ಶುಕ್ರವಾರ, ಡಿಸೆಂಬರ್ 6, 2019
23 °C
ವನ್ಯಪ್ರಾಣಿಗಳೊಂದಿಗೆ ಸಂಘರ್ಷ, ನಿರುದ್ಯೋಗದ ನಡುವೆ ಹೈರಣಾದ ರೈತರ ಬದುಕು

ಸಮಸ್ಯೆಗಳ ಸರಮಾಲೆಯಲ್ಲಿ ಗುಂಡ್ಲುಪೇಟೆ!

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಸಮಸ್ಯೆಗಳ ಸರಮಾಲೆಯಲ್ಲಿ ಗುಂಡ್ಲುಪೇಟೆ!

ಚಾಮರಾಜನಗರ: ಜಿಲ್ಲೆಯ ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದಶಕಗ ಳಿಂದಲೂ ಬಾಧಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಹಬದಿಗೆ ತರುವ ಯತ್ನ ನಡೆದಿದೆಯಾದರೂ, ಇನ್ನುಳಿದ ಸಮಸ್ಯೆಗಳು ಮಕಾಡೆ ಮಲಗಿವೆ. ಇವುಗಳನ್ನು ಶಾಶ್ವತವಾಗಿ ನಿವಾರಿಸುವ ಯಾವುದೇ ಪ್ರಯತ್ನಕ್ಕೆ ಇಲ್ಲಿಯ ಜನಪ್ರತಿನಿಧಿಗಳು ಕೈ ಹಾಕಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ವನ್ಯಪ್ರಾಣಿಗಳೊಂದಿಗಿನ ಸಂಘ ರ್ಷಕ್ಕೆ ಪ್ರತಿ ವರ್ಷ ಹಲವು ಜೀವಗಳು ಬಲಿಯಾಗುತ್ತಲೇ ಇವೆ. ಕಾಡಂಚಿನ ಗ್ರಾಮಗಳಲ್ಲಿ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗುತ್ತಿದೆ. ರೈತಾಪಿ ವರ್ಗಕ್ಕೆ ವನ್ಯಪ್ರಾಣಿಗಳ ಕುರಿತು ದ್ವೇಷದ ಭಾವನೆ ಬೆಳೆಯುತ್ತಲೇ ಇದೆ. ಇಷ್ಟಾದರೂ ಈ ಸಮಸ್ಯೆ ನಿವಾರಣೆಗೆ ಯಾವುದೇ ಪರಿಣಾಮಕಾರಿ ಪ್ರಯತ್ನಗಳು ಸಾಗಿಲ್ಲ ಎಂದು ಕಾಡಂಚಿನ ವಾಸಿಗಳು ಆರೋಪಿಸುತ್ತಾರೆ.

ಕಾಡುಹಂದಿಗಳ ಹಾವಳಿ ಮೇರೆಮೀರಿದೆ. ಬೆಳೆ ಹಾಳು ಮಾಡು ವುದಕ್ಕಷ್ಟೇ ಸೀಮಿತವಾಗದ ಇವು ಈಗಾಗಲೇ ಇಬ್ಬರ ಸಾವಿಗೂ  ಕಾರಣವಾಗಿವೆ. ಆನೆಗಳ ದಾಳಿಯಂತೂ  ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಇವೆಲ್ಲದರ ಮಧ್ಯೆ ರೈತರ ಬದುಕು ಅಸಹನೀಯವಾಗತೊಡಗಿದೆ.

ಈಚೆಗೆ ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹುಲಿಗಳ ದಾಳಿ ಹೆಚ್ಚುತ್ತಿದೆ. ಕಾಡಂಚಿನಲ್ಲಿ ಮೇಯಲು ಹೋಗುವ ದನಕರುಗಳನ್ನು ಇವು ಕಬಳಿಸುತ್ತಿವೆ.

ಆನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ಕೈಗೊಂಡ ಹಲವು ಕ್ರಮಗಳು ವಿಫಲಗೊಂಡಿವೆ. ಸೌರಬೇಲಿ, ಆನೆಕಂದಕಗಳನ್ನು ದಾಟುವ ಮದಗಜಗಳು ಸಲೀಸಾಗಿ ಕೃಷಿ ಭೂಮಿಗೆ ನುಗ್ಗುತ್ತಿವೆ. ಓಂಕಾರ, ಕುಂದಕೆರೆ, ಮದ್ದೂರು, ಗೋಪಾಲಸ್ವಾಮಿ ಬೆ‌ಟ್ಟ, ಬಂಡೀಪುರ ವಲಯದ ಸುತ್ತಮುತ್ತಲ ಗ್ರಾಮಗಳ ಜನರು ಇದರಿಂದ ಹೈರಣಾಗಿದ್ದಾರೆ. ಓಂಕಾರ ಮತ್ತು ಯಡಿಯಾಲ ವಲಯದಲ್ಲಿ ಹಾಕಿರುವ ರೈಲು ಹಳಿ ಬೇಲಿ ಕೊಂಚಮಟ್ಟಿಗೆ ಸಮಸ್ಯೆಯನ್ನು ತಗ್ಗಿಸಿದ್ದರೂ ಉಳಿದ ಪ್ರಾಣಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ ಎಂದು ಬೇಗೂರಿನ ನಿವಾಸಿ ಭೃಂಗೇಶ್ ಹೇಳುತ್ತಾರೆ.

ಮುಗಿಯದ ವಲಸೆ ಕಥೆ: ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ಉದ್ಯೋಗ ಸೃಷ್ಟಿಸುವ ಯಾವುದೇ ಗಂಭೀರ ಯತ್ನಗಳು ಇದುವರೆಗೂ ನಡದೇ ಇಲ್ಲ ಎನ್ನುವಷ್ಟರಮಟ್ಟಿಗೆ ಪರಿಸ್ಥಿತಿ ಇದೆ. ವಲಸೆಗೆ ಜನ ಒಗ್ಗಿಕೊಂಡಿದ್ದಾರೆ. ನಂಜನಗೂಡಿಗೆ ಹತ್ತಿರ ಇರುವ ಹಳ್ಳಿಗಳ ಜನ ಕೂಲಿ ಕೆಲಸ ಅರಸಿ ಮೈಸೂರಿನತ್ತ ಬಂದರೆ, ಭೀಮನಬೀಡು, ಮದ್ದೂರು, ಚೆನ್ನಮಲ್ಲಿ ಪುರ, ಹೊಂಗಳ್ಳಿ, ಬೇರಂಬಾಡಿ, ಹಂಗಳ ಮೊದಲಾದ ಗ್ರಾಮಗಳ ಜನರು ಕೇರಳದತ್ತ ವಲಸೆ ಹೋಗುತ್ತಾರೆ. ಅಲ್ಲಿನ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ವಾಪಸ್ ಗ್ರಾಮಗಳಿಗೆ ಮರಳುತ್ತಾರೆ.

ತುಂಬದ ಕೆರೆಗಳು: ವಿಧಾನಸಭಾ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ನಿರೀಕ್ಷೆ ಇನ್ನೂ ಈಡೇರಿಲ್ಲ. ತಾಲ್ಲೂಕಿನಲ್ಲಿ ಒಟ್ಟು 5,037.43 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಕೆರೆಗಳಿವೆ. 73ಕ್ಕೂ ಅಧಿಕ ಕೆರೆಗಳು ಇವೆ. ಇವೆಲ್ಲವೂ ತುಂಬಿದ್ದರೇ ಅಂತರ್ಜಲದ ಸಮಸ್ಯೆ ನಿವಾರಣೆಯಾಗಿ ಬತ್ತಿದ ಕೊಳವಬಾವಿಗಳು ಪುನಶ್ಚೇತನಗೊಂಡು ರೈತರ ವಲಸೆಯನ್ನು ತಪ್ಪಿಸಬಹುದಿತ್ತು. ಆದರೆ, ಬೆರಳೆಣಿಕೆಯಷ್ಟು ಕೆರೆಗಳಿಗೆ ಮಾತ್ರ ನದಿಮೂಲದಿಂದ ನೀರು ತುಂಬಿಸಲಾಗುತ್ತಿದೆ.

ಮುಖ್ಯವಾಗಿ ಬಾಧಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಹಾಗೇ ಇದ್ದರೂ ಅದರ ವ್ಯಾಪ್ತಿ ಕುಗ್ಗಿರುವುದಂತೂ ನಿಜ. ₹ 205 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ ಕ್ಷೇತ್ರದ 131 ಗ್ರಾಮಗಳನ್ನು ತರಲಾಗಿದೆ. ಉಳಿದಂತೆ, ಇತರೆಡೆ ನೀರಿನ ಸಮಸ್ಯೆ ಢಾಳಾಗಿಯೇ ಗೋಚರಿಸುತ್ತಿದೆ.

