7

ಇದು ಯಶ್ ರಾಜಕಾರಣ...

Published:
Updated:
ಇದು ಯಶ್ ರಾಜಕಾರಣ...

ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ಜ್ವರದಂತೆಯೇ ಏರುತ್ತಿದೆ. ರಾಜಕಾರಣಿಗಳ ಕಸರತ್ತುಗಳಿಗೆ ಸಿನಿಮಾ ನಟರೂ ಸಾಥ್ ನೀಡುತ್ತಿದ್ದಾರೆ. ‘ಸ್ಟಾರ್’ ನಟರನ್ನು ತಮ್ಮ ಪಕ್ಷದ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎಲ್ಲ ಪಕ್ಷಗಳೂ  ಹವಣಿಸುತ್ತಿವೆ. ಅಂಥ ಬಹುಬೇಡಿಕೆಯ ನಟರಲ್ಲಿ ಯಶ್ ಕೂಡ ಬಬ್ಬರು. ಜನಪ್ರಿಯ ನಟನಾಗಿಯಷ್ಟೇ ಅಲ್ಲದೆ, ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡವವರು ಯಶ್‌. ಇಂಥ ನಟನಿಗೆ ರಾಜಕೀಯ ಪಕ್ಷಗಳಿಂದ ಬುಲಾವ್ ಬರುವುದು ಸರ್ವೇಸಾಮಾನ್ಯ. ಆದರೆ ಯಶ್ ಯಾವುದಾದರೂ ಪಕ್ಷದ, ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಾರಾ? ಅಥವಾ ತಾವೇ ನೇರವಾಗಿ ಚುನಾವಣೆ ಕಣಕ್ಕೆ ಧುಮುಕುತ್ತಾರಾ? ರಾಜಕೀಯ, ಚುನಾವಣೆ, ಮತದಾನ ಇವೆಲ್ಲದರ ಬಗ್ಗೆ ಅವರ ದೃಷ್ಟಿಕೋನ ಎಂಥದ್ದು? ಇಂಥ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಯಶ್ ಅವರನ್ನು ಮಾತಿಗೆಳೆದಾಗ ಮುಕ್ತವಾಗಿಯೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

‘ಸಮಾಜದ ಸ್ಥಿತಿ ಸುಧಾರಿಸಬೇಕಾದರೆ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರಬೇಕು ಎನ್ನುವುದರ ಜತೆಗೆ ಜನರೂ ಪ್ರಜ್ಞಾವಂತರಾಗಬೇಕಾದ ಅವಶ್ಯಕತೆ ಇದೆ’ ಎನ್ನುವುದು ಅವರ ಅಭಿಮತ. ಸ್ಟಾರ್ ನಟನ ಜತೆ ನಡೆಸಿರುವ ಪಕ್ಕಾ ‍ಪೊಲಿಟಿಕಲ್ ಮಾತುಕತೆಯ ಅಕ್ಷರರೂಪ ಇಲ್ಲಿದೆ. 

* ಚುನಾವಣೆ ಎನ್ನುವ ಪ್ರಕ್ರಿಯೆಯನ್ನು ಹೇಗೆ ನೋಡುತ್ತೀರಿ?

ನಾವು ಎಷ್ಟೆಲ್ಲ ಪ್ರಾಮಾಣಿಕತೆಯ ಬಗ್ಗೆ ಎಷ್ಟೇ ಮಾತನಾಡಿದರೂ, ಚುನಾವಣೆಗೆ ನಿಲ್ಲುವ ಬಹುತೇಕ ಎಲ್ಲ ಪಕ್ಷಗಳೂ, ವ್ಯಕ್ತಿಗಳೂ ಹಣದ ಬಲವನ್ನೇ ನಂಬಿರುತ್ತಾರೆ. ಹಣ ಇದ್ರೆ ಚುನಾವಣೆ ಗೆಲ್ಲಬಹುದು ಎಂಬ ಭಾವನೆಯೇ ಇದೆ. ಆದರೆ ಒಂದಂತೂ ನಿಜ. ಜನರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಚುನಾವಣೆ ಎನ್ನುವುದು ಸಾಮೂಹಿಕ ಧ್ವನಿ. ಅದನ್ನು ವ್ಯಕ್ತಪಡಿಸಲು ನಮಗಿರುವ ಏಕೈಕ ಮಾರ್ಗ ಮತದಾನ. ಬರೀ ಹಣದಿಂದ ಚುನಾವಣೆ ಗೆಲ್ಲುತ್ತದೆ ಎಂಬ ಜನಪ್ರಿಯ ಹೇಳಿಕೆಯೇ ಸಾಬೀತಾಗುತ್ತಾ ಹೋದರೆ, ಮತದಾನ ಮಾಡಿದ ಜನರೆಲ್ಲರೂ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಿದರೂ ಒಪ್ಪಿಕೊಳ್ಳಬೇಕಾಗುತ್ತದೆ. ಚುನಾವಣೆ ಬಗ್ಗೆ ಜನರಿಗೆ ನಿರ್ಲಕ್ಷ್ಯ ಇದೆ. ಆ ದಿನ ಅವರು ರಜಾದಿನ ಅಂದುಕೊಂಡು ಪ್ರವಾಸಕ್ಕೆ ಹೋಗುತ್ತಾರೆ ಎಂದೆಲ್ಲ ಹೇಳುತ್ತಿರುತ್ತಾರೆ. ಈ ಬೇಜವಾಬ್ದಾರಿ ಖಂಡಿತ ಒಳ್ಳೆಯದಲ್ಲ.

* ಚುನಾವಣಾ ಸಂದರ್ಭದಲ್ಲಿ ಎಲ್ಲ ಪಕ್ಷದ ಅಭ್ಯರ್ಥಿಗಳಿಗೆ ಏನನ್ನು ಕೇಳಿಕೊಳ್ಳುತ್ತೀರಿ?

ನನಗೆ ಕೋಪ ಬರುವುದು ಯಾಕೆಂದರೆ, ಮೂಲ ಸೌಲಭ್ಯಗಳ ಕುರಿತೂ ನಮ್ಮ ಪ್ರತಿನಿಧಿಗಳಿಗೆ ಗಮನ ಇಲ್ಲ. ದೊಡ್ಡ ಪ್ರಮಾಣದ ಅಭಿವೃದ್ಧಿ ಮಾಡುತ್ತೀರೋ ಬಿಡುತ್ತೀರೋ ಅದು ಮುಂದಿನ ಮಾತು. ಮೊದಲು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಿ. ಕುಡಿಯುವ ನೀರು, ರಸ್ತೆ, ಶಿಕ್ಷಣ ಹೀಗೆ ಎಷ್ಟೆಲ್ಲ ಕೆಲಸಗಳಿವೆ. ಇವೂ ಸಮಾಜದ ಎಲ್ಲರಿಗೂ ತಲುಪಿಸಲು ಸಾಧ್ಯವಾಗಿಲ್ಲ ಅಂದರೆ ನಿಜಕ್ಕೂ ಬೇಸರವಾಗುತ್ತದೆ.

ಸರ್ಕಾರಕ್ಕೆ ನಾನು ಹೇಳುವುದು ಒಂದೇ. ಈ ಚುನಾವಣೆ ಹತ್ತಿರ ಬರುತ್ತಿರುವ ಹಾಗೆಲ್ಲ, ಅವರು ಈ ಹಗರಣ ಮಾಡಿದರು, ಇವರು ಆ ಹಗರಣ ಮಾಡಿದರು, ಈ ಜಾತಿ, ಆ ಜಾತಿ, ಅವರಿಗೆ ಮನ್ನಣೆ ಕೊಡುವುದು, ಇವರಿಗೊಂದು ವಿಶೇಷ ‌ಸೌಲಭ್ಯ ಕೊಡುವುದು... ಇಂಥವನ್ನೇ ನೋಡುತ್ತ ಬಂದಿದ್ದೇನೆ. ಇವೆಲ್ಲವೂ ನಾನ್‌ಸೆನ್ಸ್‌. ಅವನು ಏನಾದರೂ ಆಗಿರಲಿ, ಅವರವರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿ. ಅವರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದು ನನಗೆ ಮುಖ್ಯ. ಅಲ್ಲಿನ ಕೆರೆಗಳು, ನೀರು, ಶಿಕ್ಷಣ, ಊಟ ಇಲ್ಲದೇ ಸಾಯುತ್ತಿರುವವರು, ಉದ್ಯೋಗಸೃಷ್ಟಿ ಇವುಗಳ ಬಗ್ಗೆ ಅವನಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎನ್ನುವುದು ಮುಖ್ಯ. ಇಂಥ ವಿಷಯಗಳ ಬಗ್ಗೆ ಮಾತಾಡಿಕೊಂಡು ಚುನಾವಣೆ ಗೆಲ್ಲಲಿ. ಟೀವಿ, ಪತ್ರಿಕೆ ಎಲ್ಲಿಯೂ ಇಂಥ ವಿಷಯಗಳ ಬಗ್ಗೆ ಸಮರ್ಥವಾಗಿ ಮಾತನಾಡಿದ ಒಬ್ಬನೇ ಒಬ್ಬ ಅಭ್ಯರ್ಥಿಯನ್ನು ಇದುವರೆಗೆ ನೋಡಿಲ್ಲ. ‘ಇಂಥವರು ಈ ಕೆಲಸಗಳನ್ನು ಮಾಡಿಲ್ಲ. ಅದಕ್ಕೆ ಇವರನ್ನು ಸೋಲಿಸಿ’ ಎಂದು ಮಾತಾಡಿದ್ದನ್ನೂ ನೋಡಿಲ್ಲ. ಬರೀ ವೈಯಕ್ತಿಕ ವಿಷಯಗಳು, ಜಾತಿ, ಧರ್ಮಗಳನ್ನೇ ನೆಚ್ಚಿಕೊಂಡು ಮಾತಾಡುತ್ತಾರೆ. ಇದೇ ನನಗೆ ಬೇಸರ ಹುಟ್ಟಿಸುವುದು.

* ಇದು ಜನಪ್ರತಿನಿಧಿಗಳ ಮಾತಾಯ್ತು. ಮತದಾರರ ಜವಾಬ್ದಾರಿಯೂ ಇರುತ್ತದಲ್ಲ...

ನಾವುಗಳು ಎಲ್ಲಿಯವರೆಗೂ ಅವರನ್ನು ಮದುವೆಗೆ ಬನ್ನಿ, ಸಾವಿಗೆ ಬನ್ನಿ, ತಿಥಿಗೆ ಬನ್ನಿ, ನನ್ನ  ಅತ್ತೆ ಮಗನಿಗೆ ಒಂದು ಕೆಲಸ ಕೊಡಿಸಿ, ನನಗೆ ಈ ಕೆಲಸ ಮಾಡಿಕೊಡಿ ಎಂದು ಅಂಗಲಾಚುತ್ತ ಇರುತ್ತೇವೆಯೋ ಅಲ್ಲಿಯವರೆಗೆ ಪ್ರತಿನಿಧಿಗಳೂ ಹೀಗೆಯೇ ನಡೆದುಕೊಳ್ಳುತ್ತಿರುತ್ತಾರೆ. ‘ನನ್ನ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ಗ್ಯಾರಂಟಿ ಇಲ್ಲ. ನಾನು ಇವರ ಮನೆಯ ಕಾರ್ಯಕ್ರಮಕ್ಕೆ ಹೋಗಿ ಬಂದು ಚೆನ್ನಾಗಿಟ್ಟುಕೊಂಡರೆ ಸಾಕು, ಮತ ಹಾಕ್ತಾರೆ’ ಎಂದು ಒಬ್ಬ ಪ್ರತಿನಿಧಿಗಳಿಗೆ ಅನಿಸಿಬಿಟ್ಟರೆ ಅವರು ಯಾಕೆ ಒಳ್ಳೆಯ ಕೆಲಸ ಮಾಡಿಕೊಡುತ್ತಾರೆ? ಇದರಲ್ಲಿ ಯಾರು ತಪ್ಪು? ಯಾರು ಸರಿ?

ತಪ್ಪು ನಮ್ಮಲ್ಲೇ ಇಟ್ಟುಕೊಂಡಿದ್ದೀವಿ. ಚುನಾವಣೆಯಲ್ಲಿ ಗೆಲ್ಲಿಸಿ ಪ್ರತಿನಿಧಿಯನ್ನು ಸುಮ್ಮನೆ ಬಿಟ್ಟುಬಿಡುವುದಲ್ಲ. ಪ್ರತಿ ವಾರ, ಪ್ರತಿ ತಿಂಗಳ ಟಾರ್ಗೆಟ್‌ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲ ಎಂದರೆ, ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನು ಹಾಕ್ಕೊಂಡು ರುಬ್ಬಬೇಕು. ಐದು ವರ್ಷದವರೆಗೂ ಕಾಯುತ್ತ ಕೂಡುವುದಲ್ಲ. ಚುನಾವಣೆ ಸಂದರ್ಭದಲ್ಲಿ ಎಲ್ಲ ಕೆಲಸ ಮಾಡಿಕೊಡುತ್ತೇನೆ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಆ ಭರವಸೆ ಈಡೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿರುವಂತೆ ನಾವೇ ನೋಡಿಕೊಳ್ಳಬೇಕು.

ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ನಾವು ಮಾಡಬಹುದಾದ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ನಮ್ಮ ಮನೆಯಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಂಡಾಗ ಅಮ್ಮನಿಗೆ ಕೆಲಸ ಕಮ್ಮಿಯಾಗುತ್ತದೆ. ಎಲ್ಲವನ್ನೂ ಅವಳ ಮೇಲೆಯೇ ಹೊರಿಸಿದರೆ ಅವಳು ಎಷ್ಟು ಅಂತ ಮಾಡುತ್ತಾಳೆ? ಬಿದ್ದ ಕಸವನ್ನು ಸರ್ಕಾರ ನಿಯೋಜಿಸಿದ ವ್ಯಕ್ತಿಗಳು ಎತ್ತುತ್ತಿಲ್ಲವಾ? ನೀವೇ ಎತ್ತಿ. ಜನರು ಮಾಡಬೇಕು ಎಂದು ಮನಸ್ಸು ಮಾಡಿದರೆ ಸಾಕಷ್ಟು ಕೆಲಸ ಮಾಡಲು ದಾರಿಗಳಿವೆ. ಅದು ಜನರಿಗೆ ಅರ್ಥ ಆಗಲಿ ಎಂದೇ ನಾನೂ ಹಲವು ಸಮಾಜಾಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.

* ನೀವು ಯಾರ ಪರವಾಗಿಯಾದರೂ ಚುನಾವಣಾ ಪ್ರಚಾರ ಮಾಡುವ ಯೋಚನೆ ಇದೆಯೇ?

ನನಗೊಂದಿಷ್ಟು ಕನಸುಗಳಿವೆ. ಜನರನ್ನು ಸಬಲರಾಗಿಸಬೇಕು ಎನ್ನುವ ಕನಸದು. ಆ ನಿಟ್ಟಿನಲ್ಲಿ ಯಾರು ಕೆಲಸ ಮಾಡುತ್ತಾರೆ ಎನ್ನುವುದನ್ನು ಗುರುತಿಸಿ ಅವರಿಗೆ ಬೆಂಬಲ ಸೂಚಿಸಬಹುದೇನೋ ಅಂದುಕೊಳ್ಳುತ್ತಿದ್ದೀನಿ. ಯಾವ ರೀತಿ ಬೆಂಬಲ ಸೂಚಿಸಬೇಕು ಎನ್ನುವುದರ ಬಗ್ಗೆ ನನಗಿನ್ನೂ ಸ್ಪಷ್ಟತೆ ಇಲ್ಲ. ನಾನು ರಾಜಕಾರಣವನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತೀನಿ ಅಂದರೆ ಅದು ಬೇರೆಯಾಗುತ್ತದೆ. ಆದರೆ ನಾನು ಸಿನಿಮಾ ನಟ. ರಾಜಕಾರಣ ನನ್ನ ಕ್ಷೇತ್ರ ಅಲ್ಲ. ಆದರೆ ಎಲ್ಲಿಯೇ ಹೋದರೂ ಅದು ನಮ್ಮ ಸಮಾಜದ ಮೇಲೆ, ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೂ ಸತ್ಯ.

ತುಂಬ ಜನರು ಬಂದು ಚುನಾವಣಾ ಪ್ರಚಾರಕ್ಕೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅದರಿಂದ ಏನು ಪ್ರಯೋಜನ? ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವುದು ನನ್ನ ತತ್ವ. ನನ್ನ ಈ ತತ್ವಕ್ಕೆ ಹೊಂದಿಕೊಳ್ಳುವ ವ್ಯಕ್ತಿಗಳಿಗೇ ಬೆಂಬಲ ನೀಡುತ್ತೇನೆ. ಆ ವ್ಯಕ್ತಿಯ ಬಗ್ಗೆ ನನಗೆ ಮೊದಲು ನಂಬಿಕೆ ಬರಬೇಕು. ನಾನು ಯಾರ ಪರವಾಗಿಯೋ ಜನರಲ್ಲಿ ಓಟ್‌ ಕೇಳ್ತೀನಿ ಅಂದ್ರೆ ನಾಳೆ ನಾನೂ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಹಾಗೆಯೇ ನಾನು ಪ್ರಚಾರ ಮಾಡಿದ ಪ್ರತಿನಿಧಿಯನ್ನು, ಜನರ ಪರವಾಗಿ ಕೆಲಸದ ಕುರಿತಾಗಿ ಪ್ರಶ್ನಿಸುವ ಅಧಿಕಾರವೂ ನನಗೆ ಇರಬೇಕಾಗುತ್ತದೆ. ಇದು ಸಾಧ್ಯವಿಲ್ಲದಿದ್ದರೆ ಖಂಡಿತ ನಾನು ಯಾರ ಪರವಾಗಿಯೂ ಮತ ಕೇಳುವುದಿಲ್ಲ. ಇನ್ನೂ ಈ ಕುರಿತು ನನಗೆ ಸ್ಪಷ್ಟತೆ ಇಲ್ಲ. ಏನಾಗುತ್ತದೆಯೋ ನೋಡಬೇಕು.

**

ಚುನಾವಣೆಯಲ್ಲಿ ಗೆಲ್ಲಿಸಿ ಪ್ರತಿನಿಧಿಯನ್ನು ಸುಮ್ಮನೆ ಬಿಟ್ಟುಬಿಡುವುದಲ್ಲ. ಪ್ರತಿ ವಾರ, ಪ್ರತಿ ತಿಂಗಳ ಟಾರ್ಗೆಟ್‌ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲ ಎಂದರೆ, ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನು ಹಾಕ್ಕೊಂಡು ರುಬ್ಬಬೇಕು.

– ಯಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry