ಭಾನುವಾರ, ಡಿಸೆಂಬರ್ 15, 2019
25 °C
32 ಸಹಕಾರ ಸಂಘಗಳಿಂದ 12 ಸಾವಿರ ಲೀಟರ್ ಹಾಲು ಸಂಗ್ರಹ

ರೈತರ ಪಾಲಿನ ‘ಸಂಜೀವಿನಿ’ ಕೂಡಿಗೆ ಡೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಪಾಲಿನ ‘ಸಂಜೀವಿನಿ’ ಕೂಡಿಗೆ ಡೇರಿ

ಕುಶಾಲನಗರ: ಕೊಡಗು ಜಿಲ್ಲೆಯ ಉತ್ತರ ಭಾಗದ ಹಾರಂಗಿ ನದಿ ದಂಡೆ ಮೇಲಿರುವ ಹಾಲಿನ ಡೇರಿಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈ ಹಿಂದೆ ₹ 3 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಈ ಹಾಲಿನ ಡೇರಿ ಉತ್ತಮ ವಹಿವಾಟು ನಡೆಸುವ ಮೂಲಕ ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರೊಂದಿಗೆ ರೈತರ ಪಾಲಿಗೆ ‘ಸಂಜೀವಿನಿ’ಯೇ ಆಗಿದೆ.

ಕಾಫಿ, ಕಿತ್ತಳೆ, ಏಲಕ್ಕಿ ನಾಡಾದ ಕೊಡಗಿನಲ್ಲಿಯೂ ಹೈನುಗಾರಿಕೆಗೆ ವಿಶೇಷ ಒತ್ತು ನೀಡುವ ಮೂಲಕ ರೈತರ ಬದುಕನ್ನು ಹಸನುಗೊಳಿಸುವುದಕ್ಕಾಗಿ ಹಾಲಿನ ಡೇರಿ ಸ್ಥಾಪನೆಗೊಂಡಿತ್ತು. ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲ್ಲೂಕು ಹೈನುಗಾರಿಕೆ ಅಭಿವೃದ್ಧಿಯಲ್ಲಿ ಮುಂದಿದ್ದು, 32 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ. ಆದರೆ, ಮಡಿಕೇರಿ ತಾಲ್ಲೂಕು ಕೇವಲ 2 ಸಹಕಾರ ಸಂಘಗಳನ್ನು ಹೊಂದಿದೆ. ವಿರಾಜಪೇಟೆ ತಾಲ್ಲೂಕು ಹೈನುಗಾರಿಕೆ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿಂದುಳಿದೆ. ಜಿಲ್ಲೆಯ 32 ಸಹಕಾರ ಸಂಘಗಳಿಂದ 12 ಸಾವಿರ ಲೀಟರ್ ಹಾಲು ಮಾತ್ರ ಸಂಗ್ರಹವಾಗುತ್ತಿದೆ. ಆದರೆ, ಪ್ರತಿದಿನ 50 ಸಾವಿರ ಲೀಟರ್ ಹಾಲಿನ ಬೇಡಿಕೆಯಿದೆ.ತಾಲ್ಲೂಕಿನ ಶಿರಂಗಾಲ, ಗುಡ್ಡೆಹೊಸೂರು, ಹಂಡ್ಲಿ ಹಾಲಿನ ಡೇರಿಗಳಿಂದ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಅರಕಲಗೂಡು ಮತ್ತು ಸಕಲೇಶಪುರ ಗಡಿಗ್ರಾಮಗಳಿಂದ ಸುಮಾರು 30 ಸಾವಿರ ಲೀಟರ್‌ ಹಾಲು ಸಂಗ್ರಹಿಸಲಾಗುತ್ತಿದೆ.

ಕೂಡಿಗೆ ಡೇರಿ ಪ್ರತಿನಿತ್ಯ 50 ಸಾವಿರ ಲೀಟರ್ ಹಾಲು, ತಲಾ 25 ಸಾವಿರ ಲೀಟರ್ ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಇತರ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ದಿನಕ್ಕೆ ₹ 15 ಲಕ್ಷದಂತೆ, ತಿಂಗಳಿಗೆ ₹ 4 ಕೋಟಿ 50 ಲಕ್ಷ, ವಾರ್ಷಿಕ ₹ 50 ಕೋಟಿ ವಹಿವಾಟು ನಡೆಸುವ ಮೂಲಕ ಲಾಭದ ಹಾದಿಯಲ್ಲಿದೆ ಎಂದು ಮಾರುಕಟ್ಟೆ ಅಧಿಕಾರಿ ಮಲ್ಲೇಶ್ ತಿಳಿಸುತ್ತಾರೆ.

ಮಡಿಕೇರಿಯಲ್ಲಿದ್ದ ಹಾಲಿನ ಸಂಸ್ಕರಣಾ ಘಟಕವನ್ನು ಕೂಡಿಗೆಗೆ ಸ್ಥಳಾಂತರಿಸಿ, 1952ರಲ್ಲಿ ಬ್ರಿಟಿಷ್ ಸರ್ಕಾರವು ಕೂಡಿಗೆಯಲ್ಲಿ ಇದನ್ನು ತರಬೇತಿ ಘಟಕವಾಗಿ ಆರಂಭಿಸಿತು. ನಂತರ, ಅದು ರಾಜ್ಯದ ಪ್ರಥಮ ಹಾಲಿನ ಡೇರಿಯಾಗಿ ತನ್ನ ಕಾರ್ಯ ಆರಂಭಿಸಿತು.

1987ರಲ್ಲಿ ಕೂಡಿಗೆ ಹಾಲಿನ ಡೇರಿ ಹಾಸನದ ಹಾಲು ಒಕ್ಕೂಟದೊಂದಿಗೆ ವಿಲೀನಗೊಂಡು ಸಾಕಷ್ಟು ಪ್ರಗತಿ ಕಂಡಿದೆ. ಏಳು ವರ್ಷಗಳ ಹಿಂದೆ ₹ 3 ಕೋಟಿಯಲ್ಲಿ ಕೂಡಿಗೆ ಡೇರಿಯನ್ನು ನವೀಕರಿಸಲಾಯಿತು.

ಹಾಲಿನ ಶೇಖರಣೆ, ಸಂಸ್ಕರಣೆ, ಪ್ಯಾಕೆಟ್, ಮಾರಾಟ ವ್ಯವಸ್ಥೆ, ಗುಣಮಟ್ಟದೊಂದಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಹಾಸನ ಹಾಲು ಒಕ್ಕೂಟ ಕೂಡಿಗೆ ಡೇರಿಯ ಅಭಿವೃದ್ಧಿಗೆ ಒತ್ತು ನೀಡಿದ ಪರಿಣಾಮ ಇದೀಗ ಡೇರಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರಸ್ತುತ 53 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 4 ಡೇರಿ ಪಾರ್ಲರ್ ಸೇರಿದಂತೆ 285 ಕೇಂದ್ರಗಳಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಮೊಸರು, ಮಜ್ಜಿಗೆ, ಪೇಡ, ತುಪ್ಪ ಸೇರಿದಂತೆ ಇತರ ನಂದಿನಿ ಉತ್ಪನ್ನಗಳನ್ನು ಹಾಸನ ಡೇರಿಯಿಂದ ತರಿಸಿ ವ್ಯಾಪಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡಿಗೆ ಡೇರಿಯಲ್ಲಿ ಮೊಸರು, ಮಜ್ಜಿಗೆ ಮೊದಲಾದ ಉತ್ಪನ್ನಗಳನ್ನು ತಯಾರಿ ಸುವ ಪ್ರಸ್ತಾವವವೂ ಒಕ್ಕೂಟದ ಮುಂದಿದೆ ಎಂದು ಉಪವ್ಯವಸ್ಥಾಪಕ ಎಚ್.ಎನ್.ನಂದೀಶ್ ತಿಳಿಸಿದ್ದಾರೆ.ರೈತರಿಗೆ ಒಂದು ಲೀಟರ್ ಹಾಲಿಗೆ ₹ 22 ಹಾಗೂ ₹ 4 ಪ್ರೋತ್ಸಾಹಧನದೊಂದಿಗೆ ₹ 26 ನೀಡಲಾಗುತ್ತಿದೆ ಎಂದು ವಿಸ್ತರಣಾಧಿಕಾರಿ ಪ್ರಕಾಶ್ ತಿಳಿಸಿದರು.

**

ಪಶು ಸಂಗೋಪನೆಗೆ ಉತ್ತೇಜನ ನೀಡುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ  – ಪ್ರಕಾಶ್, ವಿಸ್ತರಣಾಧಿಕಾರಿ, ಕೂಡಿಗೆ ಡೇರಿ.

**

ಕೂಡಿಗೆಯಲ್ಲಿ ಡೇರಿ ಸ್ಥಾಪನೆಯಿಂದಾಗಿ ಸುತ್ತಮುತ್ತಲಿನ ರೈತರಿಗೆ ಆರ್ಥಿಕಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗಿದೆ – ಶಾಂತರಾಜ್, ರೈತ, ಹಳಗೋಟೆ.

**

ಪ್ರತಿಕ್ರಿಯಿಸಿ (+)