ಸದ್ಯ, ಬಹುಗ್ರಾಮ ಕುಡಿಯುವ ನೀರು ಯೋಜನೆ ಯಲ್ಲಿ ಸಮರ್ಪಕವಾದ ನೀರು ಹಂಚಿಕೆ ನಡೆಯುತ್ತಿಲ್ಲ ಎಂಬ ಆರೋಪ ಗಳೂ ಕೇಳಿ ಬಂದಿವೆ. ಗುಂಡ್ಲುಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ವಾರ್ಡ್‌ಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಸಮಸ್ಯೆಗಳೇ ರಾಜಕಾರಣಿಗಳ ಬಾಯಲ್ಲಿ ಪದೇಪದೇ ಕೇಳಿ ಬರುತ್ತವೆ. ಚುನಾವಣೆ ನಂತರ ಎಲ್ಲರೂ ಸುಮ್ಮನಾಗುತ್ತಾರೆ. ಈ ಸಮಸ್ಯೆ ಗಳು ನೆನಪಾಗಬೇಕಾದರೆ ಮತ್ತೊಂದು ಚುನಾವಣೆ ಬರಬೇಕು ಎಂದು ವಿದ್ಯಾರ್ಥಿನಿ ಶ್ವೇತಾ ಪ್ರತಿಕ್ರಿಯಿಸುತ್ತಾರೆ.

ಸಮಸ್ಯೆಗಳಿಲ್ಲ, ಎಲ್ಲವೂ ನಿವಾರಣೆಯಾಗುತ್ತಿವೆ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಡುವ ಜ್ವಲಂತ ಸಮಸ್ಯೆಗಳಿಲ್ಲ ಎಂದರೆ ತಪ್ಪಾಗಲಾರದು. 131ಕ್ಕೂ ಅಧಿಕ ಹಳ್ಳಿಗಳಿಗೆ ನದಿಮೂಲದಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಶೇ 98ರಷ್ಟು ನಿವಾರಣೆಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. 34 ದೊಡ್ಡ ಕೆರೆಗಳು ತುಂಬಿವೆ. 400 ಎಕರೆ ವಿಸ್ತೀರ್ಣ ಇರುವ ಕಮರಹಳ್ಳಿ ಕೆರೆ ತುಂಬಲು 35 ದಿನಗಳೇ ಬೇಕು. ಇಲ್ಲಿರುವುದು ದೊಡ್ಡಕೆರೆಗಳೇ ಆಗಿರುವುದರಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಮಯ ಹಿಡಿಯುತ್ತದೆ. ವನ್ಯಪ್ರಾಣಿಗಳ ಸಂಘರ್ಷ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಗಿರಿಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆ ಮಹತ್ವದ್ದು. ಇದರಿಂದ ಜನರು ಸೌದೆಗಾಗಿ ಕಾಡಿಗೆ ಹೋಗುವುದು ತಪ್ಪಿದೆ. ಈ ಭಾಗದಲ್ಲಿ ಇರುವುದು ಶಾಶ್ವತ ವಲಸೆಯಲ್ಲ. ಹೆಚ್ಚಿನ ಕೂಲಿ ಸಿಗುವ ಕಡೆಗೆ ಜನರು ಹೋಗುವುದು ಸಾಮಾನ್ಯ. ಮತ್ತೆ ಅವರು ತಮ್ಮ ತವರಿಗೆ ವಾಪಸ್ಸಾಗುತ್ತಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ, ಆಗುತ್ತಿವೆ – ಎಂ.ಸಿ.ಮೋಹನಕುಮಾರಿ, ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.

ಸಾಕಷ್ಟು ಸಮಸ್ಯೆಗಳಿವೆ

ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪ್ರವಾಸೋದ್ಯಮಕ್ಕೆ ಯಾವುದೇ ಉತ್ತೇಜನ ನೀಡಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತಹಬದಿಗೆ ಬಂದಿಲ್ಲ. ಹಿಂದುಳಿದ ವರ್ಗದವರು ವಾಸ ಮಾಡುವ ಕಡೆ ಮೂಲಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ಅನೇಕ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಂಡಿಲ್ಲ. ನಿವೇಶನಗಳನ್ನು ರೂಪಿಸದೇ ಇರುವುದರಿಂದ ಚಿಕ್ಕಚಿಕ್ಕ ಮನೆಗಳಲ್ಲಿ ದೊಡ್ಡದೊಡ್ಡ ಸಂಸಾರಗಳು ವಾಸಿಸುವಂತಹ ಸ್ಥಿತಿ ಇದೆ – ಸಿ.ಎಸ್.ನಿರಂಜನ್‌ಕುಮಾರ್, ಬಿಜೆಪಿ ಟಿಕೆಟ್ ಆಕಾಂಕ್ಷಿ

ಅಭಿವೃದ್ಧಿಯಲ್ಲಿ ಹಿಂದೆ

ಗುಂಡ್ಲುಪೇಟೆ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಕೇವಲ ಸರ್ಕಾರಿ ಕಟ್ಟಡಗಳು ರಸ್ತೆಗಳನ್ನು ನಿರ್ಮಿಸಿ ಅಭಿವೃದ್ಧಿ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ಮಾನವ ಅಭಿವೃದ್ಧಿ, ಶಿಕ್ಷಣ ಕೈಗಾರಿಕೆ, ಸಾರ್ವಜನಿಕ ಆಸ್ಪತ್ರೆ, ಉದ್ಯೋಗ ಮುಂತಾದವುಗಳಲ್ಲಿ ಪ್ರಗತಿಯಾಗಿಲ್ಲ. ಈ ತಾಲ್ಲೂಕು ಬರಪೀಡಿತ ಪ್ರದೇಶವಾಗಿದ್ದು, ವ್ಯವಸಾಯಕ್ಕಾಗಿ ಮಳೆಯನ್ನು ಆಶ್ರಯಿಸಬೇಕಿದೆ. ನೀರಾವರಿ ಯೋಜನೆ ಹಾಕಿಕೊಂಡಿಲ್ಲ. ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನೆಯು ಇನ್ನೂ ಫೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ದಲಿತರ ಮತ್ತು ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರಿಗೆ ಕೆಲಸಗಳು ಸಿಗದೆ ನೆರೆ ರಾಜ್ಯಗಳಿಗೆ ಕೂಲಿಗಾಗಿ ವಲಸೆ ಹೋಗುತ್ತಿದ್ದಾರೆ. ವಿದ್ಯಾವಂತ ಯುವಕರು ಸಹ ಬೆಂಗಳೂರು ನಗರಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಯಾವುದೇ ಯೋಜನೆ ಕೈಗೊಂಡಿಲ್ಲ. ಪಟ್ಟಣದಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಸಾರ್ವಜನಿಕ ಶೌಚಾಲಯಗಳಿಲ್ಲದೆ ದೂರದ ಹಳ್ಳಿಗಳಿಂದ ಬರುವ ಜನರು ಪರದಾಡುವಂತಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಹೇಗೆ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೋ ಗೊತ್ತಿಲ್ಲ – ಸಂಪತ್ತು, ಬಿಎಸ್‍ಪಿ, ತಾಲ್ಲೂಕು ಘಟಕದ ಅಧ್ಯಕ್ಷ.

ಸಮಸ್ಯೆಗಳು ತಾಂಡವವಾಡುತ್ತಿವೆ

ದಲಿತರ ಕಾಲೋನಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಸಮಸ್ಯೆಗಳು ತಾಂಡವಾಡುತ್ತಿದೆ. ಅನೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿಗಳಾಗಿಲ್ಲ. 2013ರ ಮತ್ತು ಉಪಚುನಾವಣೆಯಲ್ಲಿ ದಲಿತರ ಗ್ರಾಮಗಳನ್ನು ಉದ್ದಾರ ಮಾಡುತ್ತೇವೆ ಎಂದು ಹೇಳಿ ಹೋದವರು ಇನ್ನೂ ತಿರುಗಿ ನೋಡಿಲ್ಲ. ಕೆಲವೊಂದು ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಯಾವುದೇ ಉಪಯೋಗವಾಗಿಲ್ಲ. ಕೇವಲ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಲಾಗಿದೆ – ಜಯರಾಮ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ.

ಪ್ರತಿಕ್ರಿಯಿಸಿ (+)