ಶನಿವಾರ, ಡಿಸೆಂಬರ್ 14, 2019
20 °C

ನಟನೆಯ ಬಲ್ಲೆ, ಗ್ಲ್ಯಾಮರ್ ಒಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟನೆಯ ಬಲ್ಲೆ, ಗ್ಲ್ಯಾಮರ್ ಒಲ್ಲೆ

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’, ಚಂದ್ರಶೇಖರ್, ಜಯಂತಿ ಅವರಂಥ ಕಲಾವಿದರನ್ನು ಚಿತ್ರರಂಗದಲ್ಲಿ ಸ್ಥಿರಗೊಳಿಸಿದ ಚಿತ್ರ. ಇದೀಗ ವಿವಿನ್ ಸೂರ್ಯ ನಿರ್ದೇಶನದ ಇದೇ ಹೆಸರಿನ ಇನ್ನೊಂದು ಚಿತ್ರದ ಮೂಲಕ ಇನ್ನೊಂದು ಹೊಸ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ಅವರ ಹೆಸರು ಸ್ವಾತಿ ಶರ್ಮ.

ಸ್ವಾತಿ, ಮೂಲತಃ ಕೋಲಾರದವರು. ಮನೆಮಾತು ತೆಲುಗು. ಆದರೆ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕಾಲೇಜು ದಿನಗಳಲ್ಲಿಯೇ ಬಣ್ಣದ ಬದುಕಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ‘ಮನೆದೇವ್ರು’ ಎಂಬ ಧಾರಾವಾಹಿಯಲ್ಲಿ ಸಾನ್ವಿ ಎಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸುವುದರೊಂದಿಗೆ ಕ್ಯಾಮೆರಾ ಎದುರಿನ ನಟನಾಪಯಣ ಆರಂಭಿಸಿದರು. ಅದರ ಜತೆಗೆ ‘ರಾಮರಾಜ್ಯ’ ಚಿತ್ರದಲ್ಲಿಯೂ ಪುಟ್ಟ ಪಾತ್ರದಲ್ಲಿ ನಟಿಸಿದರು. ಅದರಿಂದಲೇ ವಿವಿನ್ ಸೂರ್ಯ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

‘ನನಗೆ ಮಹಿಳಾಪ್ರಧಾನ ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ನಾಯಕಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲಿಯೇ ಇಂಥ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎನ್ನುತ್ತಾರೆ ಸ್ವಾತಿ. ಹಾಗೆಯೇ ಈ ಚಿತ್ರದಲ್ಲಿ ದತ್ತಣ್ಣ, ಚಂದ್ರಶೇಖರ್, ಭಾರತಿ ವಿಷ್ಣುವರ್ಧನ್ ಅವರಂಥ ಹಲವು ಹಿರಿಯ ನಟರ ಬಳಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದೂ ಅವರಿಗೆ ಅಭಿನಯದ ಕುರಿತು ಸಾಕಷ್ಟು ತಿಳಿವಳಿಕೆ ಗಳಿಸಿಕೊಳ್ಳಲು ಸಹಾಯಕವಾಗಿದೆ. ತಮ್ಮ ಮೊದಲ ಚಿತ್ರ ಮುಗಿಯುವ ಮೊದಲೇ ‘ಫಾರ್ಚುನರ್’ ಎಂಬ ಇನ್ನೊಂದು ಸಿನಿಮಾದಲ್ಲಿಯೂ ಅವರು ದಿಗಂತ್ ಜತೆ ತೆರೆ ಹಂಚಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣವೂ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

‘ನಮ್ಮದು ಕಲಾವಿದರ ಕುಟುಂಬ ಅಲ್ಲ. ಸಂಪ್ರದಾಯಿಕ ಮನಸ್ಥಿತಿಯ ಕುಟುಂಬ. ಮೊದಮೊದಲು ಯಾರ ಬೆಂಬಲವೂ ಇಲ್ಲ ಎಂಬ ಕುರಿತು ಭಯ ಇತ್ತು. ಆದರೆ ಸಿನಿಮಾಕ್ಕೆ ಬಂದ ಮೇಲೆ ಹಲವು ಹಿರಿಯ ನಟರ ಬೆಂಬಲ, ಸಹನಟರ ಸಹಕಾರದಿಂದ ಸಾಕಷ್ಟು ಆತ್ಮವಿಶ್ವಾಸ ಬೆಳೆಸಿ ಕೊಂಡಿದ್ದೇನೆ’ ಎನ್ನುತ್ತಾರೆ ಅವರು.

