ಮನು ಧರ್ಮಶಾಸ್ತ್ರ ಸುಲಭ ಗ್ರಹಿಕೆ ಅಸಾಧ್ಯ

7
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಉಪನ್ಯಾಸದಲ್ಲಿ ವಿಮರ್ಶಕ ನಟರಾಜ್ ಬೂದಾಳ್ ಅಭಿಪ್ರಾಯ

ಮನು ಧರ್ಮಶಾಸ್ತ್ರ ಸುಲಭ ಗ್ರಹಿಕೆ ಅಸಾಧ್ಯ

Published:
Updated:

ಕೋಲಾರ: ಮನು ಧರ್ಮಶಾಸ್ತ್ರವು ಹಿಂದೂಗಳ ಧಾರ್ಮಿಕ ಗ್ರಂಥ. ಇದನ್ನು ಹುಷಾರಾಗಿ ಹೊರಗಿಟ್ಟಿದ್ದಾರೆ, ಓದಿಗೂ ನಿಲುಕದಂತೆ ಮಾಡಿದ್ದಾರೆ ಎಂದು ವಿಮರ್ಶಕ ನಟರಾಜ್ ಬೂದಾಳ್ ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನು ಧರ್ಮಶಾಸ್ತ್ರವನ್ನು ಜನಸಾಮಾನ್ಯರು ಸುಲಭವಾಗಿ ಗ್ರಹಿಸಲು ಸಾಧ್ಯವಿಲ್ಲ. ಇದನ್ನು ತಿಳಿಯದೆ ಅನುಸರಿಸುತ್ತಿದ್ದೇವೆ. ಹಿಂದೂಗಳ ನಿತ್ಯದ ನಡೆಯನ್ನು ಈ ಧರ್ಮಶಾಸ್ತ್ರ ನಿಯಂತ್ರಿಸುತ್ತಿದೆ’ ಎಂದರು.

‘ಧಾರ್ಮಿಕ ಬದುಕಿನ ನಿಯಂತ್ರಣಕ್ಕೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್‌ ಸಮುದಾಯಕ್ಕೆ ಧರ್ಮ ಗ್ರಂಥವಿದೆ. ಆದರೆ, ಹಿಂದೂ ಧರ್ಮದಲ್ಲಿ ಧರ್ಮ ಗ್ರಂಥವೆಂದರೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಎಂದೆಲ್ಲಾ ಹೇಳಲಾಗುತ್ತದೆ. ಕಥೆಯನ್ನು ಬಿಂಬಿಸುವ ಇವುಗಳನ್ನು ಧರ್ಮಗ್ರಂಥ ಎನ್ನುತ್ತಾರೆ. ಜನ ಈ ಕಥೆಯನ್ನೇ ನಂಬಿದ್ದಾರೆ’ ಎಂದು ತಿಳಿಸಿದರು.

ಉಪಚಾರ ತಪ್ಪಲ್ಲ: ‘ತತ್ವ ಪದಗಾರರ ಸುಮಾರು 50 ಸಂಪುಟವನ್ನು ಸರ್ಕಾರ ಪ್ರಕಟಿಸುತ್ತಿದೆ. ಇದರಲ್ಲಿ 11 ಸಂಪುಟ ಕೋಲಾರ ಜಿಲ್ಲೆಯವರದ್ದಾಗಿದೆ. ಹಲವು ತತ್ವ ಪದಗಾರರು ಅಪರಿಚಿತರಾದರೆ, ಅವರು ಮೂಲ ಸ್ಥಾನದವರಿಗೆ ಪರಿಚಿತರಾಗಿದ್ದಾರೆ. ಹೊರಗಿನವರನ್ನು ಕರೆತಂದು ಉಪಚಾರ ಮಾಡುವುದು ತಪ್ಪಲ್ಲ. ಆದರೆ, ಸ್ಥಳೀಯರನ್ನು ಹೊರಗಿಡುವುದು ಸರಿಯಲ್ಲ. ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ನಮ್ಮದಲ್ಲದ ಬದುಕು, ಅಕ್ಷರ, ಕಲೆ, ಸಂಸ್ಕೃತಿಯು ಈಗ ನಮ್ಮದಾಗಿದೆ. ನಮ್ಮ ಅಕ್ಷರವಾದರೂ ಅದನ್ನು ಹೇಗೆ ಓದಬೇಕೆಂದು ತೀರ್ಮಾನಿಸುವವರು ನಾವಲ್ಲದ ಸ್ಥಿತಿಯಲ್ಲಿದ್ದೇವೆ. ಮೀಮಾಂಸೆ ನಮ್ಮ ನಡವಳಿಕೆಯನ್ನು ನಿಯಂತ್ರಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ದೊಡ್ಡ ದುರಂತ: ‘ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಕನ್ನಡ ಓದುವುದನ್ನೇ ಮರೆಯುತ್ತಿದ್ದಾರೆ. ಮೊಬೈಲ್‌, ಸಾಮಾಜಿಕ ಜಾಲತಾಣ, ಇಂಟರ್‌ನೆಟ್‌ನ ದಾಸರಾಗಿರುವ ಯುವಕ ಯುವತಿಯರಿಗೆ ನಾಡು, ನುಡಿಯ ಬಗ್ಗೆ ಅಭಿಮಾನ ಇಲ್ಲವಾಗಿದೆ. ಇದು ನಾಡಿದ ದೊಡ್ಡ ದುರಂತ’ ಎಂದು ಕಾಲೇಜಿನ ಪ್ರಾಂಶುಪಾಲ ಜಯರಾಮರೆಡ್ಡಿ ವಿಷಾದಿಸಿದರು.

ಭ್ರಮೆಯಲ್ಲಿದ್ದೇವೆ: ‘ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬ ಭ್ರಮೆಯಲ್ಲಿದ್ದೇವೆ ಹೊರತು ಭಾಷೆ ಬಗ್ಗೆ ಸಮಗ್ರವಾಗಿ ತಿಳಿಯುವ ಪ್ರಯತ್ನ ಮಾಡುತ್ತಿಲ್ಲ. ಸಂಸ್ಕೃತಿಯ ಮೂಲಧಾತು ಯಾವುದು ಎಂಬ ಬಗ್ಗೆ ಗಮನ ಹರಿಸುತ್ತಿಲ್ಲ. ದೇಶದ ಸಂಸ್ಕೃತಿಯನ್ನು ಕುರುಡಾಗಿ ನೋಡಲಾಗುತ್ತಿದೆ’ ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಮುನಿರತ್ನಪ್ಪ ಕಳವಳ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಧ್ಯಾಪಕರಾದ ಆರ್.ಮುನೇಗೌಡ, ಎಚ್.ಎನ್.ಶ್ರೀನಿವಾಸ್, ಅರಿವು ಶಿವಪ್ಪ, ಸಿ.ಎ.ರಮೇಶ್, ಎಸ್.ರವೀಂದ್ರ ಭಾಗವಹಿಸಿದ್ದರು.

**

ಕನ್ನಡ ಭಾಷೆ ತಿಳಿಯುವುದರ ಜತೆಗೆ ಮನದಟ್ಟು ಮಾಡಿಕೊಳ್ಳಬೇಕು. ಕನ್ನಡದ ಜೀವಂತಿಕೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಕನ್ನಡ ಕಟ್ಟುವ ಮತ್ತು ಉಳಿಸಿ ಬೆಳೆಸುವ ಕೆಲಸ ತುರ್ತಾಗಿ ಆಗಬೇಕು  – ಜಯರಾಮರೆಡ್ಡಿ, ಕಾಲೇಜಿನ ಪ್ರಾಂಶುಪಾಲ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry