ಸಂಶಯಾಸ್ಪದ ವಹಿವಾಟಿನ ಮೇಲೆ ನಿಗಾ ವಹಿಸಿ

7
ಚುನಾವಣಾ ಹಿನ್ನೆಲೆಯಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಸೂಚನೆ

ಸಂಶಯಾಸ್ಪದ ವಹಿವಾಟಿನ ಮೇಲೆ ನಿಗಾ ವಹಿಸಿ

Published:
Updated:

ಹಾವೇರಿ: ‘ಸಂಶಯಾಸ್ಪದ ಹಣಕಾಸು ವಹಿವಾಟಿನ ಮೇಲೆ ಹದ್ದಿನ ಕಣ್ಣಿರಿಸಬೇಕು. ಬ್ಯಾಂಕ್ ವ್ಯವಹಾರದ ಬಗ್ಗೆ ಪ್ರತಿದಿನ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಬ್ಯಾಂಕ್‌ ಅಧಿಕಾರಿಗಳು ಹಾಗೂ ವಿಧಾನಸಭಾ ಚುನಾವಣೆಯ ವೆಚ್ಚ ನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಕೊಂಡೊಯ್ಯುವುದು, ವರ್ಗಾವಣೆ, ಜಮಾ ಕುರಿತ ಮಾಹಿತಿಯನ್ನು ನೀಡಬೇಕು. ಸಂಶಯಾಸ್ಪದ ವಹಿವಾಟು ಕುರಿತು ಪ್ರತಿದಿನ ವರದಿ ಸಲ್ಲಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಬ್ಯಾಂಕ್‌ಗಳಲ್ಲಿ ಅನುಮಾನಾಸ್ಪದವಾಗಿ ಅಧಿಕ ಮೊತ್ತದ ಹಣ ಜಮಾ ಅಥವಾ ನಗದೀಕರಣ ನಡೆದರೆ, ಸಂಬಂಧಿತ ಬ್ಯಾಂಕ್ ಅಧಿಕಾರಿಗಳು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ವರದಿ ಸಲ್ಲಿಸಬೇಕು. ಅಲ್ಲದೇ, ಪ್ರತಿ ನಿತ್ಯದ ವರದಿಯನ್ನು ನೀಡಬೇಕು ಎಂದು ಸೂಚಿಸಿದರು.

ಏಪ್ರಿಲ್ 17ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅಭ್ಯರ್ಥಿಗಳು ತಮ್ಮ ಖರ್ಚು–ವೆಚ್ಚ ನಿರ್ವಹಣೆಗಾಗಿ ನೂತನ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಅವರು ತ್ವರಿತವಾಗಿ ಖಾತೆ ತೆರೆಯಲು ಅನುವು ಮಾಡಿಕೊಡಬೇಕು ಎಂದರು.

ಮತದಾರರಿಗೆ ಹಂಚಲು ಅಥವಾ ಅಕ್ರಮ ಕಾರ್ಯಗಳಿಗಾಗಿ ಹಣ ಸಾಗಾಣಿಕೆ ಹಾಗೂ ಹೆಚ್ಚು ಹಣದ ವ್ಯವಹಾರ ನಡೆಯುವ ಸಂಭವ ಇರುತ್ತದೆ. ₨1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದೀಕರಣ ಅಥವಾ ಜಮಾ ಮಾಡುವ ಪ್ರಕರಣಗಳು, ಸ್ಥಗಿತಗೊಂಡಿದ್ದ ಬ್ಯಾಂಕ್ ಖಾತೆಗಳ ಮೂಲಕ ದಿಢೀರನೆ ಹಣದ ವಹಿವಾಟು ನಡೆಯುವ ಸಾಧ್ಯತೆ ಇದೆ. ಇಂತಹ ಖಾತೆಗಳ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಭ್ಯರ್ಥಿಗಳು ತಮ್ಮ ಹಾಗೂ ಕುಟುಂಬದ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅವರ ಬ್ಯಾಂಕಿನ ಹಣಕಾಸು ವ್ಯವಹಾರ ಹಾಗೂ ಸಂಬಂಧಿಕರ ಹಣ ವರ್ಗಾವಣೆಯ ಮೇಲೆ ಕಣ್ಗಾವಲು ಇರಿಸಬೇಕು ಎಂದರು.

ಅಭ್ಯರ್ಥಿಯು ಖರ್ಚು–ವೆಚ್ಚಗಳು, ವಹಿವಾಟಿನ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ನೋಂದಾಯಿಸಬೇಕು. ‘ಶ್ಯಾಡೋ ಅಬ್ಸರ್‌ವೇಶನ್‌ ರಿಜಿಸ್ಟರ್‌’ನಲ್ಲಿ ದಾಖಲಿಸಬೇಕು. ಪ್ರತಿ ಅಭ್ಯರ್ಥಿಗೆ ಪ್ರತ್ಯೇಕ ರಿಜಿಸ್ಟರ್ ಮಾಡಿ, ಅವರ ವ್ಯವಹಾರಗಳನ್ನು ನಿರ್ವಹಿಸಬೇಕು. ಬ್ಯಾಂಕ್‌ಗಳು ದೈನಂದಿನ ವಹಿವಾಟಿಗಾಗಿ ಹಣ ಸಾಗಿಸುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಹೊಂದಬೇಕು. ಹಣ ಸಾಗಾಣಿಕೆ ಕುರಿತು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಲೀಡ್ (ವಿಜಯಾ) ಬ್ಯಾಂಕ್ ಪ್ರಬಂಧಕ ಕದರಪ್ಪ ಇದ್ದರು.

**

ಹಣ ಸಾಗಾಣಿಕೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಬ್ಯಾಂಕಿನವರೇ ಹೊಣೆ ಹೊರಬೇಕಾಗುತ್ತದೆ – ಡಾ.ವೆಂಕಟೇಶ್ ಎಂ.ವಿ. ಜಿಲ್ಲಾಧಿಕಾರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry