ಚುನಾವಣೆ: ಕವಲುದಾರಿಯಲ್ಲಿ ಮಹದಾಯಿ ಹೋರಾಟಗಾರರು

7

ಚುನಾವಣೆ: ಕವಲುದಾರಿಯಲ್ಲಿ ಮಹದಾಯಿ ಹೋರಾಟಗಾರರು

Published:
Updated:

ಹುಬ್ಬಳ್ಳಿ: ಮಹದಾಯಿ ಕಳಸಾ– ಬಂಡೂರಿ ನದಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂಬ ಒಂದೇ ಗುರಿ ಇಟ್ಟುಕೊಂಡು ಹೋರಾಟ ಸಂದರ್ಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಮುಖಂಡರು, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಹಾಗೂ ಬೆಂಬಲಿಸುವ ವಿಷಯದಲ್ಲಿ ಕವಲು ದಾರಿ ಹಿಡಿದಿದ್ದಾರೆ.

ಸಮಸ್ಯೆ ಪರಿಹಾರಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ತೀವ್ರವಾಗಿ ನಡೆದಿದೆ. ನೀರು ಬೇಕೇ, ಬೇಕು ಎಂಬ ಘೋಷಣೆಯನ್ನೇ ಎಲ್ಲರೂ ಮೊಳಗಿಸುತ್ತಿದ್ದರು. ಇವರ ಘೋಷಣೆಗೆ ಇಡೀ ಕರ್ನಾಟಕವೇ ಧ್ವನಿಗೂಡಿಸಿತ್ತು. ಆದರೆ, ಚುನಾವಣೆ ವಿಷಯದಲ್ಲಿ ಮಾತ್ರ ಹೋರಾಟಗಾರರು ಬೇರೆ, ಬೇರೆ ನಿಲುವು ತಳೆದಿದ್ದಾರೆ. ನರಗುಂದವನ್ನು ಕರ್ಮಭೂಮಿ ಯನ್ನಾಗಿಸಿಕೊಂಡಿದ್ದ ಕರ್ನಾಟಕ ಸೇನೆಯಲ್ಲಿ ಚುನಾವಣಾ ವಿಷಯ ಬಿರುಕು ಮೂಡಿಸಿದೆ. ಹೋರಾಟದ 1000ನೇ ದಿನದ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಹದಾಯಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಿದರೆ, ಬೆಂಬಲಿಸಲು ಕರ್ನಾಟಕ ರೈತ ಸೇನೆ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಅಧ್ಯಕ್ಷರು ಅಂತಹ ನಿರ್ಧಾರವನ್ನೇ ಮಾಡಿಲ್ಲ ಎನ್ನುವ ಮೂಲಕ ನನ್ನನ್ನು ವಿಲನ್‌ ಮಾಡಲು ಮುಂದಾಗಿದ್ದಾರೆ’ ಎಂದು ಕರ್ನಾಟಕ ರೈತ ಸೇನೆ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ತಿಳಿಸಿದರು.

‘ಸೊಬರದಮಠ ರಾಜಕೀಯವಾಗಿ ನನ್ನನ್ನು ಹೇಗೆ ಬಳಕೆ ಮಾಡಿಕೊಂಡರು ಎಂಬ ಪುರಾವೆಯನ್ನು ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ. ಮಹದಾಯಿಗಾಗಿ ಹೋರಾಡುವ ಹಕ್ಕು ಎಲ್ಲರಿಗೂ ಇದೆ. ಇನ್ನೆರಡು ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ’ ಎಂದರು.

‘ಸೇನೆಯಿಂದ ಚುನಾವಣೆಗೆ ಯಾರೂ ಸ್ಪರ್ಧಿಸುವುದಿಲ್ಲ. ಸೇನೆಯಲ್ಲಿದ್ದವರು ಸ್ಪರ್ಧಿಸಬಯಸಿದರೆ, ರಾಜೀನಾಮೆ ನೀಡಬೇಕು. ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ. ಮಹದಾಯಿ ಸಮಸ್ಯೆ ಬಗೆಹರಿಸಲು ಏನು ಮಾಡಿದ್ದೀರಿ ಎಂದು ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ಪ್ರಶ್ನಿಸುತ್ತೇವೆ’ ಎಂದು ಕರ್ನಾಟಕ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.

ನವಲಗುಂದವನ್ನು ಕೇಂದ್ರ ವಾಗಿಟ್ಟುಕೊಂಡು ಮಹದಾಯಿ ಕಳಸಾ–ಬಂಡೂರಿ ಪಕ್ಷಾತೀತ ಹೋರಾಟ ಸಮಿತಿ ಚಳವಳಿಯಲ್ಲಿ ತೊಡಗಿಸಿಕೊಂಡಿತ್ತು. ಈಗ ಅದಕ್ಕೆ ಹೋರಾಟ ವ್ಯಾಪ್ತಿಯ ಎಲ್ಲ ಪ್ರದೇಶಗಳ ನಾಯಕರನ್ನು ಸೇರಿಸಿಕೊಂಡು ಒಕ್ಕೂಟವಾಗಿ ಬದಲಾಯಿಸಿಕೊಳ್ಳಲಾಗಿದ್ದು, ಅದರಡಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಲಾಗಿದೆ.

‘ಒಕ್ಕೂಟದಿಂದ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ನಾನು, ನವಲಗುಂದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಇನ್ನಿತರರು ಬೇರೆ, ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಸೇನೆಗೂ, ನಮಗೂ ಸಂಬಂಧವಿಲ್ಲ. ಆದರೆ, ಚುನಾವಣೆಯಲ್ಲಿ ಸೇನೆಯಿಂದ ಬೆಂಬಲ ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.

ಕಳಸಾ–ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರು ಸೇರಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ ಅಸ್ತಿತ್ವಕ್ಕೆ ತಂದಿದ್ದಾರೆ. ‘ವೇದಿಕೆ ವತಿಯಿಂದ ನಿಂತರೆ ಒಬ್ಬೊಬ್ಬರಿಗೆ ಒಂದೊಂದು ಚಿಹ್ನೆ ದೊರೆಯುತ್ತದೆ. ಆದ್ದರಿಂದ, ಹೊಸ ಪಕ್ಷವೊಂದರಿಂದ ಒಂದೇ ಚಿಹ್ನೆಯಡಿ ಸ್ಪರ್ಧಿಸುವ ಚಿಂತನೆ ನಡೆಸಿದ್ದೇವೆ’ ಎನ್ನುತ್ತಾರೆ ವೇದಿಕೆ ಸಂಚಾಲಕ ವಿಕಾಸ ಸೊಪ್ಪಿನ.

**

ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯಾದವರು, ಸೋತವರು ಮತ್ತೆ ಹೋರಾಟಕ್ಕೆ ಬಂದಿಲ್ಲ. ಹಾಗಾಗಿ, ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ  – ವೀರೇಶ ಸೊಬರದಮಠ, ಅಧ್ಯಕ್ಷ, ಕರ್ನಾಟಕ ರೈತ ಸೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry