ಮಹದಾಯಿ: ರೈತರು ಒಗ್ಗಟ್ಟು ಪ್ರದರ್ಶಿಸಿ

7
ನರಗುಂದದಲ್ಲಿ 1001ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಧರಣಿ

ಮಹದಾಯಿ: ರೈತರು ಒಗ್ಗಟ್ಟು ಪ್ರದರ್ಶಿಸಿ

Published:
Updated:

ನರಗುಂದ: ಮಹದಾಯಿ ಹೋರಾಟ ಅಡಗಿಸಲು ನಿರಂತರ ಷಡ್ಯಂತ್ರ ನಡೆಯುತ್ತಲೇ ಇದೆ. ಈಗ ಚುನಾವಣೆ ಹೊಸ್ತಿಲಲ್ಲಿ ಅದು ಹೆಚ್ಚಾಗಿದೆ. ಆದ್ದರಿಂದ ಹೋರಾಟಗಾರರು ಸೇರಿದಂತೆ ರೈತರು ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವಾಗಿದೆ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ವಾಸು ಚವ್ಹಾಣ ಸಲಹೆ ಮಾಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1001ನೇ ದಿನವಾದ ಬುಧವಾರ ಮಾತನಾಡಿದರು. ಮಹದಾಯಿ ಹೋರಾಟ ದಾಖಲೆ ಬರೆದು ಜನಾಂದೋಲನವಾಗಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಮೂರು ವರ್ಷಗಳ ಹೋರಾಟ ಗುರಿ ತಲುಪಬೇಕಿದೆ. ಇದಕ್ಕೆ ಎಲ್ಲರ ಸಹಕಾರ ದೊರೆಯಬೇಕಿದೆ. ಈಗಾಗಲೇ ನಿರ್ಣಯ ತೆಗೆದುಕೊಂಡಂತೆ ಅಭ್ಯರ್ಥಿಗಳನ್ನು ಮಹದಾಯಿ ಬಗ್ಗೆ ಪ್ರಶ್ನಿಸಬೇಕಿದೆ. ಅಭ್ಯರ್ಥಿಗಳಿಗೆ ರೈತರಿಂದ ಪಾಠವಾಗಬೇಕಿದೆ. ಮಹಿಳೆಯರು ಇದರ ಬಗ್ಗೆ ಜಾಗೃತಿಗೊಂಡು ಮಹದಾಯಿ ಅನುಷ್ಠಾನಕ್ಕೆ ಕಣ್ತೆರೆಸಬೇಕಿದೆ. ರೈತರು ಮತ ಹಾಕುವ ಮುಂಚೆ ಆಲೋಚನೆ ಮಾಡಬೇಕಿದೆ ಎಂದು ಚವ್ಹಾಣ ಹೇಳಿದರು.

ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತನಾಡಿ ಮಹದಾಯಿ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಚಿಂತನೆ ಮಾಡಬೇಕು ಎಂದರು.

ಧರಣಿಯಲ್ಲಿ ಎಚ್‌.ಎನ್‌.ಕೋರಿ, ಚನ್ನಪ್ಪಗೌಡ ಪಾಟೀಲ, ಸೋಮಲಿಂಗಪ್ಪ ಆಯಟ್ಟಿ, ಅರ್ಜುನ ಮಾನೆ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸುರು, ಚನ್ನಪ್ಪಗೌಡ ಪಾಟೀಲ, ದೇವಕ್ಕ ತಾಳಿ, ಎಸ್‌.ಬಿ.ಜೊಗಣ್ಣವರ ಹಾಗೂ ಹೋರಾಟ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಅಮಿತ್ ಶಾ ಮಾತನಾಡಲಿ

ನರೇಗಲ್: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗದಗ ಜಿಲ್ಲೆಯ ಮಹದಾಯಿ ಹಾಗೂ ಉತ್ತರ ಕರ್ನಾಟಕದ ಇತರೆ ಸಮಸ್ಯೆಗಳ ಕುರಿತು ಮಾತನಾಡಬೇಕು ಎಂದು ರಾಜ್ಯ ರೈತ ಸೇನಾ ಒಕ್ಕೂಟದ ಅಧ್ಯಕ್ಷ ಶರಣಪ್ಪ ಧರ್ಮಾಯತ ಆಗ್ರಹಿಸಿದ್ದಾರೆ.

ಏಪ್ರಿಲ್ 12ರಂದು ಸಮೀಪದ ಅಬ್ಬಿಗೇರಿ ಗ್ರಾಮಕ್ಕೆ ಅಮಿತ್ ಶಾ ಹಾಗೂ ಬಿಜೆಪಿ ಮುಖಂಡರು ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನದ ಸಮಾರೋಪ ಸಮಾರಂಭವನ್ನು ಏರ್ಪಡಿಸಿರುವುದು ಸ್ವಾಗತಾರ್ಹ. ಮಹದಾಯಿ ಹೋರಾಟ 1000 ದಿನಗಳನ್ನು ಪೂರೈಸಿದರೂ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರವು ಮುಂದಾಗಿಲ್ಲ ಎಂದು ಅವರು ಟೀಕಿಸಿದ್ದಾರೆ.

ಗದಗ-ನರೇಗಲ್-ಗಜೇಂದ್ರಗಡ-ವಾಡಿ ರೈಲು ಮಾರ್ಗವನ್ನು ಈಚೆಗೆ ಬದಲಿಸಿ ಕೊಪ್ಪಳ ಜಿಲ್ಲೆಗೆ ಕೊಟ್ಟಿರುವುದು ಜಿಲ್ಲೆಗೆ ಮಾಡಿದ ಅನ್ಯಾಯವಾಗಿದೆ. ರೈಲು ಮಾರ್ಗದ ಲೋಪದ ಬಗ್ಗೆ ತಿಳಿದಿದ್ದರೂ ಸರಿಪಡಿಸಲು ಮುಂದಾಗದಿರುವುದು ಶೋಚನೀಯ. ರೈತರ ಮನೆಯಲ್ಲಿ ಭೋಜನ ಮಾಡುವುದರೊಂದಿಗೆ ಅವರ ಕಷ್ಟಗಳನ್ನು ಪರಿಹರಿಸುವುದರ ಕುರಿತು ಅವರು ಮಾತನಾಡಬೇಕು ಎಂದರು.

**

ಮಹದಾಯಿ ಕುರಿತಂತೆ ಗ್ರಾಮ ಮಟ್ಟದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಅದು ಇನ್ನು ಹೆಚ್ಚಬೇಕಿದೆ – ಲಚ್ಚವ್ವ ಜೊತೆನ್ನವರ, ಹೋರಾಟ ಸಮಿತಿ ಸದಸ್ಯೆ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry