ಮುಖಂಡರ ಮನೆ ಬಾಗಿಲಿಗೆ ನಾಯಕರು

7
ಚಿಂಚೋಳಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಟಿಕೆಟ್‌ಗಾಗಿ ಮುಂದುವರೆದ ಪೈಪೋಟಿ

ಮುಖಂಡರ ಮನೆ ಬಾಗಿಲಿಗೆ ನಾಯಕರು

Published:
Updated:

ಚಿಂಚೋಳಿ: ಚಿಂಚೋಳಿ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ. ಟಿಕೆಟ್‌ ದೊರೆಯುವ ಉಮೇದಿನಲ್ಲಿ ಉಭಯ ಪಕ್ಷದ ನಾಯಕರು ಅನ್ಯ ಪಕ್ಷದ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಮಾಜಿ ಸಚಿವ ವೈಜನಾಥ ಪಾಟೀಲರ ಸಹೋದರ ಬಾಬುರಾವ್‌ ಪಾಟೀಲ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸುನೀಲ ವಲ್ಲ್ಯಾಪುರ ಅವರು ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ಅಸಮಾಧಾನಗೊಂಡಿರುವ ಕಾಂಗ್ರೆಸ್ಸಿಗರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಪ್ರತಿಯಾಗಿ ಬಿಜೆಪಿ ಮುಖಂಡರನ್ನು ಸೆಳೆಯುವ ತಂತ್ರವನ್ನು ಕಾಂಗ್ರೆಸ್‌ ನಡೆಸುತ್ತಿದೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ತಮ್ಮ ಮುಖಂಡರನ್ನು ಅನ್ಯ ಪಕ್ಷಗಳತ್ತ ಹೋಗದಂತೆ ತಡೆಯಲು ಪ್ರತಿತಂತ್ರ ರೂಪಿಸುತ್ತಿವೆ.

ಮಾಜಿ ಸಚಿವ ಸುನೀಲ ವಲ್ಲ್ಯಾಪುರ ಮತ್ತು ಶಾಸಕ ಡಾ.ಉಮೇಶ ಜಾಧವ್‌ ಅವರು ತಮ್ಮ ಪಕ್ಷದ ಮುಖಂಡರನ್ನು ಉಳಿಸಿಕೊಳ್ಳುವ ಜತೆಗೆ ಬೇರೆಯವರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

ಎದುರಾಳಿಗಳ ವೈರುಧ್ಯ ಹಾಗೂ ಆ ಪಕ್ಷದ ತಪ್ಪು ನಿರ್ಧಾರಗಳನ್ನು ಎತ್ತಿ ತೋರಿಸುವುದು ಹಾಗೂ ಆಸೆ, ಆಮಿಷವೊಡ್ಡುವ ಕೆಲಸವೂ ತೆರೆಮರೆಯಲ್ಲಿ

ನಡೆಯುತ್ತಿದೆ.

ಬಿಜೆಪಿ ಟಿಕೆಟ್‌ ತಮಗೆ ಖಾತ್ರಿ ಎಂದು ಪ್ರಚಾರ ಆರಂಭಿಸಿರುವ ಮಾಜಿ ಸಚಿವ ಸುನೀಲ ವಲ್ಲ್ಯಾಪುರ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ. ಕ್ಷೇತ್ರ ಬದಲಿಸುವ ಸಾಧ್ಯತೆ ಇದೆಯೇ ಎಂಬ ಮಾತೂ ಕೇಳಿಬರುತ್ತಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಸಂಜೀವನ ಯಾಕಾಪುರ ಮತ್ತು ಸುಭಾಷ ರಾಠೋಡ್‌ ಅವರೂ ರೇಸ್‌ನಲ್ಲಿದ್ದಾರೆ.

ಅಪಘಾತದಲ್ಲಿ ಗಾಯಗೊಂಡು ಕೈ ಮತ್ತು ಕಾಲಿಗೆ ಪೆಟ್ಟಾದರೂ ಲೆಕ್ಕಿಸದೇ ಶಾಸಕ ಉಮೇಶ ಜಾಧವ್‌ ಅವರೂ ಬಲ ಪ್ರದರ್ಶಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ಜೆಡಿಎಸ್‌ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.

ಪಾಂಚಜನ್ಯ ಯಾತ್ರೆಗೆ ಚಾಲನೆ ನೀಡಿದ ನೆಲ

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ಇಲ್ಲಿ ನಾಲ್ಕು ಬಾರಿ ಗೆದ್ದಿದ್ದರು. 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಮಾಜಿ ಸಚಿವ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಇಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ವೀರೇಂದ್ರ ಪಾಟೀಲರ ಪುತ್ರ ಕೈಲಾಸನಾಥ ಪಾಟೀಲ, ಅವರ ಆಪ್ತ ಎಂ.ವೀರಯ್ಯಸ್ವಾಮಿ ಮತ್ತು ಡಾ.ಉಮೇಶ ಜಾಧವ್‌ ತಲಾ ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಕಾಂಗ್ರೆಸ್ಸೇತರ ಪಕ್ಷದಿಂದ ವೈಜನಾಥ ಪಾಟೀಲ ಎರಡು ಬಾರಿ, ಸುನೀಲ ವಲ್ಲ್ಯಾಪುರ ಒಮ್ಮೆ ಗೆಲುವು ಸಾಧಿಸಿದ್ದಾರೆ. ಎಸ್‌.ಎಂ.ಕೃಷ್ಣ ಅವರು 1999ರಲ್ಲಿ ಪಾಂಚಜನ್ಯ ಯಾತ್ರೆಯನ್ನು ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಸ್ಥಳದಿಂದಲೇ ಆರಂಭಿಸುವ ಮೂಲಕ ಅಧಿಕಾರ ಹಿಡಿದಿದ್ದರು.

–ಜಗನ್ನಾಥ ಡಿ. ಶೇರಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry