ಟಿಕೆಟ್ ತಪ್ಪಿದರೆ ಬಂಡಾಯ ಖಚಿತ: ಸುಧಾಕರ್

7
ಔರಾದ್‌: ಕಾಂಗ್ರೆಸ್‌ನಲ್ಲಿ ಬಗೆಹರಿಯದ ಟಿಕೆಟ್‌ ಗೊಂದಲ

ಟಿಕೆಟ್ ತಪ್ಪಿದರೆ ಬಂಡಾಯ ಖಚಿತ: ಸುಧಾಕರ್

Published:
Updated:

ಔರಾದ್: ಇಲ್ಲಿಯ ಮೀಸಲು ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತಂತೆ ಈವರೆಗೆ ಸ್ಪಷ್ಟ ನಿರ್ಧಾರ ಹೊರಬಾರದ ಹಿನ್ನೆಲೆಯಲ್ಲಿ ಗೊಂದಲ ಎದುರಾಗಿದೆ.

ಭೀಮಸೇನರಾವ್ ಸಿಂಧೆ ಅವರಿಗೆ ಟಿಕೆಟ್ ಘೋಷಣೆಯಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅವರ ಕೆಲ ಬೆಂಬಲಿಗರು ಮಂಗಳವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಕುರಿತು ಸಿಂಧೆ ಅವರನ್ನು ಸಂಪರ್ಕಿಸಿದಾಗ, ‘ಪಕ್ಷದ ಮುಖಂಡರು ನನಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ನಾನು ಕ್ಷೇತ್ರದಲ್ಲಿ ಓಡಾಡಿ ಜನರ ಬಳಿ ಮತ ಕೇಳುತ್ತಿದ್ದೇನೆ. ಕೆಲವರು ನನಗೆ ಟಿಕೆಟ್ ಖಚಿತ ಎಂದು ಪಟಾಕಿ ಹೊಡೆದಿರಬಹುದು. ಆದರೆ ಬಿ. ಫಾರ್ಮ್‌ ಸಿಕ್ಕಿದೆ ಮೇಲೆಯೇ ನಾನು ಪಕ್ಷದ ಅಧಿಕೃತ ಅಭ್ಯರ್ಥಿ’ ಎಂದರು.

ಸ್ಥಳೀಯರಿಗೆ ಟಿಕೆಟ್‌: ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಕಾಂಗ್ರೆಸ್‌ನ ಮತ್ತೊಂದು ಗುಂಪು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದೆ. ಭೀಮಸೇನರಾವ್ ಸಿಂಧೆ ಹೊಸ ಮುಖ. ಅವರಿಗೆ ಅಡಳಿತದಲ್ಲಿ ಅನುಭವ ಇರಬಹುದು. ಆದರೆ ರಾಜಕೀಯದಲ್ಲಿ ಅನುಭವ ಇಲ್ಲ. ಹೀಗಾಗಿ ಪಕ್ಷಕ್ಕೆ ದುಡಿದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದುಬು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ಬೇಡಿಕೆಯಾಗಿದೆ.

ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೊಳ್ಳೂರ್ ತಮಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ನಾನು 10 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷನಾಗಿ, ಎನ್‌ಎಸ್‌ಯುವೈ ಅಧ್ಯಕ್ಷನಾಗಿ, ಜಿಲ್ಲಾ ಉಪಾಧ್ಯಕ್ಷನಾಗಿ ಕೆಲಸ ಮಾಡಿದ ಅನುಭವ ಇದೆ. ಜತೆಗೆ ಸ್ಥಳೀಯ ಶಾಸಕ ಪ್ರಭು ಚವಾಣ್ ಅವರ ವಿರುದ್ಧ ನಿರಂತರ ಹೋರಾಟ ಮಾಡಿ ಪಕ್ಷದ ಕಾರ್ಯಕರ್ತರ ಜತೆಗಿದ್ದು ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಎಲ್ಲ ಊರಿನ ಜನರ ಜತೆ ಸಂಪರ್ಕ ಇದೆ. ಹೀಗಿರುವಾಗ ಏಕಾ ಏಕಿ ಪಕ್ಷ ಸೇರಿದವರಿಗೆ ಟಿಕೆಟ್ ಕೊಟ್ಟರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

**

ಭೀಮಸೇನರಾವ್ ಸಿಂಧೆ ಸೇರಿದಂತೆ ಯಾರಿಗೂ ಕಾಂಗ್ರೆಸ್ ಟಿಕೆಟ್ ಅಂತಿಮ ಆಗಿಲ್ಲ. ವಿನಾ ಕಾರಣ ಸಾಮಾಜಿಕ ಜಾಲ ತಾಣ ಬಳಸಿಕೊಂಡು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ – ಲಕ್ಷ್ಮಣ ಸೋರಳ್ಳಿ, ಕಾಂಗ್ರೆಸ್ ಮುಖಂಡ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry