ಶುಕ್ರವಾರ, ಡಿಸೆಂಬರ್ 6, 2019
26 °C
ಆರು ವರ್ಷದಿಂದ ತೆವಳುತ್ತಾ ಸಾಗಿರುವ ಕಾಮಗಾರಿ; ಯೋಜನೆ ಶೀಘ್ರ ಪೂರ್ಣಕ್ಕೆ ರಾಜಕೀಯ ಹಿತಾಸಕ್ತಿ ಕೊರತೆ

ಬಿಆರ್‌ಟಿಎಸ್‌ ಎಂಬ ‘ಮಾಯಾ ಚಿಗರಿ’

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಬಿಆರ್‌ಟಿಎಸ್‌ ಎಂಬ ‘ಮಾಯಾ ಚಿಗರಿ’

ಹುಬ್ಬಳ್ಳಿ: ವಾಣಿಜ್ಯನಗರಿ ಮತ್ತು ಶಿಕ್ಷಣ ಕಾಶಿ ಎಂಬ ಹಿರಿಮೆ ಹೊಂದಿರುವ ಅವಳಿ ನಗರಗಳಾದ ಹುಬ್ಬಳ್ಳಿ–ಧಾರವಾಡ, ಅಭಿವೃದ್ಧಿಯ ದೃಷ್ಟಿಯಲ್ಲಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಪ್ರದೇಶಗಳು. ವಿಮಾನ ನಿಲ್ದಾಣ, ನೈರುತ್ಯ ರೈಲ್ವೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಐಐಟಿ ಹಾಗೂ ಸ್ಮಾರ್ಟ್‌ ಸಿಟಿ ಇಲ್ಲಿನ ಹೆಮ್ಮೆಯ ಪ್ರತೀಕ. ಇವುಗಳ ಜತೆಗೆ, ಕೂಡಿಸಿ ನೋಡಲೇಬೇಕಾದ ಮತ್ತೊಂದು ಯೋಜನೆ ಬಿಆರ್‌ಟಿಎಸ್‌ (ತ್ವರಿತಗತಿಯ ಸಾರಿಗೆ ವ್ಯವಸ್ಥೆ).ಅಂದಾಜು 10 ಲಕ್ಷ ಜನಸಂಖ್ಯೆ ಹೊಂದಿರುವ ಅವಳಿನಗರದ ಮಧ್ಯೆ, ನಿತ್ಯ 1.75 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹಾಗಾಗಿ, ಈ ಮಾರ್ಗದಲ್ಲಿ ಶೀಘ್ರ ಸಂಚಾರ ಸೇತು ಬೆಸೆಯುವುದು ಬಿಆರ್‌ಟಿಎಸ್ ಪ್ರಮುಖ ಉದ್ದೇಶ. 22 ಕಿಲೋಮೀಟರ್ ದೂರದ 45 ನಿಮಿಷದ ಪ್ರಯಾಣ ಅಂದರೆ ಅವಧಿಯನ್ನು 30 ನಿಮಿಷಕ್ಕೆ ಇಳಿಸುವುದಾಗಿದೆ.

ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರವನ್ನು ಪ್ರತಿನಿಧಿಸುವ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಆರ್‌ಟಿಎಸ್‌ ಯೋಜನೆ ಮಂಜೂರಾಯಿತು. 2012ರಲ್ಲಿ ಯೋಜನೆಗೆ ಚಾಲನೆ ಸಿಕ್ಕಾಗ ಇದ್ದ ಯೋಜನಾ ವೆಚ್ಚ ₹692 ಕೋಟಿ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು.

72.29 ಎಕರೆ ಭೂಮಿ ವಶ

ಯೋಜನೆ ಪ್ರಕಾರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಷಟ್ಪಥ ಹಾಗೂ ಹೊರವಲಯದಲ್ಲಿ ಅಷ್ಟಪಥ ರಸ್ತೆ ನಿರ್ಮಾಣವಾಗಲಿದೆ. ಇದಕ್ಕಾಗಿ 72.29 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿಯ ಹೊಸೂರ ಬಳಿ ಸುಸಜ್ಜಿತವಾದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ, ಗೋಕುಲ ರಸ್ತೆಯಲ್ಲಿ ಬಸ್ ಕಾರ್ಯಾಗಾರ, ಧಾರವಾಡದಲ್ಲಿ ಬಸ್‌ ಡಿಪೊ ಹಾಗೂ ಧಾರವಾಡ ಹಳೇ ಬಸ್‌ ನಿಲ್ದಾಣದಲ್ಲಿ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳು ತಲೆ ಎತ್ತಲಿದ್ದು, ಕಾಮಗಾರಿ ನಡೆಯುತ್ತಿದೆ.

4,500 ಮರಗಳಿಗೆ ಕೊಡಲಿ: ಯೋಜನೆಗಾಗಿ ಒಟ್ಟು 4,500 ಮರಗಳನ್ನು ನೆಲಕ್ಕುರುಳಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಈಗಾಗಲೇ ನವಲೂರು ಗುಡ್ಡ, ನೃಪತುಂಗ ಬೆಟ್ಟ ಸೇರಿದಂತೆ ವಿವಿಧ ಸ್ಥಳಗಲ್ಲಿ ಒಟ್ಟು 25,400 ಸಸಿ ನೆಡಲಾಗಿದೆ. ಇತ್ತೀಚಿನ ವರದಿ ಪ್ರಕಾರ, ನೆಟ್ಟ ಸಸಿಗಳ ಪೈಕಿ 15,372 ಬದುಕಿವೆ ಎಂದು ಬಿಆರ್‌ಟಿಎಸ್ ಅಧಿಕಾರಿಗಳು ಹೇಳುತ್ತಾರೆ.

ಯೋಜನಾ ಪ್ರದೇಶದ ದಾರಿಯಲ್ಲಿ ಬರುವ 17 ಧಾರ್ಮಿಕ ಕೇಂದ್ರಗಳ ಪೈಕಿ 13 ಅನ್ನು ತೆರವು ಮಾಡಲಾಗಿದೆ. ಇನ್ನು ನಾಲ್ಕು ಕೇಂದ್ರಗಳ ತೆರವು ಆಗಬೇಕಿದೆ.

ನಿಲ್ದಾಣಗಳು 52ರಿಂದ 31ಕ್ಕೆ ಇಳಿಕೆ: ಅವಳಿನಗರದ ಮಧ್ಯೆ ಸದ್ಯ 52 ಬಸ್ ನಿಲ್ದಾಣಗಳಿವೆ.

ಈ ಸಂಖ್ಯೆಯನ್ನು 31ಕ್ಕೆ ಇಳಿಸುವುದು ಬಿಆರ್‌ಟಿಎಸ್ ಗುರಿ. ಈ ನಿಟ್ಟಿನಲ್ಲಿ ತಲಾ ಒಂದು ಬಸ್‌ ನಿಲ್ದಾಣವನ್ನು ಬರೋಬ್ಬರಿ ₹ 1.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬ್ಯಾರಿಕೇಡ್ ವ್ಯವಸ್ಥೆ, ಸಿಸಿ ಟಿ.ವಿ ಕ್ಯಾಮೆರಾ ನಿಗಾ, ಜಿಪಿಎಸ್ ಅಳವಡಿಕೆ, ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್‌, ಪ್ಲಾಟ್‌ಫಾರ್ಮ್‌ ಡಿಸ್‌ಪ್ಲೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿರಲಿವೆ.

ಒಂದು ರೈಲ್ವೆ ಮೇಲ್ಸೆತುವೆ ಸೇರಿದಂತೆ 4 ಮೇಲ್ಸೇತುವೆಗಳು. ಬಸ್‌ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ 8 ಸ್ಕೈವಾಕ್‌ಗಳು ತಲೆ ಎತ್ತುತ್ತಿವೆ. ನವನಗರ, ಉಣಕಲ್ ಹಾಗೂ ಮೇಧಾ ಪಿಯು ಕಾಲೇಜು ಬಳಿ ಮೇಲ್ಸೇತುವೆ ಹಾಗೂ ನವಲೂರು ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.

₹ 904 ಕೋಟಿಗೆ ಜಿಗಿದ ಮೊತ್ತ: ಯೋಜನೆ ಆರಂಭಗೊಂಡ ಮೇಲೆ ಯೋಜನೆಯಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಜತೆಗೆ ಯೋಜನೆ ವಿಳಂಬದಿಂದಾಗಿ ವೆಚ್ಚ ಹೆಚ್ಚಾಗುತ್ತಲೇ ಸಾಗಿದ್ದು, ₹ 692 ಕೋಟಿಯಿಂದ ₹ 904 ಕೋಟಿಗೆ ಜಿಗಿದಿದೆ.

130 ಬಸ್ ಖರೀದಿ: ಬಿಆರ್‌ಟಿಎಸ್‌ಗಾಗಿ ₹ 400 ಕೋಟಿ ವೆಚ್ಚದಲ್ಲಿ 130 ಬಸ್‌ಗಳ ಖರೀದಿ ಮಾಡಲಾಗಿದೆ. ಈ ಪೈಕಿ, 30 ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಉಳಿದ 100 ಸಾಮಾನ್ಯ ಬಸ್‌ಗಳಿವೆ. ‘ಚಿಗರಿ’ ಹೆಸರಿನ ಈ ಬಸ್‌ಗಳು ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ಸಂಚಾರ ನಡೆಸಲಿವೆ. 2–3 ನಿಮಿಷಕ್ಕೊಂದು ಬಸ್‌ ಸಂಚರಿಸಲಿದೆ. ಬಸ್‌ನಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಬಿಆರ್‌ಟಿಎಸ್‌ಗೆ ಅಂದಾಜು 600 ನೌಕರರ ಅಗತ್ಯವಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಒಪ್ಪಂದದ ಮಾಡಿಕೊಂಡು ತೆಗೆದುಕೊಳ್ಳಲಾಗುವುದು.

ಕೋರ್ಟ್‌ನಲ್ಲಿವೆ 160 ಪ್ರಕರಣ: ಯೋಜನೆಯ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಇದುವರೆಗೆ, ಒಟ್ಟು 160 ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ‘ಹೈಕೋರ್ಟ್‌ನಲ್ಲಿ 95 ಪ್ರಕರಣಗಳಲ್ಲಿ 57 ಇತ್ಯರ್ಥಗೊಂಡಿವೆ. ಅಧೀನ ನ್ಯಾಯಾಲಯದಲ್ಲಿದ್ದ 65 ಪ್ರಕರಣಗಳಲ್ಲಿ ನಾಲ್ಕು ಮಾತ್ರ ಇತ್ಯರ್ಥವಾಗಿವೆ. ಹೆಚ್ಚುವರಿ ಪರಿಹಾರ ಸೇರಿದಂತೆ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು ಇವಾಗಿದ್ದು, ಕಾಮಗಾರಿಗೆ ಯಾವುದೇ ತಡೆ ಇಲ್ಲ’ ಎಂದು ಬಿಆರ್‌ಟಿಎಸ್ ಅಧಿಕಾರಿ ಕೊಟ್ರಯ್ಯ ಟಿ.ಕೆ.ಎಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲಮಿತಿ’ ಎಂಬ ಜೋಕ್: ಬಿಆರ್‌ಟಿಎಸ್‌ ಕಾಲಮಿತಿ ಅವಧಿ ವಿಸ್ತರಣೆಯಾಗುತ್ತಲೇ ಇದೆ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಎಲ್ಲರೂ ಕಾಲಮಿತಿಗೆ ನೀಡಿರುವ ಹೇಳಿಕೆಗಳು ಲೆಕ್ಕಕ್ಕೆ ಇಲ್ಲ. 2014ಕ್ಕೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ, ಒಂದಲ್ಲ ಒಂದು ಕಾರಣದಿಂದಾಗಿ ಕಾಲಮಿತಿಯನ್ನು ಮುಂದೂಡಿಕೊಂಡು ಬರಲಾಗುತ್ತಿದೆ. 2018ರ ಮಾರ್ಚ್‌ ಅಂತ್ಯಕ್ಕೆ ನೀಡಿದ ಗಡುವು ಕೂಡಾ ಮುಗಿದಿದೆ. ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.ಯೋಜನೆಗೆ ಚಾಲನೆ ಸಿಕ್ಕ ಅವಧಿ ಯಿಂದ ಇಲ್ಲಿಯವರೆಗೆ ಬಿಆರ್‌ಟಿಎಸ್‌ಗೆ ನಾಲ್ಕು ವ್ಯವಸ್ಥಾಪಕ ನಿರ್ದೇಶಕರನ್ನು ಕಂಡಿದೆ.

ತಪ್ಪದ ನರಕಯಾತನೆ

ಪೊಲೀಸ್ ಮೂಲದ ಪ್ರಕಾರ, ಬಿಆರ್‌ಟಿಎಸ್‌ ಕಾಮಗಾರಿ ಆರಂಭವಾದ ಮೇಲೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 45ಕ್ಕೂ ಅಧಿಕ ಜನ ತೀವ್ರವಾಗಿ ಗಾಯಗೊಂಡಿದ್ದರೆ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ನಿತ್ಯ ಸಂಚಾರ ದಟ್ಟಣೆ, ದೂಳಿನ ಮಜ್ಜನ, ಸಂಪರ್ಕ ರಸ್ತೆಗಳ ಕಡಿತ ಅವಳಿನಗರದ ಜನರ ನಿದ್ದೆಗೆಡಿಸಿದೆ.

ದುರಾಸೆಯ ಯೋಜನೆ: ನರಗುಂದ ‘ಅಭಿವೃದ್ಧಿಯ ದೃಷ್ಟಿಕೋನ ಇಲ್ಲದವರ, ದುಡ್ಡಿನ ದುರಾಸೆಯ ಯೋಜನೆ ಇದಾಗಿದೆ. ಯೋಜನೆ ಬಗ್ಗೆ

ಯಾರೂ ನಿಗಾ ವಹಿಸುತ್ತಿಲ್ಲ. ಇದರಿಂದಾಗಿ, ಬಳಲಿದ್ದು ಮಾತ್ರ ಎರಡೂ ನಗರಗಳ ನಾಗರಿಕರು’ ಎನ್ನುತ್ತಾರೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಸಂತೋಷ್ ನರಗುಂದ.

‘ಬಿಆರ್‌ಟಿಎಸ್‌ನ 32 ಬಸ್‌ ನಿಲ್ದಾಣಗಳಲ್ಲಿ ಒಂದೊಂದು ನಿಮಿಷ ನಿಂತರೂ 30 ನಿಮಿಷ ಬೇಕಾಗುತ್ತದೆ. ಹೀಗಾಗಿ, ಸಮಯ ಹೆಚ್ಚು ಹಿಡಿಯಲಿದೆ. ತ್ವರಿತ ಸಾರಿಗೆಗಾಗಿ ಬಿಆರ್‌ಟಿಎಸ್ ಎಂಬ ಅವೈಜ್ಞಾನಿಕ ಯೋಜನೆಯನ್ನು ತರುವ ಅಗತ್ಯವೇನಾದರೂ ಏನಿತ್ತು? ರಸ್ತೆ ಪಕ್ಕದ ಒಳಚರಂಡಿಗಳನ್ನು ಬೇಕಾಬಿಟ್ಟಿ ನಿರ್ಮಿಸಲಾಗಿದೆ’ ಎಂದು ನರಗುಂದ ಆರೋ‍ಪಿಸುತ್ತಾರೆ.

ಇಚ್ಛಾಶಕ್ತಿ ಕೊರತೆ: ಬಿಆರ್‌ಟಿಎಸ್ ಯೋಜನೆಯ ಗತಿ ಸಾಗುತ್ತಿರುವ ಪರಿ ಗಮನಿಸಿದರೆ, ನಿಜವಾಗಿಯೂ ಯೋಜನೆಯ ಉದ್ದೇಶ ಸಾಕಾರವಾಗಲಿದೆಯೇ? ಎಂಬ ಅನುಮಾನ ನಾಗರಿಕರನ್ನು ಕಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆತರೆ, ಹೊಣೆಗಾರಿಕೆ ಹೇಗೆ ಮಾಯವಾಗುತ್ತದೆ ಎಂಬುದಕ್ಕೆ ಈ ಯೋಜನೆ ನಿದರ್ಶನವಾಗಿದೆ.

ಇಂದಿಗೂ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಗಡುವು ನೀಡಲು ಸ್ವತಃ ಬಿಆರ್‌ಟಿಎಸ್ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ಈ ಸಲದ ಚುಣಾವಣೆಯಲ್ಲಿ ಬಿಆರ್‌ಟಿಎಸ್‌ ಯೋಜನೆ ಒಂದು ಪ್ರಮುಖ ವಿಷಯವಾಗಿದೆ.

‘ಸಾಧಕ– ಬಾಧಕ ಅರಿತು ಸರ್ಜರಿ’

ಅವಳಿನಗರದ ಜನತೆಗೆ ಬಿಆರ್‌ಟಿಎಸ್ ಯೋಜನೆ ಕಾಮಗಾರಿ ವೈಖರಿ ಸಮಾಧಾನ ತಂದಿಲ್ಲ. ಜತೆಗೆ ಇಂತಹದೇ ಯೋಜನೆ ದೇಶದ ಕೆಲವೆಡೆ ಈಗಾಗಲೇ ಜಾರಿಯಾಗಿ ವೈಫಲ್ಯ ಕಂಡಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದರೆ, ಯೋಜನೆ ಜಾರಿ ಬಳಿಕ ಸಾಧಕ– ಬಾಧಕಗಳನ್ನು ನೋಡಿಕೊಂಡು ಯೋಜನೆಗೆ ಅಗತ್ಯ ಸರ್ಜರಿ ಮಾಡಲಾಗುವುದು. ಸದ್ಯ ಮಾಡಿರುವುದು ಫಾಸ್ಟ್ ಟ್ರಾಕ್ಟ್. ರಸ್ತೆ ಮಧ್ಯೆ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಅಲ್ಲಿಗೆ ಬರಲು ಕೆಳ ಸೇತುವೆ, ಸ್ಕೈವಾಕ್ ಸೇರಿದಂತೆ ಅಗತ್ಯ ವ್ಯವಸ್ಥೆ ಇಲ್ಲ. ಯೋಜನೆ ಜಾರಿ ಬಳಿಕ ಇನ್ನೂ ಹಲವು ಸಮಸ್ಯೆಗಳು ಎದುರಾಗಲಿವೆ.  ಎಲ್ಲ ವಿಷಯಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ, ಆರ್ಥಿಕವಾಗಿ ಹೊರಯಾಗದಂತೆ ಅಗತ್ಯ ಮಾರ್ಪಾಡು ಮಾಡಲು ನಮ್ಮ ಸರ್ಕಾರ ಬದ್ಧವಾಗಿರುತ್ತದೆ – ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ

‘ಪ್ರಾಕ್ಟಿಕಲ್ ಸಮಸ್ಯೆಗಳಿಗೆ ಸ್ಪಂದನೆ’

ಗುತ್ತಿಗೆದಾರರು, ಭೂ ಸ್ವಾಧೀನ, ಧಾರ್ಮಿಕ ಕೇಂದ್ರಗಳ ತೆರವು ಸಮಸ್ಯೆಗಳಿಂದಾಗಿ ಬಿಆರ್‌ಟಿಎಸ್‌ ಯೋಜನೆ ಕುಂಟುತ್ತಾ ಸಾಗಿದೆ. ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಚಾಲನೆ ಸಿಕ್ಕ ಬಳಿಕವೂ, ರಸ್ತೆ ದಾಟುವುದು (ಕ್ರಾಸಿಂಗ್) ಸೇರಿದಂತೆ ಅನೇಕ ಪ್ರಾಕ್ಟಿಕಲ್ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆಗಳಿಗೆ ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಜನಪ್ರತಿನಿಧಿಗಳು ಕೂಡ ಸ್ಪಂದಿಸಬೇಕಾಗಿದೆ. ನಮ್ಮ ಸರ್ಕಾರ ಆ ಕೆಲಸವನ್ನು ಮಾಡಲಿದೆ. ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಸಂಪರ್ಕ ಸೇತು ಬೆಸೆಯುವ ಒಳ್ಳೆಯ ಯೋಜನೆ. ಬೈಪಾಸ್ ಮಾಡಿದರೂ, ಒಂದು ನಗರದಿಂದ ಮತ್ತೊಂದು ನಗರ ತಲುಪಲು 1 ಗಂಟೆ ಬೇಕಾಗುತ್ತಿದೆ. ಅಷ್ಟಪಥ ರಸ್ತೆ ಮಾಡುವುದರಿಂದ, ಮುಂದಿನ 50 ವರ್ಷ ಯಾವುದೇ ತೊಂದರೆಯಾಗುವುದಿಲ್ಲ – ಪ್ರಸಾದ ಅಬ್ಬಯ್ಯ, ಶಾಸಕ, ಪೂರ್ವ ವಿಧಾನಸಭಾ ಕ್ಷೇತ್ರ

‘ಯೋಜನೆ ಪೂರ್ಣಕ್ಕೆ ಒತ್ತು’