‘ಎಡಕಲ್ಲು ಗುಡ್ಡದ ಮೇಲೆ ಇಡೀ ಚಿತ್ರ ಹೆಣ್ಣಿನ ಮನಸ್ಥಿತಿಯ ಮೇಲೆಯೇ ಆಧಾರಿತವಾಗುತ್ತದೆ. ಇದು ತುಂಬ

ಮೌನವನ್ನು ಬೇಡುವ ಪಾತ್ರ. ಆದರೆ ನಾನೋ ಮಹಾನ್ ವಾಚಾಳಿ. ಮೊದಮೊದಲಿಗೆ ಆ ಪಾತ್ರದ ಮನಃಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವೆನಿಸುತ್ತಿತ್ತು. ಎಲ್ಲ ಭಾವನೆಗಳನ್ನೂ ಕಣ್ಣಿನಲ್ಲೇ ಅಭಿವ್ಯಕ್ತಿಸಬೇಕಿತ್ತು. ಆದರೆ ನಿರ್ದೇಶಕರ ಮಾರ್ಗದರ್ಶನದಿಂದ ಚೆನ್ನಾಗಿ ಮೂಡಿಬರಲು ಸಾಧ್ಯವಾಯ್ತು’ ಎಂದು ತಮ್ಮ ಪಾತ್ರದ ಕುರಿತು ಅವರು ಹೇಳಿಕೊಳ್ಳುತ್ತಾರೆ.

ಸ್ವಾತಿ ಅವರ ಪ್ರಕಾರ ಕಿರುತೆರೆ ಮತ್ತು ಹಿರಿತೆರೆ ನಟನೆಯ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ. ‘ಕಲಾವಿದನಿಗೆ ನಟನೆ ಎಂದರೆ ಎಲ್ಲವೂ ಒಂದೆ. ಆದರೆ ಸಿನಿಮಾದಲ್ಲಿ ಕಥೆ ಏನು ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಆದರೆ ಧಾರಾವಾಹಿಯಲ್ಲಿ ಜನರ ಪ್ರತಿಕ್ರಿಯೆಯ ಮೇಲೆ ಕಥೆ ಬೆಳೆದುಕೊಂಡು ಹೋಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಇದುವರೆಗೆ ಸ್ವಾತಿ ನಾಯಕಿಯಾಗಿ ನಟಿಸಿರುವ ಚಿತ್ರ ಬಿಡುಗಡೆಯಾಗಿಲ್ಲ. ಆದರೆ ಈಗಲೇ ಅವರಿಗೆ ತೆಲುಗಿನ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ. ಅದು ಮಾತುಕತೆಯ ಹಂತದಲ್ಲಿದೆ.

‘ನಾನು ಮುಂದೆ ನಟಿಸುವ ಚಿತ್ರಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರಬೇಕು. ನನ್ನ ಪಾತ್ರದಲ್ಲಿಯೂ ಅಷ್ಟೇ ಭಿನ್ನತೆ ಇರಬೇಕು. ಜನ ನೋಡಿ ಮೆಚ್ಚಿಕೊಳ್ಳಬೇಕು’ ಎನ್ನುವ ಅವರು ಕೌಟುಂಬಿಕ ಪ್ರೇಕ್ಷಕರಿಗೆ ಮುಜುಗರ ಆಗುವಂಥ ಪಾತ್ರಗಳಲ್ಲಿ ಬಿಲ್ ಕುಲ್ ನಟಿಸಲೊಲ್ಲೆ ಎನ್ನುತ್ತಾರೆ. ಹೋಮ್ಲಿ ಲುಕ್‌ನ ಪಾತ್ರಗಳಲ್ಲಿಯೇ ನಟಿಸುತ್ತೇನೆ ಎನ್ನುವ ಅವರು ಗ್ಲ್ಯಾಮರ್ ವಿಷಯಕ್ಕೆ ಬಂದರೆ ಕೊಂಚ ದೂರ ನಿಲ್ಲುತ್ತಾರೆ.

ಪ್ರತಿಕ್ರಿಯಿಸಿ (+)