ದಾಖಲೆ ಇಲ್ಲದ ₹ 1.96 ಕೋಟಿ ನಗದು ಪತ್ತೆ

7
ಅಬಕಾರಿ ಸಿಬ್ಬಂದಿ, ಪೊಲೀಸರಿಂದ ₹2.78 ಲಕ್ಷ ಮೌಲ್ಯದ ಮದ್ಯ ವಶ: ಚೆಕ್‌ಪೋಸ್ಟ್‌ಗಳಲ್ಲಿ ನಿಗಾ

ದಾಖಲೆ ಇಲ್ಲದ ₹ 1.96 ಕೋಟಿ ನಗದು ಪತ್ತೆ

Published:
Updated:

ಬೀದರ್: ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡವು ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಿ ದಾಖಲೆ ಇಲ್ಲದ₹ 1,96,55,150 ನಗದು ನಗದು ಪತ್ತೆ ಮಾಡಿದೆ.

ಬೀದರ್‌ ತಾಲ್ಲೂಕಿನ ಭಂಗೂರ್‌ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ಸಂಜೆ ಪೊಲೀಸರು ಕಾರು ತಪಾಸಣೆ ನಡೆಸಿ ಸಮರ್ಪಕ ದಾಖಲೆ ಇಲ್ಲದ ₹ 1.86 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಈಚೆಗೆ ಶಹಾಪುರ ಗೇಟ್‌ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ ₹ 2 ಲಕ್ಷ ಪತ್ತೆಯಾಗಿತ್ತು. ದಾಖಲೆಗಳನ್ನು ಒದಗಿಸಿದ ನಂತರ ಸಂಬಂಧಪಟ್ಟವರಿಗೆ ಹಣ ಮರಳಿಸಲಾಗಿದೆ. ಚಿಕ್ಕಪೇಟೆಯಲ್ಲಿ ₹ 1.60 ಲಕ್ಷ ಪತ್ತೆಯಾಗಿತ್ತು. ಜಮೀನು ಖರೀದಿಸಿದ ಹಣ ಕೊಡಲು ಹೊರಟಿರುವ ಬಗೆಗೆ ದಾಖಲೆ ಒದಗಿಸಿದ ನಂತರ ಹಣ ಮರಳಿಸಲಾಗಿದೆ. ದಾಖಲೆ ಒದಗಿಸದ ವ್ಯಕ್ತಿಗಳ ಹಣವನ್ನು ಖಜಾನೆಗೆ ಜಮಾ ಮಾಡಲಾಗಿದೆ. ಸರಿಯಾದ ದಾಖಲೆಗಳನ್ನು ತೋರಿಸಿ ಹಣ ಒಯ್ಯುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಏಪ್ರಿಲ್‌ 3 ರಂದು ಶಹಾಪುರ ಗೇಟ್‌ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅವರ ವಾಹನ ತಪಾಸಣೆ ನಡೆಸಿ ಬಿಜೆಪಿ ಚಿನ್ಹೆ ಇರುವ 96 ಶಲ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್‌ 4 ರಂದು ಶಹಾಪುರ ಗೇಟ್‌ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಹುಮನಾಬಾದ್‌ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಸೀಮೋದ್ದಿನ್‌ ಪಟೇಲ್‌ ಅವರ ಕಾರಿನಲ್ಲಿ ಜೆಡಿಎಸ್‌ನ 33 ಶಲ್ಯ, 26 ಟೊಪ್ಪಿಗೆ ಹಾಗೂ 46 ಧ್ವಜಗಳು ಪತ್ತೆಯಾಗಿವೆ.

ಇದೇ ದಿನ ಸ್ವಿಫ್ಟ್‌ ಕಾರ್‌ನಲ್ಲಿ ಸಾಗಿಸುತ್ತಿದ್ದ ಮಹಿಳಾ ಎಂಪಾವರ್‌ಮೆಂಟ್‌ ಪಾರ್ಟಿಯ 42 ಪೋಸ್ಟರ್ ಹಾಗೂ 750 ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏಪ್ರಿಲ್‌ 7 ರಂದು ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಸಮೀಪ ಉಮರ್ಗಾ– ಹುಮನಾಬಾದ್‌ ರಸ್ತೆಯಲ್ಲಿ ಇನ್ನೊವಾ ಕಾರಿನಲ್ಲಿ ಸಾಗಿಸುತ್ತಿದ್ದ ₹1,650 ಮೌಲ್ಯದ ಜೆಡಿಎಸ್‌ನ 55 ಪ್ಲಾಸ್ಟಿಕ್‌ ಧ್ವಜ, ₹ 4,200 ಮೌಲ್ಯದ 50 ಬಟ್ಟೆ ಧ್ವಜಗಳು ದೊರೆತಿವೆ. ಮಂಠಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಭಾನುವಾರ, ಔರಾದ್ ತಾಲ್ಲೂಕಿನ ಏಕಂಬಾ ಚೆಕ್‌ಪೋಸ್ಟ್‌ನಲ್ಲಿ ಟಾಟಾ ಏಸ್‌ ತಡೆದು ವಾಹನ ತಪಾಸಣೆ ನಡೆಸಿದಾಗ ₹ 1.65 ಲಕ್ಷ ಮೌಲ್ಯದ ಎಲ್‌ಇಡಿ ಟಿವಿಗಳು ಪತ್ತೆಯಾಗಿವೆ

ಮಹಾರಾಷ್ಟ್ರದ ಜಾಲನಾದಿಂದ ಔರಾದ್‌ಗೆ ತರಲಾಗುತ್ತಿತ್ತು, ಚಾಲಕ ಹಾಗೂ ಟಿವಿ ಒಯ್ಯುತ್ತಿದ್ದ ವ್ಯಕ್ತಿಯ ಹೇಳಿಕೆಯಲ್ಲಿ ಗೊಂದಲ ಇರುವ ಕಾರಣ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಚಾಲಕನ ವಿರುದ್ಧ ಔರಾದ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಔರಾದ್‌ ತಾಲ್ಲೂಕಿನ ಹೊಕ್ರಾಣದಲ್ಲಿ ಇಂಡಿಕಾ ಕಾರಿನಲ್ಲಿ ₹1,060 ಮೌಲ್ಯದ 7 ಜೆಡಿಎಸ್‌ ಧ್ವಜಗಳು ಹಾಗೂ 30 ಕರಪತ್ರಗಳು ದೊರೆತಿದ್ದು, ಹೊಕ್ರಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

932 ಲೀಟರ್ ಮದ್ಯ ವಶ

ಒಂದು ವಾರದ ಅವಧಿಯಲ್ಲಿ ಅಬಕಾರಿ ಸಿಬ್ಬಂದಿ 556 ಲೀಟರ್‌ ಮದ್ಯ ಹಾಗೂ ಪೊಲೀಸರು 372 ಲೀಟರ್‌ ಮದ್ಯ ಸೇರಿ ಒಟ್ಟು ₹ 2.78 ಮೌಲ್ಯದ 932 ಲೀಟರ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿ ವಿವಿಧೆಡೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡರೆ, ಜಿಲ್ಲೆಯ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಪತ್ತೆಯಾದ ಮದ್ಯವನ್ನು ವಶಕ್ಕೆ ತೆಗೆದುಕೊಂಡು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದ್ದಾರೆ.

ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

ಬೀದರ್‌: ತಾಲ್ಲೂಕಿನ ಭಂಗೂರು ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸ್ಥಾಪಿಸಲಾದ ಚೆಕ್‌ಪೋಸ್ಟ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಆರೋಪದ ಮೇಲೆ ಮನ್ನಳ್ಳಿ ಠಾಣೆಯ ಇಬ್ಬರು ಪೊಲೀಸರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಅಮಾನತುಗೊಳಿಸಿದ್ದಾರೆ. ಚುನಾವಣೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಹೆಡ್‌ ಕಾನ್‌ಸ್ಟೆಬಲ್ ಮಾರುತಿ ಹಾಗೂ ಕಾನ್‌ಸ್ಟೆಬಲ್‌ ಸೈವಾನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಡಿ.ದೇವರಾಜ್‌ ತಿಳಿಸಿದ್ದಾರೆ.

ಸಿಐಎಸ್‌ಎಫ್‌ ಭದ್ರತಾ ಪಡೆ

ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ(ಸಿಐಎಸ್ಎಫ್)ಯ ಭದ್ರಾಚಲಂ ಶಾಖೆ ಹಾಗೂ ಮಹಾರಾಷ್ಟ್ರದ ದೌಂಡ್‌ ಶಾಖೆಯ ಎರಡು ಕಂಪನಿಗಳು ಸೇರಿ ಒಟ್ಟು ನಾಲ್ಕು ಕಂಪನಿಗಳು ಬೀದರ್‌ಗೆ ಬಂದಿವೆ. ಬೀದರ್‌ ತಾಲ್ಲೂಕಿನ ಕಮಠಾಣ, ಬಗದಲ್‌, ಹುಮನಾಬಾದ್ ಹಾಗೂ ಭಾಲ್ಕಿಯಲ್ಲಿ ಸಿಐಎಸ್ಎಫ್ ನಿಯೋಜಿಸಲಾಗಿದೆ. ಒಂದು ಕಂಪನಿಯಲ್ಲಿ 85 ಸಿಬ್ಬಂದಿ ಇದ್ದಾರೆ. ಪ್ರಸ್ತುತ ಇವರನ್ನು ಚೆಕ್‌ಪೋಸ್ಟ್‌ಗಳಲ್ಲಿ ಬಳಸಲಾಗುತ್ತಿದೆ. ಪ್ರತಿ ಆರು ಗಂಟೆಗೆ ಸಿಬ್ಬಂದಿಯನ್ನು ಬದಲಿ ಮಾಡಲಾಗುತ್ತಿದೆ. ಜಿಲ್ಲೆಯ ಒಳಗೆ 19 ಹಾಗೂ ಗಡಿಯಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ.

**

ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾ ಮಟ್ಟದ ನಿಯಂತ್ರಣ ಸಮಿತಿಯ ಅನುಮತಿ ಪಡೆದು ಪತ್ರಿಕಾಗೋಷ್ಠಿ ನಡೆಸುವುದು ಕಡ್ಡಾಯವಾಗಿದೆ – ಆರ್‌.ಸೆಲ್ವಮಣಿ, ಜಿಲ್ಲಾ ಮಟ್ಟದ ನಿಯಂತ್ರಣ ಸಮಿತಿ ಅಧ್ಯಕ್ಷ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry