ಸೋಮವಾರ, ಆಗಸ್ಟ್ 10, 2020
26 °C
ಮಾಸೂರು: ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೆಲಸ ಕೈಗೆತ್ತಿಕೊಳ್ಳಲು ಆಗ್ರಹ

ಮತದಾನ ಬಹಿಷ್ಕರಿಸುವ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಬಹಿಷ್ಕರಿಸುವ ಎಚ್ಚರಿಕೆ

ರಟ್ಟೀಹಳ್ಳಿ: ಸರ್ವಜ್ಞ ಅಭಿವೃದ್ದಿ ಪ್ರಾಧಿಕಾರದ ಮೂಲಕ ಅಗತ್ಯ ಕೆಲಸಗಳನ್ನು ಕೈಗೆತ್ತಿಕೊಳ್ಳದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ವರಕವಿ ಸರ್ವಜ್ಞ ಅಭಿವೃದ್ದಿ ಪ್ರಾಧಿಕಾರ ಅನುಷ್ಠಾನ ಹೋರಾಟ ಸಮಿತಿ ಸದಸ್ಯರು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಮಂಜುಳಾ ಹೆಗಡಿಯಾಳ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು.

ಸಮಿತಿ ಅಧ್ಯಕ್ಷ ರಾಜು ಕೆ. ಸುಣಗಾರ ಮಾತನಾಡಿ, ‘ಸರ್ವಜ್ಞರು ತಾಲ್ಲೂಕಿನ ಮಾಸೂರಿನಲ್ಲಿ ಹುಟ್ಟಿ, ಬೆಳೆದು, ಐಕ್ಯ ಹೊಂದಿದ್ದಾರೆ. 2011 ರಲ್ಲಿ ಮಾಸೂರು ಬಂದ್ ಮಾಡಿದ ಫಲವಾಗಿ 2012 ರಲ್ಲಿ ಸರ್ಕಾರವು ಸರ್ವಜ್ಞನ ಪ್ರಾಧಿಕಾರ ಘೋಷಿಸಿದೆ. ಆದರೆ, ಈಗ ವಿಳಂಬ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ 2017ರಲ್ಲಿ ಮತ್ತೆ ಮಾಸೂರು ಬಂದ್ ಮಾಡಲಾಯಿತು. ಆ ಬಳಿಕ ಮಾಸೂರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸರ್ವಜ್ಞನಿಗೆ ಸಂಬಂಧಿಸಿದ ಕುರುಹುಗಳನ್ನು ವೀಕ್ಷಿಸಿದ್ದರು. ಆದರೆ, ಸತ್ಯಶೋಧನಾ ಸಮಿತಿ ರಚಿಸಬೇಕು ಎಂಬ ಗ್ರಾಮಸ್ಥರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಇನ್ನೊಂದೆಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

2017ರ ನವೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ಸರ್ವಜ್ಞ ಪ್ರಾಧಿಕಾರಕ್ಕೆ ಶಾಂತಾ ಹುಲ್ಮನಿಯವರನ್ನು ಆಯುಕ್ತರನ್ನಾಗಿ ನೇಮಿಸಿ, 6 ಜನ ಸಿಬ್ಬಂದಿಯನ್ನು ನೇಮಕ ಮಾಡಿದೆ  ಎಂದರು.

ಸರ್ವಜ್ಞ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಮಾಸೂರಿನಲ್ಲಿ ಕೂಡಲೇ ತೆರೆಯಬೇಕು. ಪ್ರಾಧಿಕಾರಕ್ಕೆ ಹೆಚ್ಚುವರಿ ಅನುದಾನ ನೀಡಬೇಕು. ಸರ್ವಜ್ಞ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು. ಕುಮದ್ವತಿ ನದಿಗೆ ಸೇತುವೆ ನಿರ್ಮಿಸಬೇಕು, ಮದಗ –ಮಾಸೂರ ಕೆರೆಯ ಹೂಳು ತೆಗೆದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮೇ 12ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾಗನಗೌಡ ಪಾಟೀಲ್, ಮಲ್ಲೇಶಪ್ಪ ಗುತ್ತೆಣ್ಣನವರ, ಚಂದ್ರಹಾಸ ಪಾಟೀಲ್, ವೆಂಕಟೇಶ್ ರೇವಣಕರ, ಸಮೀವುಲ್ಲಾ ಚಕ್ಕಲಿ, ಸುರೇಶ ಹಳಬಸಣ್ಣನವರ, ಭಾಸ್ಕರ ಶೆಟ್ಟರ್, ಮಾಲತೇಶ ಲಿಂಗದಹಳ್ಳಿ, ವೀರನಗೌಡ ಪಾಟೀಲ್, ಸಿದ್ದಯ್ಯ ವೀರಕ್ತಮಠ, ಹಿದಾಯತ ಮುಲ್ಲಾ ಇದ್ದರು.

**

ಸರ್ಕಾರ ಬಜೆಟ್‌ನಲ್ಲಿ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ – ರಾಜು ಕೆ. ಸುಣಗಾರ ಅಧ್ಯಕ್ಷ, ವರಕವಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನ ಹೋರಾಟ ಸಮಿತಿ

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.