರು ಬಂದಿದ್ದು ಬಿಟ್ಟರೆ ಮತ್ತೆ ಬರಲೇ ಇಲ್ಲ. ನಾವು ಕಾಯುತ್ತಲೇ ಇದ್ದೇವೆ’ ಎಂದು ರಾಘವೇಂದ್ರ ಕಾಲೊನಿಯ ಹರಿಕುಮಾರ್‌ ವಿಷಾದಿಸಿದರು.

‘ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ನಿಲ್ಲಿಸಿರುವುದರಿಂದ ಸದ್ಯಕ್ಕೆ ನೀರು ಪೂರೈಸುತ್ತಿಲ್ಲ. ಜೂನ್‌ ವೇಳೆಗೆ ಕಾಲುವೆ ನೀರು ಪೂರೈಕೆಯಾದ ಬಳಿಕ ಎಲ್ಲ ಹತ್ತು ವಲಯಗಳಿಗೂ ನೀರು ಹರಿಸಲಾಗುವುದು’ ಎಂದು ಮೊಯಿನುದ್ದೀನ್‌ ತಿಳಿಸಿದರು.

ಶಾಸಕರು ಗಮನ ಹರಿಸಲಿಲ್ಲ...

ಬಳ್ಳಾರಿ: 24*7 ಕುಡಿಯುವ ನೀರು ಪೂರೈಕೆ ಯೋಜನೆ ಜಾರಿ ಬಗ್ಗೆ ಹಾಗೂ 8–10 ದಿನಕ್ಕೊಮ್ಮೆ ನೀರು ಪೂರೈಸುವ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಶಾಸಕ ಅನಿಲ್‌ಲಾಡ್‌ ಗಂಭೀರ ಗಮನ ಹರಿಸಲಿಲ್ಲ ಎಂಬ ದೂರೂ ಇದೆ. ‘ಶಾಸಕರು ಗಮನ ಹರಿಸಿದ್ದರೆ ಜನ ಬವಣೆ ಪಡುವುದು ತಪ್ಪುತ್ತಿತ್ತು. ಆದರೆ ಅವರು ಒಮ್ಮೆಯೂ ಆ ಬಗ್ಗೆ ಮಾತನಾಡಲೇ ಇಲ್ಲ’ ಎಂಬುದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರ ಆರೋಪ. ‘ನಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೀರಿನ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

‘ನೀರು ಪೂರೈಕೆ ಯೋಜನೆ ಬಿಜೆಪಿಯ ಕನಸು. ನಾವು ಅಧಿಕಾರದಲ್ಲಿ ಇದ್ದಿದ್ದರೆ ವಿಳಂಬವಾಗಲು ಬಿಡುತ್ತಿರಲಿಲ್ಲ. ಆದರೆ ಈಗಿನ ಶಾಸಕರು ಆ ಕಡೆಗೆ ಗಮನವನ್ನೇ ಹರಿಸಲಿಲ್ಲ’ ಎಂದು ಬಿಜೆಪಿ ಮುಖಂಡ ಜಿ.ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

’ಶಾಸಕರ ನೇತೃತ್ವದಲ್ಲೇ ಯೋಜನೆ ಜಾರಿಯಾಗುತ್ತಿದೆ ಎಂಬುದನ್ನು ಅವರ ಟೀಕಾಕಾರರು ಮರೆತಿದ್ದಾರೆ. ಮನೆಗಳಿಗೆ ನಲ್ಲಿ, ಮೀಟರ್‌ ಅಳವಡಿಸಲಾಗಿದೆ. ಏಕಕಾಲಕ್ಕೆ ನೀರು ಪೂರೈಕೆ ಮಾಡುವುದು ಸಾಧ್ಯವಿಲ್ಲ. ಹಂತ ಹಂತವಾಗಿ ಪೂರೈಸಲಾಗುವುದು’ ಎಂದು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಹ್ಮದ್‌ ರಫೀಕ್‌ ಪ್ರತಿಕ್ರಿಯಿಸಿದರು.

**

ನಲ್ಲಿಗಳನ್ನು ನೋಡುತ್ತಾ ಒಂದೂವರೆ ವರ್ಷದಿಂದ ಕಾಯುತ್ತಿದ್ದೇವೆ. ನೀರು ಯಾವಾಗ ಬರುತ್ತೋ ಗೊತ್ತಿಲ್ಲ – ಬಿ.ವೀರೇಶ್,ಅಕುಲಚಲಮಯ್ಯ ಬೀದಿ ನಿವಾಸಿ.

**

ಡಿಸೆಂಬರ್‌ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವಿದೆ. ಗಡುವು ವಿಸ್ತರಿಸಲು ಕೋರಿ ಪ್ರಸ್ತಾವನೆ ಸಲ್ಲಿಸುತ್ತೇವೆ – ಖಾಜಾ ಮೊಯಿನುದ್ದೀನ್‌,
ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT