ಶುಕ್ರವಾರ, ಡಿಸೆಂಬರ್ 6, 2019
26 °C
ಬಗೆಹರಿಯದ ಕುಡಿಯುವ ನೀರಿನ ಸಮಸ್ಯೆ, ಬಾರದ ಐಐಟಿ

ಕನಸಾಗಿಯೇ ಉಳಿದ ರೈಲ್ವೆ ಮೇಲ್ಸೇತುವೆ

ಕೆ.ಎಸ್ ಸುನಿಲ್ Updated:

ಅಕ್ಷರ ಗಾತ್ರ : | |

ಕನಸಾಗಿಯೇ ಉಳಿದ ರೈಲ್ವೆ ಮೇಲ್ಸೇತುವೆ

 

ಹಾಸನ: ಜೆಡಿಎಸ್‌ ಶಕ್ತಿ ಕೇಂದ್ರ ಹಾಸನ ವಿಧಾನಸಭಾ ಕ್ಷೇತ್ರ ನಿರೀಕ್ಷಿಸದಷ್ಟು ಅಭಿವೃದ್ಧಿ ಹೊಂದಿಲ್ಲ.ಹೇಮಾವತಿ ಹರಿದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಆಲೂಗೆಡ್ಡೆ ಬೆಳೆಗೆ ಪ್ರಸಿದ್ಧಿಯಾಗಿದ್ದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದೆ. ರೋಗಬಾಧೆ ಹಾಗೂ ಸೂಕ್ತ ಬೆಲೆ ಸಿಗದೆ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ನಗರದ ಸುತ್ತಮುತ್ತಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಹುಣಸಿನಕೆರೆ, ಸತ್ಯಮಂಗಲ, ಚನ್ನಪಟ್ಟಣ, ಬೀರನಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ₹ 20 ಕೋಟಿ ಅನುದಾನ ಮೀಸಲಿರಿಸಿದೆ. ಈ ಮೂರು ಕೆರೆಗಳು ಬತ್ತಿ ಹೋಗಿವೆ. ಅಭಿವೃದ್ಧಿ ಹೆಸರಿನಲ್ಲಿ ಬೀರನಹಳ್ಳಿ ಕೆರೆಯನ್ನು ಮುಚ್ಚಿ ಹಾಕಲಾಗಿದೆ.

ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಜೆಡಿಎಸ್‌ನ ಎಚ್‌.ಎಸ್‌.ಪ್ರಕಾಶ್‌, ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರ ಅವಧಿಯಲ್ಲಿ ವೈದ್ಯಕೀಯ ಕಾಲೇಜು, ಹೈಟೆಕ್‌ ಆಸ್ಪತ್ರೆ, ಎಂಜಿನಿಯರಿಂಗ್ ಕಾಲೇಜು, ಬಸ್‌ ನಿಲ್ದಾಣ, ಕೃಷಿ ಕಾಲೇಜು, ಪಶುವೈದ್ಯ ಕಾಲೇಜು ಸೇರಿದಂತೆ ಹಲವು ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ.

ಆದರೆ, ದಶಕದ ಕನಸಾದ ಐಐಟಿ ಮತ್ತು ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನವಾಗಿದ್ದರೂ ಆ ಎರಡು ಯೋಜನೆಗಳು ಮಂಜೂರಾಗಲಿಲ್ಲ. ಈ ಯೋಜನೆಗಳು ಚುನಾವಣೆಯ ವಿಷಯಗಳಾಗಿಯೇ ಮುಂದುವರಿದಿವೆ.

ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಪ್ರಥಮ ಪ್ರಸ್ತಾವ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು 1976ರಲ್ಲಿ. ಜಿಲ್ಲೆಯ ಆರ್ಥಿಕ, ಪ್ರವಾಸೋದ್ಯಮ ಬೆಳವಣಿಗೆ, ಭವಿಷ್ಯದ ಸಾಮರ್ಥ್ಯ ಮನಗಂಡು ಯೋಜನೆಗಾಗಿ 1972ರಲ್ಲಿ ಲೋಕೋಪಯೋಗಿ ಇಲಾಖೆ 134.28 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು.

ಎರಡನೇ ಬಾರಿಗೆ ಯೋಜನೆಗಾಗಿ 523 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, 189 ಎಕರೆ ಭೂಮಿ ಮಾಲೀಕರಿಂದ ಆಕ್ಷೇಪಣೆ ಆಹ್ವಾನಿಸಿ ನೋಟಿಸ್‌ ನೀಡಲಾಗಿದೆ. 523 ಎಕರೆ ಪೈಕಿ 34 ಎಕರೆಯನ್ನು ರಸ್ತೆಗೆ ನೀಡಲಾಗಿದೆ.

ಇನ್ನು ಬಹುದಿನಗಳ ಬೇಡಿಕೆಯಾದ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ₹ 48 ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಆರಂಭವಾಗುವ ಯಾವ ಲಕ್ಷಣ ಕಾಣುತ್ತಿಲ್ಲ. ಕೆಲಸ ಪೂರ್ಣಗೊಂಡರೆ ಹಾಸನ –ಹೊಳೆನರಸೀಪುರ ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 11 ಗ್ರಾಮಗಳು ಆಯ್ಕೆಯಾಗಿದ್ದು, ಅನುದಾನ ಬಿಡುಗಡೆಯಾಗದೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹೊಸ ಬಡಾವಣೆಗಳು ಚರಂಡಿ, ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೌಲಭ್ಯದಿಂದ ವಂಚಿತಗೊಂಡಿವೆ.

‘ನಗರೋತ್ಥಾನ ಯೋಜನೆ ಸಮರ್ಪಕವಾಗಿ ಜಾರಿಯಾಗಲಿಲ್ಲ. 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ, ಉದ್ದೂರು ಸಂತ್ರಸ್ತರಿಗೆ ದೊರೆಯದ ಪರಿಹಾರ, ಬಸಟ್ಟಿಕೊಪ್ಪಲು ಮತ್ತು ಸಾಲಗಾಮೆ ರಸ್ತೆ ವಿಸ್ತರಣೆಯಾಗಲಿಲ್ಲ, ನ್ಯಾಯಾಲಯದ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು, ಅಮೃತ್‌ ಯೋಜನೆ ವಿಳಂಬ ಹಾಗೂ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ’ ಎಂಬುದು ಸ್ಥಳೀಯರ ಆರೋಪ.

ಶಾಸಕ ಎಚ್‌.ಎಸ್‌.ಪ್ರಕಾಶ್‌, ‘₹ 117 ಕೋಟಿ ವೆಚ್ಚದ ಅಮೃತ್‌ ಯೋಜನೆಯಿಂದ ಹಾಸನ ನಗರ ಹಾಗೂ 6 ಕಿ.ಮೀ. ದೂರದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ದೇವೇಗೌಡರು ಕೇಂದ್ರ ಮೇಲೆ ಒತ್ತಡ ಹೇರಿ ₹ 24 ಕೋಟಿ ಅನುದಾನ ಕೊಡಿಸಿದ್ದಾರೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, 5–6 ತಿಂಗಳಲ್ಲಿ ಕೆಲಸ ಮುಗಿದರೆ ಜನರಿಗೆ 24*7 ನೀರು ಸಿಗಲಿದೆ’ ಎಂದು ತಿಳಿಸಿದರು. ‘ಮೂರು ವರ್ಷಗಳಿಂದ ಮಳೆ ಇಲ್ಲ. ಆಲುವಾಗಿಲು ಬಳಿ ₹ 4 ಕೋಟಿ ವೆಚ್ಚದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಟೆಂಡರ್‌ ಆಗಿದೆ. ಇದರಿಂದ ಹತ್ತು ವಾರ್ಡ್‌ಗಳಿಗೆ ನೀರು ಪೂರೈಸಬಹುದು’ ಎಂದು ಹೇಳಿದರು.

ಗೌಡರ ಕನಸಿನ ಕೂಸು

ಹಾಸನ ಏರ್‌ಪೋರ್ಟ್‌ ಸಂಸದ ಎಚ್‌.ಡಿ.ದೇವೇಗೌಡರ ಕನಸಿನ ಯೋಜನೆ. ಅವರು ಅಧಿಕಾರ ಪಡೆದಾಗಲೆಲ್ಲ ಯೋಜನೆಗೆ ಮರುಜೀವ ಕೊಡುವ ಯತ್ನ ಮಾಡುತ್ತಲೇ ಬಂದಿದ್ದಾರೆ. ವಿಮಾನ ನಿಲ್ದಾಣ ವಾದರೆ ಕೃಷಿಕರ ಉತ್ಪನ್ನ ಗಳಾದ ಹಾಲು, ತರಕಾರಿ, ಧಾನ್ಯಗಳನ್ನು ತ್ವರಿತವಾಗಿ ಮಧ್ಯಪ್ರಾಚ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆಗೆ ತಲುಪಿಸಬಹುದು. ಇದರಿಂದ ರೈತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಜೀವನ ಮಟ್ಟ ಸುಧಾರಿಸುತ್ತದೆ ಎನ್ನುವುದು ಅವರ ಯೋಜನೆ.

ಅಲುವಾಗಿಲು ಬಳಿ ಚೆಕ್‌ ಡ್ಯಾಂ

ಐದು ವರ್ಷದಲ್ಲಿ ಅಂದಾಜು ₹ 80 ಕೋಟಿ ವೆಚ್ಚದಲ್ಲಿ ಪಿಎಂಜಿಎಸ್‌ವೈನಲ್ಲಿ ರಸ್ತೆಗಳ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆ ವತಿಯಿಂದ ಸಾಲಗಾಮೆ ಹೋಬಳಿಯಲ್ಲಿ ರಸ್ತೆಗೆ ಡಾಂಬರು ಹಾಕಲಾಗಿದೆ. ವಿಜಯನಗರ, ವಿದ್ಯಾನಗರ, ರವೀಂದ್ರ ನಗರ, ಅರವಿಂದ ನಗರ, ಹೇಮಾವತಿ ನಗರಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. 1994ರಲ್ಲಿ ಮೊದಲ ಬಾರಿ ಶಾಸಕನಾದಾಗ ದೊಡ್ಡಮಂಡಿರಗಳ್ಳಿಯಲ್ಲಿ ಆಲೂಗೆಡ್ಡೆ ಶೈತ್ಯಾಗಾರ ಆರಂಭಿಸಿದರೂ ರೈತರು ಬಳಸಿಕೊಳ್ಳಲಿಲ್ಲ. ದರ ಕುಸಿದಾಗ ಬೆಂಬಲ ಬೆಲೆಯಲ್ಲಿ ಆಲೂಗೆಡ್ಡೆ ಖರೀದಿಸಲಾಯಿತು. ಚನ್ನಪಟ್ಟಣ ರೈಲ್ವೆ ಮೇಲ್ಸೆತುವೆಗೆ ಭೂ ಸ್ವಾಧೀನವಾಗಿದೆ. ಆದರೆ ಕೋರ್ಟ್‌ನಿಂದ ತಡೆಯಾಜ್ಞೆ ತಂದ ಬಳಿಕ ವಿಳಂಬವಾಗಿದೆ. ಹೊಸ ನ್ಯಾಯಾಲಯದ ಕಟ್ಟಡ ಕೆಲಸ ಬಾಕಿ ಇದೆ – ಎಚ್‌.ಎಸ್‌.ಪ್ರಕಾಶ್‌, ಜೆಡಿಎಸ್‌ ಅಭ್ಯರ್ಥಿ.

ಪ್ರವಾಸೋದ್ಯಮ ನಿರ್ಲಕ್ಷ್ಯ

ಹಾಸನದ ಪ್ರಮುಖ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿಲ್ಲ. ಬೇಲೂರು, ಶ್ರವಣಬೆಳಗೊಳ, ಹಳೇಬೀಡು, ಮಂಗಳೂರು, ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರಿಗೆ ಹೋಗಬೇಕಾದರೆ ಹಾಸನ ಹೃದಯ ಭಾಗ ಇದ್ದಂತೆ. ಹಾಸನಕ್ಕೆ ಹೊರಗಿನಿಂದ ಬಂದವರು ಪ್ರವಾಸಿ ತಾಣ ಹುಡುಕುವಂತಹ ಸ್ಥಿತಿ ಇದೆ. ಶಾಸಕರಿಗೆ ವರ್ಷಕ್ಕೆ ₹ 3–4 ಕೋಟಿ ಅನುದಾನ ನೀಡಲಾಗುತ್ತದೆ. 15 ವರ್ಷದಲ್ಲಿ ಶಾಶ್ವತ ಯೋಜನೆ ರೂಪಿಸಿರುವುದನ್ನು ತೋರಿಸಲಿ. ಸರ್ಕಾರದ ಅನುದಾನ ಬಂದಾಗ ಕೇವಲ ಭೂಮಿ ಪೂಜೆ ಮಾಡುವುದಲ್ಲ. ಹೆಚ್ಚುವರಿ ಅನುದಾನ ತಂದು ನಗರ ಹಾಗೂ ಹಳ್ಳಿಗಳಿಗೆ ಅಭಿವೃದ್ಧಿ ಮಾಡಿರುವ ಬಗ್ಗೆ ಮಾಹಿತಿ ನೀಡಲಿ. ಆಲೂಗೆಡ್ಡೆ ಶೈತ್ಯಗಾರ ಸ್ಥಾಪನೆ ಹಾಗೂ ರೈಲ್ವೆ ಮೇಲ್ಸೆತುವೆ ಕಾಮಗಾರಿ ಆರಂಭಿಸಲು ಒತ್ತಾಯ ಮಾಡಲಿಲ್ಲ. ದೇವೇಗೌಡರ ಕೃಪೆಯಿಂದ ಶಾಸಕರಾಗಿದ್ದಾರೆ. ಸ್ವಂತ ಹೋರಾಟದಿಂದ ಆಯ್ಕೆಯಾಗಿದ್ದರೆ ಜನರ ಸಮಸ್ಯೆ ಅರಿವು ಇರುತ್ತಿತ್ತು – ಎಚ್‌.ಕೆ.ಮಹೇಶ್‌, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ.

20 ವರ್ಷದಿಂದ ಅಭಿವೃದ್ಧಿ ಇಲ್ಲ

ಎಚ್‌.ಎಸ್‌.ಪ್ರಕಾಶ್‌ ಅವರು 20 ವರ್ಷ ಶಾಸಕರಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿಲ್ಲ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ರೂಪಿಸಲಿಲ್ಲ. 1985ರಲ್ಲಿ 50 ಸಾವಿರ ಜನಸಂಖ್ಯೆ ಇತ್ತು. ಆಗ ಇದ್ದ ಪೈಪ್‌ಲೈನ್‌ ವ್ಯವಸ್ಥೆ ಈಗಲೂ ಇದೆ. ನಗರ ಜನಸಂಖ್ಯೆ 1.25 ಲಕ್ಷ ತಲುಪಿದೆ. ನಗರಕ್ಕೆ ಹೊಂದಿಕೊಂಡಿರುವ ವಿದ್ಯಾನಗರ, ವಿಜಯನಗರ, ಬೂವನಹಳ್ಳಿ, ಗವೇನಹಳ್ಳಿ ಜನರಿಗೆ ಹೇಮಾವತಿ ನೀರು ಸಿಕ್ಕಿಲ್ಲ. ಪದವೀಧರರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ   –ಪ್ರೀತಂ ಗೌಡ, ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ

ಶ್ರೀನಗರ, ಶರೀಫ್‌ ಕಾಲೊನಿ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಸರ್ಕಾರಿ ಕಟ್ಟಡಗಳಲ್ಲಿ ಅಂಗವಿಕಲರಿಗೆ ರ‍್ಯಾಂಪ್‌ ನಿರ್ಮಾಣ ಮತ್ತು ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಬೇಕಿತ್ತು. ಚಿತ್ರಕಲಾ ಗ್ಯಾಲರಿ ಸ್ಥಾಪನೆ ಆಗಿಲ್ಲ – 

–ಕೆ.ಟಿ. ಜಯಶ್ರೀ, ಸಾಮಾಜಿಕ ಕಾರ್ಯಕರ್ತೆ

ಕೆರೆ ಪುನಶ್ಚೇತನ ಕಾರ್ಯ ನಡೆದಿಲ್ಲ

ಬಹುಮುಖ್ಯ ಬೇಡಿಕೆಯಾಗಿರುವ ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡಿಲ್ಲ. ಹಾಸನ ನಗರಕ್ಕೆ ದಿನದ 24 ಗಂಟೆಗಳ ಕುಡಿಯುವ ನೀರು ನೀಡುವ ಅಮೃತ್‌ ಯೋಜನೆ ಪೂರ್ಣಗೊಂಡಿಲ್ಲ. ನಗರ ಸುತ್ತಮುತ್ತಲಿನ ಕೆರೆಗಳ ಪುನಶ್ಚೇತನ ಕಾರ್ಯ ನಡೆದಿಲ್ಲ. ಬದಲಿಗೆ ಇದ್ದ ಕೆರೆಗಳನ್ನು ಮುಚ್ಚಲಾಗಿದೆ. ವಿಮಾನ ನಿಲ್ದಾಣದ ಕನಸು ನನಸಾಗಲಿಲ್ಲ – ವಿಜಯ್‌, ಉದ್ಯೋಗಿ

ಹೈಟೆಕ್‌ ಆಸ್ಪತ್ರೆಯಲ್ಲಿ ಸೌಲಭ್ಯ

ನಗರದಲ್ಲಿ ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳು ಆರಂಭಗೊಂಡಿವೆ. ಹೈಟೆಕ್‌ ಆಸ್ಪತ್ರೆಯಲ್ಲಿ ಸೌಲಭ್ಯ ದೊರೆಯುತ್ತಿದೆ. ನಗರದ ಸಂತೆಪೇಟೆ ಗೊರೂರು ರಸ್ತೆ ಪಕ್ಕದಲ್ಲಿ ಸುರಿದಿದ್ದ ಕಸವನ್ನು ತೆರವು ಮಾಡಲಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ. ಸ್ವಚ್ಛನಗರ ಎಂಬ ಹೆಸರನ್ನು ಉಳಿಸಿಕೊಳ್ಳಲು ನಗರಸಭೆ ಪ್ರಯತ್ನಿಸಬೇಕು – ಶ್ರುತಿ, ಉಪನ್ಯಾಸಕಿ

ರಸ್ತೆ ಮೇಲೆ ಚರಂಡಿ ನೀರು

ನಗರದ ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಳೆ ಬಂದರೆ ಚರಂಡಿ ನೀರು ಉಕ್ಕಿ ರಸ್ತೆ ಮೇಲೆ ಹರಿಯುತ್ತದೆ. ಮ್ಯಾನ್‌ ಹೋಲ್‌ಗಳು ಹಳೆಯದಾಗಿದ್ದು, ಅದನ್ನು ಬದಲಿಸಬೇಕು. ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧ ಮಾಡಬೇಕು – ಮಣಿದಾಸ, ವಿದ್ಯಾರ್ಥಿ

ಅಭಿವೃದ್ಧಿ ಹೆಸರಲ್ಲಿ ಕೆರೆ ನಾಶ

ನೀರಾವರಿ ವಿಷಯದಲ್ಲಿ ಹಾಸನ ತಾಲ್ಲೂಕು ಹಿಂದೆ ಉಳಿದಿದೆ. ಕೆರೆಗಳ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಆಗಿದೆ. ಆದರೂ ಕಾಮಗಾರಿ ಆಗಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳನ್ನು ಮುಚ್ಚಲಾಗಿದೆ. ಹೊಸ ಬಸ್‌ ನಿಲ್ದಾಣ ಸಮೀಪದ ಚನ್ನಪಟ್ಟಣಕೆರೆ ಅಭಿವೃದ್ಧಿ ನನೆಗುದಿಗೆ

ಬಿದ್ದಿದೆ – ಬಿ.ಕೆ. ಮಂಜುನಾಥ್‌, ಹಿರಿಯ ನಾಗರಿಕರ ವೇದಿಕೆ ಸಂಚಾಲಕ.

ರಸ್ತೆ ವಿಸ್ತರಣೆ ಆಗಲೇ ಇಲ್ಲ

ನಗರದ ಸಾಲಗಾಮೆ ರಸ್ತೆ ಹಾಗೂ ಪಾರ್ಕ್‌ ರಸ್ತೆ ವಿಸ್ತರಣೆಗೆ ಭೂಮಿ ಪೂಜೆ ನಡೆದಿತ್ತು. ಆದರೂ ರಸ್ತೆ ವಿಸ್ತರಣೆ ಕಾಮಗಾರಿಯೇ ಪ್ರಾರಂಭವಾಗಲಿಲ್ಲ. ಗೊರೂರು ರಸ್ತೆ ಪಕ್ಕದಲ್ಲಿ ಅನೇಕ ವರ್ಷಗಳಿಂದ ಸಂಗ್ರಹವಾಗಿದ್ದ ಕಸದ ರಾಶಿ ವಿಲೇವಾರಿ ಮಾಡಿರುವುದರಿಂದ ಜನರು ರಸ್ತೆಯಲ್ಲಿ ಸಂಚರಿಸುವಂತೆ ಆಗಿದೆ – ವರುಣ್‌, ಖಾಸಗಿ ಉದ್ಯೋಗಿ.

ಪ್ರತಿಕ್ರಿಯಿಸಿ (+)