ಯೋಜನೆ ಜಾರಿ ವಿಳಂಬಕ್ಕೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳನ್ನು ದೂರುತ್ತಾ ಕುಳಿತರೆ ಪ್ರಯೋಜನವಿಲ್ಲ. ಬದಲಿಗೆ, ಯಾವ ಹಂತದಲ್ಲಿ ಕಾಮಗಾರಿಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸಬೇಕೆಂಬುದನ್ನು ಅರಿತು ಬಿಜೆಪಿ ಕಾರ್ಯ ಪ್ರವೃತ್ತವಾಗಲಿದೆ. ಬಿಆರ್‌ಟಿಎಸ್ ನಮ್ಮ ಹೆಮ್ಮೆ ಎಂದುಕೊಂಡು ಎಲ್ಲರೂ ಕೈ ಜೋಡಿಸಬೇಕು. ಬಿಆರ್‌ಟಿಎಸ್ ಯೋಜನೆ ಉತ್ತಮ ಉದ್ದೇಶವನ್ನು ಹೊಂದಿದ್ದರೂ, ಜಾರಿಯಲ್ಲಾದ ಯಡವಟ್ಟಿನಿಂದಾಗಿ ಯೋಜನೆ ಬಗ್ಗೆ ನಾಗರಿಕರ ಅಸಮಾಧಾನ ಹೊಂದುವಂತಾಗಿದೆ. ಯೋಜನೆಯ ಗುತ್ತಿಗೆಯನ್ನು ಒಬ್ಬರಿಗಷ್ಟೇ ಕೊಟ್ಟಿದ್ದರೆ, ಇಷ್ಟೊತ್ತಿಗಾಗಲೇ ಬಿಆರ್‌ಟಿಎಸ್‌ ಸೇವೆ ಆರಂಭವಾಗಿರುತ್ತಿತ್ತು. ಒಂದೊಂದು ಕಾಮಗಾರಿಯನ್ನು ಒಂದೊಂದು ಏಜೆನ್ಸಿಗೆ ವಹಿಸಿದ್ದೇ ಯೋಜನೆಯ ವಿಳಂಬಕ್ಕೆ ಕಾರಣವಾಯಿತು –  ಅರವಿಂದ ಬೆಲ್ಲದ, ಶಾಸಕ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ.

**

ಪರ್ಯಾಯ ಮಾರ್ಗದ ಬಗ್ಗೆ ಬಿಆರ್‌ಟಿಎಸ್‌ತಲೆ ಕೆಡಿಸಿಕೊಂಡಿಲ್ಲ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವ ಸವಾರ ನರಕಯಾತನೆ ಅನುಭವಿಸಬೇಕಾಗಿದೆ – ಮಂಜುನಾಥ ಹೆಬಸೂರ, ಈಶ್ವರ ನಗರ.

**

ಯೋಜನೆ ಉತ್ತಮವಾಗಿದ್ದರೂ, ಅದರ ಅನುಷ್ಠಾನದಲ್ಲಿ ನಮ್ಮ ಜನಪ್ರತಿನಿಧಿಗಳ ವೈಫಲ್ಯ ಎದ್ದು ಕಾಣುತ್ತದೆ. ಈ ವರ್ಷವಾದರೂ, ಕಾಮಗಾರಿ ಮುಗಿಸಿ ನಾಗರಿಕರ ಬವಣೆ ತಪ್ಪಿಸಿ – ಎಸ್‌.ಕೆ. ಹೇಮಂತ್, ಧಾರವಾಡ

**

ಬಿಆರ್‌ಟಿಎಸ್‌ ಯೋಜನೆಯಿಂದಾಗಿ ಪಿ.ಬಿ. ರಸ್ತೆ ಚಹರೆ ಬದಲಾಗಿದೆ. ಸಾಲುಮರಗಳು ಮರೆಯಾಗಿವೆ. ಯೋಜನೆ ಪೂರ್ಣಗೊಂಡ ಬಳಿಕವಾದರೂ, ಸಸಿ ನೆಟ್ಟು ರಸ್ತೆಯನ್ನು ಹಸಿರು ಮಾರ್ಗವನ್ನಾಗಿಸಬೇಕು – ಗಾಯತ್ರಿ ಪಾಟೀಲ,ವಿದ್ಯಾನಗರ.

**

ಪ್ರತಿಕ್ರಿಯಿಸಿ (+)